ಹಣಬಲ, ಜನಬಲ, ರಾಜಕೀಯಬಲ ಇದ್ದರೂ ಸಿದ್ಧಾರ್ಥ ಎಲ್ಲ ಬಿಟ್ಟು ಹೋಗಿಬಿಟ್ರು!!
ಸಿದ್ಧಾರ್ಥ ಹೆಗ್ಡೆ ಚಿಕ್ಕಮಗಳೂರಿನಲ್ಲಿ ಹುಟ್ಟಿ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಉದ್ಯಮ ಸ್ಥಾಪಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಕೊನೆಗೆ ಮಂಗಳೂರಿನಿಂದ ಕೇರಳಕ್ಕೆ ಹೋಗುವ ದಾರಿಯಲ್ಲಿ ಸಿಗುವ ನೇತ್ರಾವತಿ ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿದ್ದಾರೆ. ಸಿದ್ಧಾರ್ಥ ಅವರಿಗೆ ಸಾಯುವ ವಯಸ್ಸಲ್ಲ. ಆತ್ಮಹತ್ಯೆಯಂತೂ ಮಾಡುವ ಯಾವುದೇ ಅಗತ್ಯವೂ ಇರಲಿಲ್ಲ. ಅನೇಕ ಜನಸಾಮಾನ್ಯರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಂತೆ ಇವರು ಕೂಡ ಆತ್ಮಹತ್ಯೆ ಮಾಡಿಕೊಂಡು ತಾನು ಕೂಡ ಜನಸಾಮಾನ್ಯರಂತೆ ಸತ್ತುಹೋಗಿದ್ದಾರೆ. ಇದೇ ಸಿದ್ಧಾರ್ಥ ಅವರ ಕೆಲವು ಉಪನ್ಯಾಸಗಳನ್ನು ನೋಡುವಾಗ ತಾವು ಉದ್ಯಮಿಗಳು ಐದರಿಂದ ಹತ್ತು ಕೋಟಿ ತನಕ ದುಡಿಯುವ ತನಕ ಮಾತ್ರ ಹಣಕ್ಕಾಗಿ ದುಡಿಯುವುದು ನಂತರ ನಮ್ಮ ಪ್ಯಾಷನ್ ಗಾಗಿ ಉದ್ಯಮದಲ್ಲಿ ಹೆಸರು ಗಳಿಸುತ್ತಾ ಹೋಗುತ್ತೇವೆ ಎಂದು ಹೇಳಿದ್ದಾರೆ. ಹಾಗೇ ಅನೇಕ ಯುವಕರಿಗೆ ಬದುಕಿನಲ್ಲಿ ಇನ್ನೇನೂ ಎಲ್ಲವೂ ಮುಗಿಯಿತು ಎಂದು ಅನಿಸಿ ಆತ್ಮಹತ್ಯೆಗೆ ಮುಂದಾಗಬೇಕು ಎಂದು ನಿಶ್ಚಯಿಸಿದಾಗ ಇದೇ ಸಿದ್ಧಾರ್ಥ ಅಂತವರನ್ನು ಕರೆದು ಧೈರ್ಯ ತುಂಬಿ ಹೊಸ ಉದ್ಯಮ ಸ್ಥಾಪಿಸಲು ನೆರವು ನೀಡಿದ್ದಾರೆ ಎನ್ನುವ ಮಾತಿದೆ. ಹೀಗಿದ್ದರೂ ತನ್ನದೇ ಬದುಕಿನಲ್ಲಿ ಏನೋ ನಷ್ಟ ಉಂಟಾದಾಗ, ಹಿನ್ನಡೆಯಾದಾಗ ಸಿದ್ಧಾರ್ಥ ಹೀಗೆ ಆತ್ಮಹತ್ಯೆ ಮಾಡಿಕೊಂಡರು ಎಂದು ನೋಡಿದಾಗ ಸೃಷ್ಟಿಯ ವಿಚಿತ್ರ ಅರ್ಥವಾಗುತ್ತದೆ. ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡದ್ದು ನೋಡಿದಾಗ ಇಲ್ಲಿ ಎರಡು ವಿಷಯಗಳು ಎದ್ದು ಕಾಣುತ್ತದೆ. ಅದರಲ್ಲಿ ಒಂದು ಇವರು ಯಾವುದೋ ದೊಡ್ಡ ಗಂಡಾಂತರಕ್ಕೆ ಈಡಾಗುವ ಸಾಧ್ಯತೆ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನೊಂದು ಬೇರೆಯವರಿಗೆ ಧೈರ್ಯ ಕೊಡುತ್ತಿದ್ದವರ ಮನಸ್ಸು ಎಷ್ಟು ಕೋಮಲವಾಗಿತ್ತು ಎಂದು ಅನಿಸುತ್ತದೆ. ಒಂದು ವೇಳೆ ಆರ್ಥಿಕ ಹೊಡೆತವೇ ಆಗಿದ್ದರೂ ಇವರು ಅದಕ್ಕೆ ಆತ್ಮಹತ್ಯೆಯ ದಾರಿ ಹುಡುಕಬೇಕಿರಲಿಲ್ಲ ಎನ್ನುವುದು ನೂರಕ್ಕೆ ನೂರು ನಿಜ. ಯಾಕೆಂದರೆ ಸಿದ್ಧಾರ್ಥ ಮಾನಸಿಕವಾಗಿ ಗಟ್ಟಿಯಾಗಿದ್ದರು. ಅವರ ಎದುರು ಅವರದ್ದೇ ಅಪಾರ ಆಸ್ತಿ ಇತ್ತು. ಸಾಕಷ್ಟು ವಯಸ್ಸಿತ್ತು. ಮಾವ ಈ ದೇಶದ ವಿದೇಶಾಂಗ ಸಚಿವ ಸ್ಥಾನದಿಂದ ಹಿಡಿದು ಸ್ಪೀಕರ್ ತನಕ, ಮುಖ್ಯಮಂತ್ರಿಯಿಂದ ಹಿಡಿದು ರಾಜ್ಯಪಾಲ ಹುದ್ದೆಯ ತನಕ ಎಲ್ಲವನ್ನು ನೋಡಿದವರು. ಬಹುಶ: ನಮ್ಮ ರಾಷ್ಟ್ರದಲ್ಲಿ ಯಾವುದಾದರೂ ಒಬ್ಬ ರಾಜಕಾರಣಿ ಇಲ್ಲಿಯತನಕ ಅನುಭವಿಸಿದ ಹುದ್ದೆಗಳನ್ನು ನೋಡಿದಾಗ ಅದರಲ್ಲಿ ನಿಸ್ಸಂಶಯವಾಗಿ ಕಾಣುವ ಹೆಸರು ಎಸ್ ಎಂ ಕೃಷ್ಣ. ಕೃಷ್ಣ ಅವರು ಮನಸ್ಸು ಮಾಡಿದ್ದರೆ ಎಂತಕ ಸಂಕಷ್ಟದ ಪರಿಸ್ಥಿತಿಯಿಂದಲೂ ಸಿದ್ಧಾರ್ಥ ಅವರನ್ನು ಎತ್ತಬಹುದಿತ್ತು. ಸ್ವತ: ಸಿದ್ಧಾರ್ಥ ಅವರಿಗೆ ಕೂಡ ಗೊತ್ತಿಲ್ಲದ ಅಧಿಕಾರದ ಕೇಂದ್ರಗಳಿಲ್ಲ. ಕೃಷ್ಣ ಅವರಿಗೆ ಸೋನಿಯಾ ಗಾಂಧಿಯವರಿಂದ ಹಿಡಿದು ನರೇಂದ್ರ ಮೋದಿಯವರ ತನಕ ಎಲ್ಲರೂ ವೈಯಕ್ತಿಕವಾಗಿ ಗೊತ್ತು. ಒಂದು ಕಾಲದಲ್ಲಿ ಕೃಷ್ಣ ಬೆರಳು ತೋರಿಸಿದ ಕುಳಿತುಕೊಳ್ಳುತ್ತಿದ್ದವರು ಈಗ ರಾಜ್ಯ ರಾಜಕೀಯದ ಉನ್ನತ ಹುದ್ದೆಯಲ್ಲಿದ್ದಾರೆ. ಕೃಷ್ಣ ಅವರು ಸಕ್ರಿಯ ರಾಜಕಾರಣದಲ್ಲಿ ಇರುವ ತನಕ ಅವರ ಎದುರು ಹಿಂದೆ ಸುತ್ತುತ್ತಿದ್ದ ಅನೇಕ ಕೆಳಹಂತದ ಅಧಿಕಾರಿಗಳು ಈಗ ದೊಡ್ಡ ಜವಾಬ್ದಾರಿಯಲ್ಲಿದ್ದಾರೆ. ಸಿದ್ಧಾರ್ಥ ಒಂದು ರೀತಿಯಲ್ಲಿ ಕೃಷ್ಣ ಅವರ ತೆರೆಮರೆಯ ಶಕ್ತಿಯಾಗಿಯೂ ಇದ್ದರು. ಡಿಕೆಶಿಯವರೇ, ನೀವು ವಿಪಕ್ಷ ನಾಯಕನಾಗುತ್ತಿರಂತೆ ಎಂದು ಫೋನ್ ಮಾಡಿ ಮಾತನಾಡಿಸುವಷ್ಟು ಸಲಿಗೆ ಸಿದ್ಧಾರ್ಥ ಅವರಿಗೆ ಇತ್ತು. ಒಂದು ವೇಳೆ ಐಟಿ ಡಿಪಾರ್ಟ್ ಮೆಂಟಿನಿಂದ ತೊಂದರೆ ಅನುಭವಿಸುತ್ತಿದ್ದರೂ ಡಿಕೆಶಿ ಅವರಿಂದ ಸಲಹೆ ಪಡೆಯಬಹುದಿತ್ತು. ಬಹುಶ: ಐಟಿಯವರೊಂದಿಗೆ ಹೆಚ್ಚು ವ್ಯವಹರಿಸಿರುವ, ತನಿಖೆಗೆ ಒಳಪಟ್ಟ, ನ್ಯಾಯಾಲಯಕ್ಕೆ ಅಲೆದಾಡಿರುವ ಅತ್ಯಂತ ಉನ್ನತ ಶಕ್ತಿಕೇಂದ್ರದ ಸನಿಹ ಇದ್ದರೂ ಮಾನಸಿಕ ನೋವು ಅನುಭವಿಸಿದ ರಾಜಕಾರಣಿ ಇದ್ದರೆ ಅದು ಡಿಕೆಶಿವಕುಮಾರ್. ಅವರಿಂದ ಸಲಹೆ ಕೇಳಿದ್ದರೆ ಏನಾದರೂ ಉಪಕಾರವಾಗುತ್ತಿತ್ತು. ಇನ್ನು ದೇವೇಗೌಡರು ಹೇಳುವ ಹಾಗೆ ಮೇಲಿನಿಂದ ಸೂಚನೆ ಇಲ್ಲದಿದ್ದರೆ ಐಟಿಯವರು ಟಾರ್ಚರ್ ಕೊಡುವುದಿಲ್ಲ ಎಂದಿದ್ದಾರೆ. ಐಟಿಯವರು ಟಾರ್ಚರ್ ಕೊಡುತ್ತಾರೆ ಎನ್ನುವುದೇ ಅಪ್ಪಟ ಸುಳ್ಳು. ನಾವು ಸರಿಯಿದ್ದರೆ ಯಾವ ಐಟಿಯವರು ಕೂಡ ಏನೂ ಮಾಡಲು ಸಾಧ್ಯವಿಲ್ಲ. ಹಾಗಂತ ಲೆಕ್ಕದಲ್ಲಿ ಕೋಟ್ಯಾಂತರ ರೂಪಾಯಿ ವ್ಯತ್ಯಾಸವಿದ್ದರೆ ಐಟಿಯವರು ತಾನೆ ಏನು ಮಾಡಿಯಾರು? ಒಬ್ಬ ವ್ಯಕ್ತಿಗೆ ವಿನಾಯಿತಿ ಕೊಟ್ಟರೆ, ಹಾಗೆ ಬಿಟ್ಟರೆ ಉಳಿದವರಿಗೆ ಅದು ಮಾತನಾಡಲು ಅವಕಾಶ ಸಿಗುತ್ತಿತ್ತು. ಹಾಗೆ ಐಟಿಯವರು ಹಿಂದೆ ಎಲ್ಲಾ ಬಿಡುತ್ತಿದ್ದರೋ ಏನೋ. ಹಿಂದಿನ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬೇರೆ ಪಕ್ಷದ ನಾಯಕರ ಶಿಫಾರಸ್ಸಿನ ಮೇಲೆ ಅನೇಕರು ಹಾಗೆ ತೆರಿಗೆಯಿಂದ ತಪ್ಪಿಸಿಕೊಂಡಿರಬಹುದು. ಆದರೆ ಈಗ ಬಹುಶ: ಕಾಲ ಬದಲಾಗಿದೆ ಎಂದು ಅನಿಸಿದೆ. ಆದರೆ ಒಂದಂತೂ ನಿಜ, ಸಹಸ್ರಾರು ಮಂದಿಗೆ ಕೆಲಸ ನೀಡಿದ, ಉದ್ಯೋಗಸೃಷ್ಟಿಯ ಮೂಲಕ ಸಂಚಲನ ಮೂಡಿಸಿದ ವ್ಯಕ್ತಿಯೊಬ್ಬರ ಸಾವಿನಿಂದ ದೇಶದ ಆರ್ಥಿಕತೆಗೆ ಒಂದಿಷ್ಟು ಹೊಡೆತ ಬೀಳುತ್ತದೆ. ಆ ಕುಟುಂಬಕ್ಕೆ ಭಗವಂತ ಈ ನೋವು ಸಹಿಸುವ ಶಕ್ತಿ ನೀಡಲಿ ಮತ್ತು ಸಿದ್ಧಾರ್ಥ ಅವರ ಮುಂದಿನ ಪೀಳಿಗೆ ತಂದೆ ಕಂಡ ಕನಸನ್ನು ನನಸು ಮಾಡುವ ದೊಡ್ಡ ಸಾಹಸಕ್ಕೆ ಕೈ ಹಾಕಿ ಗೆದ್ದು ಬರಲಿ ಎಂದು ಹಾರೈಕೆ.
Leave A Reply