ಮಗು ಅಳದೆ ಹಾಲು ಸಿಗಲ್ಲ, ನಾವು ಕೇಳದೆ ಬಿಜೆಪಿ ಸಚಿವ ಸ್ಥಾನ ಕೊಡಲ್ಲ!!
ಮಗು ಅಳದೇ ತಾಯಿ ಹಾಲು ಕೊಡಲ್ಲ ಎನ್ನುವ ಮಾತಿದೆ. ಹಾಗೆ ನಾವು ಕೇಳದೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರು ಕರಾವಳಿಯಿಂದ ಗೆದ್ದ ಎಂಎಲ್ ಎ ಗಳಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎನ್ನುವುದು ಪಕ್ಕಾ. ಈಗ ಸಚಿವರಾಗಿರುವವರನ್ನು ಸ್ವಲ್ಪ ಹತ್ತಿರದಿಂದ ನೋಡಿ. ಇವರಿಗಿಂತ ನಮ್ಮ ಕರಾವಳಿಯ ಶಾಸಕರು ಎಷ್ಟೋ ಪಾಲು ಬೆಟರ್ ಎಂದು ಅನಿಸಲ್ವಾ. ಅಷ್ಟೇ ಅಲ್ಲ, ಯಾವ ಆಧಾರದ ಮೇಲೆ ಅವರುಗಳಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎನ್ನುವುದನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಬೇಕು. ಇಲ್ಲಾ ಸ್ವಾಮಿ, ನನ್ನ ಕೈಯಲ್ಲಿ ಇರಲಿಲ್ಲ. ಇದೆಲ್ಲಾ ಅಮಿತ್ ಶಾ ಫೈನಲ್ ಮಾಡಿದ್ರು ಎಂದು ಹೇಳುವುದಾದರೆ ಅಮಿತಾ ಶಾ ಅವರು ಇಂತಹ ಮಂತ್ರಿಮಂಡಲವನ್ನು ಮಾಡಿದ್ರು ಎನ್ನುವುದೇ ನಂಬಲು ಆಗುವುದಿಲ್ಲ.
ಕಳೆದ ಬಾರಿ ಸದನದಲ್ಲಿ ವಿಡಿಯೋ ನೋಡಿ ಹೊರಗೆ ಬಿದ್ದಿದ್ದ ಇಬ್ಬರೂ ಸಚಿವರಾಗಿದ್ದಾರೆ ಎನ್ನುವುದೇ ಆಶ್ಚರ್ಯ. ಅದರಲ್ಲಿ ಒಬ್ಬರು ಮಾಜಿ ಶಾಸಕರು. ಅದು ಬಿಡಿ, ರಾಜ್ಯದ ವಿಷಯ. ಯಡ್ಡಿ, ಶಾ ಏನೂ ಬೇಕಾದರೂ ಮಾಡಿಕೊಳ್ಳಲಿ. ನಾನು ಕೇಳುವುದು ನನ್ನ ಕರಾವಳಿಯ ಬಗ್ಗೆ. ಇವತ್ತು ಬಿಜೆಪಿ ರಾಜ್ಯದಲ್ಲಿ ಮೂರಂಕೆಯನ್ನು ದಾಟಿ ಅಧಿಕಾರದ ಕುರ್ಚಿ ಹತ್ತಿ ಕುಳಿತಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಕರಾವಳಿ. ಮೋದಿ ಅಲೆ ಮತ್ತು ಬಿಎಲ್ ಸಂತೋಷ್ ಅವರ ತಂತ್ರ ಇತ್ತು ಎನ್ನುವುದು ಬೇರೆ ವಿಷಯ. ಆದರೆ ಕರಾವಳಿಯವರು ಯಾವುದೇ ದಾಕ್ಷಿಣ್ಯ ಇಲ್ಲದೆ 19 ಸೀಟು ಉತ್ತರ ಕನ್ನಡ ಜಿಲ್ಲೆ ಸೇರಿ ಬಿಜೆಪಿಯ ಜೋಳಿಗೆಗೆ ಹಾಕಿ ಬಿಟ್ಟರು. ಅದನ್ನು ರಾಷ್ಟ್ರೀಯ ನಾಯಕರು ಗ್ರಾಂಟೆಂಡ್ ಆಗಿ ತೆಗದುಕೊಂಡು ಬಿಟ್ರಾ.
ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳರಲ್ಲಿ ಆರು ಹೊಸಬರು ಎಂದೇ ಇಟ್ಟುಕೊಳ್ಳೋಣ. ಆದರೆ ಇವರು ಯಾವುದರಲ್ಲಿ ಕಡಿಮೆ ಇದ್ದಾರೆ. ಬೇಕಾದರೆ ಒಂದು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮಾಡಿ, ಈಗ ಸಚಿವರಾಗಿರುವವರಿಗಿಂತ ಹೆಚ್ಚು ಮಾರ್ಕುಗಳನ್ನು ಪಡೆದುಕೊಳ್ಳುತ್ತಾರೆ. ಹೋಗಲಿ, ಆ ನಸೀಬು ಅವರಿಗೆ ಇಲ್ಲ ಎಂದೇ ಇಟ್ಟುಕೊಳ್ಳೋಣ, ಅಂಗಾರ ಏನು ಮಾಡಿದ್ರು ಸ್ವಾಮಿ. ಮೋದಿ ಅಲೆ, ಶರಬತ್ತು ಯಾವುದೂ ಇಲ್ಲದ ಚುನಾವಣೆಯಲ್ಲಿಯೂ ಗೆದ್ದು ತೋರಿಸಿದ್ದು ಅಂಗಾರ.
ಅವರು ಏನು ಮಾತನಾಡುವುದಿಲ್ಲ, ಗುಂಪುಗಾರಿಕೆ ಮಾಡಲ್ಲ, ನಿಮ್ಮ ಹಿಂದೆ, ಮುಂದೆ ಹೋಗಲ್ಲ ಎನ್ನುವ ಒಂದೇ ಕಾರಣಕ್ಕೆ ಸುಳ್ಯ ಎನ್ನುವ ವಿಧಾನಸಭಾ ಕ್ಷೇತ್ರ ಎಲ್ಲಿದೆ ಎನ್ನುವುದು ಮರೆತು ಹೋಯ್ತಾ ಯಡ್ಡಿ, ಶಾ. ಹೋಗಲಿ, ಅಂಗಾರ ಅವರು ಇನ್ನು ಹತ್ತು ಬಾರಿ ಗೆದ್ದರೂ ಸಚಿವ ಸ್ಥಾನ ಕೇಳಲ್ಲ ಎನ್ನುವ ಕಾರಣಕ್ಕೆ ನೀವು ಕೊಟ್ಟಿಲ್ಲ ಎನ್ನುವುದಾದರೆ ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ನೀವು ಸಚಿವರನ್ನಾಗಿ ಮಾಡಿದ್ರು ನಾವು ಸಂತೃಪ್ತಿ ಪಟ್ಟುಕೊಳ್ಳುತ್ತಿದ್ವಿ. ಹಾಲಾಡಿಯವರು ಉಡುಪಿಯ ಉಸ್ತುವಾರಿ ಆಗಿ, ಸುನೀಲ್ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯಾದ್ರೂ ಆದರೆ ಪರವಾಗಿರಲಿಲ್ಲ. ಆದರೆ ನೀವು ಸಾರಾಸಗಟಾಗಿ ನಮಗೆ ಸುಣ್ಣ ಹಚ್ಚಿ ಬಿಟ್ಟಿದ್ದಿರಿ. ಒಂದು ವೇಳೆ ಜಾತಿಯನ್ನೇ ತಾವು ನೋಡುವುದಾದರೆ ಬಿಜೆಪಿಗೂ, ಕಾಂಗ್ರೆಸ್ಸಿಗೂ ವ್ಯತ್ಯಾಸ ಏನು? ಇನ್ನು ಆವತ್ತು ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಕರಾವಳಿಗೆ ಬಜೆಟಿನಲ್ಲಿ ಏನೂ ಇಟ್ಟಿಲ್ಲ ಎಂದು ಬೊಬ್ಬೆ ಹೊಡೆದಿದ್ದ ಇದೇ ಬಿಜೆಪಿಯವರೇ ಈಗ ಯಡ್ಡಿ ಕೂಡ ಸಚಿವ ಸ್ಥಾನ ಕೊಟ್ಟಿಲ್ಲ, ಧೈರ್ಯದಿಂದ ಕೇಳಲು ಧಮ್ ಇದೆಯಾ?
ಇದ್ದದ್ದರಲ್ಲಿಯೇ ದೂರದೂರದಿಂದ ಸಮಾಧಾನ ಎಂದರೆ ಸುರೇಶ್ ಕುಮಾರ್ ನಗರಾಭಿವೃದ್ಧಿ ಸಚಿವರಾಗಿರುವುದು. ಬಿಜೆಪಿಯ ಮಟ್ಟಿಗೆ ಕ್ಲೀನ್ ಇಮೇಜ್ ಇರುವ ಸಚಿವರುಗಳಲ್ಲಿ ಅವರು ಮೊದಲಿಗೆ ನಿಲ್ಲುತ್ತಾರೆ. ಅವರಿಂದ ಹಾಳಾಗಿ ಕೆರ ಹಿಡಿದಿರುವ ಮಂಗಳೂರು ಮಹಾನಗರ ಪಾಲಿಕೆಗೆ ಮುಕ್ತಿ ಸಿಗಬಹುದು. ಇನ್ನು ಭವಿಷ್ಯದಲ್ಲಿ ನಮಗೆ ಉಸ್ತುವಾರಿಯಾಗಿ ಯಾರು ಸಿಗುತ್ತಾರೋ ಅವರು ಇಲ್ಲಿ ಕಾಲು ಇಡುತ್ತಾರೋ, ಅಭಿವೃದ್ಧಿಯ ಬಗ್ಗೆ ಸಭೆ ಮಾಡುತ್ತಾರೋ. ಒಟ್ಟಿನಲ್ಲಿ ಒಂದು ಸಹಿ ತೆಗೆದುಕೊಳ್ಳಲು ನಮ್ಮ ಶಾಸಕರು, ಅಧಿಕಾರಿಗಳು ಉಸ್ತುವಾರಿ ಸಚಿವರನ್ನು ಹುಡುಕಿ ಹೋಗಬೇಕು. ತಮಾಷೆ ಇನ್ನು ಶುರು!!!
Leave A Reply