ತಮ್ಮ ಜಾಗ ಕೊಳ್ಳುವವರಿಲ್ಲ ಎಂದು ಗೋಲ್ ಮಾಲ್ ಗೆ ಇಳಿದ ಮೂಡಾ ಕಂದಾಯ ನಿರೀಕ್ಷಕ!!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಒಳಗೆ ಇರುವ ವ್ಯಕ್ತಿಯೊಬ್ಬರು ತಮ್ಮ ಸ್ವಲಾಭಕ್ಕಾಗಿ ಹೇಗೆ ಬೇರೆಯವರ ದಾಖಲೆಗೆ ಕೈ ಹಾಕಿದ್ರು ಎನ್ನುವುದನ್ನು ಇವತ್ತಿನ ಸಂಚಿಕೆಯಲ್ಲಿ ನಿಮಗೆ ಹೇಳುತ್ತೇನೆ. ಪ್ರಾರಂಭದಲ್ಲಿ ಸರ್ವರಿಗೂ ವಿಜಯದಶಮಿಯ ಶುಭಾಶಯಗಳು. ಆ ದೇವಿ ಭ್ರಷ್ಟರ ನಾಶ ಮಾಡಿ ಶಿಷ್ಟರ ರಕ್ಷಣೆ ಮಾಡಲಿ ಎನ್ನುವ ಆಶಯದೊಂದಿಗೆ ನೇರವಾಗಿ ಮೂಡಾಕ್ಕೆ ಹೋಗೋಣ. ಮಂಗಳೂರಿನ ಉದ್ಯಮಿ ರವೀಂದ್ರ ನಿಕ್ಕಂ ಎನ್ನುವವರು ಅಬ್ದುಲ್ ಅಜೀಜ್ ಎನ್ನುವವರಿಂದ ಒಂಭತ್ತು ಮುಕ್ಕಾಲು ಸೆಂಟ್ಸ್ ಏಕನಿವೇಶನ ಜಾಗವನ್ನು ಖರೀದಿ ಮಾಡುತ್ತಾರೆ. ಎರಡು ವರ್ಷಗಳ ಬಳಿಕ ರವೀಂದ್ರ ನಿಕ್ಕಂ ಅವರಿಗೆ ಒಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ನಿಮ್ಮ ಜಾಗವನ್ನು ಪರಿಷ್ಕೃತ ಏಕ ನಿವೇಶನವನ್ನಾಗಿ ಮಾಡಿದ್ದೇವೆ ಎಂದು ಲೆಟರ್ ಬರುತ್ತದೆ. ಅಸಲಿಗೆ ರವೀಂದ್ರ ನಿಕ್ಕಂ ಯಾವತ್ತೂ ತಮ್ಮ ಜಾಗವನ್ನು ಪರಿಷ್ಕೃತ ಏಕನಿವೇಶನವನ್ನಾಗಿ ಮಾಡಿಕೊಡುವಂತೆ ಮೂಡಾಕ್ಕೆ ಅರ್ಜಿ ಕೊಡಲೇ ಇಲ್ಲ. ಆದರೂ ಮೂಡಾ ಯಾಕೆ ಹೀಗೆ ಮಾಡಿತು ಎನ್ನುವ ಅನುಮಾನ ಅವರಿಗೆ ಕಾಡಿತ್ತು. ಅವರು ತಾವು ಯಾರಿಂದ ಜಾಗ ಖರೀದಿ ಮಾಡಿದ್ದರೋ ಆ ಅಬ್ದುಲ್ ಅಜೀಜ್ ಅವರಿಗೆ ಫೋನ್ ಮಾಡಿ ವಿಚಾರಿಸಿದರು. ಆದರೆ ಅಬ್ದುಲ್ ಅಜೀಜ್ ಕೂಡ ಪರಿಷ್ಕೃತ ಏಕನಿವೇಶನಕ್ಕೆ ಅರ್ಜಿ ಹಾಕಿರಲಿಲ್ಲ ಎಂದು ಗೊತ್ತಾಯಿತು. ಆ ಬಳಿಕ ರವೀಂದ್ರ ನಿಕ್ಕಂ ಅವರು ಮೂಡಾಕ್ಕೆ ಪತ್ರ ಬರೆದು “ನಾವು ಪರಿಷ್ಕೃತ ಏಕನಿವೇಶನಕ್ಕೆ ಯಾವುದೇ ಅರ್ಜಿ ಹಾಕದೇ ಇದ್ದಾಗ ಮೂಡಾ ಏಕಾಏಕಿ ಹಾಗೇ ಮಾಡಲು ಕಾರಣ” ಕೇಳಿ ಪತ್ರ ಬರೆದರು. ಆ ಬಗ್ಗೆ ಸೂಕ್ತ ತನಿಖೆ ಮಾಡಲು ಕೇಳಿಕೊಂಡರು. ಆ ನಂತರ ಮೂಡಾಕ್ಕೆ ತನ್ನ ತಪ್ಪಿನ ಅರಿವಾಯಿತು. ನಿಮ್ಮ ಪರಿಷ್ಕೃತ ಏಕನಿವೇಶನವನ್ನು ರದ್ದು ಮಾಡಿದ್ದೇವೆ ಎಂದು ಹೇಳಿದರು. ಅಲ್ಲಿ ತನಕ ಕಥೆ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಆದರೆ ಕಥೆಗೆ ದೊಡ್ಡ ಟ್ವಿಸ್ಟ್ ಸಿಗುವುದು ಆರು ತಿಂಗಳ ನಂತರ.
ವಿಷಯ ಏನೆಂದರೆ ರವೀಂದ್ರ ನಿಕ್ಕಂ ಅವರು ಖರೀದಿಸಿದ ಜಾಗದ ಹಿಂದೆ ಜಮೀಲಾ ಎನ್ನುವವರ ಆರು ಸೆಂಟ್ಸ್ ಜಾಗ ಇದೆ. ಆ ಜಾಗಕ್ಕೆ ಹೋಗಬೇಕಾದರೆ ಒಂದು ಅಡಿ ಮಾತ್ರ ದಾರಿ ಇರುವುದು, ಅದು ಕೂಡ ಚರಂಡಿಯ ಮೇಲೆ. ಆದ್ದರಿಂದ ಜಮೀಲಾ ಅವರ ಜಾಗವನ್ನು ಯಾರೂ ಖರೀದಿ ಮಾಡಲು ಬರುತ್ತಿರಲಿಲ್ಲ. ಅದಕ್ಕೆ ಜಮೀಲಾ ಅವರ ಮಗ ಮುನೀರ್ ಏನು ಮಾಡುತ್ತಾರೆ ಎನ್ನುವುದೇ ಗೋಲ್ ಮಾಲ್ ನ ಒಟ್ಟು ತಿರುಳು. ಜಾಗದ ಒರಿಜಿನಲ್ ಸ್ಕೆಚ್ ಇರುವುದು ಇಬ್ಬರಲ್ಲಿ ಮಾತ್ರ. ಒಂದು ಮಾಲೀಕರ ಬಳಿ ಮತ್ತೊಂದು ಮೂಡಾ ಬಳಿ. ಇಲ್ಲಿ ಮಾಲೀಕರು ರವೀಂದ್ರ ನಿಕ್ಕಂ. ಇನ್ನೊಂದು ಮೂಡಾ ಆಫೀಸ್. ಪರಿಷ್ಕೃತ ಏಕ ನಿವೇಶನಕ್ಕೆ ಅರ್ಜಿಯನ್ನು ಮಾಲೀಕ ಹಾಕಿದ್ದಲ್ಲಿ ಇನ್ಸಪೆಕ್ಷನ್ ಮಾಡಲು ಮೂಡಾದಿಂದ ಅಧಿಕಾರಿಗಳು ಬರಬೇಕು, ಆದರೆ ಯಾರೂ ಬಂದಿರಲಿಲ್ಲ. ಆದರೆ ಇಲ್ಲಿ ಏನು ಮಾಡಿದ್ದಾರೆ ಗೊತ್ತಾ?
ಜಮೀಲಾ ಅವರ ಮಗ ಮುನೀರ್ ಉದ್ಯೋಗ ಏನು ಅಂದುಕೊಂಡಿದ್ದೀರಾ? ಆತ ಮೂಡಾದಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಕಚೇರಿಯಲ್ಲಿದ್ದ ರವೀಂದ್ರ ನಿಕ್ಕಂ ಅವರ ಜಾಗದ ಒರಿಜಿನಲ್ ಸ್ಕೆಚ್ ಬಳಸಿ ಪರಿಷ್ಕೃತ ಏಕ ನಿವೇಶನಕ್ಕೆ ಅರ್ಜಿ ಹಾಕಿ ಮೂರು ಅಡಿ ಜಾಗ ಬಿಡಬೇಕು ಎಂದು ಮೂಡಾ ಕಡೆಯಿಂದ ನೋಟಿಸ್ ಕಳುಹಿಸಿದ್ದಾರೆ. ಇದು ದೊಡ್ಡ ಗೋಲ್ ಮಾಲ್. ನಂತರ ನೋಡಿದಾಗ ಮೂಡಾದವರಿಗೆ ತಮ್ಮದೇ ಒಬ್ಬ ಉದ್ಯೋಗಿ ಹೀಗೆ ಗೋಲ್ ಮಾಲ್ ಮಾಡಿದ್ದು ಗೊತ್ತಾಗಿದೆ. ಅದಕ್ಕೆ ನಿಕ್ಕಂ ಅವರಿಗೆ ಪತ್ರ ಬರೆದು ” ಜಮೀಲಾ ಅವರು ತಿಳುವಳಿಕೆ ಇಲ್ಲದೆ ಪರಿಷ್ಕೃತ ಏಕನಿವೇಶನಕ್ಕೆ ಅರ್ಜಿ ಹಾಕಿದ್ರು, ಆಕೆ ಮಾಡಿದ್ದು ತಪ್ಪು” ಎನ್ನುವ ಅರ್ಥದ ಪತ್ರ ಬರೆದಿದ್ದಾರೆ. ಇಲ್ಲಿ ಜಮೀಲಾ ಅವರಿಂದ ಅವರ ಮಗ ಮೂಡಾದ ಕಂದಾಯ ನಿರೀಕ್ಷಕ ಮುನೀರ್ ಫೋರ್ಜರಿ ಸಹಿ ಹಾಕಿ ರವೀಂದ್ರ ನಿಕ್ಕಂ ಅವರ ಜಾಗ ಪರಿಷ್ಕೃತ ಏಕ ನಿವೇಶನ ಆಗುವಂತೆ ಪ್ರಯತ್ನ ಮಾಡಿದ್ದಾರೆ. ನಿಕ್ಕಂ ಅವರು ಮೂರು ಅಡಿ ಜಾಗವನ್ನು ಬಿಡಬೇಕು ಎಂದು ಮೂಡಾದ ಕಡೆಯಿಂದ ಸೂಚನೆ ಕೊಡಿಸಿದ್ದಾರೆ. ಆ ಮೂಲಕ ತಮ್ಮ ತಾಯಿಯ ಆರು ಸೆಂಟ್ಸ್ ಜಾಗಕ್ಕೆ ಖರೀದಿದಾರರು ಬರುವಂತೆ ಪ್ಲಾನ್ ಮಾಡಿದ್ದಾರೆ. ಒಂದು ವೇಳೆ ಮೂಡಾದ ಕಾನೂನು ಗೊತ್ತಿಲ್ಲದ ಬೇರೆ ಯಾರಾದರೂ ಪಾಪದವರು ಆಗಿದ್ದರೆ ಮುನೀರ್ ಪ್ಲಾನ್ ಸಕ್ಸಸ್ ಆಗುತ್ತಿತ್ತು. ಆದರೆ ಈಗ ಮುನೀರ್ ಸಿಕ್ಕಿಬಿದ್ದಿದ್ದಾರೆ. ಜಮೀಲಾ ಅವರು ತಿಳುವಳಿಕೆ ಇಲ್ಲದೆ ಹೀಗೆ ಮಾಡಿದ್ದರೆ ಎಂದು ಎಷ್ಟು ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಜಮೀಲಾ ಅವರಿಗೆ ತಿಳುವಳಿಕೆ ಇಲ್ಲದಿರಬಹುದು. ಆದರೆ ಇಂಜಿನಿಯರ್ ಮಗನನ್ನು ಇಟ್ಟುಕೊಂಡು ಬೇರೆಯವರ ಸಹಿ ಫೋರ್ಜರಿ ಮಾಡುವ ಕೆಲಸ ಜಮೀಲಾ ಯಾಕೆ ಮಾಡಿದರೋ. ಇಲ್ಲಿ ಮುನೀರ್ ತಪ್ಪು ಮಾಡಿರುವುದು ಸ್ಪಷ್ಟವಾಗಿರುವುದರಿಂದ ಒಂದೋ ಅವರನ್ನು ಕೆಲಸದಿಂದ ಅಮಾನತು ಮಾಡಬೇಕು. ಆ ಬಳಿಕ ಇಲಾಖೆಯಿಂದ ತನಿಖೆ ಮಾಡಿ ತಪ್ಪು ಸಾಬೀತಾದರೆ ಕೆಲಸದಿಂದ ತೆಗೆಯಬೇಕು. ಜಮೀಲಾ ಅವರಿಗೂ ಸೂಕ್ತ ಶಿಕ್ಷೆ ಆಗಬೇಕು. ಇಲ್ಲದೇ ಹೋದರೆ ಖಾಸಗಿ ದೂರನ್ನು ನ್ಯಾಯಾಲಯದಲ್ಲಿ ದಾಖಲಿಸಿ ಮುನೀರ್ ವಿರುದ್ಧ ತನಿಖೆ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ರವೀಂದ್ರ ನಿಕ್ಕಂ ಅಣಿಯಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಜನರ ಜಾಗದ ಮೇಲೆ ಆಟವಾಡುವ ಅಧಿಕಾರಿಗಳಿಗೆ ಮುನೀರ್ ಪ್ರಕರಣ ಒಂದು ಪಾಠವಾಗಲಿ ಎನ್ನುವುದು ನನ್ನ ಹಾರೈಕೆ.
Leave A Reply