ಊಟಕ್ಕಿಲ್ಲದ ಉಪ್ಪಿನಕಾಯಿಯಾದ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಇಲ್ಲ ಎನ್ನುವ ಆದೇಶ!!
ಮಂಗಳೂರಿನಲ್ಲಿ ಆಸ್ತಿ ನೊಂದಾವಣಿಗೆ ಸದ್ಯಕ್ಕೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಇಲ್ಲ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದು ನಿಮಗೆ ಗೊತ್ತಿರಬಹುದು. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಶಾಸಕರ ಪ್ರಯತ್ನದಿಂದ ಜನರಿಗೆ ಬಹುಕಾಲದಿಂದ ತಲೆನೋವಾದ ಪ್ರಾಪರ್ಟಿ ಕಾರ್ಡ್ ಆಸ್ತಿ ನೊಂದಾವಣೆಯ ಸಮಯ ಮುಂದಿನ ಆದೇಶದ ತನಕ ಕಡ್ಡಾಯ ಇಲ್ಲ ಎಂದು ಪ್ರಚಾರವಾಗಿತ್ತು. ಓಕೆ, ಪರವಾಗಿಲ್ಲ, ಶಾಸಕರುಗಳು ಅವರ ಕೆಲಸ ಮಾಡಿರಬಹುದು. ಆದರೆ ಅದು ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿರುವುದು ಮಾತ್ರ ಸತ್ಯ. ಅದು ಹೇಗೆ ಎನ್ನುವುದನ್ನು ಇವತ್ತು ವಿವರಿಸುತ್ತೇನೆ.
ಈಗ ಪ್ರಾಪರ್ಟಿ ಕಾರ್ಡ್ ಸದ್ಯ ಅಗತ್ಯ ಇಲ್ಲ ಎಂದು ಹೇಳುತ್ತಿರುವುದು ಆಸ್ತಿ ನೊಂದಾವಣೆಯ ಸಮಯದಲ್ಲಿ ಮಾತ್ರ. ಆದರೆ ಭೂಪರಿವರ್ತನೆ ಮಾಡಲು ಮತ್ತು ಸಿಂಗಲ್ ಸೈಟ್ ಮಾಡಿಸಲು ಪ್ರಾಪರ್ಟಿ ಕಾರ್ಡ್ ಬೇಕೆ ಬೇಕು. ಅದನ್ನು ಸರಕಾರ ಕ್ಯಾನ್ಸಲ್ ಮಾಡಿಲ್ಲ. ಉದಾಹರಣೆಗೆ ನಿಮ್ಮ ಬಳಿ ಕೃಷಿ ಭೂಮಿ ಇದೆ ಎಂದು ಇಟ್ಟುಕೊಳ್ಳೋಣ. ನೀವು ಅದನ್ನು ಮಾರುವ ಸಂದರ್ಭದಲ್ಲಿ ಅತ್ಯವಶ್ಯಕವಾಗಿ ಭೂಪರಿವರ್ತನೆ ಮಾಡಲೇಬೇಕು. ಇಲ್ಲದೇ ಹೋದರೆ ಕೃಷಿ ಭೂಮಿಯನ್ನು ಭೂಪರಿವರ್ತನೆ ಮಾಡದೇ ಮಾರಬೇಕಾದರೆ ಅದನ್ನು ಖರೀದಿಸುವವರು ಕೂಡ ಕೃಷಿಕರೇ ಆಗಿರಬೇಕು. ಆದರೆ ಮಂಗಳೂರಿನಲ್ಲಿ ಹೆಚ್ಚಾಗಿ ಇರುವುದು ಕೃಷಿ ಭೂಮಿ ಮತ್ತು ಅದನ್ನು ಖರೀದಿಸುವವರು ಒಂದೋ ಮನೆ ಕಟ್ಟಲು ಅಥವಾ ವಾಣಿಜ್ಯ ಉದ್ದೇಶಕ್ಕೆ ಖರೀದಿಸುತ್ತಾರೆ. ಆಗ ಭೂಪರಿವರ್ತನೆ ಮಾಡುವಾಗ ಪ್ರಾಪರ್ಟಿ ಕಾರ್ಡ್ ಬೇಕಾಗುತ್ತದೆ. ಅದಕ್ಕೆ ವಿನಾಯಿತಿ ಸಿಕ್ಕಿಲ್ಲ. ಇನ್ನು ಅದರ ಮುಂದಿನ ಹೆಜ್ಜೆ ಸಿಂಗಲ್ ಸೈಟ್ ಮಾಡುವುದು. ಭೂಪರಿವರ್ತನೆ ತಾಲೂಕು ಕಚೇರಿಯಲ್ಲಿ ಮಾಡಬಹುದಾಗಿದ್ದರೆ ಸಿಂಗಲ್ ಸೈಟ್ ಮಾಡುವುದು ಮೂಡಾದಲ್ಲಿ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೀವು ಸಿಂಗಲ್ ಸೈಟ್ ಮಾಡಿಸುವಾಗ ಅಲ್ಲಿ ಪ್ರಾಪರ್ಟಿ ಕಾರ್ಡ್ ಬೇಕಾಗುತ್ತದೆ. ಕೊನೆಯದಾಗಿ ಮೂರನೇ ಹಂತ ನೊಂದಾವಣೆ. ಅದಕ್ಕೆ ಮಾತ್ರ ಪ್ರಾಪರ್ಟಿ ಕಾರ್ಡ್ ಸದ್ಯ ಬೇಡಾ. ಮತ್ತೆ ನೋಡೋಣ ಎನ್ನುವ ಆದೇಶ ಬಂದಿರುವುದು. ಹಾಗಾದರೆ ಏನು ಪ್ರಯೋಜನ? ಏನೂ ಪ್ರಯೋಜನವಿಲ್ಲವೇ? ಯಾರು ತಮ್ಮ ಭೂಮಿಯನ್ನು ಈಗಾಗಲೇ ಭೂಪರಿವರ್ತನೆ ಮಾಡಿ ನಂತರ ಅದು ಸಿಂಗಲ್ ಸೈಟ್ ಎಪ್ರೂವಲ್ ಆಗಿದ್ದಲ್ಲಿ ಆಗ ಅವರಿಗೆ ಭೂನೊಂದಾವಣಿ ಮಾಡುವಾಗ ಪ್ರಾಪರ್ಟಿ ಕಾರ್ಡ್ ಇಲ್ಲದಿದ್ದರೂ ಪರವಾಗಿಲ್ಲ ಎನ್ನುವ ವಾತಾವರಣ ಈಗ ಸದ್ಯ ಇರುವುದು. ಉಳಿದ ಎಲ್ಲರಿಗೂ ಕೈಗೆ ಬಂದ ತುತ್ತು ಬಾಯಿಯಿಂದ ಕೆಳಗೆ ಹೋಗಿ ಗಂಟಲಲ್ಲಿ ಸಿಕ್ಕಿಕೊಂಡಿರುವ ಪರಿಸ್ಥಿತಿ ಬಂದಿರುವುದು. ಹಾಗಾದರೆ ನಮ್ಮ ಶಾಸಕರು ಏನು ಮಾಡಬೇಕು?
ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈಕಾಲು ಹಿಡಿದು ಮರು ಆದೇಶ ಹೊರಡಿಸಬೇಕು. ಮತ್ತೆ ಸಿಎಂ ಮತ್ತು ಕಂದಾಯ ಸಚಿವರಿಗೆ ಮನವರಿಕೆ ಮಾಡಿ ಹೊಸ ಆದೇಶ ತರಬೇಕು. ನೀವಿಗ ಜನಸಾಮಾನ್ಯರಿಗೆ ಉಪಯೋಗವಾಗಲಿ ಎಂದು ಮಾಡಿರುವ ವಿನಾಯಿತಿ ಏನೂ ಉಪಯೋಗವಾಗುತ್ತಿಲ್ಲ. ಕೇವಲ ಸಣ್ಣ ಪ್ರಮಾಣದಲ್ಲಿ ಮಾತ್ರ ಯೂಸ್ ಆಗಿದೆ. ಆದ್ದರಿಂದ ಭೂಪರಿವರ್ತನೆ, ಸಿಂಗಲ್ ಸೈಟ್ ಮಾಡುವಾಗಲೂ ಪ್ರಾಪರ್ಟಿ ಕಾರ್ಡ್ ಸದ್ಯ ಅಗತ್ಯ ಇಲ್ಲ ಎಂದು ಮನಸ್ಸಿಗೆ ಮುಟ್ಟುವ ಹಾಗೆ ಹೇಳಿ ಹೊಸ ಸೂಚನೆ ಹೊರಡಿಸಬೇಕು. ಅದಕ್ಕಾಗಿ ನಮ್ಮ ಇಬ್ಬರು ಶಾಸಕರು ಮತ್ತೆ ಸಿಎಂ ಎದುರು ಕೈಕಟ್ಟಿ ನಿಲ್ಲಬೇಕು. ಇಲ್ಲದಿದ್ದರೆ ಜನ ಹೊಗಳುವುದು ಬಿಡಿ, ಹಿಂದೆಯಿಂದ ಬೈಯುತ್ತಾ ತಿರುಗುತ್ತಾರೆ!
Leave A Reply