ವೋಟ್ ಕೇಳಲು ಬಂದವರು ಹೋಂವರ್ಕ್ ಮಾಡಿದ್ದಾರಾ ಎಂದು ನೋಡಿ!!
ಇನ್ನೆರಡು ದಿನ ಅಷ್ಟೇ. ನಂತರ ನಿಮ್ಮ ಮನೆ ಬಾಗಿಲಿಗೆ ಬರಲಿಕ್ಕಿದ್ದಾರೆ ನಮ್ಮ ಮಂಗಳೂರಿನ ಮುಂದಿನ ಅಭಿವೃದ್ಧಿಯ ಹರಿಕಾರರು. ಅವರು ಪ್ರಚಾರಕ್ಕೆ ನಿಮ್ಮ ಮನೆಬಾಗಿಲಿಗೆ ಬರುತ್ತಿದ್ದಂತೆ ನೀವು ಮೊದಲು ಕೇಳಬೇಕಾಗಿರುವುದು ನಮ್ಮ ವಾರ್ಡ್ ಅನ್ನು ಹೇಗೆ ಅಭಿವೃದ್ಧಿ ಮಾಡಬೇಕು ಎಂದು ಅಂದುಕೊಂಡಿದ್ದೀರಿ ಎನ್ನುವ ಮೊದಲ ಪ್ರಶ್ನೆ.
ಒಂದು ವೇಳೆ ಕಳೆದ ಬಾರಿಯ ಕಾರ್ಪೋರೇಟರ್ ಅವರೇ ಈ ಬಾರಿ ಸ್ಪರ್ಧಿಸುತ್ತಿದ್ದರೆ ಅವರಿಗೆ ಒಂದು ಪ್ರಶ್ನೆ ಕೇಳಿ, ಏನೆಂದರೆ ಮಂಗಳೂರು ಬೇರೆ ವಿಷಯದಲ್ಲಿ ರಾಜ್ಯದಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದ್ದಿಯೋ ಗೊತ್ತಿಲ್ಲ, ಆದರೆ ಡೆಂಗ್ಯೂ, ಮಲೇರಿಯಾದಲ್ಲಿ ಒಂದನೇ ಸ್ಥಾನದಲ್ಲಿ ಇದೆಯಲ್ಲ, ಅದಕ್ಕೆ ಏನು ಕಾರಣ ಎಂದು ಕೇಳಿ. ಅದಕ್ಕೆ ಅವರು ಮಂಗಳೂರಿನ ಅನೇಕ ಕಡೆ ಗಲೀಜು ಇದೆ, ಅದು ಇದೆ, ಇದು ಇದೆ ಎಂದು ಹೇಳಬಹುದು. ಸ್ವಚ್ಚ ಇಲ್ಲದೆ ಇರುವುದಕ್ಕೆ ಏನು ಕಾರಣ ಎಂದು ಕೇಳಿ. ಗೊತ್ತಿಲ್ಲ ಎಂದು ಹೇಳಿದರೆ ನಿಮ್ಮ ಎರಡನೇ ಪ್ರಶ್ನೆ ಹಾಗಾದರೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ತಿಂಗಳಿಗೆ ಪಾಲಿಕೆಯಿಂದ ಎಷ್ಟು ಪಾವತಿಸಲಾಗುತ್ತದೆ ಎಂದು ಗೊತ್ತಿದೆಯಾ ಎಂದು ಕೇಳಿ ನೋಡಿ. ಒಂದು ವೇಳೆ ತಲೆಯ ಒಳಗೆ ಸಣ್ಣ ಮೆದುಳು ಎನ್ನುವುದು ಇದೆಯಾದರೆ ಆ ಅಭ್ಯರ್ಥಿ ಎರಡು ಕೋಟಿ ಎಂದು ಹೇಳಬಹುದು. ಒಂದು ವೇಳೆ ಎರಡು ಕೋಟಿ ರೂಪಾಯಿ ತಿಂಗಳಿಗೆ ಖರ್ಚಾಗುತ್ತದೆ ಎಂದಾದರೆ ಯಾಕೆ ಮಂಗಳೂರು ಡೆಂಗ್ಯೂ, ಮಲೇರಿಯಾದಲ್ಲಿ ಈ ಪರಿ ಪ್ರಥಮ ಸಾಧನೆ ಮಾಡಿದೆ ಎಂದು ಕೇಳಿ. ಪಾಲಿಕೆಯಲ್ಲಿ ಫಾಗಿಂಗ್, ಔಷಧ ಸಿಂಪಡನೆ ಎಂದು ಲಕ್ಷ ರೂಪಾಯಿ ಬಿಲ್ ಮಾಡುವವರಿಗೆ ಯಾಕೆ ಕಾಯಿಲೆಗಳನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ ಎಂದು ಒತ್ತಿ ಕೇಳಿ. ಅದರೊಂದಿಗೆ ಮೂರನೇ ಪ್ರಶ್ನೆ ಕೂಡ ನೀವು ಕೇಳಬೇಕು. ಅದೇನೆಂದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ರಸ್ತೆಗಳನ್ನು ನಿತ್ಯ ಗುಡಿಸಬೇಕು ಎನ್ನುವ ನಿರ್ಭಂಧ ಇದೆ. ಇನ್ನು ಯಾವ ರಸ್ತೆಗಳನ್ನು ಎರಡು ದಿನಗಳಿಗೆ ಒಮ್ಮೆ ಗುಡಿಸಬೇಕು ಎನ್ನುವ ಕಂಡಿಷನ್ ಇದೆ. ಇನ್ನು ಯಾವ ರಸ್ತೆಗಳನ್ನು ವಾರಕ್ಕೊಮ್ಮೆ ಗುಡಿಸಬೇಕು ಎನ್ನುವ ಸೂಚನೆ ಇದೆ ಎಂದು ಗೊತ್ತಿದೆಯಾ ಎಂದು ಕೇಳಿ ನೋಡಿ. ಯಾವ ಮಾಜಿ ಸದಸ್ಯ ಮತ್ತು ಹಾಲಿ ಅಭ್ಯರ್ಥಿ ಸರಿಯಾದ ಉತ್ತರ ಕೊಡುತ್ತಾನೆ ಎಂದು ನೋಡಿ. ಅದರೊಂದಿಗೆ ಕೊನೆಯ ಪ್ರಶ್ನೆ ಕೇಳಿ. ಅದೇನೆಂದರೆ ಆಂಟೋನಿ ವೇಸ್ಟ್ ನವರು ಇಷ್ಟು ನಿರ್ಲಕ್ಷ್ಯತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದ್ದರೂ ಯಾಕೆ ನೀವು ಈ ಹಿಂದೆ ಯಾವತ್ತೂ ಧ್ವನಿ ಎತ್ತಿಲ್ಲ ಎಂದು ಕೇಳಿ. ಉತ್ತರ ಬರುತ್ತದೆ ಎನ್ನುವ ಖಾತ್ರಿ ನನಗಿಲ್ಲ. ಒಂದು ವೇಳೆ ಹೊಸ ಅಭ್ಯರ್ಥಿ ಆಗಿದ್ದರೆ ” ನೀವು ಒಂದು ವೇಳೆ ಗೆದ್ದರೆ ಆಂಟೋನಿ ವೇಸ್ಟ್ ನವರಿಂದ ಸರಿಯಾಗಿ ಕೆಲಸ ಮಾಡಿಸುತ್ತೇನೆ ಎಂದು ಭರವಸೆ ಕೊಡಿ” ಎನ್ನಿ. ನಿಮ್ಮ ಮೊಬೈಲ್ ತೆಗೆದು ಅವರ ಭರವಸೆಯ ಮಾತುಗಳನ್ನು ರೆಕಾರ್ಡ್ ಮಾಡಿ. ಗೆದ್ದ ನಂತರ ಧ್ಬನಿ ತೆಗೆಯದೇ, ಬಾಯಿಗೆ ಪ್ಲಾಸ್ಟರ್ ಹಾಕಿ ಮಲಗಿಕೊಂಡರೆ ಭರವಸೆ ವಿಡಿಯೋ ವೈರಲ್ ಮಾಡುವ ಎಚ್ಚರಿಕೆ ನೀಡಿ. ನೀವು ಇಷ್ಟು ಮಾಡದೇ ಯಾರೋ ಶಾಸಕರು ಮನವಿ ಮಾಡಿದ್ರು ಎಂದೋ, ಕಾಂಗ್ರೆಸ್ಸಿನವರು ನಮ್ಮ ಫ್ರೆಂಡು ಎಂದೋ, ಮೋದಿ ಫಾರಿನ್ ನಲ್ಲಿ ಒಳ್ಳೆಯ ಭಾಷಣ ಮಾಡುತ್ತಾರೆ ಎಂದೋ ವೋಟ್ ಮಾಡಿದ್ರೆ ನಾಳೆ ನಿಮ್ಮ ಮನೆಯಿಂದ ಕಸ ತೆಗೆಯಲು ಗೆದ್ದವರು ಬರುವುದಿಲ್ಲ!
Leave A Reply