ಕಾಂಕ್ರೀಟ್ ರಸ್ತೆಯಲ್ಲಿಯೇ ಹೊಂಡ ಕಾಣುವ ಭಾಗ್ಯ ಕೊಟ್ಟ ಪಕ್ಷಕ್ಕೆ ಮತ ಕೊಡಬೇಕಾ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಯಾಕೆ ಉತ್ತಮ ಆಡಳಿತ ಈ ಬಾರಿ ಬರಬೇಕು ಎಂದರೆ ನಮಗೆ ಬರುತ್ತಿರುವ ಅನುದಾನಗಳು ಸಮರ್ಪಕವಾಗಿ ಅನುಷ್ಟಾನಕ್ಕೆ ಬರಲಿ ಎನ್ನುವ ಕಾರಣಕ್ಕೆ. ಕಾಂಗ್ರೆಸ್ ಕಳೆದ ಬಾರಿ ಐದು ವರ್ಷ ಆಡಳಿತದಲ್ಲಿ ಇದ್ದಾಗ ಇವರಿಗೆ ಸಿಗುತ್ತಿದ್ದ ಅನುದಾನಗಳಿಗೆ ಏನೂ ಕೊರತೆ ಇರಲಿಲ್ಲ. ಎಲ್ಲವನ್ನು ಸರಿಯಾಗಿ ಬಳಸಿದ್ದರೆ ಈ ಬಾರಿ ಬಿಜೆಪಿಗೆ ಚುನಾವಣೆಗೆ ಹೋಗಲು ಯಾವುದೇ ವಿಷಯವೇ ಇರದಂತೆ ಕಾಂಗ್ರೆಸ್ ಅಭಿವೃದ್ಧಿ ಪಡಿಸಬಹುದಿತ್ತು.
ಆದರೆ ವಿಷಯ ಎಂದರೆ ಆಡಳಿತ ಪಕ್ಷದಲ್ಲಿದ್ದ ಹಲವಾರು ಸದಸ್ಯರು ಅಭಿವೃದ್ಧಿ ಆಗಿ ಹೋದರೆ ವಿನ: ಮಂಗಳೂರು ಹಾಗೆ ಉಳಿಯಿತು. ಇವತ್ತಿಗೂ ಎಷ್ಟೋ ಕಡೆ ಯಾವತ್ತೋ ಆರಂಭಿಸಿದ ಕಾಮಗಾರಿ ಯೋಜನೆಗಳು ಅರ್ಧಕ್ಕೆ ನಿಂತಿವೆ. ನಮ್ಮ ಪಾಲಿಕೆ ಇಂಜಿನಿಯರಿಂಗ್ ವಿಭಾಗದವರು ಒಂದು ಪ್ರಾಜೆಕ್ಟ್ ಕೈಗೆ ತೆಗೆದುಕೊಳ್ಳುತ್ತಾರೆ ಎಂದು ಇಟ್ಟುಕೊಳ್ಳೋಣ. ಇವರು ಗ್ರೌಂಡ್ ವರ್ಕ್ ಮಾಡಲ್ಲ. ಉದಾಹರಣೆಗೆ ಒಳಚರಂಡಿ ಮಾಡುತ್ತಾರೆ ಎಂದಾದರೆ ಆ ರಸ್ತೆಯಲ್ಲಿ ಯಾರಾದಾದರೂ ಖಾಸಗಿ ಜಾಗ ಬರುತ್ತಾ ಎಂದು ಮೊದಲೇ ನೋಡುವುದಿಲ್ಲ. ಅರ್ಧ ಕೆಲಸ ಆಗುವಾಗ ಯಾರಾದರೂ ಆಕ್ಷೇಪ ಬಂದು ಕೆಲಸ ನಿಲ್ಲಿಸಿದರೆ ಅಲ್ಲಿಗೆ ಅದು ಹಾಗೆಯೇ. ಎಷ್ಟು ವರ್ಷಗಳಾದರೂ ಹಾಗೆ ಇರುತ್ತೆ. ಅದಕ್ಕೆ ಒಂದು ಕೋಟಿ ಮಂಜೂರಾಗಿ ಅರವತ್ತು ಲಕ್ಷ ಖರ್ಚಾಗಿ ಕೆಲಸ ನಿಂತಿತು ಎಂದು ಇಟ್ಟುಕೊಳ್ಳಿ ಉಳಿದ 40 ಲಕ್ಷ ಎಲ್ಲಿ ಹೋಯಿತು ಎಂದೇ ಯಾರಿಗೂ ಗೊತ್ತಾಗುವುದಿಲ್ಲ. ಹೀಗೆ “ಎಲ್ಲೆಲ್ಲಿಗೂ” ಹೋಗಿರುವ ನಮ್ಮ ನಿಮ್ಮ ತೆರಿಗೆಯ ಹಣವನ್ನು ಮತ್ತೆ ವಾಪಾಸು ತರಬೇಕಾದರೆ ಅಥವಾ ಈ ಬಾರಿ ಹೀಗೆ ಆಗಬಾರದು ಎಂದಾದರೆ ಉತ್ತಮ ಆಡಳಿತ ಬೇಕೆ ಬೇಕು. ನಿಮಗೆ ಎಡಿಬಿ ಮೊದಲ ಹಂತದಲ್ಲಿ ಬಂದ ಸಾಲದಲ್ಲಿ ಇವರು 24*7 ಕುಡಿಯುವ ನೀರು ಮತ್ತು ಒಳಚರಂಡಿ ಸರಿ ಮಾಡಿಕೊಡುತ್ತೇವೆ ಎನ್ನುವ ಭರವಸೆ ನೀಡಿದ್ರು. ಆದರೆ ಇಲ್ಲಿಯ ತನಕ ಸರಿಯಾಗಿ 60 ವಾರ್ಡಿನ ಯಾವುದಾದರೂ ಒಂದು ಮುಖ್ಯ ರಸ್ತೆಗೆ 24*7 ನೀರು ಹೋಗಿದೆಯಾ ಎಂದು ಇವರು ನೋಡಿದ್ದಾರಾ? ಇಲ್ಲ, ನೀರು ಬಂದೇ ಇಲ್ಲ. ಒಳಚರಂಡಿಯ ಕಥೆ ಹೇಗಿದೆ ಎಂದರೆ ಕಾರಂಜಿಗಳು ರಸ್ತೆಯ ಮಧ್ಯದಲ್ಲಿ ಮಳೆಗಾಲದ ಸಮಯದಲ್ಲಿ ಚಿಮ್ಮುವ ಶೈಲಿಯೇ ಪಾದಚಾರಿಗಳಿಗೆ ಸಂಕಟ. ಇನ್ನು 13 ನೇ ಮತ್ತು 14 ನೇ ಫೈನಾನ್ಸ್ ಕಮಿಷನ್ ನಲ್ಲಿಯೂ ಹಣ ಬಂತು. ಆದರೆ ಅದು ಎಲ್ಲಿ ಸರಿಯಾಗಿ ಖರ್ಚು ಆಗಿದೆ? ಅದರ ನಂತರ ಎಸ್ ಎಫ್ ಸಿ ಗ್ರಾಂಟ್ ನಲ್ಲಿ ಹಣ ಬಂತು. ಅದು ಎಲ್ಲಿಗೆ ಹೋಯಿತು. ಎಲ್ಲಾ ಬಿಡಿ, ತುಂಬೆ ಹೊಸ ವೆಂಟೆಂಡ್ ಡ್ಯಾಂ ನಿರ್ಮಾಣಕ್ಕೆ 40 ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದು ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ. ಆದರೆ ನಮ್ಮ ಇಂಜಿನಿಯರ್ ಗಳು, ಪಾಲಿಕೆ ಎಷ್ಟು ನೀರಿನಲ್ಲಿ ಬಿದ್ದಂತೆ ಮಾಡಿತು ಎಂದರೆ ಕಾಮಗಾರಿ ಮುಗಿದಾಗ ಅದು 85 ಕೋಟಿ ಆಗಿತ್ತು. ಅಷ್ಟು ಖರ್ಚು ಮಾಡಿದರೆ ಉಪಯೋಗವಾದರೂ ಆಯಿತಾ? ಇಲ್ಲ. ಇವರು ಏಳು ಮೀಟರ್ ಎತ್ತರ ನೀರು ನಿಲ್ಲಿಸಲೇ ಇಲ್ಲ. ಆದ್ದರಿಂದ ಇವತ್ತಿಗೂ ಬೇಸಿಗೆ ಬಂತು ಎಂದಾದರೆ ಮಂಗಳೂರಿಗೆ ಕುಡಿಯುವ ನೀರು ಇವತ್ತು ಇದೆ, ನಾಳೆ ಡೌಟು, ನಾಡಿದ್ದು ಇಲ್ಲ ಎನ್ನುವ ಪರಿಸ್ಥಿತಿ.
ಆದ್ದರಿಂದ ನಾನು ಒಳ್ಳೆಯ ಉದಾಹರಣೆ ಕೊಟ್ಟು ಇವತ್ತಿನ ಜಾಗೃತಿ ಅಂಕಣವನ್ನು ಮುಗಿಸುತ್ತಿದ್ದೇನೆ. ಲೋವರ್ ಕಾರಸ್ಟ್ರೀಟ್ ನಿಂದ ಬಂದರು ಪೊಲೀಸ್ ಠಾಣೆಗೆ ಹೋಗುವ ರಸ್ತೆ 20 ವರ್ಷಗಳ ಹಿಂದೆ ಕಾಂಕ್ರೀಟಿಕರಣ ಮಾಡಲಾಗಿತ್ತು. ಇವತ್ತಿಗೂ ಅದಕ್ಕೊಂದು ಗೀಟು ಬಿದ್ದಿಲ್ಲ. ಅದೇ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಕಿದ ಕಾಂಕ್ರೀಟ್ ರಸ್ತೆಗಳು ಎರಡೇ ವರ್ಷಗಳಲ್ಲಿ ಹೊಂಡವನ್ನು ಕಾಣುತ್ತಿವೆ. ನೀವೆ ಅರ್ಥ ಮಾಡಿಕೊಳ್ಳಿ. 30 ರಿಂದ 40 ವರ್ಷ ಬರಬೇಕಾದ ಕಾಂಕ್ರೀಟ್ ರಸ್ತೆಗಳನ್ನು ನುಂಗಿ ನೀರು ಕುಡಿಯಲು ಕೂಡ ಹೇಸದ ಪಾಲಿಕೆ ನಮ್ಮದಾಗಿತ್ತು, ಐದು ವರ್ಷಗಳ ಹಿಂದೆ!
Leave A Reply