ಪಾಲಿಕೆ ಬಿಳಿ ಆನೆಗಳನ್ನು ಸಾಕುತ್ತಿರುವುದು ಸ್ಥಳೀಯ ಕಾಂಗ್ರೆಸ್ ನಾಯಕರ ಶಿಫಾರಸ್ಸಿನಿಂದ!!
Posted On October 30, 2019
ಮಂಗಳೂರು ಮಹಾನಗರ ಪಾಲಿಕೆಯ ಮಾಲೀಕತ್ವದ ಅನೇಕ ಕಟ್ಟಡಗಳು ಮಂಗಳೂರಿನಲ್ಲಿವೆ. ಆ ಕಟ್ಟಡಗಳಲ್ಲಿ ಅನೇಕ ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿದೆ. ಜನಸಾಮಾನ್ಯರ ನೀರಿನ ದರವನ್ನು ಹೆಚ್ಚಳ ಮಾಡುವುದರ ಬದಲು ಪಾಲಿಕೆಯವರು ತಮ್ಮ ಅಂಗಡಿಗಳ ಬಾಡಿಗೆಯನ್ನು ಹೆಚ್ಚಳ ಮಾಡಬಹುದಲ್ಲ. ಯಾಕೆಂದರೆ ಪಾಲಿಕೆಯ ಅಂಗಡಿಗಳ ಬಾಡಿಗೆ ಖಾಸಗಿ ಮಾಲೀಕತ್ವದ ಅಂಗಡಿಗಳಿಗೆ ಹೋಲಿಸಿದರೆ ಸಿಕ್ಕಾಪಟ್ಟೆ ಕಡಿಮೆ ಇದೆ. ಉದಾಹರಣೆಗೆ ಪಾಲಿಕೆಯ ಅಂಗಡಿಯೊಂದಕ್ಕೆ ಬಾಡಿಗೆ ತಿಂಗಳಿಗೆ ಹತ್ತು ಸಾವಿರ ಇದ್ದರೆ ಅದರ ಪಕ್ಕದ ಖಾಸಗಿ ಕಟ್ಟಡದ ಮಳಿಗೆಯೊಂದರ ಬಾಡಿಗೆ ಇಪ್ಪತ್ತೈದು ಸಾವಿರ ರೂಪಾಯಿ ಇರುತ್ತದೆ. ಆದ್ದರಿಂದ ನಾನು ಹೇಳುವುದೇನೆಂದರೆ ಪಾಲಿಕೆಯ ಎಲ್ಲಾ ಕಟ್ಟಡಗಳ ಮಳಿಗೆಗಳ ಬಾಡಿಗೆಯನ್ನು 25% ದಷ್ಟು ಏರಿಸಿದರೆ ಆಗ ಪಾಲಿಕೆಗೆ ಬರುವ ಆದಾಯ ಸಾಕಷ್ಟು ಜಾಸ್ತಿಯಾಗುತ್ತದೆ. ಅದನ್ನು ಯಾಕೆ ಇವರು ಮಾಡಲ್ಲ ಎನ್ನುವುದನ್ನು ನೋಡಬೇಕು.
ಇನ್ನು ಪಾಲಿಕೆಯಲ್ಲಿ ಎಇಇ (ಅಸ್ಟಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್) ಎನ್ನುವ ಹುದ್ದೆ ಇದೆ. ಎಂಟು ಜನ ಎಇಇ ಇದ್ದಾರೆ. ಅವರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಹೋಗಿ ಬರಲಿಕ್ಕೆ ಎಂಟು ಬಾಡಿಗೆ ಕಾರುಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ. ಆ ಎಂಟು ಕಾರುಗಳು ಇಡೀ ದಿನ ಉಪಯೋಗಕ್ಕೆ ಬೀಳುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಇಂಜಿನಿಯರ್ ಗಳನ್ನು ಒಂದು ಕಡೆಯಿಂದ ಪಿಕ್ ಮಾಡಿ ಮತ್ತೊಂದು ಕಡೆಯಲ್ಲಿ ಬಿಡುವ ಕೆಲಸ ಮಾಡುವುದು ಮಾತ್ರ ಈ ಕಾರುಗಳ ಕೆಲಸ. ಆ ಎಂಟು ಕಾರುಗಳಿಗೆ ಕೊಡುವ ಬಾಡಿಗೆ ಹೆಚ್ಚಿನ ಸಂದರ್ಭದಲ್ಲಿ ವೇಸ್ಟ್. ಆ ಎಂಟು ಕಾರುಗಳ ಬದಲಿಗೆ ಎರಡೋ, ಮೂರೋ ಕಾರು ಬಾಡಿಗೆಗೆ ತೆಗೆದುಕೊಂಡು ಅದನ್ನೇ ಪೂರ್ಣವಾಗಿ ಬಳಸಿದರೆ ಎಷ್ಟೋ ಒಳ್ಳೆಯದಲ್ವಾ? ಪಾಲಿಕೆಯ ಜನರ ತೆರಿಗೆಯ ಹಣ ಉಳಿಯಲ್ವಾ?
ಇನ್ನು ಹಣ ಉಳಿಸುವ ಇನ್ನೊಂದು ಪಾಯಿಂಟ್ ಎಂದರೆ ಪಾಲಿಕೆಯಲ್ಲಿರುವ ಬೇರೆ ಇಲಾಖೆಗಳ ಇಂಜಿನಿಯರ್ ಗಳನ್ನು ಅವರವರ ಮಾತೃ ಇಲಾಖೆಗೆ ವಾಪಾಸ್ ಕಳುಹಿಸುವುದು. ಒಂದು ಕಾಲದಲ್ಲಿ ಪಾಲಿಕೆಯಲ್ಲಿ ಇಂಜಿನಿಯರ್ ಗಳ ಕೊರತೆ ಇದೆ ಎಂದು ಬೇರೆ ಇಲಾಖೆಗಳ ಅಂದರೆ ಲೋಕೋಪಯೋಗಿ ಇಲಾಖೆ, ನೀರು ಪೂರೈಕೆ ಮತ್ತು ಡ್ರೈನೇಜ್ ಇಲಾಖೆಗಳ ಇಂಜಿನಿಯರ್ ಗಳನ್ನು ಪಾಲಿಕೆಗೆ ಎರವಲು ಆಧಾರದ ಮೇಲೆ ಪಡೆಯಲಾಗುತ್ತಿತ್ತು. ಪಾಲಿಕೆಯಲ್ಲಿ ಅವರಿಗೆ ಸಂಬಳ ಮಾತ್ರ ತಮ್ಮ ಮಾತೃ ಇಲಾಖೆಯಲ್ಲಿ ಎಷ್ಟು ಸಿಗುತ್ತಿತ್ತೋ ಅಷ್ಟೇ ಪಾಲಿಕೆ ಕೊಡುತ್ತಿತ್ತು. ಇದರಿಂದ ಪಾಲಿಕೆಗೆ ತಿಂಗಳಿಗೆ ಹೆಚ್ಚುವರಿ ಮೂರು ಲಕ್ಷ ಹೊರೆ ಬೀಳುತಿತ್ತು. ಆದರೆ ಎರಡು ವರ್ಷ ಮೊದಲು ಕಾಂಗ್ರೆಸ್ ಸರಕಾರವೇ ಅಂತಹ ಇಂಜಿನಿಯರ್ ಗಳು ಮರಳಿ ಮಾತೃ ಇಲಾಖೆಗೆ ಹೋಗಿ ವರದಿ ಮಾಡಿ, ಇಲ್ಲಿ ಬೇಡಾ ಎಂದು ಕಮೀಷನರ್ ಅವರಿಗೆ ಸುತ್ತೋಲೆ ಕಳುಹಿಸಿದ್ದರೂ ಆ ಇಂಜಿನಿಯರ್ ಗಳು ಹೋಗಿಲ್ಲ. ಸ್ಥಳೀಯ ಕಾಂಗ್ರೆಸ್ ಫುಡಾರಿಗಳ ಶಿಫಾರಸ್ಸು ಹಿಡಿದುಕೊಂಡು ಇಲ್ಲಿಯೇ ಉಳಿದುಬಿಟ್ಟಿದ್ದಾರೆ. ಈಗ ರಾಜ್ಯ ಸರಕಾರ ಬದಲಾಗಿರುವುದರಿಂದ ಪಾಲಿಕೆಯ ಹೊರೆ ಇಳಿಸುವುದಕ್ಕಾಗಿ ಅಂತಹ ಇಂಜಿನಿಯರ್ ಗಳನ್ನು ವಾಪಾಸು ಕಳುಹಿಸುವುದು ತುಂಬಾ ಒಳ್ಳೆಯದು. ಹಾಗೆ ಮಾಡಲಾಗುತ್ತದೆಯಾ? ಪ್ರಶ್ನೆ ಉದ್ಭವಿಸುತ್ತದೆ. ಒಟ್ಟಿನಲ್ಲಿ ಹಣ ಉಳಿಸುವುದಕ್ಕೆ ಮತ್ತು ಬೇರೆ ಮೂಲಗಳಿಂದ ಆದಾಯ ಕ್ರೋಢಿಕರಿಸುವ ಹಲವು ದಾರಿಗಳು ಇರುವಾಗ ಜನಸಾಮಾನ್ಯರ ಮನೆಬಳಕೆಯ ಕುಡಿಯುವ ನೀರಿಗೆ ದರ ಅವೈಜ್ಞಾನಿಕವಾಗಿ ಏರಿಸುವುದು ಎಷ್ಟು ಸರಿ!
- Advertisement -
Leave A Reply