ಈ ಬಾರಿ ವಾರ್ಡ್ ಸಮಿತಿ ಆದರೆ ಹೊಸ ಕಾರ್ಪೋರೇಟರ್ ಗಳಿಗೆ ಉಪವಾಸ ಅಭ್ಯಾಸ!!
ಈ ಬಾರಿ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ಸಮಿತಿಯ ವಿಚಾರ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಈ ಬಾರಿ ಮಾತ್ರವಲ್ಲ, ಕಳೆದ ಬಾರಿ ಕೂಡ ಈ ವಿಚಾರ ಚರ್ಚೆಯಲ್ಲಿತ್ತು. ಐದು ವರ್ಷ ಒಂಭತ್ತು ತಿಂಗಳ ಮೊದಲು ನಡೆದ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕೂಡ ತಾವು ಅಧಿಕಾರಕ್ಕೆ ಬಂದರೆ ವಾರ್ಡ್ ಸಮಿತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಐದು ವರ್ಷಗಳಲ್ಲಿ ಅಪ್ಪಿತಪ್ಪಿಯೂ ವಾರ್ಡ್ ಸಮಿತಿ ಮಾಡುವತ್ತ ಧೃಡ ಹೆಜ್ಜೆ ಇಡಲೇ ಇಲ್ಲ. ಈ ಮೂಲಕ ವಾರ್ಡ್ ಸಮಿತಿ ಕೇವಲ ಭರವಸೆಯಾಗಿ ಮಾತ್ರ ಉಳಿಯಿತು. ಅದರ ನಂತರ ವಿಧಾನಸಭಾ ಚುನಾವಣೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ಇಬ್ಬರೂ ಗೆದ್ದ ಬಳಿಕ ವಾರ್ಡ್ ಸಮಿತಿ ಬಗ್ಗೆ ಭರವಸೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಶಾಸಕರಾದರು. ಆದರೆ ಒಂದೂವರೆ ವರ್ಷ ಆದರೂ ವಾರ್ಡ್ ಸಮಿತಿ ಆಗಿಲ್ಲ. ಈಗ ಮತ್ತೆ ಈ ವಿಷಯ ಮುಂಚೂಣಿಯಲ್ಲಿ ಬಂದಿದೆ. ಕೆಲವು ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿವೆ. ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರು. ಅಂತಿಮವಾಗಿ ನ್ಯಾಯಾಲಯ ಕೂಡ ವಾರ್ಡ್ ಸಮಿತಿ ಪರ ಆದೇಶ ನೀಡಿದೆ. ಆದ್ದರಿಂದ ಈ ಬಾರಿಅಧಿಕಾರಕ್ಕೆ ಬರುವ ಪಕ್ಷಕ್ಕೆ ವಾರ್ಡ್ ಸಮಿತಿ ರಚನೆ ಮೊದಲ ಸವಾಲಾಗಿದೆ. ಅಷ್ಟಕ್ಕೂ ವಾರ್ಡ್ ರಚನೆ ಬಗ್ಗೆ ಯಾಕೆ ಜನಪ್ರತಿನಿಧಿಗಳು ಹೆದರುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ.
ನಾನು ಹೇಳುವುದು, ನಮ್ಮ ಜನಪ್ರತಿನಿಧಿಗಳು ಎನಿಸಿಕೊಳ್ಳುವವರು ವಾರ್ಡ್ ಸಮಿತಿ ರಚಿಸಲು ಹಿಂದೇಟು ಹಾಕಲೇಬಾರದು. ಅವರು ಹಾಗೆ ಮಾಡಿದಷ್ಟು ಅವರು ಕಮೀಷನ್ ಗಿರಾಕಿಗಳು ಎಂದು ಅವರೇ ಒಪ್ಪಿಕೊಂಡಂತೆ ಆಗುತ್ತದೆ. ಅಷ್ಟಕ್ಕೂ ನೀವು ರಾಜಕೀಯ ರಂಗಕ್ಕೆ ಬರುವುದು ಜನಸೇವೆಗಾಗಿಯೇ ಆಗಿದ್ದಲ್ಲಿ ಅಲ್ಲಿ ಜನರನ್ನು ನಿಮ್ಮ ಅಭಿವೃದ್ಧಿಯ ಪಾಲುದಾರರನ್ನಾಗಿ ಮಾಡಿಬಿಡಿ. ಇಲ್ಲದೇ ಹೋದರೆ ನೀವು ನಿಮಗೆ ಬೇಕಾದ ರೀತಿ ಕಮಿಷನ್ ಆಸೆಗೆ ಯಾರದ್ದೋ ಬಿಲ್ಡರ್ ಗಾಗಿ ಅಭಿವೃದ್ಧಿ ಮಾಡುತ್ತೀರಿ ಎಂದೇ ಗ್ಯಾರಂಟಿಯಾಗುತ್ತದೆ. ಅನೇಕ ಸಂದರ್ಭದಲ್ಲಿ ಕಾರ್ಪೋರೇಟರ್ ಗಳು ತಮಗೆ ಬೇಕಾದ ಬಿಲ್ಡರ್ ಗಳ ಕಟ್ಟಡಗಳಿಗೆ ಹೋಗುವ ರಸ್ತೆ, ಅಲ್ಲಿನ ಡ್ರೈನೇಜ್, ಚರಂಡಿ ಹೀಗೆ ಇದನ್ನು ಅಭಿವೃದ್ಧಿ ಮಾಡುವುದರಲ್ಲಿ ಮಾತ್ರ ಆಸಕ್ತಿ ತೋರಿಸುತ್ತಾರೆ. ಒಂದು ಕಟ್ಟಡ ಆಗುವಾಗ ಅದರ ಸುತ್ತಲೂ ಚರಂಡಿ ಇದ್ದಲ್ಲಿ ಅದನ್ನು ಅಭಿವೃದ್ಧಿ ಪಡಿಸುವ ಹೊಣೆ ಆ ಕಟ್ಟಡದ ಮಾಲೀಕನದ್ದು ಇರುತ್ತದೆ. ಆದರೆ ಕಾರ್ಪೋರೇಟರ್ ಗಳು ತಾವೇ ಪಾಲಿಕೆಯ ಖರ್ಚಿನಲ್ಲಿ ಸರಾಸರಿ ಐದಾರು ಲಕ್ಷ ವೆಚ್ಚ ಮಾಡಿ ಕಟ್ಟಿಕೊಡುತ್ತಾರೆ. ಅದೇ ಪ್ರತಿ ಮಳೆಗಾಲಕ್ಕೆ ಹಾಳಾಗುವ ರಸ್ತೆಗಳನ್ನು ಶಾಶ್ವತವಾಗಿ ಸರಿ ಮಾಡುವ ಉಸಾಬರಿಗೆ ಯಾವ ಕಾರ್ಪೋರೇಟರ್ ಕೂಡ ಹೋಗುವುದಿಲ್ಲ. ಒಟ್ಟಿನಲ್ಲಿ ಈ ಬಾರಿ ನಿಮ್ಮ ಮನೆಗೆ ಮತ ಕೇಳಲು ಬರುವ ಅಭ್ಯರ್ಥಿ ವಾರ್ಡ್ ಕಮಿಟಿ ಮಾಡಲು ತಯಾರಿದ್ದಾರೆ ಎಂದು ಕಾಗದದಲ್ಲಿ ಬರೆಯಿಸಿಕೊಂಡು ಅವರ ಸಹಿ ಹಾಕಿಸಿಕೊಳ್ಳಿ. ಇಲ್ಲದಿದ್ರೆ!
Leave A Reply