ಕೋರ್ಟ್ ವಾರ್ಡಿಗೆ ಕೆಲಸ ಮಾಡಬಲ್ಲ ಯುವಕ ಕಾರ್ಫೋರೇಟರ್ ಆಗಬೇಕಿದೆ!
ಮಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ಮತದಾನ ನಡೆಯಲಿದೆ. ಅರವತ್ತು ವಾರ್ಡ್ ಗಳಿಗೆ ಕಾರ್ಪೋರೇಟರ್ ಗಳು ಯಾರಾಗಬೇಕು ಎನ್ನುವುದನ್ನು ನಾಳೆ ಜನ ನಿರ್ಧರಿಸಲಿದ್ದಾರೆ. ನನ್ನ ಪ್ರಕಾರ ಅರವತ್ತು ವಾರ್ಡ್ ಗಳಲ್ಲಿ ಇರುವ ಪ್ರಮುಖ ಬೆರಳೆಣಿಕೆಯ ವಾರ್ಡುಗಳಲ್ಲಿ ಕೋರ್ಟ್ ವಾರ್ಡ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಮಂಗಳೂರಿನ ಅಕ್ಷರಶ: ಹೃದಯಭಾಗಗಳಾದ ಸಿಟಿ ಸೆಂಟರ್, ಕೋರ್ಟ್, ರೈಲ್ವೆ ಸ್ಟೇಶನ್, ವೆನ್ ಲಾಕ್ ಆಸ್ಪತ್ರೆ, ಮಿಲಾಗ್ರಿಸ್ ಚರ್ಚ್ ಸಹಿತ ಆಸುಪಾಸಿನ ಏರಿಯಾಗಳನ್ನು ಒಳಗೊಂಡಿರುವ ಕೋರ್ಟ್ ವಾರ್ಡ್ ಹೇಗಿದೆ ಎನ್ನುವುದನ್ನು ನಾನು ಪೋಸ್ಟ್ ಮಾಡಿರುವ ಕೆಲವು ಫೋಟೋಗಳೇ ಸಾಕ್ಷಿ ನುಡಿಯುತ್ತವೆ.
ಮಂಗಳೂರಿನವರಿಗೆ ಇದು ಹೇಗೂ ಪ್ರಮುಖ ವಾರ್ಡ್ ಆಗಿದ್ದರೂ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಂಗಳೂರಿಗೆ ಬರುವಾಗ ಮೊದಲು ಎದುರುಗೊಳ್ಳುವುದೇ ಕೋರ್ಟ್ ವಾರ್ಡ್. ಇದು ಒಂದು ಮಾದರಿ ವಾರ್ಡ್ ಆಗಿದ್ದಲ್ಲಿ ಮಂಗಳೂರಿನ ಲುಕ್ ಬದಲಾಗುತ್ತಿತ್ತು. ಆದರೆ ಇಲ್ಲಿಂದ ಗೆದ್ದ ಹೋದವರು ಈ ಬಗ್ಗೆ ಅಂತಹ ಆಸಕ್ತಿಯನ್ನು ತೋರಿಸದೇ ಇದ್ದ ಕಾರಣ ಇದು ಇವತ್ತಿಗೂ ಕಳಪೆ ಫುಟ್ ಪಾತ್, ಕಸ ಕಡ್ಡಿಗಳ ರಾಶಿಯಿಂದಾಗಿ ಕಂಗೊಳಿಸುತ್ತಿದೆ. ಬೇಕಾದರೆ ಈ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಪಿವಿಎಸ್ ಬಿಲ್ಡಿಂಗ್ ನಿಂದ ಕುದ್ಮುಲ್ ರಂಗರಾವ್ ಹೆಣ್ಣುಮಕ್ಕಳ ಹಾಸ್ಟೆಲ್ ಗೆ ಹೋಗುವ ಫುಟ್ ಪಾತ್ ನೋಡಿ. ಆ ಫುಟ್ ಪಾತ್ ನಲ್ಲಿ ನಡೆಯುವುದೆಂದರೆ ಯಾವಾಗ ಚರಂಡಿಗೆ ಬೀಳುತ್ತೇವೆ ಎಂದು ಆತಂಕದಿಂದ ಕಾಲಿಡಬೇಕಾದ ಪರಿಸ್ಥಿತಿ. ಕೆನರಾ, ಶಾರದಾ ವಿದ್ಯಾಲಯಕ್ಕೆ ಹೋಗುವ ನೂರಾರು ಮಕ್ಕಳು ನಿತ್ಯ ಆ ಫುಟ್ ಪಾತ್ ಮೇಲೆ ಹೋಗಬೇಕಾಗುತ್ತದೆ. ಆದರೆ ಆ ಫುಟ್ ಪಾತ್ ಹೇಗಿದೆ ಎನ್ನುವುದನ್ನು ಅಕ್ಷರಗಳಿಗಿಂತ ಫೋಟೋಗಳೇ ಉತ್ತರ ಕೊಡುತ್ತವೆ. ಕಳೆದ 15 ವರ್ಷಗಳಿಂದ ಕೋರ್ಟ್ ವಾರ್ಡ್ ಕೇಳುವವರು ಗತಿಯಿಲ್ಲದೆ ಒದ್ದಾಡುತ್ತಿದೆ.
ಇಲ್ಲಿ ಕಳೆದ ಅವಧಿಗಿಂತ ಮೊದಲು ಕಾರ್ಪೋರೇಟರ್ ಆಗಿದ್ದವರು ಬಿಜೆಪಿಯ ರಂಗನಾಥ ಕಿಣಿ. ಅವರು ಏನು ಕೆಲಸ ಮಾಡಿದ್ದಾರೆ ಎನ್ನುವುದು ವಾರ್ಡಿನವರಿಗೆ ಗೊತ್ತು. ಅದರ ನಂತರ ಬಂದವರು ಕಾಂಗ್ರೆಸ್ಸಿನ ಎಸಿ ವಿನಯರಾಜ್. ಅವರು ಫ್ಲೆಕ್ಸ್ ಹಾಕಿ, ಮಾಜಿ ಶಾಸಕರ ಜೊತೆ ಓಡಾಡಿದ್ದು ನೀವು ನೋಡಿದ್ದಿರಿ. ಅವರು ಏನು ಮಾಡಿದ್ದಾರೆ ಎನ್ನುವುದು ಕೂಡ ನಿಮಗೆ ಗೊತ್ತು. ಈಗ ಅವರಿಬ್ಬರು ಮತ್ತೆ ಕಣದಲ್ಲಿದ್ದಾರೆ. ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಸ್ಪರ್ಧೆಯಲ್ಲಿದ್ದಾರೆ. ಅವರು ಸುನೀಲ್ ಕುಮಾರ್ ಬಜಾಲ್. ಮಂಗಳೂರಿನ ನಾಗರಿಕರಿಗೆ ಸಂಬಂಧಪಟ್ಟ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದವರು. ರಿಕ್ಷಾ, ಬಸ್ಸು, ಬೀಡಿ, ನೀರು, ಉದ್ಯೋಗ ಯಾವುದೇ ಹೋರಾಟದಲ್ಲಿ ಎದುರಿಗೆ ನಿಂತು ಜನಪ್ರತಿನಿಧಿಗಳ ವಿರುದ್ಧ ಮಾತನಾಡಿದವರು. ಅವರು ಹೆಚ್ಚಿನ ಜನಸಾಮಾನ್ಯರಿಗೆ ಮತ್ತು ನಾಗರಿಕರಿಗೆ ಚಿರಪರಿಚಿತರು. ಅವಕಾಶ ಕೊಟ್ಟರೆ ಏನಾದರೂ ಮಾಡಿ ತೋರಿಸಬಲ್ಲ ಯುವಕ.
ಯಾರು ಗೆದ್ದರೂ ಈ ಪ್ರಮುಖ ವಾರ್ಡಿನಲ್ಲಿ ಅನೇಕ ಆಗಬೇಕಾದ ಕೆಲಸಗಳಿವೆ. ಅರ್ಧ ಗಂಟೆ ಮಳೆ ಬಂದರೆ ರೈಲ್ವೆ ಸ್ಟೇಶನ್ ಹೊರಗೆ ಕೃತಕ ಕೆರೆ ನಿರ್ಮಾಣವಾಗುತ್ತದೆ. ಕೆಎಎಸ್ ರಾವ್ ರಸ್ತೆಯಿಂದ ಕೋರ್ಟಿಗೆ ಹೋಗುವ ರಸ್ತೆಯ ಅವ್ಯವಸ್ಥೆ ಸಹಿತ ಅನೇಕ ಅಭಿವೃದ್ಧಿ ಹೊಸ ಕಾರ್ಪೋರೇಟರ್ ಮುಂದಿವೆ. ಅಲ್ಲಿನ ಮತದಾರರು ಬುದ್ಧಿವಂತರು. ಕೆಲಸ ಮಾಡುವ ವ್ಯಕ್ತಿಗೆ ಮತ ಹಾಕಬಹುದು ಎನ್ನುವ ನಿರೀಕ್ಷೆ ಇದೆ.
Leave A Reply