ಮೇಲಿನಿಂದ ಕೆಳಗಿನ ತನಕ ಬಿಜೆಪಿ, ಇದು ಅವಕಾಶ ಮತ್ತು ರಿಸ್ಕ್ ಎರಡೂ ಕೂಡ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಗೆದ್ದಿರುವ ಸದಸ್ಯರಲ್ಲಿ ಹೆಚ್ಚಿನವರು ಹೊಸ ಮುಖಗಳು. ಅದರಲ್ಲಿಯೂ ಗೆದ್ದರಿರುವ ಮಹಿಳೆಯರಲ್ಲಿ ಬೆರಳೆಣಿಕೆಯವರನ್ನು ಬಿಟ್ಟರೆ ಅನೇಕರು ಪಾಲಿಕೆಯನ್ನು ಹೊರಗಿನಿಂದ ಮಾತ್ರ ನೋಡಿರುವುದು. ಆಲ್ ಮೋಸ್ಟ್ ಟಿಕೆಟ್ ಸಿಕ್ಕಿ ಗೆದ್ದಿರುವ ಮಹಿಳೆಯರಲ್ಲಿ ಅವರ ಪತಿ, ಸಹೋದರ ಪಕ್ಷಕ್ಕಾಗಿ ಮಾಡಿರುವ ಕೆಲಸವನ್ನು ನೋಡಿ ಟಿಕೆಟ್ ಕೊಡಲಾಗಿತ್ತು ವಿನ: ಬೇರೆ ಏನೂ ಇಲ್ಲ. ಅನೇಕ ಮಹಿಳಾ ಅಭ್ಯರ್ಥಿಗಳಲ್ಲಿ ಹೆಚ್ಚಿನವರನ್ನು ಮತದಾರರು ನೋಡಿದ್ದೇ ಮೊನ್ನೆ ಚುನಾವಣಾ ಪ್ರಚಾರಕ್ಕೆ ಅವರು ಮತ ಕೇಳಿ ಬಂದಾಗ. ಆದರೂ ಜನ ಈ ಪರಿ ಬಿಜೆಪಿಯನ್ನು ಎತ್ತಿ ಮುದ್ದಾಡಿಸಿದ್ದಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ಸಿನ ಕಳೆದ ಅವಧಿಯ ವಿಫಲ ಆಡಳಿತ ಮತ್ತು ದಿವ್ಯ ನಿರ್ಲಕ್ಷ್ಯ.
ಕಳೆದ ಬಾರಿ ಮಳೆ ಜಾಸ್ತಿ ಬಂದು ನೆರೆಯ ಪರಿಸ್ಥಿತಿ ಉಂಟಾದಾಗಲೂ ಕಾಂಗ್ರೆಸ್ ನಾಯಕರು ಜನರ ಹತ್ತಿರಕ್ಕೆ ಹೋದದ್ದು ಅಷ್ಟಕಷ್ಟೆ. ಅದರ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಕಾಂಗ್ರೆಸ್ ನಾಯಕರು ತಮ್ಮ ಬಳಿ ಅಧಿಕಾರ ಇಲ್ಲ ಎಂದೋ ಅಥವಾ ಬಿಜೆಪಿ ಶಾಸಕರೇ ನೋಡಿಕೊಳ್ಳಲಿ ಎಂದೋ ಮೌನವಾಗಿ ಮನೆಯಲ್ಲಿ ಮಲಗಿದ್ದರು. ಅದೆಲ್ಲಾ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಹಾಗೆ ಆ ಎರಡೂ ಸಂದರ್ಭಗಳಲ್ಲಿ ರಾತ್ರಿ-ಹಗಲು ದುಡಿದ ಇಬ್ಬರೂ ಯುವ ಶಾಸಕರಿಗೆ ಮತದಾರ ಜೈ ಎಂದಿದ್ದಾನೆ. ಬಿಜೆಪಿಯ ಇಬ್ಬರೂ ಶಾಸಕರ ಪ್ಲಸ್ ಎಂದರೆ ಅವರು ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಕೆಲಸ ಮಾಡಿ ತೋರಿಸಬೇಕೆಂಬ ಉತ್ಸಾಹ ಇದೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಾಗ ಇಬ್ಬರೂ ಶಾಸಕರು ಹೋಗಿ ಸಿಎಂ ಬಳಿ ವಿಶೇಷ ಅನುದಾನವನ್ನು ಕೂಡ ತೆಗೆದುಕೊಂಡು ಬಂದು ಜನರಿಂದ ವಿಶ್ವಾಸವನ್ನು ಗೆದ್ದುಕೊಂಡಿದ್ದಾರೆ.
ಇನ್ನು ಕೆಲವು ಕಡೆ ವಿಶೇಷವಾಗಿ ಮಾಜಿ ಮೇಯರ್ ಹರಿನಾಥ್, ದೀಪಕ್ ಪೂಜಾರಿ, ಡಿಕೆ ಅಶೋಕ್ ಅವರು ಸೋತಿರುವುದು ಜನ ಹಿಂದಿನ ಪಾಲಿಕೆ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಒಳ್ಳೆಯ ಕೆಲಸಗಳನ್ನು ಮಾಡಿಯೂ ಕೊಡಿಯಾಲ್ ಬೈಲ್ ವಾರ್ಡಿನ ಪ್ರಕಾಶ್ ಸಾಲ್ಯಾನ್ ಬಿಜೆಪಿಯ ಅನುಭವಿ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ವಿರುದ್ಧ ಸೋತಿರುವುದು ಬಿಜೆಪಿಯ ಅಲೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಬೀಸಿರುವುದು ಸ್ಪಷ್ಟವಾಗಿದೆ. ಈ ಪ್ರಮಾಣದಲ್ಲಿ ಜನ ಬಿಜೆಪಿಯ ಶಾಸಕರ ಕೈ ಹಿಡಿದಿರುವುದು ಸಹಜವಾಗಿ ಅವರ ಮೇಲಿನ ಭರವಸೆ ಮತ್ತು ಒತ್ತಡ ಹೆಚ್ಚುವಂತೆ ಮಾಡಿದೆ. ಅದನ್ನು ಈಡೇರಿಸುವ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಮೂರು ವರ್ಷಗಳನ್ನು ಕಾಯಲು ಮತದಾರ ಸಿದ್ಧನಿದ್ದಾನೆ. ಮುಂದಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾರ ಒಂದು ವಿಷಯವನ್ನು ಸರಿಯಾಗಿ ತೂಗಿ ನೋಡಲಿದ್ದಾನೆ. ಕೆಲಸ ಎಷ್ಟು ಆಗಿದೆ!
Leave A Reply