ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ರಕ್ತಪಾತ ಆಗುವುದು ಮಾತ್ರ ಬಾಕಿ ಇತ್ತು!!
ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಇನ್ನು ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಒಳಗೆ ಮೀಟಿಂಗ್ ಇದೆ ಎಂದರೆ ಹೊರಗೆ ಅರೆಮಿಲಿಟರಿ ಪಡೆ, ಅಗ್ನಿಶಾಮಕ ದಳ, ಎಂಬುಲೆನ್ಸ್ ವ್ಯವಸ್ಥೆ ಮಾಡಿಯೇ ಇವರುಗಳು ಮೀಟಿಂಗ್ ಮಾಡಿದರೆ ಒಳ್ಳೆಯದು. ಯಾವಾಗ ಕಚೇರಿಯ ಒಳಗೆ ಕಾಂಗ್ರೆಸ್ ಮುಖಂಡರು ಬಡಿದಾಡಿಕೊಳ್ಳುತ್ತಾರೆ, ಯಾವಾಗ ರಕ್ತಪಾತವಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದಕ್ಕೆ ಮೊನ್ನೆಯ ಘಟನೆಯೇ ಸಾಕ್ಷಿ. ಹೆಣ ಬೀಳುವುದು ಒಂದು ಬಾಕಿ ಇತ್ತು ಬಿಟ್ಟರೆ ಉಳಿದ ಎಲ್ಲವೂ ನಡೆದು ಹೋಗಿತ್ತು. ಅಕ್ಷರಶ: ರಣರಂಗವಾಗಿದ್ದ ಕಾಂಗ್ರೆಸ್ ಕಚೇರಿಯ ಒಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದು ಪಕ್ಷದ ನಾಯಕರಿಗೆ ಯುದ್ಧಕ್ಕೆ ತಯಾರಾಗುವಷ್ಟೇ ಸವಾಲಿನದ್ದು ಆಗಿತ್ತು.
ಅಷ್ಟಕ್ಕೂ ಏನಾಗಿತ್ತು ಎಂದರೆ ಮೊನ್ನೆ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ತಲುಪಿರುವ ದಯನೀಯ ಸ್ಥಿತಿಯ ಬಗ್ಗೆ ಆತ್ಮಾವಲೋಕನ ಸಭೆ ನಡೆಯುತ್ತಿತ್ತು. ಸೋತ ಅಭ್ಯರ್ಥಿಯೊಬ್ಬರು ಎದ್ದು ನಿಂತು ತಮ್ಮ ಸೋಲಿಗೆ ಮಂಗಳೂರು ನಗರ ದಕ್ಷಿಣದ ನಿಕಟಪೂರ್ವ ಶಾಸಕರೇ ಕಾರಣ ಎಂದು ಬೊಟ್ಟು ಮಾಡಿ ಹೇಳಿದರು. ಅವರು ಹೇಳಿದ್ದು ತಪ್ಪೇನಿರಲಿಲ್ಲ. ಯಾಕೆಂದರೆ ಹಾಗೆ ಹೇಳಿದ ವ್ಯಕ್ತಿ ಈ ಬಾರಿ ಸೋಲುತ್ತಾರೆ ಎಂದು ಯಾರೂ ಹೇಳುವ ಸಾಧ್ಯತೆಯೇ ಇರಲಿಲ್ಲ. ಅವರು ನಿರಂತರವಾಗಿ ಅಲ್ಲಿ ಗೆಲ್ಲುತ್ತಾ ಬರುತ್ತಿದ್ದರು. ಕಾಂಗ್ರೆಸ್ಸಿನ ರಾಷ್ಟ್ರೀಯ ಹಿರಿಯ ನಾಯಕರೊಬ್ಬರ ದೂರದ ಸಂಬಂಧಿಯೂ ಆಗಿರುವ ಆ ವ್ಯಕ್ತಿ ಸೋಲುತ್ತಾರೆ ಎಂದು ಬಿಜೆಪಿಯವರಿಗೂ ಅನಿಸಿರಲಿಲ್ಲ. ಫಲಿತಾಂಶ ಬಂದಾಗ ಕೆಲವು ಟಿವಿ ಚಾನೆಲ್ ನವರು ಮೊದಲಿಗೆ ಅವರು ಗೆದ್ದರು ಎಂದೇ ಘೋಷಿಸಿದ್ದವು. ನಂತರ ಅವರು ಸೋತಿದ್ದಾರೆ ಎಂದು ತಿದ್ದುಪಡಿ ಮಾಡಿದ್ದವು. ಕೊನೆಗೂ ಅರಗಿಸಿಕೊಳ್ಳಲಾಗದ ರೀತಿಯಲ್ಲಿ ಆ ವ್ಯಕ್ತಿ ಸೋತು ಹೋದರು ಮಾತ್ರವಲ್ಲ ತಮ್ಮ ಸೋಲಿಗೆ ಅವರು ಕಂಡುಕೊಂಡ ಕಾರಣಗಳು ನಿಖರವಾಗಿದ್ದವು. ಅವರು ಹೇಳಿದ್ದು ಅದನ್ನೇ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಆಗಿನ ಅಭ್ಯರ್ಥಿ ಮತ್ತು ಆಗ ಶಾಸಕರಾಗಿದ್ದವರನ್ನು ಸೋಲಿಸಲು ತಾವು ಷಡ್ಯಂತ್ರ ಮಾಡಿದ್ದೇವೆ ಎಂದು ಈ ಬಾರಿ ಅದೇ ಸೋತ ಶಾಸಕರು ತಮ್ಮ ವಿರುದ್ಧ ಮರು ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಆ ಮಾಜಿ ಶಾಸಕರು ಕಾಂಗ್ರೆಸ್ ಗೆ ಬೀಳಲಿದ್ದ ಕ್ರಿಶ್ಚಿಯನ್ ಮತಗಳನ್ನು ಬೀಳದಂತೆ ಮಾಡಿದರು ಎಂದು ಕೂಡ ಹೇಳಿದ್ದಾರೆ. ಮಾಜಿ ಶಾಸಕರು ಕ್ರಿಶ್ಚಿಯನ್ ಮತದಾರರಿಗೆ ಫೋನ್ ಮಾಡಿ ಆ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಹೇಳಿದ್ದಾರೆ ಎನ್ನುವುದು ಸೋತ ಕಾರ್ಪೋರೇಟರ್ ಅವರ ವಾದ. ಅಷ್ಟೇ ಅಲ್ಲ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲವು ಕ್ರಿಶ್ಚಿಯನ್ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿ ಮೂಲ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದು ಕೂಡ ಮಾಜಿ ಶಾಸಕರು ಎನ್ನುವುದು ಅವರ ದೂರು. ತಾನು ಸೋಲಬೇಕೆಂದು ಮಾಜಿ ಶಾಸಕರು ಕ್ರಿಶ್ಚಿಯನ್ ಅಭ್ಯರ್ಥಿಗಳನ್ನು ಇಳಿಸಿ ಷಡ್ಯಂತ್ರ ಮಾಡಿದ್ದರಿಂದ ಅದು ಬಿಜೆಪಿ ಅಭ್ಯರ್ಥಿಗೆ ಲಾಭವಾಯಿತು ಎಂದು ಸೋತ ಕಾರ್ಪೋರೇಟರ್ ಜೋರು ಧ್ವನಿಯಲ್ಲಿ ಮಾಜಿ ಶಾಸಕರನ್ನು ದೂರುತ್ತಿದ್ದಾಗಲೇ ಹೊಡೆಬಡಿ ಆಟ ನಡೆದುಹೋಗಿದೆ ಎಂದು ಅಲ್ಲಿದ್ದವರು ಹೇಳಿದ್ದಾರೆ. ಆ ವಿಡಿಯೋ ಯಾರಿಗೂ ಸಿಗದಂತೆ ಕಾಂಗ್ರೆಸ್ ನಾಯಕರು ನೋಡಿಕೊಂಡರು ಎನ್ನುವುದು ಬೇರೆ ವಿಷಯ. ಯಾಕೆಂದರೆ ಚುನಾವಣೆಯ ಮೊದಲು ಇದೇ ಕಾಂಗ್ರೆಸ್ಸಿಗರು ಓಶಿಯನ್ ಪರ್ಲ್ ಹೋಟೇಲಿನ ಹೊರಗೆ ಮಾಡಿದ ರಂಪಾಟವನ್ನು ಇಡೀ ರಾಜ್ಯವೇ ನೋಡಿತ್ತು. ಅಲ್ಲಿಗೆ ನೂರು ವರ್ಷ ಹಳೆಯ ಪಕ್ಷವೊಂದರ ಕಥೆ ಹೇಗಾಗಿದೆ ಎಂದರೆ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದು ಉನ್ನತ ಸ್ಥಾನಮಾನ ಅನುಭವಿಸಿ ಕೊನೆಗೆ ಸೋತ ತಕ್ಷಣ ತಮ್ಮದೇ ಪಕ್ಷದವರ ವಿರುದ್ಧ ಮಸಲತ್ತು ಮಾಡುವ ಹಂತಕ್ಕೆ ಹೋಗುತ್ತಾರೆ ಎನ್ನುವುದು ಸಾಬೀತಾಗಿದೆ. ಇದನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ಭವಿಷ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಅವಸಾನದ ಅಂಚಿಗೆ ಬಂದು ಮುಟ್ಟಿದೆ ಎಂದು ಯಾರು ಬೇಕಾದರೂ ಹೇಳಬಹುದು. ಅಷ್ಟೇ ಅಲ್ಲ ಕೆಲವು ಅದೃಷ್ಟದಿಂದ ಗೆದ್ದ ಕಾರ್ಪೋರೇಟರ್ ಗಳು ಕೂಡ ತಾವು ಸೋಲಬೇಕೆಂದು ತಮ್ಮದೇ ಪಕ್ಷದ ಮಾಜಿ ಶಾಸಕರು ಸಂಪೂರ್ಣ ಪ್ರಯತ್ನಪಟ್ಟಿದ್ದರು ಎಂದು ಕೂಡ ಹೇಳಿದ್ದಾರೆ. ತಮಗೆ ಚುನಾವಣೆಯ ಸಮಯದಲ್ಲಿ ತಮ್ಮದೇ ಪಕ್ಷದ ಮಾಜಿ ಶಾಸಕರಿಂದ ಆದ ಪರೋಕ್ಷ ಕಿರುಕುಳವನ್ನು ವಿವರಿಸಿದ್ದಾರೆ.
ಒಂದಂತೂ ನಿಜ. ಕಾರ್ಪೋರೇಟರ್ ಎಂದರೆ ನಗರ ಸೇವಕ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಗೆದ್ದಿರುವ ಅಷ್ಟೂ ಜನ ಕಾರ್ಪೋರೇಟರ್ ಗಳು ಕೆಲಸ ಮಾಡಬೇಕು. ಬಿಜೆಪಿಯವರು ಗೆದ್ದಿರುವ ವಾರ್ಡುಗಳಲ್ಲಿ ಕಾಂಗ್ರೆಸ್ ನ ಸೋತ ಅಭ್ಯರ್ಥಿ ತಾನು ಬಿಜೆಪಿ ಕಾರ್ಪೋರೇಟರ್ ಜೊತೆ ಸೇರಿ ಕೆಲಸ ಮಾಡಿದರೆ ಆಗ ಅಭಿವೃದ್ಧಿಯೂ ಸುಲಭವಾಗುತ್ತದೆ. ಅದರೊಂದಿಗೆ ಆತನ ಬಗ್ಗೆ ಜನರಿಗೂ ಒಳ್ಳೆಯ ಭಾವನೆ ಬಂದು ಮುಂದಿನ ಬಾರಿ ಜನರಿಗೆ ಯಾರು ಸೂಕ್ತ ಎಂದು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ. ಹಾಗೆ ಕಾಂಗ್ರೆಸ್ ಗೆದ್ದಿರುವ ಕಡೆ ಬಿಜೆಪಿಯ ಸೋತ ಅಭ್ಯರ್ಥಿ ಕೂಡ ಕೈ ಜೋಡಿಸಿ ಕೆಲಸ ಮಾಡಿದರೆ ಅದು ಕೂಡ ಒಳ್ಳೆಯದು. ಒಟ್ಟಿನಲ್ಲಿ ಮಂಗಳೂರು ನಗರ ಅಭಿವೃದ್ಧಿಯಾಗಲಿ. ಆದರೆ ಕಾಂಗ್ರೆಸ್ ನಾಯಕರು ವರ್ತಿಸುತ್ತಿರುವ ರೀತಿ ನೋಡಿದರೆ ಲೋಕಸಭೆ, ವಿಧಾನಸಭೆ ಮತ್ತು ಪಾಲಿಕೆಯ ಬಾಗಿಲನ್ನು ಅವರೇ ಮುಚ್ಚಿಬಿಟ್ಟಿದ್ದಾರೆ ಎನ್ನುವ ಸ್ಪಷ್ಟ!
Leave A Reply