ಪಾಲಿಕೆಯಲ್ಲಿ ಪದಗ್ರಹಣ ಆಗಿಲ್ಲ, ಆಗಲೇ ಭ್ರಷ್ಟಾಚಾರ ಶುರು!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರವನ್ನು ಜನ ಆಯ್ಕೆ ಮಾಡಿದ್ದಾರೆ. ಅದಕ್ಕೆ ಕಾರಣವಾಗಿರುವುದು ಹಿಂದಿನ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಎನ್ನುವುದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಅದನ್ನು ಮರೆತು 44 ಸೀಟು ಬಂದಿದೆ ಎಂದು ಹೊಸ ಸದಸ್ಯರಿಗೆ ಅವರ ಪಾಡಿಗೆ ಬಿಟ್ಟರೆ ಜನರಿಗೆ ಬಿಜೆಪಿಯ ಮೇಲಿರುವ ವಿಶ್ವಾಸ ನೀರು ಪಾಲಾಗಲು ದಿನಗಣನೆ ಆರಂಭವಾಗಿದೆ ಎಂದೇ ಅರ್ಥ.
ಪಾಲಿಕೆಯಲ್ಲಿ ಗೆದ್ದಿರುವ 60 ವಾರ್ಡುಗಳ ಅಭ್ಯರ್ಥಿಗಳು ಪಾಲಿಕೆಯ ಸದಸ್ಯರಾಗಿ ಇನ್ನು ಪದಗ್ರಹಣ ಸ್ವೀಕರಿಸಿಲ್ಲ. ಅದಕ್ಕೆ ಸಮಯ ಇದೆ. ಆದರೆ ಇವರಲ್ಲಿ ಕೆಲವರು ಭ್ರಷ್ಟಾಚಾರ ಮಾಡಲು ಈಗಾಗಲೇ ಶುರು ಹಚ್ಚಿಕೊಂಡು ಆಗಿದೆ. ತಮ್ಮ ವಾರ್ಡಿನಲ್ಲಿ ಆಗುತ್ತಿರುವ ಕಾಮಗಾರಿಗಳಿಗೆ ಕೈ ಹಾಕಿ ತಮಗೆ ಎಷ್ಟು ಪರ್ಸಟೆಂಜ್ ಎಂದು ಕೇಳಲು ಶುರು ಮಾಡಿಕೊಂಡಿದ್ದಾರೆ. ಇನ್ನು ಸದಸ್ಯರಾಗಿ ಅಧಿಕೃತ ಜವಾಬ್ದಾರಿ ತೆಗೆದುಕೊಳ್ಳುವ ಮೊದಲೇ ಇವರು ಈ ಪರಿ ಊಟಕ್ಕೆ ಕುಳಿತುಕೊಂಡಿದ್ದಾರೆ ಎಂದರೆ ಇವರ ಕೈಲಿ 5 ವರ್ಷ ಅಧಿಕಾರ ಕೊಟ್ಟರೆ ಅದ್ಯಾವ ಲೆವೆಲ್ಲಿಗೆ ಇವರು ನಮ್ಮ ಹಣವನ್ನು ತಿಂದು ಮುಗಿಸಬಹುದು ಎಂದು ಲೆಕ್ಕ ಹಾಕಿ. ನಿಮಗೆ ಗೊತ್ತಿರುವಂತೆ ಕೇಂದ್ರದ ಎಡಿಬಿ, ಅಮೃತ್, ಸ್ಮಾರ್ಟ್ ಸಿಟಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದರಲ್ಲಿ ಅಮೃತ್ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳು ಕೇಂದ್ರ ಸರಕಾರದ ಯೋಜನೆಗಳು. ಇನ್ನು ಎಡಿಬಿ-2 ರಾಜ್ಯ ಸರಕಾರದ ಯೋಜನೆ. ಅದು ಅದರ ಪಾಡಿಗೆ ಅದು ನಡೆಯುತ್ತದೆ. ಅಲ್ಲಿ ಹೋಗಿ ಅದು ಸಮರ್ಪಕವಾಗಿ ನಡೆಯುತ್ತಿದೆಯಾ ಎಂದು ನೋಡಿದರೆ ಇವರನ್ನು ಶಹಭಾಷ್ ಎನ್ನಬಹುದಿತ್ತು. ಆದರೆ ಹೊಸದಾಗಿ ಗೆದ್ದವರು ಅಂತಹ ಕಾಮಗಾರಿಗಳನ್ನು ಹಲವೆಡೆ ನಿಲ್ಲಿಸಿರುವುದು ಮಾತ್ರವಲ್ಲ, ಕಾಮಗಾರಿಯಲ್ಲಿ ತಮಗೆಷ್ಟು ಪಾಲು ಸಿಗುತ್ತದೆ ಎಂದು ವ್ಯಾಪಾರಕ್ಕೆ ಇಳಿದಿದ್ದಾರೆ. ಈ ಬಗ್ಗೆ ನನ್ನ ಬಳಿ ಖಚಿತ ಮಾಹಿತಿ ಇದೆ.
ಪಾಲಿಕೆ ವ್ಯಾಪ್ತಿಯ ಜೆಪ್ಪು ಬಪ್ಪಾಲ್, ಕಂಡತ್ತ್ ಪಳ್ಳಿ, ಹೊಸಬೆಟ್ಟು, ಅಶೋಕನಗರ ಮತ್ತು ನವಗಿರಿ ನಗರ ಸಹಿತ ಅನೇಕ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವಾಗ ಅಲ್ಲಿ ಕಮಿಷನ್ ಕೇಳುವಂತಹ, ಇಲ್ಲದಿದ್ದರೆ ಕೆಲಸ ನಿಲ್ಲಿಸುವಂತಹ ಪ್ರಯತ್ನ ಆಗಿದೆ.
ಬಿಜೆಪಿಯಲ್ಲಿ ಗೆದ್ದಿರುವ ಅರ್ಧಕ್ಕಿಂತ ಹೆಚ್ಚು ಜನ ಮೊದಲ ಬಾರಿ ಪಾಲಿಕೆಯಲ್ಲಿ ಸದಸ್ಯರಾಗುತ್ತಿದ್ದಾರೆ. ಇವರು ಅಭಿವೃದ್ಧಿಯಲ್ಲಿ ಉತ್ಸಾಹ ತೋರಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇವರಲ್ಲಿ ಕೆಲವರು ಹೋಗುತ್ತಿರುವ ಸ್ಪೀಡ್ ನೋಡಿದರೆ ಇವರು ತಮ್ಮ ಪಕ್ಷಕ್ಕೆ ಆದಷ್ಟು ಬೇಗ ಮಂಗಳಾರತಿ ಮಾಡುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಗಿದೆ. ಜನ ಕಾಂಗ್ರೆಸ್ ಭ್ರಷ್ಟಾಚಾರದಿಂದ ಬೇಸತ್ತು ಬಿಜೆಪಿಗೆ ಮತ ಕೊಟ್ಟಿರುವುದು ಬೆಂಕಿಯಿಂದ ಬಾಣಲೆಗೆ ಆಗದಿದ್ದರೆ ಸಾಕು ಎನ್ನುವುದಾದರೆ ಕೂಡಲೇ ಬಿಜೆಪಿ ನಾಯಕರು ಎಚ್ಚೆತ್ತುಕೊಳ್ಳಬೇಕು. ಅದೇ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಕೂಡ ಪಕ್ಷದ ಹೆಸರು ಇನ್ನಷ್ಟು ಡ್ಯಾಮೇಜ್ ಆಗಬಾರದು ಎಂದಾದರೆ ಹಿರಿಯ ಕಾರ್ಪೋರೇಟರ್ ಎನ್ನುವ ಮುಲಾಜು ತೋರಿಸದೆ ಅಂಕುಶ ಹಾಕಬೇಕು. ಕಾಂಗ್ರೆಸ್ ಆದರೂ ವಿಪಕ್ಷದಲ್ಲಿರುತ್ತದೆ. ಆದರೆ ವಾಕರಿಕೆ ಆಗುವಷ್ಟು ಬಹುಮತ ಬಂದಿರುವ ಬಿಜೆಪಿಗೆ ಈ ಜಯ ಅರಗಿಸಿಕೊಳ್ಳಲಾಗದಿದ್ದರೆ ಡೆಂಜರ್ ಬೆಲ್ ಹೊಡೆಯಲು ಆರಂಭ ಎಂದೇ ಅರ್ಥ.
ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಎಡಿಬಿ-2 ಯೋಜನೆಗಳಿಗೂ ಪಾಲಿಕೆಯ ಹೊಸ ಕಾರ್ಪೋರೇಟರ್ ಗಳಿಗೂ ಏನು ಸಂಬಂಧ ಇಲ್ಲ. ಹಾಗಿರುವಾಗ ಇವರು ಹೋಗಿ ಕಮಿಷನ್ ಕೇಳುತ್ತಾರೆ ಎಂದರೆ ಇವರನ್ನು ಜೋರು ಮಾಡುವುದಲ್ಲ, ಪಕ್ಷಗಳ ನಾಯಕರು ಕಟ್ಟಿಹಾಕುವುದು ಒಳ್ಳೆಯದು. ಇವತ್ತು ಕೇವಲ ಕೆಲವು ವಾರ್ಡುಗಳ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ. ಇಲ್ಲಿ ಆಗಿರುವ ಭ್ರಷ್ಟಾಚಾರದ ಸುಳಿವಿನ ಬಗ್ಗೆ ನನಗೆ ಮಾಹಿತಿ ಬಂದಿವೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರಕ್ಕೆ ಕೈ ಹಾಕಿರುವ ಕಾರ್ಪೋರೇಟರ್ ಗಳ ಹೆಸರನ್ನು ಕೂಡ ಬರೆಯಬೇಕಾಗಬಹುದು. ನನಗೆ ಯಾವುದೇ ಪಕ್ಷದ ಹಂಗಿಲ್ಲ. ಹೆಸರು ಬರೆದ ನಂತರ ಹಿಂತಿರುಗಿ ನೋಡುವ ಪ್ರಶ್ನೆ ಕೂಡ ಇಲ್ಲ. ಆದರೆ ಅದರಿಂದ ಡ್ಯಾಮೇಜ್ ಆಗುವುದು ಆಯಾ ಪಕ್ಷಗಳಿಗೆ ಮಾತ್ರ. ಆದ್ದರಿಂದ ಇದನ್ನು ಈಗಲೇ ಸರಿ ಮಾಡಿದರೆ ಬಿಜೆಪಿಯ ಶಾಸಕರುಗಳಿಬ್ಬರಿಗೆ ಮತ್ತು ಕಾಂಗ್ರೆಸ್ಸಿನ ಮುಖಂಡರಿಗೆ ಒಳ್ಳೆಯದು. ಕ್ಯಾರ್ ಲೆಸ್ ಮಾಡಿದರೆ ಮುಂದಿದೆ ಮಾರಿಹಬ್ಬ, ಹುಶಾರ್!
Leave A Reply