ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹೋರ್ಡಿಂಗ್ಸ್ ಗೋಲ್ ಮಾಲ್ ಪರವಾಗಿ ಮಾತನಾಡಬಾರದಿತ್ತು!!
ಎಲ್ಲಿಯೋ ಕಲ್ಲು ಬಿಸಾಡಿದರೆ ಮತ್ತೆಲ್ಲಿಯೋ ಹಣ್ಣು ಬೀಳುತ್ತದೆ ಎನ್ನುವ ಮಾತಿದೆ. ಹಣ್ಣು ಬಿದ್ದರೆ ಪರವಾಗಿಲ್ಲ ಆದರೆ ಮರದ ಕೊಂಬೆನೆ ಮುರಿದು ಬಿದ್ದರೆ ಏನು ಮಾಡುವುದು. ಅಂತಹ ಒಂದು ಘಟನೆ ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಇಂತಹ ಸಭೆ ಪ್ರತಿ ವರ್ಷ ನಡೆಯುತ್ತದೆ. ವಿವಿಧ ಕ್ಷೇತ್ರಗಳ ಪ್ರಮುಖರಿಂದ ಮತ್ತು ಗಣ್ಯರಿಂದ ಅಭಿಪ್ರಾಯಗಳನ್ನು ಸ್ವೀಕರಿಸಿ ಅದನ್ನು ಬಜೆಟ್ ನಲ್ಲಿ ಅಳವಡಿಸುವುದು ಮುಖ್ಯ ಉದ್ದೇಶ. ಎಷ್ಟು ಅಳವಡಿಸುತ್ತಾರೋ ಬಿಡುತ್ತಾರೋ ಬೇರೆ ವಿಷಯ, ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡುವುದು ನನ್ನ ಕರ್ತವ್ಯ ಎಂದು ಅಂದುಕೊಂಡಿದ್ದೇನೆ.
ಸಭೆಯಲ್ಲಿ ನಾನು ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ. ಅದೇನೆಂದರೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಾಕಲ್ಪಟ್ಟಿರುವ ಹೋರ್ಡಿಂಗ್ ಗಳಿಂದ ಅಂದಾಜು ಈಗ ಮೂರು ಕೋಟಿ ರೂಪಾಯಿ ಬರುತ್ತಿದೆ ಎಂದು ಇಟ್ಟುಕೊಳ್ಳೋಣ. ಪಾಲಿಕೆ ಅಧಿಕಾರಿಗಳು ಇಚ್ಚಾಶಕ್ತಿ ತೋರಿಸಿದರೆ ಅದನ್ನು ಹತ್ತು ಕೋಟಿ ಮಾಡಬಹುದು ಎಂದು ಹೇಳಿದೆ. ಅದು ಹೇಗೆ ಎನ್ನುವುದನ್ನು ನಿಮಗೆ ವಿವರಿಸುತ್ತೇನೆ. ಪ್ರಥಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಹೋರ್ಡಿಂಗ್ಸ್ ಗಳು ಇದೆ ಎಂದು ಅಧಿಕಾರಿಗಳು ಅಂದುಕೊಂಡಿದ್ದಾರೋ ಅದಕ್ಕಿಂತ ಎಷ್ಟೋ ಹೆಚ್ಚು ಹೋರ್ಡಿಂಗ್ಸ್ ಇವೆ. ಇನ್ನು ಒಂದು ಜಾಹೀರಾತು ಏಜೆನ್ಸಿಯವರು ಎಷ್ಟು ಅಳತೆಯ ಹೋರ್ಡಿಂಗ್ಸ್ ಹಾಕುತ್ತೇವೆ ಎಂದು ಅನುಮತಿ ಪಡೆದುಕೊಂಡಿರುತ್ತಾರೋ ಅದಕ್ಕಿಂತ ಎಷ್ಟೋ ಪಟ್ಟು ದೊಡ್ಡ ಹೋರ್ಡಿಂಗ್ ಹಾಕಿಸುತ್ತಾರೆ. ಇನ್ನು ವಿದ್ಯುತ್ ಅಳವಡಿಸಿ ಪ್ರಕಾಶಮಾನವಾಗಿ ಬೆಳಗುವ ಹೋರ್ಡಿಂಗ್ ಗಳಿಗೆ ಅನುಮತಿ ಪಡೆದುಕೊಳ್ಳದೇ ವಿದ್ಯುತ್ ಅಳವಡಿಸದ ಹೋರ್ಡಿಂಗ್ ಎಂದೇ ಅರ್ಜಿ ಹಾಕಿ ಅನುಮತಿ ತೆಗೆದುಕೊಂಡಿರುತ್ತಾರೆ. ನಂತರ ಲೈಟ್ಸ್ ಅಳವಡಿಸಿ ಹೋರ್ಡಿಂಗ್ಸ್ ಬೆಳಗಿಸುತ್ತಾರೆ. ಇನ್ನು ಮೂರನೇಯದಾಗಿ ಪಾಲಿಕೆ ವ್ಯಾಪ್ತಿಯನ್ನು ಮೂರು ಕೆಟಗರಿಯಲ್ಲಿ ವಿಂಗಡಿಸಲಾಗಿದೆ. ತಿರುವೈಲ್ ನಲ್ಲಿ ಹಾಕಲಾಗುವ ಹೋರ್ಡಿಂಗ್ ದರಕ್ಕೂ ಲಾಲ್ ಭಾಗ್ ನಲ್ಲಿ ಹಾಕಿರುವ ಹೋರ್ಡಿಂಗ್ ಲೈಸೆನ್ಸ್ ಫೀಸ್ ಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಇದನ್ನು ಕೂಡ ಉಲ್ಲಂಘಿಸಲಾಗುತ್ತದೆ. ಆದ್ದರಿಂದ ಗಾತ್ರ, ಲೈಟ್ಸ್ ಮತ್ತು ಸ್ಥಳ ಒಂದು ಹೋರ್ಡಿಂಗ್ ಅಳವಡಿಸುವಾಗ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪಾಲಿಕೆಯಲ್ಲಿ ಅನುಮತಿ ಪಡೆದ ಹೋರ್ಡಿಂಗ್ಸ್ ಜಾಹೀರಾತುದಾರರು ಈ ಎಲ್ಲ ನಿಯಮಗಳನ್ನು ಸಾರಾಸಗಟಾಗಿ ಕಡೆಗಣಿಸಿ ತಮಗೆ ಬೇಕಾದ ಗಾತ್ರದ ಹೋರ್ಡಿಂಗ್ ಅನ್ನು ಬೇಕಾದ ಜಾಗದಲ್ಲಿ ಅಳವಡಿಸಿ ಅದಕ್ಕೆ ಲೈಟ್ ಹಾಕಲು ಅನುಮತಿ ಇಲ್ಲದಿದ್ದರೂ ಹಾಕುತ್ತಾರೆ. ನಾನು ಈ ವಿಷಯವನ್ನು ಪ್ರಸ್ತಾಪಿಸಿದೆ. ಇದಕ್ಕೆ ವಿರೋಧ ಬರುವ ಚಾನ್ಸೆ ಇರಲಿಲ್ಲ. ಬಂದರೂ ಹೋರ್ಡಿಂಗ್ಸ್ ನವರು ಹಾಕಬೇಕಿತ್ತು. ಆದರೆ ವಿರೋಧ ವ್ಯಕ್ತಪಡಿಸಿದ್ದು ಯಾರು ಗೊತ್ತಾ ಐಸಾಕ್ ವಾಸ್.
ಐಸಾಕ್ ವಾಸ್ ಚೆಂಬರ್ ಆಫ್ ಕಾಮರ್ಸ್ ಇದರ ಹಾಲಿ ಅಧ್ಯಕ್ಷರು. ಅವರುವರದ್ದು ಏನೂ ತಪ್ಪು ಇಲ್ಲ. ಎಲ್ಲವೂ ಸರಿ ಇದೆ ಎಂದರು. ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರ ಅಪರಾಧ ಮಾಡಿದ್ದಾನೆ ಎಂದು ಗೊತ್ತಿದ್ದರೂ ವಕೀಲರು ವಾದ ಮಾಡುತ್ತಾರೆ. ಅದು ಅವರ ವೃತ್ತಿ ಧರ್ಮ ಇರಬಹುದು. ಆದರೆ ಇಲ್ಲಿ ಐಸಾಕ್ ವಾಸ್ ಯಾಕೆ ಬರೀ ಕಣ್ಣಿಗೆ ಕಾಣುವ ಗೋಲ್ ಮಾಲ್ ಪರವಾಗಿ ವಾದ ಮಾಡಲು ಹೊರಟರು ಎಂದು ಗೊತ್ತಾಗುವುದಿಲ್ಲ.
ನಾನು ಅವರಿಗೆ ಅದೇ ಸಭೆಯಲ್ಲಿ ಸವಾಲು ಹಾಕಿದೆ. ಈ ಸಭೆ ಆದ ಕೂಡಲೇ ನಾನು, ಐಸಾಕ್ ವಾಸ್ ಹಾಗೂ ಪಾಲಿಕೆಯ ಅಧಿಕಾರಿಗಳು ಯಾವುದಾದರೂ ಹತ್ತು ಹೋರ್ಡಿಂಗ್ಸ್ ಗಳನ್ನು ತೆಗೆದು ಅವುಗಳು ನಿಯಮಾವಳಿಗಳ ಪ್ರಕಾರ ಎಷ್ಟು ಸರಿಯಾಗಿವೆ ಎಂದು ನೋಡೋಣ. ಅಧಿಕಾರಿಗಳ ಸಮ್ಮುಖದಲ್ಲಿ ಮಾಡುವುದರಿಂದ ಎಲ್ಲವೂ ಗೊತ್ತಾಗುತ್ತದೆ ಎಂದು ಸವಾಲು ಹಾಕಿದೆ. ಆದರೆ ಪಾಲಿಕೆಯ ಕಂದಾಯ ವಿಭಾಗದ ಡಿಸಿ ಗಾಯತ್ರಿ ನಾಯಕ್ ಹಾಗೂ ಪಾಲಿಕೆ ಕಮೀಷನರ್ ಅಜಿತ್ ಕುಮಾರ್ ಹೆಗ್ಡೆಯವರು ಸೋಮವಾರ ಮಾಡೋಣ ಎಂದು ಹೇಳಿದ್ದರು. ನಾನು ಅಧಿಕಾರಿಗಳು ಯಾವ ಸಮಯದಲ್ಲಿ, ಎಲ್ಲಿ ಕರೆದರೂ ತಯಾರಾಗಿದ್ದೆ. ಯಾಕೆಂದರೆ ಹೋರ್ಡಿಂಗ್ಸ್ ವಿಷಯದಲ್ಲಿ ನಾನು ಮೊನ್ನೆ ಶನಿವಾರ ಮೊದಲ ಬಾರಿಗೆ ಧ್ವನಿಯೆತ್ತುವುದಿಲ್ಲ. ಹೋರ್ಡಿಂಗ್ಸ್ ಗೋಲ್ ಮಾಲ್ ಬಗ್ಗೆ ನಾನು ನನ್ನ ಜಾಗೃತ ಅಂಕಣದಲ್ಲಿ ಸರಣಿರೂಪದಲ್ಲಿ ಬರೆದಿದ್ದೇನೆ. ನನ್ನಿಂದ ಮಾಹಿತಿ, ದಾಖಲೆ ಪಡೆದು ಪಾಲಿಕೆ ಪರಿಷತ್ ಸಭೆಯಲ್ಲಿ ಧ್ವನಿ ಎತ್ತಿದ ಸದಸ್ಯರಿದ್ದಾರೆ. ಇನ್ನು ನಾನು ಗಾಳಿಯಲ್ಲಿ ಹಾರಿ ಹೋಗುವ, ಹೇಳಿಕೆ ಕೊಡುವ, ಆರೋಪ ಮಾಡಲು ರಾಜಕಾರಣಿಯಲ್ಲ. ಆದರೂ ಯಕಶ್ಚಿತ್ ಹೋರ್ಡಿಂಗ್ಸ್ ಗೋಲ್ ಮಾಲ್ ಮಾಡುವವರ ಪರವಾಗಿ ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ನಿಂತರಲ್ಲ ಎನ್ನುವುದೇ ಆಶ್ಚರ್ಯ ಮತ್ತು ಅಸಹ್ಯ. ಇವತ್ತು ಸೋಮವಾರವೂ ನಾನು ಅಧಿಕಾರಿಗಳನ್ನು ಕೇಳಿದ್ದೇನೆ. ಇನ್ಸಪೆಕ್ಷನ್ ಮಾಡಲು ತಯಾರಿದ್ದೇನೆ, ಹೋಗೋಣ ಎಂದು ಹೇಳಿದ್ದೇನೆ. ಆದರೆ ಅವರು ತಯಾರಿಲ್ಲ. ಯಾಕೆಂದರೆ ಅಧಿಕಾರಿಗಳಿಗೂ ಹೋರ್ಡಿಂಗ್ಸ್ ಹಿಂದೆ ಇರುವ ವಂಚನೆ ಗೊತ್ತಿದೆ. ಹನುಮಂತ ಕಾಮತ್ ಮಾತಾಡ್ತಾರೆ, ನಾವು ಕೇಳಿಸಿಕೊಂಡ ಹಾಗೆ ಮಾಡೋಣ ಮತ್ತೆ ಬಿಡೋಣ ಎಂದು ಅವರು ಅಂದುಕೊಂಡಿದ್ದರೇನೋ. ಆದರೆ ಐಸಾಕ್ ವಾಸ್ ನನ್ನ ವಿರುದ್ಧ ಮಾತನಾಡಿದ್ದು ಅಧಿಕಾರಿಗಳಿಗೆ ಕಸಿವಿಸಿಯಾಗಿರಬಹುದು.
ಇನ್ನು ನಾನು ಈ ವಿಷಯವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಒಂದೋ ಅಧಿಕಾರಿಗಳು ಮತ್ತು ಐಸಾಕ್ ವಾಸ್ ನಾನು ಹೇಳಿದ ಚಾಲೆಂಜ್ ಸ್ವೀಕರಿಸಿ ಫೀಲ್ಡಿಗೆ ಇಳಿಯಬೇಕು. ಹಾಲು ಯಾವುದು, ನೀರು ಯಾವುದು ಎಂದು ಜನರಿಗೆ ಗೊತ್ತಾಗಬೇಕು ಅಥವಾ ಐಸಾಕ್ ವಾಸ್ ಅವರು ತಾವು ಹೋರ್ಡಿಂಗ್ಸ್ ನವರದ್ದು ತಪ್ಪಿಲ್ಲ ಎಂದು ಹೇಳಿದ್ದೇ ತಪ್ಪು ಎಂದು ಒಪ್ಪಿಕೊಳ್ಳಬೇಕು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುವವರು ಸುಮ್ಮನೆ ನನಗೆ ಕಲ್ಲು ಹೊಡೆಯಲು ಬರಬಾರದು! !
Leave A Reply