ಬೆಂಗಳೂರಿನಲ್ಲಿ ಐಟಿ ಶೋಧ, ಮಂಗಳೂರಿನಲ್ಲಿ ಕಲ್ಲು ತೂರಾಟ!
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವ ಮಾತು ಇದೆ. ಬೆಂಗಳೂರು, ಮೈಸೂರು ಕಡೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ, ಕಚೇರಿ, ಆಪ್ತರ ಮನೆಗಳಲ್ಲಿ ಆದಾಯ ಇಲಾಖೆಯ ಅಧಿಕಾರಿಗಳು ಶೋಧ ನಡೆಸಿದರೆ ಮಂಗಳೂರಿನ ಅತ್ತಾವರದಲ್ಲಿರುವ ರೆವೆನ್ಯೂ ಇಲಾಖೆಯ ಕಚೇರಿಯ ಮೇಲೆ ಕಾಂಗ್ರೆಸ್ಸಿಗರು ಕಲ್ಲು ತೂರಾಟ ನಡೆಸಿದ್ದಾರೆ. ಹಾಗಾದರೆ ಒಂದು ವೇಳೆ ನಾಳೆ ಶಿಕ್ಷಣ ಇಲಾಖೆಯ ಸಚಿವರ ಮನೆ, ಕಚೇರಿಯ ಮೇಲೆ ಐಟಿ ಶೋಧ ನಡೆದರೆ ಇವರು ಶಾಲೆಗಳಿಗೆ ಕಲ್ಲು ಹೊಡೆಯುತ್ತಾರಾ, ಆರೋಗ್ಯ ಸಚಿವರ ಮನೆಯಲ್ಲಿ ಐಟಿ ಶೋಧ ನಡೆದರೆ ಇವರು ಆಸ್ಪತ್ರೆಗಳಿಗೆ ಕಲ್ಲು ಹೊಡೆಯುತ್ತಾರಾ, ಆಹಾರ ಸಚಿವರ ಮನೆಗೆ ಐಟಿ ಶೋಧ ನಡೆದರೆ ಇವರು ಹೋಟೇಲಿಗೆ ಕಲ್ಲು ಬಿಸಾಡುತ್ತಾರಾ?, ಬಂಧಿಖಾನೆ ಸಚಿವರ ಮನೆಯಲ್ಲಿ ಐಟಿ ಶೋಧ ನಡೆದರೆ ಕಾರಾಗೃಹಗಳಿಗೆ ಕಲ್ಲು ಬಿಸಾಡುತ್ತಾರಾ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ಸಿಗರು ಹೀಗೆ ಕೂಡ ಮಾಡುತ್ತಾರೆ ಎಂದರೆ ಎಂತಹ ಬಾಲಿಶವಾದ ನಿರ್ಧಾರ ಅಲ್ಲವಾ?
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಅದು ಕಾಂಗ್ರೆಸ್ಸಿಗರಿಗೂ ಇದೆ, ಬಿಜೆಪಿಯವರಿಗೂ ಇದೆ. ಬೇರೆ ಪಕ್ಷದವರಿಗೂ ಇದೆ. ರೆವೆನ್ಯೂ ಆಫೀಸ್ ಹೊರಗೆ ಯುವ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದು, ಬಿಜೆಪಿಗೆ ದಿಕ್ಕಾರ ಕೂಗಿದ್ದು ಅವರ ಪಕ್ಷದ ವೈಯಕ್ತಿಕ ನಿರ್ಧಾರ. ಅವರಿಗೆ ಹಾಗೆ ಸೂಚನೆ ಬಂದಿರಬಹುದು ಅಥವಾ ರಾಜ್ಯ ನಾಯಕರ ಎದುರು ನಾವು ಏನೋ ಮಾಡುತ್ತಿದ್ದೆವೆ ಎಂದು ತೋರಿಸುವ ಉಮೇದು ಇರಬಹುದು. ಆದರೆ ಕೈಲಾಗದವ ಮೈಪರಚಿಕೊಂಡ ಎನ್ನುವ ಹಾಗೆ ಅಲ್ಲಿ ಐಟಿ ಶೋಧ ನಡೆದರೆ ಇಲ್ಲಿನ ರೆವನ್ಯೂ ಆಫೀಸ್ ಏನು ತಪ್ಪು ಮಾಡಿದೆ ಎಂದು ಕಲ್ಲು ಬಿಸಾಡಿ ಗಾಜು ಒಡೆಯಲಾಯಿತು ಎಂದು ಕಾಂಗ್ರೆಸ್ಸಿಗರೇ ಹೇಳಬೇಕು. ಇನ್ನು ಅತ್ತಾವರದ ರೆವೆನ್ಯೂ ಆಫೀಸ್ ಹೊರಗೆ ನಡೆದ ಪ್ರತಿಭಟನೆಯಲ್ಲಿ ಹಿರಿಯ ತಲೆ ಎಂದು ಯಾರಾದರೂ ಇದ್ದರೆ ಅದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ, ವಕೀಲ, ಕಾಂಗ್ರೆಸ್ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕು ಘಟಕದ ಅಧ್ಯಕ್ಷ ಎಸಿ ವಿನಯರಾಜ್. ಒಬ್ಬರು ನ್ಯಾಯವಾದಿಯಾಗಿ, ಕಾಂಗ್ರೆಸ್ಸಿಗರಾಗಿ ಅವರು ಆ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ, ಭಾಷಣ ಮಾಡುವುದಕ್ಕೆ ಸಂಪೂರ್ಣ ಹಕ್ಕಿದೆ. ಆದರೆ ಪ್ರತಿಭಟನೆಯಲ್ಲಿ ಯಾರಾದರೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡುವ ಕೆಲಸ ಮಾಡಿದಾಗ ಅದರ ಜವಾಬ್ದಾರಿಯನ್ನು ಅವರೇ ವಹಿಸಿಕೊಳ್ಳಬೇಕಾಗುತ್ತದೆ. ಒಬ್ಬ ಮುಖಂಡ ತನ್ನ ಪ್ರತಿಭಟನೆ ಅಹಿತಕರ ಘಟನೆಗಳಿಗೆ ತಿರುಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಕೂಡ ಹೊಂದಿದ್ದಾನೆ.
ಒಂದು ವೇಳೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲೇಬೇಕಾದರೆ ಅವರು ಸುದ್ದಿಗೋಷ್ಟಿ ಕರೆಯಬಹುದಿತ್ತು. ಸ್ಥಳೀಯ ವಾಹಿನಿಗಳಲ್ಲಿ ಪ್ಯಾನೆಲ್ ಡಿಸ್ಕಷನ್ ನಲ್ಲಿ ಭಾಗವಹಿಸಬಹುದಿತ್ತು. ಅದನ್ನು ಬಿಟ್ಟು ಸ್ವಸ್ಥ ಸಮಾಜದಲ್ಲಿ ಹೀಗೆ ಜನರ ತೆರಿಗೆಯ ಹಣದಲ್ಲಿ ನಡೆಯುವ ಸಾರ್ವಜನಿಕ ಕಚೇರಿಯ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೋ ಯಾರೂ ಬೆಂಬಲಿಸುವುದಿಲ್ಲ ಎಂದು ಗೊತ್ತಿಲ್ಲವೇನೋ. ಸದ್ಯ ಭಾರತೀಯ ಜನತಾ ಪಾರ್ಟಿಯ ಮುಖಂಡರು ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ಹೇಳಿದ್ದಾರೆ. ಪ್ರಸ್ತುತ ಪಾಂಡೇಶ್ವರ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave A Reply