ಬಾಕಿ ಇಟ್ಟಿರುವ ನೀರಿನ 40 ಕೋಟಿ ರೂ ಬಿಲ್ ವಸೂಲಿ ಮಾಡಲು ಪಾಲಿಕೆಯಲ್ಲಿ ಯಾರೂ ಗಂಡಸು ಇಲ್ವಾ?

ಬಗ್ಗಿದವನಿಗೆ ಗುದ್ದು ಜಾಸ್ತಿ ಎನ್ನುವ ಮಾತು ನೀವು ಚಿಕ್ಕ ವಯಸ್ಸಿನಿಂದಲೇ ಕೇಳುತ್ತಾ ಬಂದಿರುತ್ತೀರಿ. ಈ ವಾಕ್ಯವನ್ನು ಸರಕಾರಿ ಅಧಿಕಾರಿಗಳು ತಮ್ಮ ಚೆಂಬರಿನ ಗೋಡೆಯಲ್ಲಿ ಬರೆದಿರಬಹುದು. ಯಾಕೆಂದರೆ ಜನಸಾಮಾನ್ಯನ ಮೇಲೆ ಎಷ್ಟೇ ಒತ್ತಡ ಹಾಕಿದ್ರೂ ಆತ ಏನು ಮಾತನಾಡುವುದಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಅದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರ ಕುಡಿಯುವ ನೀರಿನ ದರವನ್ನು ಒಮ್ಮಿಂದೊಮ್ಮೆಲೇ ಸುಮಾರು 170% ಹೆಚ್ಚಿಸಲಾಗಿದೆ. ನೀವು ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಬಳಿ ಕೇಳಿದರೆ ಅವರು ಪಾಲಿಕೆಗೆ ಆದಾಯ ಬರಬೇಕಲ್ಲ, ಅದಕ್ಕಾಗಿ ಹೆಚ್ಚಿಸಲಾಗಿದೆ ಎನ್ನುವ ಸಮರ್ಥನೆ ನೀಡುತ್ತಿದ್ದಾರೆ. ಜನಸಾಮಾನ್ಯರಿಗೆ ಹೊರೆಯಾಗುವಷ್ಟು ನೀರಿನ ದರವನ್ನು ಹೆಚ್ಚಿಸುವ ಬದಲು ಎಷ್ಟೋ ಇತರ ದಾರಿಗಳ ಮೂಲಕ ಪಾಲಿಕೆಯ ಆದಾಯ ಅವರು ಹೆಚ್ಚಿಸಬಹುದಿತ್ತು ಎನ್ನುವುದು ನನ್ನ ವಾದ. ಅದು ಹೇಗೆ?
ಮೊದಲನೇಯದಾಗಿ ಕಟ್ಟಡ ತೆರಿಗೆ. ಕೊನೆಯ ಬಾರಿ ಕಟ್ಟಡ ತೆರಿಗೆ ಪರಿಷ್ಕರಣೆ ಮಾಡಿದ್ದು ಯಾವಾಗ ಗೊತ್ತಾ? 1992-93 ರಲ್ಲಿ. ಆವತ್ತಿನ ಬಳಿಕ ಇವತ್ತಿನ ತನಕ ಕಟ್ಟಡ ತೆರಿಗೆಯನ್ನು ಒಂದು ರೂಪಾಯಿ ಕೂಡ ಹೆಚ್ಚಿಸಿಲ್ಲ. ನಿಮಗೆ ಇನ್ನೊಂದು ಆಶ್ಚರ್ಯ ಆಗಬಹುದು. ಅದೇನೆಂದರೆ ನೀವು ಹತ್ತು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಇಪ್ಪತ್ತು ಪೈಸೆಯ ಕಾಯಿನ್ ನೋಡಿರಬಹುದು. ಆ ಕಾಯಿನ್ ಚಲಾವಣೆಯಿಂದ ಹಿಂದೆ ಸರಿದಿದ್ದರೂ ಪಾಲಿಕೆಯ ಕಟ್ಟಡ ತೆರಿಗೆಗಳನ್ನು ಲೆಕ್ಕ ಹಾಕುವಾಗ 20 ಪೈಸೆ ಇನ್ನು ಇವರ ದಾಖಲೆ ಪತ್ರಗಳಲ್ಲಿ ಉಸಿರಾಡುತ್ತಿರುತ್ತಿದೆ. ಅಂದರೆ 27 ವರ್ಷಗಳ ಹಿಂದೆ ಹೆಚ್ಚಿಸಿದ್ದ ಕಟ್ಟಡ ತೆರಿಗೆಯ ದರವನ್ನು ಹೆಚ್ಚಿಸಲು ಇವರಿಗೆ ನೆನಪಿಲ್ಲ, ಆದರೆ ಜನಸಾಮಾನ್ಯರ ನೀರಿನ ದರವನ್ನು ಮರೆಯದೇ ಹೆಚ್ಚಿಸಿದ್ದಾರೆ.
ಇನ್ನು ಆರ್ ಟಿಒದಲ್ಲಿ ಪ್ರತಿ ನಿತ್ಯ ಎಷ್ಟೋ ವಾಹನಗಳನ್ನು ನೊಂದಾವಣೆ ಮಾಡಿಸಲಾಗುತ್ತದೆ. ಒಂದೊಂದು ವಾಹನ ನೊಂದಾವಣೆ ಆಗುವಾಗಲೂ ಪಾಲಿಕೆಗೆ ಸುಮಾರು 50 ರೂಪಾಯಿಯಷ್ಟು ಸಂದಾಯವಾಗುತ್ತದೆ. ಆದರೆ ಇಲ್ಲಿಯ ತನಕ ಆರ್ ಟಿಒದಿಂದ ಒಂದೇ ಒಂದು ರೂಪಾಯಿ ಪಾಲಿಕೆಗೆ ಹೋಗಿಲ್ಲ. ಅವರು ಕೊಟ್ಟಿಲ್ಲ, ಇವರು ಕೇಳಿಲ್ಲ. ಬಹುಶ: ಆ ಹಣವೇ ಎಷ್ಟು ಕೋಟಿ ಇರಬಹುದು ಎನ್ನುವ ಅಂದಾಜಾದರೂ ಪಾಲಿಕೆಯ ಅಧಿಕಾರಿಗಳಿಗೆ ಇದೆಯಾ? ಅದನ್ನು ಕೇಳಬಹುದಲ್ಲ? ಅದು ಪಾಲಿಕೆಗೆ ಆದಾಯ ಅಲ್ವಾ?
ಇನ್ನು ಶ್ರೀಮಂತ ಬಿಲ್ಡರ್ ಗಳು ತಮ್ಮ ಕಟ್ಟಡ ನಿರ್ಮಾಣ ಸಮಯದಲ್ಲಿ ಪಾಲಿಕೆಯಿಂದ ಮತ್ತು ಇತರರು ಬಳಸಿದ ನೀರಿನ ಬಿಲ್ ಕೊಡಲು ಬಾಕಿ ಇಟ್ಟಿರುವ ಹಣ ಎಷ್ಟು ಗೊತ್ತಾ? ಅಂದಾಜು 40 ಕೋಟಿ. ಅದನ್ನು ವಸೂಲು ಮಾಡಲು ಪಾಲಿಕೆಯಲ್ಲಿ ಗಂಡಸರು ಇಲ್ವಾ? ಅದು ಮಾಡದೇ ಜನಸಾಮಾನ್ಯರು ಕುಡಿಯಲು ಬಳಸುವ ನೀರಿಗೆ ದರ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದ್ದಿರಲ್ಲ?
ಇನ್ನು ಮನೆ ತೆರಿಗೆ. ನೀವು ಮನೆ ತೆರಿಗೆ ಕಟ್ಟಲು ತಡ ಮಾಡಿದರೆ ನಿಮ್ಮಿಂದ ದಂಡ ವಸೂಲಿ ಮಾಡಲಾಗುತ್ತದೆ. ಉದಾಹರಣೆಗೆ 2019-20 ರ ಮನೆ ತೆರಿಗೆ ಜೂನ್ ಒಳಗೆ ಕಟ್ಟಬೇಕು. ಮರೆತರೆ ದಂಡ ಫಿಕ್ಸ್. ಅದೇ ಹೋರ್ಡಿಂಗ್ಸ್ ಗುತ್ತಿಗೆದಾರರು ತಾವು ಪ್ರತಿ ವರ್ಷ ಒಂದೊಂದು ಹೋರ್ಡಿಂಗ್ ಗೂ ಕಟ್ಟಬೇಕಾದ ಹದಿನೈದು ಸಾವಿರ ಕಟ್ಟಲು ಎಷ್ಟು ವರ್ಷ ತೆಗೆದುಕೊಂಡರೂ ಅವರಿಗೆ ಒಂದೇ ಒಂದು ರೂಪಾಯಿ ದಂಡ ಇಲ್ಲ. ನೀವು ನಿಮ್ಮದೇ ಮನೆಯಲ್ಲಿ ವಾಸಿಸುತ್ತಿದ್ದರೂ ತೆರಿಗೆ ಕಟ್ಟಲು ತಡ ಮಾಡಿದರೆ 25% ದಂಡ ಇದೆ. ಅದೇ ಸಾರ್ವಜನಿಕ ಜಾಗದಲ್ಲಿ ಹೋರ್ಡಿಂಗ್ಸ್ ನಿಲ್ಲಿಸಿ ಕೋಟಿ ಸಂಪಾದನೆ ಮಾಡುವ ಗುತ್ತಿಗೆದಾರ ತಡ ಮಾಡಿದಷ್ಟು ಅವನಿಗೆ ರಾಜ ಮರ್ಯಾದೆ ವಿನ: ದಂಡದ ಮಾತೇ ಇಲ್ಲ.
ಹೀಗೆ ಪಾಲಿಕೆಗೆ ಆದಾಯ ಬರಲು ನೂರು ಶ್ರೀಮಂತ ದಾರಿಗಳು ಇದ್ದರೂ ಬಡ ಜನಸಾಮಾನ್ಯರನ್ನು ದೋಚಲು ನಿಂತಿರುವ ಪಾಲಿಕೆಗೆ ಕಿವಿ ಹಿಂಡುವ ಕೆಲಸವನ್ನು ನಮ್ಮ ಜನಪ್ರತಿನಿಧಿಗಳು ಮಾಡಬಲ್ಲರಾ??
Leave A Reply