ಸ್ಮಾರ್ಟ್ ಸಿಟಿ ರಸ್ತೆಗಳಿಗೆ ಬಂಗಾರ ಮತ್ತು ಬೆಳ್ಳಿಯ ಹೊದಿಕೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ!!

ನಿನ್ನೆಯ ಜಾಗೃತ ಅಂಕಣವನ್ನು ಎಲ್ಲಿ ನಿಲ್ಲಿಸಿದ್ದೇನೋ ಅಲ್ಲಿಂದಲೇ ಪ್ರಾರಂಭಿಸುತ್ತೇನೆ. ಮೊನ್ನೆ ಸೋಮವಾರ ನಡೆದ ಸ್ಮಾರ್ಟ್ ಸಿಟಿಯ ಮೀಟಿಂಗ್ ನ ಮುಂದುವರೆದ ಭಾಗದಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿದಾಗ ನಾನು ಕೇಳಿದ ಪ್ರಶ್ನೆ ಏನೆಂದರೆ ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ಕಾಂಕ್ರೀಟಿಕರಣ ಆಗುವ ರಸ್ತೆಗಳಿಗೆ ಬಂಗಾರದ ಮತ್ತು ಬೆಳ್ಳಿಯ ಕೋಟಿಂಗ್ ಏನಾದರೂ ಮಾಡುತ್ತಿರಾ ಎಂದು ಕೇಳಿದೆ. ಸಭೆಯಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್, ಸ್ಮಾರ್ಟ್ ಸಿಟಿ ನಿರ್ದೇಶಕ ಮೊಹಮ್ಮದ್ ನಜೀರ್, ಪಾಲಿಕೆಯ ತಾಂತ್ರಿಕ ಸಲಹೆಗಾರ ಧರ್ಮರಾಜ್ ಮತ್ತು ಕೆಲವು ಅಧಿಕಾರಿಗಳು ಮತ್ತು ನಾಗರಿಕರು ಇದ್ದರು. ನಾನು ಕೇಳಿದ್ದ ಪ್ರಶ್ನೆಯಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಬೇಕಾದರೆ ನಿಮಗೆ ಅಂಕಿಅಂಶ ಕೊಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ಬಾರಿ ಸಿಎಂ ಆಗಿದ್ದಾಗ ನಮ್ಮ ಪಾಲಿಕೆಗೆ ಪ್ರತಿ ವರ್ಷ ನೂರು ಕೋಟಿಯಂತೆ ಎರಡು ಬಾರಿ ಒಟ್ಟು ಇನ್ನೂರು ಕೋಟಿ ಕೊಟ್ಟಿದ್ದರು. ಆ 200 ಕೋಟಿಗೆ 25 ಕೋಟಿ ಸೇರಿಸಿ ಒಟ್ಟು 225 ಕೋಟಿಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 105 ಕಿ.ಮೀ ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗಿದೆ. ಹಾಗಾದರೆ ಸ್ಮಾರ್ಟ್ ಸಿಟಿಯಲ್ಲಿ ಬಂದಿರುವ 205 ಕೋಟಿಯಲ್ಲಿ ಇವರು ಎಷ್ಟು ರಸ್ತೆಗೆ ಕಾಂಕ್ರೀಟಿಕರಣ ಮಾಡಬಹುದು ಎಂದು ನೀವೆ ಲೆಕ್ಕ ಹಾಕಿ. ಕಡಿಮೆ ಎಂದರೂ 80 ರಿಂದ 90 ಕಿ.ಮೀ ರಸ್ತೆಗೆ ಕಾಂಕ್ರೀಟಿಕರಣ ಮಾಡಬಹುದಾ? ಆದರೆ ಸ್ಮಾರ್ಟ್ ಸಿಟಿಯಲ್ಲಿ 205 ಕೋಟಿಯಲ್ಲಿ ಕಾಂಕ್ರೀಟಿಕರಣ ಆಗಲಿರುವುದು 12ಮುಕ್ಕಾಲು ಕಿ.ಮೀ ಮಾತ್ರ. ಅದಕ್ಕೆ ನಾನು ಕೇಳಿದ್ದು ಆ 12ಮುಕ್ಕಾಲು ಕಿ.ಮೀಗೆ ಏನಾದರೂ ಬಂಗಾರ ಮತ್ತು ಬೆಳ್ಳಿಯ ಹೊದಿಕೆ ಮಾಡುವ ಪ್ಲಾನ್ ಇದೆಯಾ? ಇಲ್ಲದಿದ್ದರೆ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೇ ಹೀಗಾದರೆ ಹೇಗೆ? ಒಂದು ವೇಳೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗುತ್ತಿದ್ರೆ ಆ ಭ್ರಷ್ಟಾಚಾರವನ್ನು ನೋಡಿಯೂ ಯಾರಾದರೂ ಕಮಲ ಪಕ್ಷದ ಜನಪ್ರತಿನಿಧಿಗಳು ಸುಮ್ಮನಿದ್ದರೆ ಅದು ಮೋದಿಗೆ ಮಾಡುವ ದ್ರೋಹ.
ಯಾಕೆಂದರೆ ಆ ಪುಣ್ಯಾತ್ಮ ಕೇಂದ್ರದಲ್ಲಿ ಕುಳಿತು ದೇಶದ ಅಭಿವೃದ್ಧಿಯ ಕನಸು ಕಾಣುತ್ತಿರುವ ಕಾರಣದಿಂದ ಬಿಜೆಪಿಗೆ ಜನ ಈ ಪರಿ ಬೆಂಬಲ ಕೊಡುತ್ತಿರುವುದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗಬಾರದು ಎನ್ನುವ ಕಾರಣಕ್ಕೆ ಮೋದಿ ಆ ಕಮಿಟಿಗಳಲ್ಲಿ ಅಧಿಕಾರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ಜನಪ್ರತಿನಿಧಿಗಳಾದ ಶಾಸಕರನ್ನು, ಸಂಸದರನ್ನು ಅದರಿಂದ ಹೊರಗೆ ಇಟ್ಟಿರುವುದು. ಈಗ ನಾವೇ ರಾಜರು ಎಂದು ಅಧಿಕಾರಿಗಳು ಮೇಯಲು ಶುರು ಮಾಡಿದರೆ ಅದು ಶಾಸಕರ, ಸಂಸದರ ಗಮನಕ್ಕೆ ಬಂದ ಕೂಡಲೇ ಅಂತಹ ಅಧಿಕಾರಿಗಳಿಗೆ ಎಲ್ಲಿ ದಾರಿ ತೋರಿಸಬೇಕೋ ಅಲ್ಲಿ ದಾರಿ ತೋರಿಸಿಬಿಡಬೇಕು. ಇಲ್ಲದಿದ್ದರೆ ಅಂತವರು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ. ಅದು ಶಾಸಕರನ್ನು, ಸಂಸದರನ್ನು ಯಾವಾಗ ಬೇಕಾದರೂ ಸುಟ್ಟುಬಿಡಬಹುದು. ಶಾಸಕರು, ಸಂಸದರು ಅವರ ಜಾಗ್ರತೆಯಲ್ಲಿ ಇದ್ದರೆ ಒಳ್ಳೆಯದು.
ಬೇಕಾದರೆ ಇನ್ನೊಂದು ಉದಾಹರಣೆ ನೋಡಿ. ಸ್ಮಾರ್ಟ್ ಸಿಟಿ ಬಸ್ ಸ್ಟಾಪ್ ಗಳ ನಿರ್ಮಾಣವಾಗುತ್ತಿದೆ. ಸಣಕಲು ಬಸ್ ಸ್ಟಾಪ್ ಗಳಿಗೆ ಇವರು ಹನ್ನೆರಡುವರೆ ಲಕ್ಷ ವೆಚ್ಚ ತೋರಿಸುತ್ತಿದ್ದಾರೆ. ಕುರುಡ ಕೂಡ ಮುಟ್ಟಿ ನೋಡಿದರೆ ಅದಕ್ಕೆ ಅಷ್ಟು ಖರ್ಚಾಗಲ್ಲ ಎಂದು ಹೇಳಬಲ್ಲ. ಇನ್ನು ಸ್ಮಾರ್ಟ್ ಸಿಟಿ ಯೋಜನೆಯನ್ನು ಅದ್ಯಾವ ಬುದ್ಧಿವಂತರು ಕೂತು ಅನುಷ್ಟಾನ ಮಾಡುತ್ತಾರೋ ಆ ದೇವರಿಗೆ ಗೊತ್ತು. ಪದವು ಮತ್ತು ಪಣಂಬೂರನ್ನೇ ನೋಡಿ. ಅಲ್ಲಿ ಈ ಮೊದಲೇ ಎರಡು ಬಸ್ ಸ್ಟಾಪ್ ಗಳಿವೆ. ಅದರ ನಂತರ ಸ್ಮಾರ್ಟ್ ಸಿಟಿಯವರು ಇನ್ನೊಂದು ಕಟ್ಟಿಸಿದ್ದಾರೆ. ಅದರಲ್ಲಿ ದಿನಕ್ಕೆ ಒಬ್ಬ ವ್ಯಕ್ತಿ ಬಂದು ಕೂತರೂ ಅದು ದೊಡ್ಡ ವಿಷಯ. ಯಾಕೆಂದರೆ ಉಳಿದ ಎರಡು ಬಸ್ ಸ್ಟಾಪ್ ಚೆನ್ನಾಗಿವೆ ಮತ್ತು ಎಲ್ಲಿ ಕಟ್ಟಲ್ಪಡಬೇಕೋ ಅಲ್ಲಿಯೇ ಕಟ್ಟಲ್ಪಟ್ಟಿವೆ. ಹಾಗಾದರೆ ಮೂರನೇ ಬಸ್ ಸ್ಟಾಪ್ ಭರ್ತಿಗಾ? ಇನ್ನು ನೆರೆ ಪೀಡಿತರು ಮನೆಗಳನ್ನು ಕಳೆದುಕೊಂಡಿದ್ದರೆ ಅವರಿಗೆ 5 ಲಕ್ಷ ಕೊಟ್ಟು ಮನೆ ಕಟ್ಟಲು ನೆರವಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. 5 ಲಕ್ಷದಲ್ಲಿ ಮನೆ ಆಗುವುದಾದರೆ ಬಸ್ ಸ್ಟಾಪ್ ಆಗಲ್ವಾ. ಅದಕ್ಕೆ 12 ಲಕ್ಷ ಬೇಕಾ. ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಯಾರ ಕಿವಿಗೆ ಹೂ ಇಡಲು ಹೊರಟಿದ್ದೀರಿ!
Leave A Reply