ಜನಾರ್ಧನ ಪೂಜಾರಿಯವರು ಡಿಕೆಶಿ ಬೆಂಬಲಕ್ಕೆ ನಿಂತ ಉದ್ದೇಶ ಏನು?
ರಾಜ್ಯದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ, ಕಚೇರಿ, ಆಪ್ತರ ಮನೆಯಲ್ಲಿ ಆದಾಯ ಇಲಾಖೆಯ ಅಧಿಕಾರಿಗಳಿಂದ ಶೋಧ ನಡೆದಾಗ ಮೊದಲು ಎದ್ದವರು ಬಿ ಜನಾರ್ಧನ ಪೂಜಾರಿ. ಫೇಸ್ ಬುಕ್ ಸ್ಟೇಟಸ್ ನಲ್ಲಿ ಯಾರಾದರೂ ಈ ಶೋಧದ ಕುರಿತು ತಮ್ಮ +ಅಭಿಪ್ರಾಯ ಬರೆಯುವ ಮೊದಲೇ ಒಂದು ಸುದ್ದಿಗೋಷ್ಟಿಯನ್ನು ತಾವು ಇದ್ದಲ್ಲಿಗೆ ಕರೆಸುವ ವೇಗ ಮತ್ತು “ಪವರ್” ಇರುವುದು ಬಹುಶ: ಅವರಿಗೆ ಮಾತ್ರವೇನೋ? ಬೇರೆ ನಾಯಕರು ಈ ಬಗ್ಗೆ ಏನೂ ಕಮೆಂಟ್ ಮಾಡುವುದು ಎಂದು ತಲೆಕೆರೆದುಕೊಳ್ಳುತ್ತಿರುವಾಗಲೇ ರಾಜ್ಯಮಟ್ಟದ ವಾಹಿನಿಗಳ ವರದಿಗಾರರನ್ನು ತಮ್ಮಲ್ಲಿಗೆ ಕರೆಸಿ ಏಕಾಂಗಿಯಾಗಿ ಕುಳಿತು ಈ ಘಟನೆಯ ಬಗ್ಗೆ ತಮ್ಮ ವಾಗ್ಝರಿಯನ್ನು ಹರಿಸುವ ಕಲೆ ಮತ್ತು ಸಾಮರ್ಥ್ಯ ಪೂಜಾರಿಯವರಿಗೆ ಮಾತ್ರ ಸಿದ್ಧಿಸಿದೆ. ಅವರು ಅದನ್ನು ಈ ಬಾರಿಯೂ ಮಾಡಿದ್ದಾರೆ ಮತ್ತು ತಮ್ಮ ಆಪ್ತಬಳಗದಲ್ಲಿ ಒಬ್ಬರಾಗಿರುವ ಡಿಕೆಶಿವಕುಮಾರ್ ಅವರ ಮನೆ, ಕಚೇರಿಯಲ್ಲಿ ಐಟಿ ಶೋಧ ಎಂದ ಕೂಡಲೇ ಬಹಳ ಫಾಸ್ಟ್ ಆಗಿ ಮಾಡಿದ್ದಾರೆ. ರಾಜ್ಯಸಭಾ ಸ್ಥಾನದಿಂದ ಕೆಳಗೆ ಇಳಿದು ದಶಕವಾಗುತ್ತಾ ಬಂದರೂ ಇನ್ನೂ ಕೂಡ ತನ್ನ ಪಕ್ಷಕ್ಕೆ ಏನಾದರೂ ತೊಂದರೆಯಾದಾಗ ಅದಕ್ಕೆ ಮೊದಲು ಜಿಲ್ಲೆಯಿಂದ ಧ್ವನಿ ಮೊಳಗಿಸುವವರು ಇದೇ ಪೂಜಾರಿ.
ಬಹುಶ: ಇದೇ ರೀತಿಯ ಐಟಿ ಶೋಧ ಸಿದ್ಧರಾಮಯ್ಯನವರ ಮೇಲೆ ನಡೆದಿದ್ದರೆ ಪೂಜಾರಿ ಹೀಗೆ ಸುದ್ದಿಗೋಷ್ಟಿ ಮಾಡಿ ಕೇಂದ್ರ ಸರಕಾರವನ್ನು ಟೀಕಿಸುತ್ತಿರಲಿಲ್ಲ ಎನ್ನುವವರು ಕಾಂಗ್ರೆಸ್ ನಲ್ಲಿ ಇದ್ದಾರೆ. ಅದು ನಿಜ ಕೂಡ. ಎಸ್ ಎಂ ಕೃಷ್ಣ, ಡಿಕೆಶಿ ಇವರ ಮೇಲೆ ಏನೂ ಆರೋಪ ಬಂದರೂ ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವವರು ಪೂಜಾರಿ. ಈ ಬಾರಿಯೂ ಅದನ್ನು ಮಾಡಿದ್ದಾರೆ. ಡಿಕೆಶಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡಿದ್ದಕ್ಕೆ ಈ ರೇಡ್ ಆಯಿತು ಎಂದು ಪೂಜಾರಿ ಹೇಳಿದ್ದಾರೆ. ಕಾಂಗ್ರೆಸ್ ಈಗ ರಾಷ್ಟ್ರದಲ್ಲಿ ವಿಪಕ್ಷ(?)ದಲ್ಲಿ ಇದೆ. ಆದ್ದರಿಂದ ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಆರೋಗ್ಯಕರ ಟೀಕೆ ಮಾಡುವುದು ತಪ್ಪಲ್ಲ. ಹಾಗಿರುವಾಗ ಟೀಕಿಸಿದ ಪ್ರತಿಯೊಬ್ಬರ ಮೇಲೆ ಕೂಡ ಐಟಿ ದಾಳಿ ಮಾಡಲು ಆಗುತ್ತಾ? ಅಷ್ಟೇ ಯಾಕೆ, ನೀವು ಎಷ್ಟು ಸಲ ಮೋದಿಯವರನ್ನು ಟೀಕಿಸಿಲ್ಲ, ನಿಮ್ಮ ಮೇಲೆ ಎಂದಾದರೂ ದಾಳಿ ಆಗಿದೆಯಾ? ನಿಮ್ಮ ಪಕ್ಷದಲ್ಲಿ ಎಷ್ಟೋ ಮಂದಿ ಟೀಕಿಸಿದ್ದಾರೆ, ಮುಂದೆನೂ ಟೀಕಿಸುತ್ತಾರೆ, ಅವರ ಮೇಲೆ ದಾಳಿ ಮಾಡುತ್ತಾ ಕೂರಲು ಆಗುತ್ತದೆಯಾ? ಇನ್ನು ನೀವು ಐಟಿಯನ್ನು, ಇಡಿಯನ್ನು ಕೇಂದ್ರ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ ಎನ್ನುತ್ತೀರಿ, ಇದೇ ಜನಾರ್ಧನ ರೆಡ್ಡಿಯವರ ಮೇಲೆ ದಾಳಿ ಆಗಿತ್ತಲ್ಲ, ಆಗ ಯುಪಿಎ ಹಾಗೆ ಮಾಡಿತ್ತಾ? ಯುಪಿಎ ಮಾಡಿದರೆ ನ್ಯಾಯಕ್ಕೆ ಸಂದ ಜಯ, ಅದೇ ಎನ್ ಡಿಎ ಮಾಡಿದರೆ ಅಧಿಕಾರ ದುರ್ಬಳಕೆ ಹೇಗೆ ಆಗುತ್ತೆ ಪೂಜಾರಿಯವರೇ.
ಇನ್ನು ನೀವು ಅಧಿಕಾರದಲ್ಲಿದ್ದಾಗ ಅಧಿಕಾರ ದುರ್ಬಳಕೆ ಮಾಡಿ ರೇಡ್ ಯಾವತ್ತೂ ಮಾಡಿಸಿಲ್ಲ ಎನ್ನುತ್ತೀರಿ. ಇದರಲ್ಲಿ ಎರಡು ಅರ್ಥ ಇದೆ. ಒಂದೊ ನೀವು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದವರ ಬಗ್ಗೆ ಗೊತ್ತಿದ್ದರೂ ಸುಮ್ಮನೆ ಕೂತು ನಿಮಗೆ ಕೊಟ್ಟ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ಲಕ್ಷಿಸಿದ್ದಿರಿ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ನೀವು ತಪ್ಪು ಮಾಡಿದವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದರೆ ಅದು ಒಳ್ಳೆಯತನ ಅಲ್ಲ ಪೂಜಾರಿಯವರೇ. ಅದು ಜಾಣ ಕುರುಡಾಗುತ್ತದೆ.
ಇನ್ನು ಕೇಂದ್ರಿಯ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಇದಕ್ಕೆ ಬಳಸಲಾಗಿದೆ ಎಂದು ಆರೋಪ ಮಾಡಿದ್ದಿರಿ. ನಿಮಗೆ ಗೊತ್ತಿರಬಹುದು, ಐಟಿ ಅಧಿಕಾರಿಗಳು ಹೊಕ್ಕಿದ್ದು ಇಲಿಯ ಬಿಲ ಅಲ್ಲ, ದೇಶದ ಎರಡನೇ ಶ್ರೀಮಂತ ಸಚಿವರ ಮನೆ, ಕಚೇರಿಗೆ. ಅದರೊಂದಿಗೆ ರಾಜ್ಯ ಕಂಡ ಪ್ರಭಾವಿ ರಾಜಕಾರಣಿಯ ಅಭೇದ್ಯ ಕೋಟೆಯ ಒಳಗೆ. ಒಳಗೆ ಶೋಧ ನಡೆಯುತ್ತಿದ್ದರೆ ಹೊರಗೆ ನಿಮ್ಮವರು ಹೇಗೆ ಪ್ರತಿಭಟನೆ ಮಾಡುತ್ತಿದ್ದರು ಎಂದು ನಿಮಗೆ ಗೊತ್ತಿರಬಹುದು. ರಾಜ್ಯದ ಪೊಲೀಸರಿಗೆ ಒಂದು ಸಣ್ಣ ಸುಳಿವು ಸಿಗದಂತೆ ಈ ಶೋಧದ ಕೊನೆಯ ಘಳಿಗೆಯ ತನಕ ರಹಸ್ಯ ಕಾಪಾಡಿಕೊಂಡು ಬಂದಿರುವುದರ ಹಿಂದೆ ಐಟಿ ಅಧಿಕಾರಿಗಳ ಉದ್ದೇಶ ಏನಾದರೂ ಇರಬಹುದು. ಪೂಜಾರಿಯವರೇ, ನಿಮಗೆ ಸುದ್ದಿಗೋಷ್ಟಿ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯ ಎರಡೂ ಇದೆ. ಆದರೆ ಈ ಸುದ್ದಿಗೋಷ್ಟಿಯನ್ನು ನೀವು ಅವಸರದಲ್ಲಿ ಮಾಡಿ ಎನು ಸಾಧಿಸಿದಂತೆ ಆಯಿತು ಎನ್ನುವುದು ಸದ್ಯದ ಪ್ರಶ್ನೆ.
Leave A Reply