ಹೆಣ್ಣುಮಕ್ಕಳನ್ನು ಭರತನಾಟ್ಯ ತರಗತಿಗೆ ಕಳಿಸುವಷ್ಟೇ ಆಸಕ್ತಿ ಕರಾಟೆ ಕ್ಲಾಸಿಗೂ ಇರಲಿ!!
ಆವತ್ತು ಯಾವಾಗ ಪ್ರಿಯಾಂಕಾ ರೆಡ್ಡಿ ಹಾಗೂ ಉನ್ನಾವೋ ಸಂತ್ರಸ್ತೆಯ ಅತ್ಯಾಚಾರ ಮತ್ತು ಕೊಲೆಯಾದಾಗ ಮೊದಲಿಗೆ ಕೇಳಿ ಬಂದ ಮಾತು ಇನ್ನು ಇಂತಹ ಎಷ್ಟು ಅಮಾಯಾಕ ಜೀವಗಳು ಕಾಮುಕರ ಕೆಟ್ಟ ದೃಷ್ಟಿಗೆ ಬಲಿಯಾಗಬೇಕು ಎನ್ನುವುದು. ಪ್ರತಿ ಬಾರಿ ಬೇರೆ ಬೇರೆ ಅತ್ಯಾಚಾರಗಳು ಮಾಧ್ಯಮಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದಾಗ ಜನ ಈ ಪ್ರಶ್ನೆ ಕೇಳುತ್ತಾರೆ. ಸಂಸತ್ತಿನಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರದ ಮೇಲೆ ಒತ್ತಡ ಬೀಳುತ್ತದೆ. ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ನಿರಂತರ ಚರ್ಚೆ ಮಾಡುತ್ತವೆ. ಅದರಿಂದ ಒಂದಿಷ್ಟು ಸಂಚಲನ ಮೂಡುವುದು ಸುಳ್ಳಲ್ಲ. ಹಾಗೇ ಕೇಂದ್ರ ಸರಕಾರ ಕೂಡ ಕಳೆದ ಅವಧಿಯಲ್ಲಿ ಒಂದು ಹೊಸ ಕಾನೂನನ್ನು ಜಾರಿಗೆ ತಂದಿತ್ತು. ಅದರಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಆರೋಪಿಗೆ ಪೊಸ್ಕೋ ಕಾನೂನಿನ ಮೂಲಕ ಜಾಮೀನಿಲ್ಲ ಮತ್ತು ಗರಿಷ್ಟ ಶಿಕ್ಷೆ ನೇಣುಗಂಬಕ್ಕೆ ಏರಿಸುವುದೇ ಆಗಿದೆ. ಪೋಕ್ಸೋ ಕೇಸುಗಳನ್ನು ಆರು ತಿಂಗಳಲ್ಲಿ ಮುಗಿಸಿ ಎಂದು ಎಲ್ಲಾ ರಾಜ್ಯಗಳ ಕೋರ್ಟ್ ನ್ಯಾಯಾಧೀಶರಿಗೆ ಕೇಂದ್ರ ಕಾನೂನು ಖಾತೆ ಸಚಿವ ರವಿಶಂಕರ್ ಪ್ರಸಾದ್ ಮನವಿ ಮಾಡಿದ್ದಾರೆ. ಅಲ್ಲದೆ ಇಂಥ ಪ್ರಕರಣಗಳ ವಿಚಾರಣೆಗಾಗಿ ಈಗಾಗಲೇ ದೇಶಾದ್ಯಂತ 700 ತ್ವರಿತ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಳ್ಲಿ 1023 ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಹಾಗಂತ ಇಂತಹ ಕಾನೂನುಗಳನ್ನು ತರುವುದರಿಂದ ಅಪರಾಧಗಳು ಕಡಿಮೆಯಾಗುತ್ತಾ ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ.
Leave A Reply