ಮಂಗಳೂರು ಇನ್ನು ರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತೆ ಮಿಂಚುತ್ತದೆ, ನೋಡ್ತಾ ಇರಿ!!

ಮಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಇಬ್ಬರು ಅನಾವಶ್ಯಕವಾಗಿ ತಮ್ಮ ಪ್ರಾಣ ಕಳೆದುಕೊಂಡರು. ಅವರನ್ನು ಪ್ರತಿಭಟನೆಗೆ ಇಳಿಸಿದವರಿಗೆ ಯಾವ ನಷ್ಟವೂ ಆಗಲಿಲ್ಲ. ಸತ್ತವರ್ಯಾರು ಎಂದು ಕೂಡ ಪ್ರತಿಭಟನೆಗೆ ಕರೆ ಕೊಟ್ಟವರಿಗೆ ಗೊತ್ತಿರಲಿಕ್ಕಿಲ್ಲ. ಪ್ರತಿಭಟನೆಗೆ ಜನರನ್ನು ಸೇರಿಸಲು ಯಾರಿಗಾದರೂ ಒಬ್ಬರಿಗೆ ಗುತ್ತಿಗೆ ಕೊಡಲಾಗಿರುತ್ತದೆ. ಅವನು ಒಂದಿಷ್ಟು ಜನರಿಗೆ ಹೇಳಿರುತ್ತಾನೆ. ಅವರು ಮತ್ತಷ್ಟು ಯುವಕರನ್ನು ಕರೆದುಕೊಂಡು ಬಂದಿರುತ್ತಾರೆ. ನಾಲ್ಕು ಘೋಷಣೆಗಳನ್ನು ಕೂಗುವುದು. ಪೊಲೀಸರು ಹೆಚ್ಚೆಂದರೆ ಲಾಠಿಚಾರ್ಜ್ ಮಾಡುತ್ತಾರೆ. ನಾವು ಕಲ್ಲುಗಳನ್ನು ಬಿಸಾಡೋಣ. ಅಲ್ಲಿಗೆ ಮುಗಿಯುತ್ತದೆ. ಮನೆಗೆ ಬಂದು ಬಿಡುವುದು ಎಂದು ಹೇಳಲಾಗಿರುತ್ತದೆ. ಆದರೆ ಅದು ಅಷ್ಟಕ್ಕೆ ನಿಲ್ಲದೆ ಗಲಭೆ ಹೆಚ್ಚಾಗಿ ಏನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು ಎಂದು ಇವರು ಕೇಳಿರುವುದಿಲ್ಲ. ಅವರಿಗೆ ಕೂಡ ಗೊತ್ತಿರುವುದಿಲ್ಲ. ಆದರೆ ಗ್ರಹಚಾರ ಕೆಟ್ಟು ಪೊಲೀಸರು ಫೈರಿಂಗ್ ಮಾಡಿದರೆ ಅಕಸ್ಮಾತ್ ಆ ಗುಂಡು ನಿನಗೆ ಬಿದ್ದರೆ ನಿನ್ನ ಮನೆಯವರ ಗತಿ ಏನಾಗುತ್ತದೆ ಎಂದು ಯಾರೂ ಪ್ರತಿಭಟನೆಗೆ ಹೊರಟವನಿಗೆ ಬುದ್ಧಿಮಾತು ಹೇಳಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಭಟನೆಗೆ ಹೊರಟವನಿಗೆ “ಎಲ್ಲಿಗೆ ಹೊರಟಿದ್ದಿಯಾ” ಎಂದು ಯಾರಾದರೂ ದಾರಿಯಲ್ಲಿ ಕೇಳಿದರೆ ಇಲ್ಲಿಯೇ ಡಿಸಿ ಆಫೀಸ್ ಬಳಿ ಎಂದು ಹೇಳಿರುತ್ತಾನೆ ವಿನ ಏನು ಪ್ರತಿಭಟನೆ ಎಂದು ಕೇಳಿದರೆ ಅದೇ ಮೋದಿ ಏನೋ ಪೌರತ್ವ ಅಂತ ತರುತ್ತಿದ್ದಾರಂತಲ್ಲ. ಅದರ ವಿರುದ್ಧ ಎಂದು ಹೇಳಿ ಬೈಕ್ ಹತ್ತಿ ಹೊರಟಿರುತ್ತಾನೆ. ಹಾಗೆ ಹೊರಟವನಿಗೆ ಪ್ರತಿಭಟನೆಯ ಕಾರಣ ಏನಂತ ಗೊತ್ತಿಲ್ಲವೋ ಹಾಗೆ ಪ್ರತಿಭಟನೆಯ ಗುಂಪಿನಲ್ಲಿ ನಮ್ಮ ಪಕ್ಕದ ರಾಜ್ಯದ ವಿಷ್ನ ಸಂತೋಷಿಗಳು ಸೇರಿ ಪ್ರತಿಭಟನೆಯನ್ನು ದೊಂಬಿಗೆ ಪರಿವರ್ತಿಸಲು ಸಂಚು ಹೂಡಿದ್ದಾರೆ ಎಂದು ಕೂಡ ಗೊತ್ತಿರುವುದಿಲ್ಲ. ಹನ್ನೆರಡು ಗಂಟೆಗೆ ಹೋಗುವುದು ಮೂರು ಗಂಟೆಗೆ ಬರುವುದು ಎಂದೇ ಅಂದುಕೊಂಡು ಪ್ರತಿಭಟನೆಗೆ ಹೊರಟಿರುತ್ತಾನೆ. ಹಾಗೆ ಹೋದವ ಹೆಣವಾಗಿ ಮನೆಗೆ ಬಂದರೆ ಏನಾಗುತ್ತದೆ?
ನಿಜಕ್ಕೂ ಪೊಲೀಸರು ಫೈರಿಂಗ್ ಮಾಡಬೇಕಿತ್ತಾ, ಬೇಡವಿತ್ತಾ ಎನ್ನುವುದು ಬೇರೆ ವಿಷಯ. ಆ ಬಗ್ಗೆ ಇಲಾಖಾವಾರು ತನಿಖೆ ನಡೆಯುತ್ತೆ. ಅದಕ್ಕಿಂತ ಮೊದಲು ಪ್ರತಿಭಟನೆಗೆ ಅನುಮತಿ ಇತ್ತಾ ಎನ್ನುವುದು ಮುಖ್ಯ ವಿಷಯ. ಒಂದು ವೇಳೆ ಪ್ರತಿಭಟನೆಗೆ ಅವಕಾಶ ಇಲ್ಲದಿದ್ದರೆ ಪೊಲೀಸರು ಹೋಗಿ ಎಂದ ಕೂಡಲೇ ಹಿಂತಿರುಗಿ ಹೋಗಬೇಕಿತ್ತು. ಹೋಗಲೇಬಾರದು ಎಂದು ಧೃಢ ನಿರ್ಧಾರ ಮಾಡಿ ಮೊನ್ನೆ ಬಲ್ಮಠದ ಬಳಿ ನಮ್ಮ ಮೇಲೆ ಆದ ಲಾಠಿಚಾರ್ಜ್ ಗೆ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎಂದುಕೊಂಡಿದ್ದರೆ ಏನು ಮಾಡುವುದು. ನಾವು ಪ್ರತಿಭಟನೆ ಮಾಡುತ್ತಾ ಇದ್ರೆ ನೀವು ಬೇರೆ ಬೇರೆ ಕಟ್ಟಡಗಳ ಮೇಲಿನಿಂದ ಪೊಲೀಸರ ಮೇಲೆ ಕಲ್ಲು ಬಿಸಾಡಿ ಎಂದು ಮೊದಲೇ ಪ್ಲಾನ್ ಮಾಡಲಾಗಿತ್ತಾ? ಇತ್ತ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಬೇಕು, ಅತ್ತ ಕಟ್ಟಡಗಳಿಂದ ಮೇಲಿನಿಂದ ಬೀಳುತ್ತಿದ್ದ ಕಲ್ಲುಗಳಿಂದ ತಪ್ಪಿಸಿಕೊಳ್ಳಬೇಕು ಎನ್ನುವಾಗ ಗಾಯಗೊಂಡಿದ್ದಾರೆ. ಕೊನೆಗೆ ಫೈರಿಂಗ್ ಅನಿವಾರ್ಯವಾಯಿತಾ? ಈ ಬಗ್ಗೆ ತನಿಖೆ ನಡೆಯುತ್ತದೆ. ಅದು ಬೇರೆ ವಿಷಯ. ಆದರೆ ಸತ್ತ ಇಬ್ಬರು ಮನೆಯವರಿಗೆ ಮಾತ್ರ ಹೋಗಿಯೇಬಿಟ್ಟರಲ್ಲ. ಇನ್ನು ಇಂತಹ ಘಟನೆಗಳಾದಾಗ ಒಂದು ವಾರ ಅವರ ಮನೆಗೆ ಅವರ ಪಕ್ಷದ ನಾಯಕರು ಬಂದು ಕಣ್ಣೀರು ಸುರಿಸಿದ ಹಾಗೆ ನಾಟಕ ಮಾಡಿ ಏನಾದರೂ ಕೊಟ್ಟರೆ ಅಲ್ಲಿಗೆ ಮುಗಿಯಿತು. ನಂತರ ಆ ಮನೆಯವರನ್ನು ಕೇಳುವವರಿಲ್ಲ. ಸರಕಾರ ಒಂದು ವೇಳೆ ಒತ್ತಡ ಬಂದು ಏನಾದರೂ ಘೋಷಣೆ ಮಾಡಿ ಅದು ಕೈಗೆ ಸಿಕ್ಕಿದರೂ ಸಿಗದಿದ್ದರೂ ಆ ಮನೆ ಮಗ ಮತ್ತೆ ವಾಪಾಸು ಬರುತ್ತಾನಾ? ಹಾಗಂತ ಪ್ರತಿಭಟನೆಗೆ ಜನರೇ ಹೋಗಬಾರದು ಎಂದಲ್ಲ. ಪ್ರತಿಭಟನೆಯ ವಿಷಯದ ಬಗ್ಗೆ ಅರಿತುಕೊಂಡು ಅದನ್ನು ಸಾತ್ವಿಕ ರೀತಿಯಲ್ಲಿ ಪರಿಹಾರ ಕಾಣಲು ಹೊರಡಬೇಕು. ಇಲ್ಲದಿದ್ದರೆ ಯಾರೋ ಉರಿಸಿದ ಬೆಂಕಿಗೆ ಬಂದು ಬೀಳುವ ಕಥೆ ಆಗುತ್ತದೆ, ಕಟ್ಟಕಡೆಯದಾಗಿ ಉಳಿಯುವ ಪ್ರಶ್ನೆ, ಪ್ರತಿಭಟನೆಗೆ ಬಂದವರಿಗೆ ಸಿಎಎ ಎಂದರೆ ಏನಂತ ಗೊತ್ತಿತ್ತಾ !!