ಪೊಲೀಸರ ಮೂರು ಕ್ರಮಗಳಿಂದ ಮಂಗಳೂರು ಸೇಫ್!!
ಬಹುಶ: ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಒಂದು ಗಲಭೆಯನ್ನು ಹೇಗೆ ಹತ್ತಿಕ್ಕಬಹುದು ಎನ್ನುವುದನ್ನು ಸರಿಯಾಗಿ ಪರಿಶೀಲಿಸಿಯೇ ಉತ್ತಮ ಹೆಜ್ಜೆ ಇಟ್ಟಿದೆ. ಅದೇನೆಂದರೆ ಗಲಾಟೆ ಆಗಬೇಕಾದರೆ ಸಾಮಾನ್ಯವಾಗಿ ಅದಕ್ಕೆ ಮುಖ್ಯ ಕಾರಣ ಪರಸ್ಪರ ಸಂವಹನ ಮಾಡುತ್ತಾ ಒಂದೇ ಉದ್ದೇಶದ ವ್ಯಕ್ತಿಗಳು ಒಂದೇ ಕಡೆ ಸೇರುವುದು. ಒಂದು ಗಲಭೆ ಆಗುವಾಗ ಅಲ್ಲಿ ಕನಿಷ್ಟ ಎಪ್ಪತೈದು, ಎಂಭತ್ತು ಜನ ಇದ್ದರೆ ಗಲಭೆ ದೊಡ್ಡದು ಆಗುತ್ತದೆ. ಅಷ್ಟು ಜನರನ್ನು ಒಂದು ಕಡೆ ಬರಲು ಹೇಳಿ ನಂತರ ಅವರು ಅಲ್ಲಿ ಬರುವ ಹಾಗೆ ಮಾಡಬೇಕಾದರೆ ನೀವು ಕನಿಷ್ಟ ಇಂತಹ ಪ್ರತಿಭಟನೆ ಇದೆ, ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತದೆ, ಬನ್ನಿ, ಪ್ರತಿಭಟಿಸೋಣ ಅಂತ ನೂರು ಜನ ಇರುವ ಕನಿಷ್ಟ ಏಳೆಂಟು ಗುಂಪಿಗೆ ಸಂದೇಶ ಹಾಕಬೇಕಾಗುತ್ತದೆ. ಅಷ್ಟು ಗುಂಪಿಗೆ ಮೇಸೆಜ್ ಕಳುಹಿಸಿದರೆ ಆಗ ಎಪ್ಪತ್ತು, ಎಂಭತ್ತು ಜನ ಪ್ರತಿಭಟನೆಗೆ ಬರಬಹುದು. ಒಂದೆಡೆ ಸೇರಬಹುದು. ಘೋಷಣೆ ಕೂಗಬಹುದು. ಇಷ್ಟು ಮಾಡಬೇಕಾದರೆ ನಿಮಗೆ ಈಗಿನ ಕಾಲದಲ್ಲಿ ವಾಟ್ಸಪ್ ಅತ್ಯಗತ್ಯ. ಅದರಿಂದಲೇ ಪ್ರತಿಭಟನೆ ಸುಲಭಸಾಧ್ಯವಾಗುವುದು. ವಾಟ್ಸಪ್ ಕೆಲಸ ಮಾಡಬೇಕಾದರೆ ಅದಕ್ಕೆ ಇಂಟರನೆಟ್ ಬೇಕಾಗುತ್ತದೆ. ಅದೇ ಇಲ್ಲದಿದ್ದರೆ ಪ್ರತಿಭಟನೆಗೆ ಜನ ಹೇಗೆ ಸೇರುತ್ತಾರೆ.
ಇದನ್ನೆಲ್ಲಾ ಗಮನಿಸಿ ಮಂಗಳೂರು ಪೊಲೀಸ್ ಕಮೀಷನರ್ ಎರಡು ದಿನ ಇಂಟರ್ ನೆಟ್ ಕಡಿತಗೊಳಿಸಲು ಕ್ರಮ ಕೈಗೊಂಡರು. ಅಲ್ಲಿಗೆ ಅರ್ಧ ಗಲಾಟೆ ಮಂಗಳೂರಿನಲ್ಲಿ ನಿಂತು ಹೋಗಿತ್ತು. ಅದರ ನಂತರ ಗಲಭೆ ಆಗುವುದು ರಾಜಕೀಯ ನಾಯಕರ ಹೇಳಿಕೆಗಳು. ಇಲ್ಲಿ ಕೂಡ ಪೊಲೀಸ್ ಇಲಾಖೆ ಜಾಣ್ಮೆ ವಹಿಸಿಬಿಟ್ಟಿತ್ತು. ಮೊದಲನೇಯದಾಗಿ ಯಾರೆಲ್ಲ ಹೇಳಿಕೆ ಕೊಡುವ ಸಾಧ್ಯತೆ ಇದೆ ಎಂದು ನೋಡಲಾಯಿತು. ಮೊದಲನೇಯದಾಗಿ ಯಾರು ಉಗ್ರ ಹೇಳಿಕೆ ಕೊಡುತ್ತಾರೋ ಅವರಿಂದಲೇ ಅರ್ಧ ಗಲಭೆ ಜಾಸ್ತಿಯಾಗುವುದು. ಅದಕ್ಕೆ ಸರಿಯಾಗಿ ಬೆಂಗಳೂರಿನಿಂದ ಒಂದಿಷ್ಟು ನಾಯಕರು ಮಂಗಳೂರಿಗೆ ಹೊರಟು ಬಂದು ಇಲ್ಲಿ ಮೊಸಳೆ ಕಣ್ಣೀರು ಸುರಿಸಿ ಮಾಧ್ಯಮಗಳೊಂದಿಗೆ ಮಾತನಾಡಿ ಬೆಂಕಿಗೆ ತುಪ್ಪ ಸುರಿಯುವ ಯೋಜನೆಯಲ್ಲಿದ್ದರು. ಅದನ್ನು ಕೂಡ ಪೊಲೀಸ್ ಅಧಿಕಾರಿಗಳು ಮೊಳಕೆಯಲ್ಲಿಯೇ ಚಿವುಟಿಬಿಟ್ಟಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಂಗ್ರೆಸ್ ನಾಯಕರನ್ನು ಅಲ್ಲಿಯೇ ಕುಳ್ಳಿರಿಸಿ ಹಾಗೆ ವಾಪಾಸ್ ಕಳುಹಿಸಿಬಿಟ್ಟಿದ್ದಾರೆ. ಅಲ್ಲಿಗೆ ಹೇಳಿಕೆಗಳಿಂದ ಆಗಬಹುದಾದ ದುರಂತವನ್ನು ತಪ್ಪಿಸಿಬಿಟ್ಟಿದ್ದಾರೆ. ಬೆಳಿಗ್ಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ಮಾಡಿ ಪೊಲೀಸರ ಮೇಲೆ, ರಾಜ್ಯ ಸರಕಾರದ ಮೇಲೆ ಆರೋಪ ಮಾಡಿದರಾದರೂ ಅದು ಸಾಂಕೇತಿಕವಾಗಿ ಇರುತ್ತದೆ ಎನ್ನುವುದು ಪೊಲೀಸರಿಗೆ ಗೊತ್ತು. ಯಾಕೆಂದರೆ ಮಂಗಳೂರಿನಲ್ಲಿ ಯಾರು ಕೂಡ ಬೆಂಕಿಯ ಹೇಳಿಕೆ ಕೊಟ್ಟರೆ ಇಲ್ಲಿನ ಪ್ರಜ್ಞಾವಂತ ಜನ ಅದನ್ನು ಗಮನಿಸುತ್ತಾರೆ ವಿನ: ಉಗ್ರ ಹೇಳಿಕೆಗೆ ಯಾವುದೇ ಸೊಪ್ಪು ಹಾಕುವುದಿಲ್ಲ.
ಹೀಗಾಗಿ ಮಂಗಳೂರಿನಲ್ಲಿ ಆಗಬಹುದಾದ ಇನ್ನು ದೊಡ್ಡ ಅನಾಹುತವನ್ನು ಪೊಲೀಸರು ಯಶಸ್ವಿಯಾಗಿ ತಪ್ಪಿಸಿದ್ದಾರೆ. ಈ ಮೂಲಕ ಮಂಗಳೂರು ಸೇಫಾಗಿದೆ. ಇನ್ನು ಟಿಆರ್ ಪಿಗಾಗಿ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ತರಹೇವಾರಿ ಹೆಡ್ಡಿಂಗ್ ಕೊಟ್ಟು ಮಂಗಳೂರಿನ ಬಗ್ಗೆ ಹೊರಗಿನವರು ಹೆದರುವ ವಾತಾವರಣ ಸೃಷ್ಟಿ ಮಾಡಿಬಿಡುವುದನ್ನು ನಿಲ್ಲಿಸುವುದು ಒಳ್ಳೆಯದು. ಯಾಕೆಂದರೆ ಮಂಗಳೂರು ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪ್ರದೇಶ. ಇಲ್ಲಿ ಆರವತ್ತು ವಾರ್ಡ್ ಗಳ ಯಾವುದೋ ಒಂದೆರಡು ವಾರ್ಡ್ ನಲ್ಲಿ ಆಗಿರುವ ಗಲಾಟೆಯಿಂದ ಇಡೀ ಮಂಗಳೂರು ಗಲಭೆಗೆ ಒಳಗಾಗಿದೆ ಎಂದು ಬಿಂಬಿಸುವುದು ಎಷ್ಟು ಸರಿ ಎನ್ನುವುದು ಪ್ರಶ್ನೆ. ಇದರಿಂದ ಮಂಗಳೂರಿನ ಇಮೇಜ್ ಹಾಳಾಗುತ್ತದೆ ಎನ್ನುವ ನೋವು ಇಲ್ಲಿನವರಿಗೆ ಇದೆ. ಇನ್ನು ಗಲಾಟೆಯಲ್ಲಿ ತೊಡಗಿರುವ ಜನರಲ್ಲಿ ಅನೇಕರು ಪಕ್ಕದ ಕೇರಳದಿಂದ ಇಲ್ಲಿ ಗಲಾಟೆ ಮಾಡಲೆಂದೇ ಬಂದವರು ಎನ್ನುವ ಮಾಹಿತಿ ಇದೆ. ಇನ್ನು ಕೇರಳದಿಂದ ಮಂಗಳೂರಿಗೆ ಬಂದು ಇಲ್ಲಿ ಏನೋ ಆಗಬಾರದ್ದು ಆಗಿ ಹೋಗಿದೆ ಎಂದು ಬಿಂಬಿಸುತ್ತಿದ್ದ ಕೆಲವು ನಕಲಿ ಪತ್ರಕರ್ತರನ್ನು ಪೊಲೀಸ್ ಕಮೀಷನರ್ ಡಾ.ಹರ್ಷ ಹಿಂದಕ್ಕೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಸಕಾಲಿಕ ಕ್ರಮದಿಂದ ಆಗಲಿದ್ದ ಇನ್ನಷ್ಟು ಕಿರಿಕಿರಿ ತಪ್ಪಿದಂತೆ ಆಗಿದೆ!
Leave A Reply