ಕಬೀರನಿಗೆ ಕಾಂಗ್ರೆಸ್ ಹತ್ತು ಲಕ್ಷ ಕೊಟ್ಟಾಗ ವಿರೋಧಿಸಿದ ಇದೇ ಬಿಜೆಪಿ ಈಗ ಮಾಡುತ್ತಿರುವುದೇನು?

ಗೋಲಿಬಾರ್ ನಲ್ಲಿ ಮೃತರಾದ ಇಬ್ಬರಿಗೆ ಭಾರತೀಯ ಜನತಾ ಪಕ್ಷದ ರಾಜ್ಯ ಸರಕಾರ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈ ವಾಕ್ಯದ ವಿಶ್ಲೇಷಣೆಯನ್ನು ಮಾಡುವ ಮೊದಲು ಒಂದು ಫ್ಲಾಶ್ ಬ್ಯಾಕ್ ಗೆ ಹೋಗಿ ಬರೋಣ. ನಾವು ಒಂದು ವೇಳೆ ಫೈರಿಂಗ್ ಮಾಡದಿದ್ದರೆ ಉದ್ರಿಕ್ತ ಗುಂಪು ಪೊಲೀಸ್ ಠಾಣೆಯ ಒಳಗೆ ನುಗ್ಗಿ, ದಾಂಧಲೆ ಮಾಡುವ ಸಾಧ್ಯತೆ ಇತ್ತು. ಶಸ್ತ್ರಾಸ್ತಗಳು ಠಾಣೆಯಲ್ಲಿ ಸಂಗ್ರಹ ಇದ್ದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗಲಿತ್ತು. ಆದ್ದರಿಂದ ಅದನ್ನು ತಡೆಯಲು ನಾವು ಅನಿವಾರ್ಯವಾಗಿ ಫೈರಿಂಗ್ ಮಾಡಬೇಕಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆ ಬಗ್ಗೆ ತನಿಖೆ ನಡೆಯಲಿದೆ. ಆದರೆ ಅದಕ್ಕಿಂತ ಮೊದಲೇ ಕಾಂಗ್ರೆಸ್, ಜೆಡಿಎಸ್ ಪೊಲೀಸರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿವೆ. ಫೈರಿಂಗ್ ಮಾಡುವ ಅವಶ್ಯಕತೆ ಇರಲಿಲ್ಲ ಎನ್ನುವ ವಾದವನ್ನು ಮಂಡಿಸಿವೆ. ಇಲ್ಲಿ ಫೈರಿಂಗ್ ಬೇಕಿತ್ತಾ, ಬೇಡವಾಗಿತ್ತಾ ಎನ್ನುವುದು ಕೊನೆಯಲ್ಲಿ ಬರುತ್ತದೆ. ಅದಕ್ಕಿಂತ ಮೊದಲು ಸೆಕ್ಷನ್ 144 ಇದ್ದಾಗ ನೂರಾರು ಜನ ಗುಂಪು ಕೂಡಿ ಪ್ರತಿಭಟನೆಗೆ ಇಳಿದಿರಲ್ಲ, ಅದು ತಪ್ಪಲ್ಲವೇ? ಅದನ್ನು ಯಾಕೆ ಯಾವ ವಿಪಕ್ಷ ಮುಖಂಡರೂ ಮಾತನಾಡುವುದಿಲ್ಲ. ಸೆಕ್ಷನ್ 144 ಇದ್ದಾಗ ಪ್ರತಿಭಟನೆ ಬಿಡಿ, ಗುಂಪು ಗುಂಪಾಗಿ ಒಂದೇ ಉದ್ದೇಶ ಇಟ್ಟುಕೊಂಡು ಸೇರುವುದು ಕೂಡ ಕಾನೂನು ಪ್ರಕಾರ ತಪ್ಪು.
ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಜನ ದೊಡ್ಡ ಸಂಖ್ಯೆಯಲ್ಲಿ ಸೇರಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸರು ಹೋಗಿ ಎಂದರೂ ಕೇಳುವುದಿಲ್ಲ. ಯಾವಾಗ ಒಳ್ಳೆಯ ಮಾತಿಗೆ ಪ್ರತಿಭಟನಾಕಾರರು ಬಗ್ಗಲಿಲ್ಲವೋ ಪೊಲೀಸರು ಪ್ರತಿಭಟನೆಗೆ ನಿಂತವರ ಮೇಲೆ ಲಾಠಿ ಬೀಸಿದ್ದಾರೆ. ಆಗಲಾದರೂ ಹೋದರಾ? ಇಲ್ಲ. ಪೊಲೀಸರು ಲಾಠಿ ಬೀಸಿದರೆ ನಾವು ಕಲ್ಲು ಬಿಸಾಡೋಣ ಎಂದು ಮೊದಲೇ ಸಿದ್ಧತೆ ಮಾಡಿಕೊಂಡಿದ್ದರೋ ಎನ್ನುವಂತೆ ಕಲ್ಲು ಬಿಸಾಡಲು ಶುರು ಮಾಡಿದ್ದಾರೆ. ಕಾಶ್ಮೀರದ ಪ್ರಭಾವವೋ ಎನ್ನುವಂತೆ ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ಬಿಸಾಡಿದ್ದಾರೆ. ಮೊದಲಿಗೆ ಆಶ್ರುವಾಯು ಸಿಡಿಸಿದ ಪೊಲೀಸರು ಗುಂಪು ಅದಕ್ಕೂ ಬಗ್ಗದಿದ್ದಾಗ ಕೊನೆಗೆ ಫೈರಿಂಗ್ ಮಾಡಿದ್ದಾರೆ. ಅದರ ನಂತರ ಪ್ರತಿಭಟನೆ ನಿಂತಿದೆ. ಮರುದಿನ ಪ್ರತಿಭಟನೆ ಮಾಡುವುದು ಬಿಡಿ, ಮನೆಯ ಹೊರಗೆ ಬರಲು ಯಾರೂ ಸಿದ್ಧರಿರಲಿಲ್ಲ. ಈ ನಡುವೆ ಸುದ್ದಿಗೋಷ್ಟಿ ಮಾಡಿದ ಕಾಂಗ್ರೆಸ್ ಮುಖಂಡರು ಖಾಸಗಿ ಆಸ್ಪತ್ರೆಯೊಂದಕ್ಕೆ ನುಗ್ಗಿದ ಪೊಲೀಸರು ಅಲ್ಲಿ ಐಸಿಯು ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರತ್ತ ಕಲ್ಲು ಬಿಸಾಡಲು ಪ್ರತಿಭಟನಾಕಾರರು ಅಡಗಿ ಕುಳಿತದ್ದೇ ಒಂದು ಖಾಸಗಿ ಆಸ್ಪತ್ರೆಯೊಳಗೆ. ಅವರನ್ನು ಅಲ್ಲಿಂದ ಹೊರಗೆ ತರಲು ಪೊಲೀಸರು ಅಲ್ಲಿ ಪ್ರವೇಶ ಮಾಡಬೇಕಾಯಿತು. ಒಟ್ಟಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಪ್ರತಿಭಟನಾಕಾರರಲ್ಲಿ ಇಬ್ಬರು ಸತ್ತಿದ್ದಾರೆ. ಅವರಿಗೆ ಬಿಜೆಪಿ ಸರಕಾರ ತಲಾ ಹತ್ತು ಲಕ್ಷ ರೂಪಾಯಿ ನೀಡಿದೆ.
ಇಲ್ಲಿ ಬಿಜೆಪಿ ಸರಕಾರ ಅಲ್ಪಸಂಖ್ಯಾತರನ್ನು ಒಲೈಸಲು ಇಟ್ಟ ಹೆಜ್ಜೆ ಎಂದು ಬಿಜೆಪಿ ಕಾರ್ಯಕರ್ತರು ಮನಸ್ಸು ಗಟ್ಟಿ ಮಾಡಿ ಒಪ್ಪಿಕೊಳ್ಳಬೇಕು. ಯಾಕೆಂದರೆ ಇದೇ ಬಿಜೆಪಿ ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಕಬೀರ್ ಎನ್ನುವ ವ್ಯಕ್ತಿ ಅಕ್ರಮ ದನಸಾಗಾಟ ಮಾಡುವಾಗ ಪೊಲೀಸರ ಮೇಲೆ ಕಲ್ಲು ಬಿಸಾಡಲು ಹೋಗಿ ಆತ್ಮರಕ್ಷಣೆಗೆ ಪೊಲೀಸರು ಶೂಟೌಟ್ ಮಾಡಿದಾಗ ಮೃತಪಟ್ಟಿದ್ದ. ಆವತ್ತು ಕಾಂಗ್ರೆಸ್ ಸರಕಾರ ಕಬೀರನಿಗೆ ಹತ್ತು ಲಕ್ಷ ಪರಿಹಾರ ನೀಡಿತ್ತು. ಅದನ್ನು ಬಿಜೆಪಿ ವಿರೋಧಿಸಿತ್ತು. ಯಾಕೆ ಕೊಟ್ಟಿದ್ದೀರಿ ನಮ್ಮ ತೆರಿಗೆಯ ಹಣ ಒಬ್ಬ ದನಕಳ್ಳನಿಗೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಈಗ? ಮುಖ್ಯಮಂತ್ರಿ ಯಡಿಯೂರಪ್ಪನವರೇ, ನಿಮಗೆ ಬಹುಮತ ಇದೆಯಲ್ಲ, ಯಾರು ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡಿದ್ದಾರೆ, ನೋಡಿ ಅವರಿಂದಲೇ ಅದನ್ನು ವಸೂಲಿ ಮಾಡಿಕೊಳ್ಳಿ. ಇದೇನು ವಿಚಿತ್ರವಲ್ಲ. ನಿಮ್ಮ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅದನ್ನೇ ಮಾಡುತ್ತಿದ್ದಾರೆ. ಬೆಂಕಿ ಕೊಟ್ಟವರಿಂದಲೇ ಆ ನಾಶವಾದ ವಸ್ತುಗಳ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಯಡಿಯೂರಪ್ಪನವರೇ, ಪೊಲೀಸರಿಗೆ ಫೈರಿಂಗ್ ಮಾಡಬೇಕಾದ ಪರಿಸ್ಥಿತಿ ಬಂತು ಎಂದರೆ ಅದಕ್ಕೆ ಅವರ ಬಳಿ ಕಾರಣಗಳಿರುತ್ತವೆ. ನೀವು ಸತ್ತವರಿಗೆ ಹತ್ತು ಲಕ್ಷ ಕೊಟ್ಟರೆ ಆಗ ಪೊಲೀಸರು ಮಾಡಿದ್ದು ಅಪರಾಧ ಎಂದು ಒಪ್ಪಿಕೊಂಡಂತೆ ಆಗುತ್ತದೆ. ಇದರಿಂದ ಪ್ರತಿಭಟನಾಕಾರರಿಗೆ ಇನ್ನಷ್ಟು ಧೈರ್ಯ ಬರುತ್ತದೆ. ಅದರಿಂದ ಪೊಲೀಸರ ಮೇಲೆ ಮಾನಸಿಕ ಒತ್ತಡ ಬಿದ್ದಂತೆ ಆಗುತ್ತದೆ. ಅವರು ಮುಂದಿನ ಬಾರಿ ಪ್ರತಿಭಟನೆ ಕೈ ಮೀರಿ ಹೋದರೂ, ತಮ್ಮ ಮೇಲೆ ನಿರಂತರ ಕಲ್ಲು ಬಿದ್ದರೂ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಇದರಿಂದ ಅಪಾಯ ಯಾರಿಗೆ? ಯಾಕೋ, ಯಡಿಯೂರಪ್ಪನವರು ನಾವು ಎಲ್ಲ ಪಕ್ಷದವರು ಒಂದೇ ಲೆಕ್ಕ ಎಂದು ಹೇಳಿಕೊಂಡ ಹಾಗೆ ಆಗಿದೆ!
- Advertisement -
Trending Now
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath
September 15, 2023
ಅಂದು ಸಿದ್ದು, ಇಂದು ಹರಿ!
Hanumantha Kamath
September 15, 2023
Leave A Reply