ಕೊನೆಗೂ ಕರ್ನಾಟಕದ ಘನವೆತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜ್ಞಾನೋದಯವಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ದೊಂಬಿ ಎಬ್ಬಿಸುತ್ತಿದ್ದ ಪುಂಡರ ಗುಂಪನ್ನು ನಿಯಂತ್ರಿಸಲು ಪೊಲೀಸರು ಮಾಡಿದ ಗೋಲಿಬಾರ್ ನಲ್ಲಿ ಇಬ್ಬರು ಸತ್ತಿದ್ದರು. ಮಂಗಳೂರಿಗೆ ಬಂದ ಸಿಎಂ ಬಿಎಸ್ ವೈ ತಲಾ ಹತ್ತು ಲಕ್ಷ ಪರಿಹಾರ ಘೋಷಿಸಿದ್ದರು. ಅದಕ್ಕಿಂತ ಮೊದಲು ಬಂದ ಕುಮಾರಸ್ವಾಮಿ ಪಕ್ಷದ ವತಿಯಿಂದ 5 ಲಕ್ಷ ಕೊಟ್ಟು ಹೋಗಿದ್ದರು. ಅದರ ನಂತರ ಬಂದ ಕಾಂಗ್ರೆಸ್ ಜೆಡಿಎಸ್ ಗಿಂತ ಒಂದು ಕೈ ಹೆಚ್ಚು ತೋರಿಸಲು 7.5 ಲಕ್ಷ ಕೊಟ್ಟಿದ್ದರು. ಅದರ ನಂತರ ಯಡಿಯೂರಪ್ಪನವರು ಕೊಡಲಿದ್ದ (ಕಿಸೆಯಿಂದ ಅಲ್ಲ) ಹತ್ತು ಲಕ್ಷ ರೂಪಾಯಿಗಳನ್ನು ಸೇರಿಸಿದರೆ 22.5 ಲಕ್ಷ ಆಗುತ್ತಿತ್ತು. ಇನ್ನು ಬೇರೆ ಬೇರೆ ದೇಶಗಳಿಂದ ಸಹಾಯ ಹರಿದು ಬಂದರೆ ಅದಿನ್ನೆಷ್ಟು ಆಗುತ್ತಿತ್ತೊ. ಆದರೆ ಪಕ್ಷಗಳು, ಉದ್ಯಮಿಗಳು ಎಲ್ಲಾ ಕೊಟ್ಟರೆ ಅದನ್ನು ತಡೆಯಲು ಆಗುವುದಿಲ್ಲ. ಯಾಕೆಂದರೆ ಅವರವರು ತಮ್ಮ ವೋಟ್ ಬ್ಯಾಂಕ್ ಅಥವಾ ವೀರಮರಣ ಅಪ್ಪಿದ್ದಾನೆ ಎಂದು ಅಂದುಕೊಂಡು ಕೊಟ್ಟರೆ ಅದು ಅವರ ವೈಯಕ್ತಿಕ ವಿಚಾರ. ಆದರೆ ಸರಕಾರ ಕೊಡುವಾಗ ಅದು ಜನರ ಹಣ.
ಯಡಿಯೂರಪ್ಪ ಈಗ ಮುಖ್ಯಮಂತ್ರಿಯಾಗಿರಬಹುದು. ಒಬ್ಬ ವ್ಯಕ್ತಿಗೆ ಪರಿಹಾರದ ರೂಪದಲ್ಲಿ ಸರಕಾರದ ಮೂಲಕ ಹಣ ನೀಡಲು ಅವರಿಗೆ ಸಾಂವಿಧಾನಿಕ ಹಕ್ಕು ಕೂಡ ಇರಬಹುದು. ಆದರೆ ಸರಕಾರದ ತಿಜೋರಿಯಲ್ಲಿರುವುದು ನಮ್ಮ ನಿಮ್ಮ ತೆರಿಗೆ ಹಣ. ಹಾಗಾದರೆ ಗೋಲಿಬಾರಿನಲ್ಲಿ ಮೃತಪಟ್ಟವರಿಗೆ ಸಹಾಯ ಮಾಡಬಾರದಾ ಎನ್ನುವ ಪ್ರಶ್ನೆ ನಿಮಲ್ಲಿ ಮೂಡಬಹುದು. ಸಹಾಯ ಮಾಡಬಹುದು, ಆದರೆ ಯಾರಿಗೆ? ಉದಾಹರಣೆಗೆ: ಅಕಸ್ಮಾತ್ ಆಗಿ ಒಂದು ಕಡೆ ದೊಂಬಿ ಶುರುವಾಗುತ್ತದೆ. ಪೊಲೀಸರು ಆ ಪ್ರದೇಶದ ಅಂಗಡಿ, ಮುಂಗಟ್ಟು ಮುಚ್ಚಲು ಹೇಳುತ್ತಾರೆ. ಆ ರಸ್ತೆಯಲ್ಲಿ ಬಸ್ ಸಂಚಾರ ನಿಲ್ಲಿಸಲಾಗುತ್ತದೆ. ನೀವು ನಿಮ್ಮ ಅಂಗಡಿ ಮುಚ್ಚಿ ಹೊರಗೆ ಬರುವಾಗ ಗೊತ್ತಾಗದೇ ನಿಮಗೆ ಗುಂಡು ತಗುಲಿ ನೀವು ಸಾವನ್ನು ಅಪ್ಪುತ್ತೀರಿ. ತನಿಖೆ ಮಾಡುವಾಗ ಸಿಸಿಟಿವಿ ಕ್ಯಾಮೆರಾಗಳಲ್ಲಿ ನೀವು ಅಂಗಡಿ ಮುಚ್ಚುವ ಸಮಯ ಮತ್ತು ನೀವು ಗುಂಡು ತಗುಲಿದ ಸಮಯ ಎಲ್ಲಾ ಪರಿಶೀಲಿಸಿ ನೀವು ದೊಂಬಿಯಲ್ಲಿ ಭಾಗವಹಿಸಿದವರಲ್ಲ ಎಂದು ಸಾಬೀತಾದರೆ ಆಗ ನಿಮಗೆ ಪರಿಹಾರ ಕೊಡಲಾಗುತ್ತದೆ ಮತ್ತು ಕೊಡಲೇಬೇಕು. ಆದರೆ ಒಬ್ಬ ವ್ಯಕ್ತಿ ಪೊಲೀಸರ ಮೇಲೆ ಕಲ್ಲು ಬಿಸಾಡುತ್ತಾ ಮುಂದೆ ಮುಂದೆ ಹೋಗುತ್ತಿರುವಾಗ ಗಲಭೆ ನಿಯಂತ್ರಿಸಲು ಅನಿವಾರ್ಯವಾಗಿ ಪೊಲೀಸರು ಗೋಲಿಬಾರ್ ಮಾಡಿದರೆ ಆಗ ಆತ ಸತ್ತರೆ ಆತ ಅಮಾಯಕ ಹೇಗಾಗುತ್ತಾನೆ? ಅವನು ಅಪರಾಧಿ ಆಗುತ್ತಾನೆ. ಅಪರಾಧ ಎಸಗುವವರಿಗೆ ಲಕ್ಷಗಟ್ಟಲೆ ಕೊಟ್ಟು ಪುರಸ್ಕರಿಸಲಾಗುತ್ತದೆಯಾ? ಇಲ್ಲಿ ಕೂಡ ಹಾಗೆ ಆಗಿದೆ. ವಿರೋಧ ಪಕ್ಷಗಳು ಹಣ ಕೊಡುವುದು ಸತ್ತವರ ಧರ್ಮಗಳನ್ನು ನೋಡಿ. ಆದರೆ ಸರಕಾರ ಹಣ ಕೊಡಬೇಕಾಗಿರುವುದು ಧರ್ಮದ ಮೇಲೆ ಅಲ್ಲ, ವಾಸ್ತವದ ಮೇಲೆ.
ಆದ್ದರಿಂದ ಇನ್ನು ಮುಂದೆ ಸರಕಾರಗಳು ಪರಿಹಾರ ಕೊಡುವಾಗ ಒಂದು ನಿಯಮ ಎಂದು ಮಾಡಬೇಕು. ಅದೇನೆಂದರೆ ಒಬ್ಬ ವ್ಯಕ್ತಿ ಸತ್ತ ತಕ್ಷಣ ಪರಿಹಾರ ಘೋಷಿಸುವ ಮೊದಲು ಸತ್ತ ಸಂದರ್ಭ ಮತ್ತು ಪರಿಸ್ಥಿತಿಯನ್ನು ನೋಡಬೇಕು. ಸಾಮಾನ್ಯವಾಗಿ ರೈತರು ಪ್ರತಿಭಟನೆ ಮಾಡುವಾಗ ಅದು ದೊಂಬಿಯಾಗಿ ಪರಿವರ್ತನೆ ಆಗುವುದಿಲ್ಲ. ಅದೇ ರೈತರ ಸಮೂಹದಿಂದ ಯಾರೋ ಕಿಡಿಗೇಡಿಗಳು ದೊಂಬಿ ಎಬ್ಬಿಸಿ ಒಬ್ಬ ರೈತ ಸತ್ತರೂ ಪರಿಹಾರ ಕೊಡಬೇಕು. ಯಾಕೆಂದರೆ ಅಲ್ಲಿ ಸತ್ತ ರೈತನ ಸಹಿತ ಎಲ್ಲಾ ರೈತರ ತಪ್ಪಿರುವುದಿಲ್ಲ. ಆದರೆ ಮಂಗಳೂರಿನಲ್ಲಿ ಪೊಲೀಸರ ಮೇಲೆ ಕಲ್ಲು ಬಿಸಾಡಲು ಬಂದಿರುವವರು, ಸಿಸಿಟಿವಿ ಕ್ಯಾಮೆರಾ ತಿರುಗಿಸಿದವರು, ರಸ್ತೆಗೆ ಕಂಬ ಅಡ್ಡ ಇಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರು, ಆಯುಧಗಳ ಅಂಗಡಿ ಲೂಟಲು ಹೊರಟವರು ಇವರಿಂದ ಸೃಷ್ಟಿಯಾದ ಗಲಭೆ ನಿಯಂತ್ರಿಸಲು ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಿ ಕೊನೆಗೆ ಅನಿವಾರ್ಯ ಕಾರಣಗಳಿಂದ ಗೋಲಿಬಾರ್ ಮಾಡಿದರೆ ಆಗ ಪೊಲೀಸರ ತಪ್ಪಾಗುವುದಿಲ್ಲ. ಸತ್ತವನದ್ದೇ ತಪ್ಪಾಗುತ್ತದೆ. ಆಗ ಪರಿಹಾರ ಕೊಡುವ ಪ್ರಶ್ನೆ ಬರುವುದಿಲ್ಲ. ಒಂದು ವೇಳೆ ತನಿಖೆ ಆಗಿ ಸತ್ತಿರುವ ಇಬ್ಬರು ಅಮಾಯಕರಾದರೆ ನಂತರ ಕೊಡಬಹುದು. ಆ ನಿಟ್ಟಿನಲ್ಲಿ ಯಡಿಯೂರಪ್ಪ ಸೂಕ್ತ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಪ್ರತ್ಯಕ್ಷ, ಪರೋಕ್ಷ ತೆರಿಗೆದಾರರ ಪರವಾಗಿ ಧನ್ಯವಾದ!!
Leave A Reply