ಪೊಲೀಸರಿಗೆ ಪ್ರೋತ್ಸಾಹಧನ ಕೊಡಲಾಗಿದೆ ಎನ್ನುವ ಹಸಿಸುಳ್ಳು ಮತ್ತು ಸಿಸಿಟಿವಿ ಕ್ಯಾಮೆರಾ!!
ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ.ಎಸ್ ಹರ್ಷ ಅವರು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅದೇನೆಂದರೆ ಮೊನ್ನೆ ಡಿಸೆಂಬರ್ 19 ರಂದು ಮತ್ತು ಅದರ ನಂತರ ನಡೆದ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಪೊಲೀಸ್ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ಕೊಡಲಾಗಿದೆ ಎನ್ನುವ ಸಂಗತಿ ಸಂಪೂರ್ಣ ಸುಳ್ಳು. ಅಂತಹ ಯಾವುದೇ ಸಂಗತಿ ನಡೆದಿಲ್ಲ. ಬಹುಶ: ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸುತ್ತಿರುವ ಸರಕಾರಿ ಅಧಿಕಾರಿಗಳಲ್ಲಿ ನಮ್ಮ ಪೊಲೀಸ್ ಅಧಿಕಾರಿ ಹರ್ಷ ಅವರನ್ನು ಅಭಿನಂದಿಸಲೇಬೇಕು.
ಯಾಕೆಂದರೆ ಯಾವುದೇ ತಪ್ಪು ಸಂದೇಶ ಹರಿದಾಡುತ್ತಿದ್ದರೆ ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿ ಅದು ನಿಜಾನಾ, ಸುಳ್ಳಾ ಎಂದು ಹೇಳದಿದ್ದರೆ ಜನ ಅದನ್ನೇ ನಂಬಿಬಿಡುವ ಸಾಧ್ಯತೆ ಇದೆ. ಈಗ ಕೆಲವು ದುಷ್ಕರ್ಮಿಗಳು ಕೂಡ ಮಾಡುವುದು ಅದನ್ನೇ. ಯಾವಾಗ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಅಮಾಯಕರಲ್ಲ ಎಂದು ಸಾಬೀತಾದರೆ ಪರಿಹಾರ ಇಲ್ಲ, ಅದಕ್ಕಾಗಿ ತನಿಖೆ ಆಗುವ ತನಕ ಪರಿಹಾರ ಘೋಷಣೆ ಇಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿದ ನಂತರ ಕೆಲವರು ವಿಭಿನ್ನ ರೀತಿಯ ನಂಜು ಕಾರುತ್ತಿದ್ದಾರೆ. ಅದೇನೆಂದರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ಕೊಡಲಾಗಿದೆ. ಅದಕ್ಕೆ ಸರಿಯಾಗಿ ಇಂತಿಂತಹ ಅಧಿಕಾರಿಗೆ ಮತ್ತು ಸಿಬ್ಬಂದಿಗಳಿಗೆ ಇಷ್ಟಿಷ್ಟು ಹಣ ಸಿಗುತ್ತದೆ ಎಂದು ಬರೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲಾಗಿದೆ. ಕೆಲವು ಹೆಸರುಗಳ ಮುಂದೆ 25 ಸಾವಿರ, ಹತ್ತು ಸಾವಿರ ಹೀಗೆ ಬರೆಯಲಾಗಿದೆ. ಅಷ್ಟೇ ಅಲ್ಲ ಪೊಲೀಸ್ ಇಲಾಖೆಯ ಒಂದು ಫೇಕ್ ಲೆಟರ್ ಹೆಡ್ ಮಾಡಿ ಅದರಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದು ನೂರಕ್ಕೆ ನೂರು ಮಂಗಳೂರಿನ ಮುಸ್ಲಿಮರನ್ನು ಕೆರಳಿಸುವ ಪ್ರಯತ್ನ ಆಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಎರಡನೇಯದಾಗಿ ಗಲಭೆಯಲ್ಲಿ ಅನೇಕ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿಯಾಗಿದೆ. ಕೆಲವು ಮನೆಗಳ ಹೊರಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳಿಗೆ ಡ್ಯಾಮೆಜ್ ಆಗಿದೆ. ಕೆಲವು ಅಂಗಡಿಗಳ ಬೋರ್ಡಿಗೆ ಮತ್ತು ಶಟರ್ ಗಳಿಗೆ, ಶೋಕೇಸ್ ಗಳಿಗೆ ಸಾಕಷ್ಟು ಹಾನಿಯಾಗಿದೆ. ಯಾರಿಗೆಲ್ಲ ಗಲಭೆಕೋರರ ದುಷ್ಟ ಕೃತ್ಯಗಳಿಂದ ನಷ್ಟವಾಗಿದೆಯೋ ಅವರೆಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ತಮಗೆ ಆದ ನಷ್ಟವನ್ನು ಭರಿಸಕೊಡಲು ಕ್ರಮ ತೆಗೆದುಕೊಳ್ಳಲು ಆಗ್ರಹಿಸಬೇಕು. ಯಾಕೆಂದರೆ ಅನೇಕ ಸಣ್ಣಪುಟ್ಟ ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಗೆ ಇನ್ಸೂರೆನ್ಸ್ ಇರುವುದಿಲ್ಲ ಮತ್ತು ಎಲ್ಲವುದಕ್ಕೆ ಅದು ಸಿಗುವುದಿಲ್ಲ. ಇನ್ನು ಕೆಲವು ಸ್ವತ್ತುಗಳು ನಾಶವಾದಾಗ ಅದರ ಸಂಪೂರ್ಣ ವೆಚ್ಚ ಗ್ರಾಹಕರದ್ದೇ ಆಗಿರುತ್ತದೆ. ಆದ್ದರಿಂದ ಸಂತ್ರಸ್ತರು ಈ ಬಗ್ಗೆ ದೂರು ದಾಖಲಿಸಿದರೆ ಮಾತ್ರ ಪೊಲೀಸರಿಗೂ ನಷ್ಟದ ಒಂದು ಅಂದಾಜು ಸಿಗುತ್ತದೆ.
ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಡಿದ ಹಾಗೆ ಗಲಭೆಕೋರರಿಂದಲೇ ಸ್ವತ್ತು ನಾಶವಾದದ್ದನ್ನು ಭರಿಸುವಂತಹ ಧೈರ್ಯ ನಮ್ಮ ಸರಕಾರ ತೋರಿಸುತ್ತದೆಯೋ ಇಲ್ವೋ, ಆದರೆ ಗಲಭೆಕೋರರು ಹಾಳು ಮಾಡಿದ ಸ್ವತ್ತುಗಳ ಪಟ್ಟಿ ಪೊಲೀಸರಿಗೆ ಸಿಕ್ಕರೆ ಅವರಿಗೆ ಕೂಡ ನೀವು ನೈತಿಕವಾಗಿ ಬೆಂಬಲ ನೀಡಿದಂತೆ ಆಗುತ್ತದೆ.
ಮೂರನೇಯದಾಗಿ ಮಂಗಳೂರು ಪೊಲೀಸರು ಉದ್ಯಮಿಗಳಿಗೆ ತಮ್ಮ ಅಂಗಡಿಯ ಹೊರಗೆ, ವ್ಯವಹಾರ ಸ್ಥಳಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದ್ದರು. ಅದರಲ್ಲಿ ಕೆಲವರು ಅಳವಡಿಸಿದ್ದರು. ಕೆಲವರು ಅಳವಡಿಸಿಲ್ಲ. ಅನೇಕರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ. ಕೆಲವು ನಿರ್ವಹಣೆ ಇಲ್ಲದೆ ವೇಸ್ಟ್ ಆಗಿವೆ. ಇದರಿಂದ ಏನಾಗಿದೆ ಎಂದರೆ ಮೊನ್ನೆಯ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದವರ, ಬೆಂಕಿ ಕೊಟ್ಟವರ ಎಲ್ಲಾ ವಿಡಿಯೊಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದರಿಂದ ಅನೇಕ ಬಾರಿ ನೈಜ ಆರೋಪಿಗಳು ಸೆರೆಯಾಗುವುದಿಲ್ಲ. ಉದಾಹರಣೆಗೆ ನೀವು ನಿಮ್ಮ ಅಂಗಡಿಯ ಮೇಲೆ ಕಲ್ಲು ಬಿಸಾಡಿದ್ದು ಎ ಎನ್ನುವ ವ್ಯಕ್ತಿ ಎಂದು ದೂರು ಕೊಡಲು ಹೋದರೆ ಸಾಕ್ಷಿ ಇಲ್ಲದೆ ಅದಕ್ಕೆ ಬೆಲೆ ಇರುವುದಿಲ್ಲ. ಅದೇ ಒಬ್ಬ ಬಿ ಯನ್ನು ಸಿಕ್ಕಿಸಿ ಹಾಕಲು ನೀವು ದೂರು ಕೊಟ್ಟರೂ ಪೊಲೀಸರು ಬಂದು ಸಿಸಿಟಿವಿ ದೃಶ್ಯ ನೋಡೋಣ ಎಂದರೆ ನಿಮ್ಮ ಬಳಿ ಇಲ್ಲದಿದ್ದರೆ ನೀವು ಸುಳ್ಳು ದೂರು ಕೊಡಲು ಬಂದಿರುವುದು ಎಂದೇ ಆಗುತ್ತದೆ. ಇದನ್ನೆಲ್ಲ ತಪ್ಪಿಸಲು ಸಿಸಿಟಿವಿ ಅಳವಡಿಸುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯಲಿ, ನೈಜ ದೊಂಬಿಗಾರ ತಪ್ಪು ಮಾಡಿಯೂ ತಪ್ಪಿಸಿಕೊಳ್ಳದಿರಲಿ ಎಂದು ಆಶಯ!
Leave A Reply