ಕೊನೆಗೂ ಪಾಲಿಕೆಯಲ್ಲಿ ಮೇಯರ್ ಪಟ್ಟಾಭಿಷೇಕಕ್ಕೆ ಬಿಜೆಪಿಗೆ ಸಮಯ ಸಿಕ್ಕಿದೆ!
ಹೊಸ ವರ್ಷಕ್ಕೆ ಮಂಗಳೂರು ಮಹಾನಗರ ಪಾಲಿಕೆಗೆ ಹೊಸ ಮೇಯರ್ ಬರುವುದು ಗ್ಯಾರಂಟಿಯಾಗಿದೆ. ಅಲ್ಲಿಗೆ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಎರಡನೇ ಇನ್ಸಿಂಗ್ಸ್ ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ಇನ್ನಿಂಗ್ಸ್ ನಲ್ಲಿ ತಮ್ಮ ಹಿರಿಯ ಆಟಗಾರನನ್ನು ಆರಂಭಿಕ ದಾಂಡಿಗನನ್ನಾಗಿ ಕಳುಹಿಸಲು ಪಕ್ಷ ತೀರ್ಮಾನ ಮಾಡಿ ಆಗಿದೆ. ಆದ್ದರಿಂದ ಯಾವುದೇ ಸಂಶಯ ಇಲ್ಲದೆ ಪಾಲಿಕೆಯ ಬಿಜೆಪಿ ಪಾಳಯದಲ್ಲಿರುವ ಅತ್ಯಂತ ಅನುಭವಿ ಪ್ರೇಮಾನಂದ ಶೆಟ್ಟಿ ಪ್ಯಾಡ್, ಗ್ಲೌಸ್ ಕಟ್ಟಿ ಕಣಕ್ಕೆ ಇಳಿಯಲು ತಯಾರಾಗಿದ್ದಾರೆ. ಆದರೆ ಮ್ಯಾಚ್ ಶುರುವಾಗಲು ವಿನಾಕಾರಣ ಒಂದೂವರೆ ತಿಂಗಳು ತಡವಾಯಿತಲ್ಲ ಎನ್ನುವುದೇ ಸದ್ಯದ ಪ್ರಶ್ನೆ.
ಸಾಮಾನ್ಯವಾಗಿ ಪಾಲಿಕೆ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿ ತಮಗೆ ಬೇಕಾದ ಹಾಗೆ ಮಾಡಿ ತಕ್ಷಣ ಮೇಯರ್ ಚುನಾವಣೆ ಘೋಷಿಸಿಬಿಡುತ್ತಾರೆ. ಒಂದು ವೇಳೆ ಇಲ್ಲಿ ಬಿಜೆಪಿ ಬಂದು ರಾಜ್ಯದಲ್ಲಿ ಕಾಂಗ್ರೆಸ್ ಇದ್ದಿದ್ದರೆ ಆಗ ಬಿಜೆಪಿಯನ್ನು ಸತಾಯಿಸಲು ಕಾಂಗ್ರೆಸ್ ಒಂದಿಷ್ಟು ಗೇಮ್ ಪ್ಲಾನ್ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಈಗ ಹಾಗಿಲ್ಲ. ಮೇಲಿನಿಂದ ಕೆಳಗಿನ ತನಕ ಬಿಜೆಪಿಯೇ ಇರುವುದರಿಂದ ಬಾವಿಯಿಂದ ನೀರು ಸೇದಿ ಹಂಡೆ ತುಂಬಿಸುವಷ್ಟು ಕಷ್ಟ ಆಗುವುದಿಲ್ಲ. ಆದರೂ ಒಂದೂವರೆ ತಿಂಗಳು ಹಿಡಿದಿದೆ. ಇನ್ನು ಗೆಜೆಟೆಡ್ ಬುಕ್ ನಲ್ಲಿ ಹೆಸರು ದಾಖಲಾಗಿ, ನೋಟಿಫಿಕೇಶ್ ಮುಗಿದು, ಪಾಲಿಕೆಯಿಂದ ಮೈಸೂರಿನಲ್ಲಿರುವ ಉಪವಿಭಾಗ ಅಧಿಕಾರಿಗೆ ಲಿಖಿತ ಮನವಿ ಹೋಗಿ ಅವರು ದಿನ ಫಿಕ್ಸ್ ಮಾಡಿ ಆ ದಿನ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ಬಿಜೆಪಿಗೆ ಸಿಕ್ಕಾಪಟ್ಟೆ ಬಹುಮತ
ಇರುವುದರಿಂದ ಚುನಾವಣೆ ಸಾಂಕೇತಿಕವಾಗಿ ನಡೆಯಲಿದೆ. ಬಹುಶ: ಅವಿರೋಧವಾಗಿ ನಡೆದರೆ ಖರ್ಚು ಕೂಡ ಉಳಿದಿತು.
ಪಾಲಿಕೆ ಆಡಳಿತ ಎನ್ನುವುದು ದೇಹದಲ್ಲಿ ಹೃದಯ ಇದ್ದ ಹಾಗೆ. ಅದು ಸರಿಯಾಗಿ ಕೆಲಸ ಮಾಡಿದರೆ ಪಾಲಿಕೆ ವ್ಯಾಪ್ತಿಯ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಕಳೆದ ಹನ್ನೊಂದು ತಿಂಗಳಲ್ಲಿ ಹೃದಯ ನಿಂತುಹೋಗಿತ್ತು. ಅದರ ನಂತರ ಚುನಾವಣೆ ಎಂಬ ಸರ್ಜರಿ ನಡೆದು ಆರೋಗ್ಯ ಸರಿಯಾದರೂ ಹೃದಯಬಡಿತ ಶುರುವಾಗಲು ಇನ್ನು ಕನಿಷ್ಟ ಹತ್ತು ದಿನ ಆದರೂ ಬೇಕು. ಕೇಳಿದರೆ ಉಪಚುನಾವಣೆಯ ಗಡಿಬಿಡಿ ಎನ್ನುತ್ತಾರೆ. ಆದರೆ ಇಲ್ಲಿ ಆಡಳಿತವೇ ಶುರುವಾಗದೇ ಇರುವಾಗ ರಾಜ್ಯ ಸರಕಾರ ಒಂದರ್ಧ ಗಂಟೆ ಕುಳಿತು ಇಲ್ಲಿನ ಕಥೆ ಬಗ್ಗೆ ಯೋಚಿಸಿದ್ದರೆ ಮೊದಲ ಮೇಯರ್ ಅವಧಿ ಒಂದೂವರೆ ತಿಂಗಳು ಮುಗಿದುಹೋಗುತ್ತಿತ್ತು.
ಪ್ರಾರಂಭದಲ್ಲಿ ಹಿಂದುಳಿದ ವರ್ಗ ಎ ಯಿಂದ ಯಾರಾದರೂ ಮೇಯರ್ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಯಾಕೆಂದರೆ ಮೇಯರ್ ಮೀಸಲಾತಿ ಹಿಂದುಳಿದ ವರ್ಗ ಎ ಗೆ ಮಾಡಿಟ್ಟು ಕಾಂಗ್ರೆಸ್ ಅಧಿಕಾರದಿಂದ ಇಳಿದು ಹೋಗಿತ್ತು. ಅದನ್ನೇ ಮುಂದುವರೆಸಿದರೆ ಪ್ರೇಮಾನಂದ ಶೆಟ್ಟಿಯವರು ಮೊದಲ ಅವಧಿಗೆ ಮೇಯರ್ ಆಗುತ್ತಿರಲಿಲ್ಲ. ಒಬ್ಬ ಅನುಭವಿ, ಯಾವುದೇ ದುಶ್ಚಷ್ಟ ಇಲ್ಲದ, ಯಾವುದೇ ಫೈರ್ ಬ್ರಾಂಡ್ ಅಲ್ಲದ, ಯಾರೊಂದಿಗೂ ಹೊಂದಿಕೊಂಡು ಹೋಗಬಲ್ಲ, ಸೌಮ್ಯ ಸ್ವಭಾವದ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ. ಅವರು ಮೊದಲ ವರ್ಷವೇ ಮೇಯರ್ ಆದರೆ ಮೊದಲ ಬಾರಿ ಶಾಸಕರಾಗಿರುವ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿಯವರಿಗೂ ಆಡಳಿತದ ಜವಾಬ್ದಾರಿ ತುಸು ಹಂಚಿಕೊಂಡ ಹಾಗೆ ಆಗುವುದರಲ್ಲಿ ಸಂಶಯವಿಲ್ಲ. ಇಲ್ಲದೇ ಹೋದರೆ ಮೇಯರ್ ಸ್ಥಾನವೇ ಹೊರೆಯಾದಿತು.ಪ್ರೇಮಾನಂದ ಶೆಟ್ಟಿಯವರಿಗೆ ಪಾಲಿಕೆಯ ಒಳಗೆ ಎರಡು ದಶಕಗಳಿಗಿಂತಲೂ ಹೆಚ್ಚಿನ ಅನುಭವ ಇದೆ. ವಿಪಕ್ಷ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ ಕಾಂಗ್ರೆಸ್ಸಿನ ಹಳೆಹುಲಿಗಳು ಗೆದ್ದಿರುವುದರಿಂದ ಅವರನ್ನು ಎದುರಿಸುವುದು ಪ್ರೇಮಾನಂದರಿಗೆ ಕಷ್ಟವಾಗಲಿಕ್ಕಿಲ್ಲ. ಆದರೆ ಪ್ರೇಮಾನಂದ ಶೆಟ್ಟಿಯವರು ತಮ್ಮ ಸೌಮ್ಯ ಸ್ವಭಾವವನ್ನು ಒಂದು ವರ್ಷ ಪಕ್ಕಕ್ಕೆ ಇಟ್ಟು ಅಗತ್ಯ ಬಿದ್ದರೆ ಖಡಕ್ ನಿರ್ಧಾರ ತೆಗೆದುಕೊಳ್ಳಲು ಕೂಡ ಅಣಿಯಾಗಬೇಕು. ಇನ್ನು ಮಂಗಳೂರು ನಗರ ದಕ್ಷಿಣಕ್ಕೆ ಮೇಯರ್ ಸ್ಥಾನ ಹೋದರೆ, ಉಪಮೇಯರ್ ಸ್ಥಾನ ಮಂಗಳೂರು ನಗರ ಉತ್ತರಕ್ಕೆ ಹೋಗುತ್ತದೆ. ಉತ್ತರದಲ್ಲಿ ಉಪಮೇಯರ್ ಹುದ್ದೆಯ ಜವಾಬ್ದಾರಿ ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಯಾರಿಗೆ ಸಿಕ್ಕಿದರೂ ಸವಾಲು ಇದ್ದೇ ಇದೆ. ಯಾಕೆಂದರೆ ಪಾಲಿಕೆಯಲ್ಲಿ ಬಿಜೆಪಿ ಈ ಪ್ರಮಾಣದಲ್ಲಿ ಗೆಲ್ಲಲು ಕೊಟ್ಟ ಭರವಸೆ ಕಡಿಮೆ ಏನಲ್ಲ!!
Leave A Reply