ಪಂಪ್ವೆಲ್ ನಲ್ಲಿ ಕಾಂಗ್ರೆಸ್ಸಿಗರು ಸತ್ಯಶೋಧನಾ ಸಮಿತಿ ಮಾಡುವುದಕ್ಕಿಂತ ಆತ್ಮಾವಲೋಕನ ಸಮಿತಿ ಮಾಡಲಿ!!
ಇಂಡಿಯನ್ ರೋಡ್ ಕಾಂಗ್ರೆಸ್ ಎನ್ನುವ ಸಂಸ್ಥೆ ಇದೆ. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ಬಗ್ಗೆ ತಜ್ಞ ಇಂಜಿನಿಯರ್ಸ್ ಹೊಂದಿರುವ ದೇಶದ ಅತ್ಯುತ್ತಮ ಸರಕಾರಿ ಒಕ್ಕೂಟ. ಈ ಸಂಸ್ಥೆ 1934 ರಲ್ಲಿ ಸ್ಥಾಪನೆಯಾಗಿತ್ತು. ಅದರ ನಂತರ ಇವತ್ತಿನ ತನಕ ದೇಶದ ಉದ್ದಗಲಕ್ಕೂ ನಿರ್ಮಾಣವಾಗುವ ರಸ್ತೆ, ಸೇತುವೆ, ಪ್ಲೈಒವರ್ ಸಹಿತ ರಾಷ್ಟ್ರೀಯ ಹೆದ್ದಾರಿಯ ಮೇಲೆ ಏನೆಲ್ಲಾ ನಿರ್ಮಾಣ ಆಗುತ್ತೋ ಆ ಬಗ್ಗೆ ಈ ಸಂಸ್ಥೆ ಮಾಡಿರುವ ನಿಯಮಾವಳಿಗಳ ಆಧಾರದ ಮೇಲೆನೆ ಕೆಲಸ ನಡೆಯುತ್ತದೆ. ಅವರ ನಿಯಮಾವಳಿಗಳ ಪ್ರಕಾರ ಒಂದು ಪ್ಲೈ ಒವರ್ ಮತ್ತು ರಸ್ತೆಯ ನಡುವಿನ ಎತ್ತರ ಐದೂವರೆ ಅಡಿ ಇರಬೇಕು ಎಂದು ಇದೆ. ಅದಕ್ಕಿಂತ ಕಡಿಮೆ ಮಾಡಿದ್ರೆ ಅದು ಅಪ್ಪಟ ಅಜ್ಞಾನ ಆಗುತ್ತೆ. ಯಾಕೆಂದರೆ ಆ ಸಂಸ್ಥೆಯಲ್ಲಿ ಇರುವವರು ಘಟಾನುಘಟಿ ಇಂಜಿನಿಯರ್ಸ್. ಅದರೊಂದಿಗೆ ನವಯುಗ ಕೂಡ ಕಡಿಮೆ ಅನುಭವ ಇರುವ ಕಂಪೆನಿಯಲ್ಲ. ದೇಶದ ಹಲವೆಡೆ ಅವರಿಗೆ ಕೇಂದ್ರದ ಅನೇಕ ಯೋಜನೆಗಳ ಕಾಮಗಾರಿಗಳು ಸಿಕ್ಕಿವೆ.
ಇಷ್ಟು ಅನುಭವ, ಜ್ಞಾನ ಇರುವ ಇಂಡಿಯನ್ ರೋಡ್ ಕಾಂಗ್ರೆಸ್ ನ ನಿಯಮಾವಳಿಗಳನ್ನು ಅನುಸರಿಸಿ ನವಯುಗದ ಇಂಜಿನಿಯರ್ಸ್ ನಮ್ಮ ಪಂಪ್ವೆಲ್ ಎತ್ತರವನ್ನು ನಿಯಮಾವಳಿಗಳ ಪ್ರಕಾರ ಮಾಡಲೇ ಇಲ್ಲ. ಪಂಪ್ವೆಲ್ ಎತ್ತರ ಐದೂವರೆ ಅಡಿ ಇಲ್ಲವೇ ಇಲ್ಲ. ಈಗ ಜಾಗೃತಗೊಂಡಿರುವ ಕಂಪೆನಿಯ ಗುತ್ತಿಗೆದಾರರು ಮೇಲ್ಸೆತುವೆಯ ಕೆಳಗಿನ ರಸ್ತೆಯನ್ನು ಅಗೆಯುತ್ತಿದ್ದಾರೆ. ಹಾಗಾದರೆ ಇದು ಯಾರ ತಪ್ಪು. ಹಾಗಾದರೆ ನಳಿನ್ ಬೆಳಿಗ್ಗೆ ಬೇಗ ಎದ್ದು ಒಂದು ಅಳತೆಯ ಟೇಪ್ ಹಿಡಿದು ಪಂಪ್ವೆಲ್ ಎತ್ತರ ಇವರು ಸರಿ ಮಾಡುತ್ತಿದ್ದಾರಾ ಎಂದು ನೋಡಬೇಕಿತ್ತಾ? ಒಂದು ಪ್ಲೈ ಒವರ್ ಇಳಿಮುಖವಾಗುವ ರಸ್ತೆ, ಅಂಡರ್ ಪಾಸ್ ಎಲ್ಲವನ್ನು ಸಂಸದರೇ ನೋಡಬೇಕು ಎಂದು ಕಾಂಗ್ರೆಸ್ ಮುಖಂಡರು ಬಯಸುತ್ತಿರುವುದು ಎಷ್ಟು ಸರಿ? ಇದೇನಾಗಿದೆ ಎಂದರೆ ಒಂದು ಪ್ಲೈ ಒವರ್ ಮಂಜೂರಾದ ತಪ್ಪಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಸದ ಸ್ಥಾನಕ್ಕಿಂತಲೂ ಈ ಪ್ಲೈ ಒವರ್ ಹತ್ತಿರವೇ ಒಂದು ಕೋಣೆ ಕಟ್ಟಿಸಿಕೊಂಡು ಅಲ್ಲಿಯೇ ಕುಳಿತುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಬಯಸಿದಂತಿದೆ.
ಬುಧವಾರ ಐವನ್ ಡಿಸೋಜಾ ಅವರು ಮೇಲ್ಸೆತುವೆ ಮೇಲೆ ಕೆಲವರನ್ನು ಕರೆದುಕೊಂಡು ಹೋಗಿ ಅಣಕು ಉದ್ಘಾಟನೆ ಮಾಡಿ ಮಾಧ್ಯಮಗಳಲ್ಲಿ ಬರುವ ಹಾಗೆ ನೋಡಿಕೊಂಡರು. ಒಂದು ವೇಳೆ ತಾವು ನಿತ್ಯ ಮಾಧ್ಯಮಗಳಲ್ಲಿ ಬೇರೆ ಕಾಂಗ್ರೆಸ್ ನಾಯಕರುಗಳಿಗಿಂತ ವಿಭಿನ್ನವಾಗಿ ಮಿಂಚಬೇಕು ಎಂದು ಐವನ್ ಡಿಸೋಜಾ ಬಯಸುವುದಾದರೆ ಅವರು ಹಾಗೆ ಮಾಡಲಿ. ಅದನ್ನು ಬಿಟ್ಟು ಒಂದು ವೇಳೆ ಇದೇ ಪಂಪ್ವೆಲ್ ಪ್ಲೈ ಒವರ್ ನಿರ್ಮಾಣವಾಗುವಾಗ ಅದಕ್ಕೆ ಕಾಂಗ್ರೆಸ್ ಮುಖಂಡರು ತೊಂದರೆ ಕೊಡದೇ ಇದು ಶೀಘ್ರ ಮುಗಿದಿದ್ದಲ್ಲಿ ಇದೇ ಐವನ್ ಡಿಸೋಜಾ ಹೊಸ ಮೋದಿ ಕೋಟ್ ಧರಿಸಿ ಉದ್ಘಾಟನೆಯ ದಿನ ಫೋಟೋಗೆ ಫೋಸ್ ಕೊಟ್ಟು ತಮ್ಮ ಆಪ್ತ ಕ್ಯಾಮೆರಾಮೆನ್ ಗಳ ಎದುರು ನಿಂತು ಈ ಫ್ಲೈಒವರ್ ನಿರ್ಮಾಣಕ್ಕೆ ಕಾರಣ ನಮ್ಮ ಸಂಸದ ಆಸ್ಕರ್ ಫೆರ್ನಾಂಡಿಸ್ ಎಂದು ಹೇಳಿಕೊಳ್ಳುತ್ತಿದ್ದರು. ಎಷ್ಟು ಸಾಧ್ಯವೋ ಅಷ್ಟು ಕ್ರೆಡಿಟ್ ಪಡೆದುಕೊಳ್ಳುತ್ತಿದ್ದರು. ಈಗ ಪ್ಲೈ ಒವರ್ ಆಗಲಿಲ್ಲ ಎನ್ನುವ ಕಾರಣಕ್ಕೆ ನಳಿನ್ ಕುಮಾರ್ ಕಟೀಲ್ ಮೇಲೆ ಆರೋಪ ಹಾಕುತ್ತಿದ್ದಾರೆ.
ಇನ್ನು ಕಾಂಗ್ರೆಸ್ಸಿನ ಸತ್ಯಶೋಧನಾ ಸಮಿತಿ ಮಾಧ್ಯಮದವರನ್ನು ಕರೆದುಕೊಂಡು ಅಲ್ಲಿಗೆ ಹೋಗಿ ನೋಡಿಕೊಂಡು ಬಂದಿದೆ. ಸರಿಯಾಗಿ ನೋಡಿದರೆ ಇವರು ಸರ್ಕೂಟ್ ಹೌಸಿನಲ್ಲಿಯೇ ಕುಳಿತು ” ನಾವು ಆವತ್ತು ಸಹಕಾರ ಕೊಟ್ಟಿದ್ದರೆ ಯಾವತ್ತೋ ಇದು ಆಗಿಹೋಗುತ್ತಿತ್ತು” ಎಂದು ಆತ್ಮಾವಲೋಕನ ಮಾಡಿಕೊಂಡರೆ ಸಾಕಿತ್ತು. ಇವರ ಸತ್ಯಶೋಧನಾ ಸಮಿತಿಗೆ ಆತ್ಮಾವಲೋಕನ ಸಮಿತಿ ಎಂದು ಹೆಸರು ಬದಲಾಯಿಸಬಹುದಿತ್ತು. ಒಂದು ವೇಳೆ ಕಾಂಗ್ರೆಸ್ಸಿಗರಿಗೆ ಜನರ ಮೇಲೆ ಅಷ್ಟೂ ಪ್ರೀತಿ ಇದೆ ಎಂದಾದರೆ ಇವರು ನಂತೂರ್ ನಲ್ಲಿ ಮಂಜೂರಾಗಿದ್ದ ಪ್ಲೈ ಒವರ್ ಅನ್ನು ಯಾಕೆ ತಮ್ಮ ಅಧಿಕಾರಾವಧಿಯಲ್ಲಿ ರದ್ದು ಮಾಡಿಸಿಕೊಂಡು ಬಂದರು ಎಂದು ಹೇಳಲಿ ನೋಡೋಣ. ನಂತೂರ್ ನಲ್ಲಿ ಪ್ಲೈ ಒವರ್ ಆಗಿದ್ರೆ ಅನೇಕ ಅಪಘಾತಗಳು ತಪ್ಪುತ್ತಿದ್ದವು. ಕೆಲವರ ಪ್ರಾಣಗಳು ಕೂಡ ಉಳಿಯುತ್ತಿದ್ದವು. ಆದರೆ ಅದನ್ಯಾವುದೂ ಮಾಡದೇ ಪಂಪ್ವೆಲ್ ದೋಷ ಹುಡುಕುವ ಬದಲು ತಮ್ಮ ಮನಸ್ಸಿನೊಳಗಿನ ಸತ್ಯಶೋಧನೆ ಮಾಡಲಿ!
Leave A Reply