ಐವನ್ ಉಪವಾಸ ಕುಳಿತುಕೊಂಡರೆ ಯಾರಿಗೆ ಒಳ್ಳೆಯದು!!

ಅಮಿತ್ ಶಾ ಗೋ ಬ್ಯಾಕ್ ಎಂದು ಬೊಬ್ಬೆ ಹಾಕುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ. ಅಮಿತ್ ಶಾ ಬಂದರೆ ಉಪವಾಸ ಕೂರುತ್ತೇನೆ ಎಂದು ತಿಳಿಸಿದ್ದಾರೆ. ಪಾಪ, ತಾವು ಮುಂದಿನ ಬಾರಿ ವಿಧಾನಪರಿಷತ್ ಗೆ ಹಿಂಬಾಗಿಲಿನ ಮೂಲಕ ಎಂಟ್ರಿ ಕೊಡುವುದು ಕೂಡ ಕಷ್ಟವಾಗಿರುವಾಗ ಹೇಗಾದರೂ ಮಾಡಿ ಆಕ್ಟಿವ್ ಆಗಿದ್ದೇನೆ ಎಂದು ತಿಳಿಸಲು ಐವನ್ ಡಿಸೋಜಾ ತಮ್ಮ ಇದ್ದಬದ್ದ ಕೊನೆಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಅಷ್ಟಕ್ಕೂ ಅಮಿತ್ ಶಾ ಮಂಗಳೂರಿಗೆ ಬರದಂತೆ ಮಾಡುವುದಕ್ಕಿಂತ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ತಾವೊಬ್ಬರೇ ಹೀರೋ ಎಂದು ತೋರಿಸಿಕೊಡುವ ಹಪಾಹಪಿ ಐವನ್ ಅವರಲ್ಲಿ ಎದ್ದು ಕಾಣುತ್ತದೆ. ಯಾಕೆಂದರೆ ಅಮಿತ್ ಶಾ ತಮ್ಮ ಕೇಂದ್ರ ಸರಕಾರದ ಕಾಯ್ದೆಯೊಂದನ್ನು ಜನರಿಗೆ ಅರ್ಥ ಮಾಡಿಸಲು ಮಂಗಳೂರಿಗೆ ಬರುತ್ತಿದ್ದಾರೆ ವಿನ: ಸಮುದಾಯಗಳ ನಡುವೆ ಬೆಂಕಿ ಕೊಡುವ ಕೆಲಸಕ್ಕೆ ಬರುತ್ತಿಲ್ಲ. ಒಂದು ವೇಳೆ ಅಮಿತ್ ಶಾ ಬದಲಿಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುತ್ತೇನೆ ಎಂದು ಹೊರಟ್ಟಿದ್ದರೆ ಇದೇ ಐವನ್ ಕೆಂಪು ಹಾಸು ಹಾಕಿ ಸ್ವಾಗತಿಸುತ್ತಿದ್ದರು. ಆದರೆ ಪಿಣರಾಯಿ ವಿಜಯನ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ಅದು ಮೋದಿ ಸರಕಾರ ಜಾರಿಗೆ ತರುತ್ತಿದೆ ಎನ್ನುವ ಕಾರಣಕ್ಕೆ ಮಾತ್ರ. ಒಂದು ವೇಳೆ ಐವನ್ ಅವರಿಗೆ ಕಾಯ್ದೆಯ ಬಗ್ಗೆ ನಿಜವಾದ ಸಂಶಯಗಳಿದ್ದರೆ ಅವರು ಅಮಿತ್ ಶಾ ಮಂಗಳೂರಿಗೆ ಬರುವಾಗ ತಮಗೋಸ್ಕರ ಒಂದರ್ಧ ಗಂಟೆ ಕೇಳಿ ಶಾ ಜೊತೆಗೆ ಕಾಯ್ದೆಯ ಬಗ್ಗೆ ಕೇಳಲಿ. ಕಾಂಗ್ರೆಸ್ಸಿಗರು ನಿಯೋಗ ತೆಗೆದುಕೊಂಡು ಹೋಗಿ ವಿಮಾನ ನಿಲ್ದಾಣದಲ್ಲಿಯೋ, ಶಾ ಉಳಿಯುವ ಹೋಟೇಲಿನಲ್ಲಿಯೋ ಹೋಗಿ ತಮ್ಮ ಆತಂಕ ನಿವಾರಿಸಲಿ. ಜಿಲ್ಲಾ ಕಾಂಗ್ರೆಸ್ ಹಾಗೆ ಬಯಸುವುದಾದರೆ ಬಹುಶ: ಅಮಿತ್ ಶಾ ಕೂಡ ಬೇಡವೆನ್ನಲಿಕ್ಕಿಲ್ಲ. ಯಾಕೆಂದರೆ ಮೋದಿ-ಶಾ ಜೋಡಿಗೆ ಈ ಕಾಯ್ದೆಯಿಂದ ದೇಶಕ್ಕೆ ಆಗುವ ಪ್ರಯೋಜನಗಳನ್ನು ಹೇಳಿ ಹೇಳಿ ಅಭ್ಯಾಸವಾಗಿ ಹೋಗಿದೆ.
ಆದರೆ ಐವನ್ ಡಿಸೋಜಾ ಅವರಿಗೆ ಇರುವ ಆತಂಕ ಕಾಯ್ದೆ ಬಗ್ಗೆ ಅಲ್ಲ. ಅವರಿಗೆ ಈ ಕಾಯ್ದೆಯನ್ನು ಜನ ಸರಿಯಾಗಿ ಅರ್ಥ ಮಾಡಿಕೊಂಡರೆ ಭವಿಷ್ಯದಲ್ಲಿ ತಮ್ಮ ಪ್ರತಿಭಟನೆಗೆ ಯಾರೂ ಬರದಿದ್ದರೆ ಏನು ಮಾಡುವುದು? ಈಗಾಗಲೇ ಹಣ, ಬಿರಿಯಾನಿ ಕೊಟ್ಟರೂ ಐವನ್ ಗೆ ಜನ ಸೇರಿಸಲು ಕಷ್ಟವಾಗುತ್ತಿದೆ. ಹಾಗಿರುವಾಗ ಇದೇ ವಿಷಯದ ಮೇಲೆ ಪ್ರತಿಭಟನೆ ಮಾಡೋಣ ಎಂದರೆ ಏನು ಮಾಡುವುದು. ಇನ್ನು ಈ ಕಾಯ್ದೆಯಿಂದ ನಿಜಕ್ಕೂ ಭಾರತದ ಯಾವುದೇ ನಾಗರಿಕನಿಗೆ ತೊಂದರೆ ಆಗುತ್ತದೆ ಎಂದು ಐವನ್ ಡಿಸೋಜಾ ಅವರಿಗೆ ಅನಿಸುತ್ತಾ ಇದೆ ಎಂದರೆ ಅದು ಅಪ್ಪಟ ಭ್ರಮೆ.
ಸರಿಯಾಗಿ ನೋಡಲು ಹೋದ್ರೆ ಈ ಕಾಯ್ದೆಯಿಂದ ಐವನ್ ಡಿಸೋಜಾ ಯಾರ ಪರ ಹೋರಾಡುತ್ತಿದ್ದೇವೆ ಎಂದು ಅಂದುಕೊಂಡು ಹೋರಾಡುತ್ತಿದ್ದಾರೋ ಅವರಿಗೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆಯೋ ಬಿಡುತ್ತದೋ ಅದು ಬೇರೆ ವಿಷಯ. ಆದರೆ ಕಾಂಗ್ರೆಸ್ಸಿಗರ ಸುಳ್ಳು ಭಾಷಣವನ್ನು ನಂಬಿ ಇಬ್ಬರು ಪೊಲೀಸರ ಮೇಲೆ ಕಲ್ಲು ಬಿಸಾಡಲು ಹೋಗಿ ಸತ್ತು ಹೋದರಲ್ಲ, ಅದಕ್ಕೆ ಏನು ಹೇಳುವುದು. ಖಾದರ್ ಬೆಂಕಿ ಹೇಳಿಕೆಯಿಂದ ಗಲಾಟೆಯಾಗಿದೆ ವಿನ: ಅಮಿತ್ ಶಾ ಭಾಷಣದಿಂದ ಏನೂ ಆಗಲ್ಲ. ಯಾಕೆಂದರೆ ಅಮಿತ್ ಶಾ ದೇಶ ಹೊತ್ತಿ ಉರಿಯುವಂತಹ ಭಾಷಣ ಮಾಡಲು ಬರುತ್ತಿಲ್ಲ. ಅವರು ಟೀಚರ್ ತರಹ ಪಾಠ ಮಾಡಲು ಬರುತ್ತಿದ್ದಾರೆ. ಒಂದು ವೇಳೆ ಭಾಷಣಕ್ಕೆ ಅಲ್ಲಿ ಬಂದು ನೋಡಲು ಐವನ್ ಡಿಸೋಜಾ ಅವರಿಗೆ ನಾಚಿಕೆಯಾದರೆ ಸಂಘಟಕರು ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಲೈವ್ ಕೊಡಬಹುದು. ಅದನ್ನು ನೋಡಲಿ. ಈ ಕಾಯ್ದೆಯ ಬಗ್ಗೆ ಜನರಿಗೆ ಅರ್ಥ ಮಾಡಿಸುವ ಅಧಿಕಾರ ಮತ್ತು ಸಾಮರ್ತ್ಯ ಇರುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಅಮಿತ್ ಶಾ ಒಬ್ಬರು. ಅದೇ ಸಿದ್ಧರಾಮಯ್ಯ, ಕುಮಾರಸ್ವಾಮಿಯವರು ಬಂದು ಕೇವಲ ಬೇಜವಾಬ್ದಾರಿ ಹೇಳಿಕೆ ಕೊಡಬಹುದೇ ವಿನ: ಕಾಯ್ದೆ ಬಗ್ಗೆ ಅವರಿಗೆ ಒಂದಕ್ಷರವೂ ಗೊತ್ತಿರಲಿಕ್ಕಿಲ್ಲ. ತ್ರಿವಳಿ ತಲಾಖ್, ರಾಮಮಂದಿರ, 370 ಕಾಯ್ದೆಯ ವಿಷಯವನ್ನು ಐವನ್ ಒಂದು ವರ್ಷ ಮಾತನಾಡುತ್ತಾ ಮಾಧ್ಯಮಗಳಲ್ಲಿ ಫುಲ್ ಸ್ಕೋಪ್ ತೆಗೆದುಕೊಳ್ಳೋಣ ಎಂದು ಅಂದುಕೊಂಡಿದ್ದರು. ಆದರೆ ಜನರು ಧರ್ಮ, ಜಾತಿ ಮೀರಿ ಆ ಕಾಯ್ದೆಗಳಿಗೆ ಬೆಂಬಲ ಕೊಟ್ಟರು. ಆ ತಪ್ಪಿ ಹೋದ ಮೈಲೇಜ್ ಈಗ ಐವನ್ ಪಡೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಉಪವಾಸ ಮಾಡಿದರೆ ಒಳ್ಳೆಯದು ಐವನ್ ಅವರೇ, ನೀವು ಸರಣಿ ಉಪವಾಸ ಸತ್ಯಾಗ್ರಹಕ್ಕೆ ಬೇಕಾದರೂ ಕುಳಿತುಕೊಳ್ಳಿ. ಗ್ಯಾರಂಟಿಯಾಗಿ ಹೇಳ್ತೆನೆ, ನೀವು ಒಂದು ವಾರ ಉಪವಾಸ ಕುಳಿತುಕೊಂಡರೂ ಐವತ್ತು ಜನರಿಗಿಂತ ಹೆಚ್ಚು ಸೇರಿಸಲು ಆಗಲಿಕ್ಕಿಲ್ಲ. ಅದರೊಂದಿಗೆ ನಿಮ್ಮ ಪಕ್ಷದ ಮುಖಂಡರು ನಿಮ್ಮ ಹಿಂದೆ ಏನು ಮಾತನಾಡಲಿದ್ದಾರೆ ಎಂದು ಯೋಚಿಸಿಯೇ ಉಪವಾಸ ಕುಳಿತುಕೊಳ್ಳಿ. ಇನ್ನು ಬೆಳಿಗ್ಗೆ ಟಿಫಿನ್ ಮಾಡಿ ಉಪವಾಸಕ್ಕೆ ಕುಳಿತು ಮಧ್ಯಾಹ್ನ ಊಟದ ಹೊತ್ತಿಗೆ ನಿಲ್ಲಿಸಿದರೆ ಅದನ್ನು ಉಪವಾಸ ಎನ್ನುತ್ತಾರಾ!
Leave A Reply