ಇದು ಜಾಣ ಮರೆವಾ ಅಥವಾ ಕಣ್ತಪ್ಪಿನಿಂದ ಆದದ್ದಾ ಎಂದು ಕೇಂದ್ರ ಸರಕಾರ ಹೇಳಬೇಕು!!
ಅನೇಕ ಸಲ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದವರು ಒಂದು ಮಾತನ್ನು ಹೇಳುತ್ತಿದ್ದದ್ದನ್ನು ನೀವು ಕೇಳಿರಬಹುದು. ಅದೇನೆಂದರೆ ” ಬ್ರಾಹ್ಮಣರಾಗಿ ಹುಟ್ಟುವುದಕ್ಕಿಂತ ಬೇರೆ ಜಾತಿಯಲ್ಲಿ ಹುಟ್ಟಿದರೆ ಒಳ್ಳೆಯದಿತ್ತು”. ಇದರ ಅರ್ಥ ಏನೆಂದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟುವುದು ಪಾಪ ಎಂದಲ್ಲ. ಆದರೆ ಬ್ರಾಹ್ಮಣ ವರ್ಗದಲ್ಲಿ ಹುಟ್ಟುವುದರಿಂದ ಭಾರತದಲ್ಲಿ ಏನೂ ಲಾಭ ಇಲ್ಲ ಎನ್ನುವುದೇ ಆಗಿದೆ. ಯಾಕೆಂದರೆ ಬ್ರಾಹ್ಮಣರಾಗಿ ಹುಟ್ಟಿದ ಕೂಡಲೇ ಇವರು ಮೇಲ್ವರ್ಗದವರು ಎನ್ನುವ ಬ್ರಾಂಡ್ ಮಾಡಿಬಿಡುತ್ತಾರೆ. ಮೇಲ್ವರ್ಗ, ಕೆಳವರ್ಗದಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಂಬುವುದು ಮಾನವತಾವಾದವನ್ನು ಮಾತ್ರ. ಆದರೆ ಸಮಾಜ ಯಾವಾಗ ಮತ್ತು ಯಾಕೆ ಬ್ರಾಹ್ಮಣರನ್ನು ಮೇಲ್ವರ್ಗದವರು ಎಂದು ಫಿಕ್ಸ್ ಮಾಡಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಬ್ರಾಹ್ಮಣರು ಮೇಲ್ವರ್ಗದವರು ಎಂದು ಅನಿಸಿಕೊಂಡಿದ್ದರಿಂದ ಸಹಜವಾಗಿ ಅವರ ಬಳಿ ಸಾಕಷ್ಟು ಹಣ ಇರುತ್ತದೆ. ಅವರಿಗೆ ರಾಜಾಶ್ರಯದ ಅವಶ್ಯಕತೆ ಇರಲ್ಲ ಎಂದು ಪ್ರಾರಂಭದಲ್ಲಿ ಆ ಭಾವನೆ ಉಂಟಾಗಿರಬಹುದು. ನಂತರ ರಾಜಾಶ್ರಯ ಹೋಗಿ ಸರಕಾರಗಳ ಆಳ್ವಿಕೆ ಬಂತು. ಸಹಜವಾಗಿ ಬ್ರಾಹ್ಮಣರಿಗೆ ಯಾವುದೂ ಅಗತ್ಯ ಇಲ್ಲ ಎಂದು ಅವರವರೇ ಅಂದುಕೊಂಡರು.
ಅದು ಯಾವ ರೀತಿಯಲ್ಲಿ ಬ್ರಾಹ್ಮಣರ ಸಮುದಾಯದವರಿಗೆ ತೊಂದರೆಯಾಗಿದೆ ಎಂದರೆ ಇವತ್ತು ಒಬ್ಬ ಪ್ರತಿಭಾವಂತ ಬಡ ಬ್ರಾಹ್ಮಣ ಒಂದು ಮೆಡಿಕಲ್ ಅಥವಾ ಇಂಜಿನಿಯರಿಂಗ್ ಸೀಟು ಪಡೆದುಕೊಳ್ಳಲು ಕಾಲೇಜು ಮೆಟ್ಟಿಲು ಹತ್ತಿ ಕಾಲೇಜಿನ ಕಚೇರಿಗೆ ಕಾಲಿಟ್ಟರೆ ಅವನಿಗೆ ಅಥವಾ ಅವಳಿಗೆ ಎಷ್ಟು ಹಿಂಸೆಯಾಗುತ್ತದೆ ಎಂದರೆ ಇವರಿಗಿಂತ ಕಡಿಮೆ ಅಂಕ ಹೊಂದಿರುವ ( ಯಾವ ಜಾತಿ ಎಂದು ಬೇಡಾ) ಬೇರೆ ಯುವಕ, ಯುವತಿ ಮೊದಲೇ ಸೀಟು ಪಡೆದುಕೊಂಡಿರುತ್ತಾರೆ. ಅದು ಅಪ್ಪಟ ಮೀಸಲಾತಿ ಆಧಾರದಲ್ಲಿ. ಈ ಬಡ ಬ್ರಾಹ್ಮಣ ವಿದ್ಯಾರ್ಥಿ ತಲೆಯ ಮೇಲೆ ಕೈ ಹೊತ್ತು ಮನೆಗೆ ಬರಬೇಕಾಗುತ್ತದೆ ಅಥವಾ ಯಾವುದೋ ತನಗೆ ಬೇಡದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದುಕೊಳ್ಳಬೇಕಾಗುತ್ತದೆ. ಅಷ್ಟಕ್ಕೆ ಬ್ರಾಹ್ಮಣರ ಕಷ್ಟ ಮುಗಿಯುವುದಿಲ್ಲ ಎಂದೇ ಹೇಳಬಹುದು. ಯಾವುದೇ ಸರಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲಿ, ಬ್ರಾಹ್ಮಣರ ಗ್ರೇಡ್ ಎಷ್ಟೇ ದೊಡ್ಡದಿರಲಿ, ಎಷ್ಟೇ ಮಾರ್ಕ್ ಗಳನ್ನು ಪಡೆದುಕೊಂಡಿರಲಿ ಕೆಲಸ ಯಾರದ್ದೋ ಪಾಲಾಗಿ ಹೋಗಿರುತ್ತದೆ. ಒಂದು ವೇಳೆ ಯಾವುದೋ ಜನರಲ್ ಕೆಟಗರಿಯಲ್ಲಿ ನೂರರಲ್ಲಿ ಒಬ್ಬನಿಗೆ ಸಿಕ್ಕಿದರೂ ಪ್ರಮೋಶನ್ ವಿಷಯ ಬಂದಾಗ ಮತ್ತೆ ಹೊಡೆತ. ಹೀಗೆ ಬ್ರಾಹ್ಮಣರು ಅನುಭವಿಸಿದ ನೋವು, ಮಾನಸಿಕ ಒತ್ತಡಕ್ಕೆ ಶತಮಾನದ ಇತಿಹಾಸವಿದೆ. ಆದರೆ ಮೋದಿ ಸರಕಾರ ಕೇಂದ್ರದಲ್ಲಿ ಬಂದ ಮೇಲೆ ಬ್ರಾಹ್ಮಣರಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತಹ ಅವಕಾಶ ಸಿಕ್ಕಿದೆ.
ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ 10% ಮೀಸಲಾತಿಯನ್ನು ಒದಗಿಸಲು ನಿರ್ಧರಿಸಿದ್ದು, ಕರ್ನಾಟಕ ಸರಕಾರದಲ್ಲಿ ಸದರಿ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಅಲ್ಲಿಗೆ ಒಂದು ಹಂತಕ್ಕೆ ಸಮಾಧಾನ ಆಗಿರುವುದು ನಿಜ. ಆದರೆ ನಾನು ಬ್ರಾಹ್ಮಣ ವರ್ಗದಲ್ಲಿಯೇ ಇರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರಿಗೆ ಈ ಮೀಸಲಾತಿಯಿಂದ ಯಾವುದೇ ಲಾಭ ಆಗಿಲ್ಲ ಎನ್ನುವುದನ್ನು ನಿಮಗೆ ಇವತ್ತು ಹೇಳಲೇಬೇಕಾಗಿದೆ. ಬ್ರಾಹ್ಮಣ ಸಮಾಜ ಒಟ್ಟು ಜನಸಂಖ್ಯೆಯಲ್ಲಿ ಸರಾಸರಿ 2% ಮಾತ್ರ ಇದ್ದರೂ ಅದರಲ್ಲಿ ಜಿಎಸ್ ಬಿ ಅಂದರೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ 0.01% ಮಾತ್ರ ಇದ್ದಂತಿದೆ. ಅವರ ಸಂಖ್ಯೆ ತುಂಬಾ ಕಡಿಮೆ ಇದ್ದರೂ ರಾಜ್ಯ, ರಾಷ್ಟ್ರದಲ್ಲಿ ಈ ಸಮುದಾಯ ಮಾಡಿರುವ ಸಾಧನೆ ಚಿಕ್ಕದೇನಲ್ಲ. ರಾಷ್ಟ್ರಕವಿ ಗೋವಿಂದ ಪೈ ಅವರಿಂದ ಹಿಡಿದು ಇನ್ಪೋಸಿಸ್ ನ ಟಿವಿ ಮೋಹನದಾಸ ಪೈ ಅವರ ತನಕ ಜಿಎಸ್ ಬಿ ಸಮುದಾಯದವರು ಉತ್ತಮ ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು.
ಈ ಸಮುದಾಯ ಯಾವತ್ತೂ ಸರಕಾರವೇ ನಮ್ಮನ್ನು ಮೇಲಕ್ಕೆ ಎತ್ತಬೇಕು ಎಂದು ಕಾದು ಕುಳಿತುಕೊಂಡಿಲ್ಲ. ನಮ್ಮಿಂದ ಸರಕಾರಕ್ಕೆ ಲಾಭ ಆಗಬೇಕು ಎಂದು ತೋರಿಸಿಕೊಟ್ಟ ಸಮುದಾಯ ಜಿಎಸ್ ಬಿಯವರದ್ದು. ಯಾವುದೇ ವ್ಯಾಪಾರ, ವ್ಯವಹಾರದಲ್ಲಿ ಕೈ ಹಾಕಿ ತಮ್ಮ ಶ್ರಮ, ಅವಿರತ ದುಡಿಮೆ ಮತ್ತು ಲೆಕ್ಕಾಚಾರದಿಂದ ಉದ್ಯೋಗಾವಕಾಶವನ್ನು ಸೃಷ್ಟಿಸುವ ಮೂಲಕ ಬೇರೆಯವರಿಗೆ ಮಾದರಿಯಾಗವಂತಹ ಕೆಲಸವನ್ನು ಸ್ವಾತಂತ್ರ್ಯಪೂರ್ವದಿಂದಲೂ ಜಿಎಸ್ ಬಿಗಳು ಮಾಡಿಕೊಂಡು ಬಂದಿದ್ದಾರೆ. ಬ್ಯಾಂಕುಗಳ ಸ್ಥಾಪನೆಯಿಂದ ಹಿಡಿದು ಪತ್ರಿಕೆಗಳನ್ನು ಆರಂಭಿಸುವ ತನಕ ಜಿಎಸ್ ಬಿಗಳನ್ನು ಪಕ್ಕಕ್ಕೆ ಇಟ್ಟು ಸರಕಾರಗಳಿಗೆ ಸರಕಾರಗಳೇ ಏನು ಮಾಡುವಂತಿಲ್ಲ ಎಂದು ಸಾಬೀತಾಗಿದೆ. ಹಾಗಾದರೆ ಜಿಎಸ್ ಬಿಗಳಿಗೆ ಸರಕಾರದ ಮೀಸಲಾತಿ ಬೇಡ್ವಾ ಎನ್ನುವ ಪ್ರಶ್ನೆ ನೀವು ಕೇಳಿದರೆ ಬೇಕು ಎಂದೇ ಹೇಳುತ್ತೇನೆ. ಯಾಕೆಂದರೆ ಎಲ್ಲಾ ಜಿಎಸ್ ಬಿಗಳು ಶ್ರೀಮಂತರಲ್ಲ, ಎಲ್ಲಾ ಜಿಎಸ್ ಬಿ ವ್ಯಾಪಾರ ಚಟುವಟಿಕೆಯಲ್ಲಿಯೇ ಇರುತ್ತಾರೆ ಎಂದಲ್ಲ. ನಮಲ್ಲಿಯೂ ಬಡವರಿದ್ದಾರೆ. ಮಧ್ಯಮ ವರ್ಗದವರು ಇದ್ದಾರೆ. ಅವರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮೀಸಲಾತಿ ಸಿಕ್ಕಿದರೆ ಶ್ರೇಷ್ಟ ಸಾಧನೆ ಮಾಡಲು ಅದು ಪ್ರೇರಣೆಯಾಗಲಿದೆ. ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದರೆ ಅದು ಅನುಕೂಲವಾಗಲಿದೆ. ಇದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಅಪ್ಪಿತಪ್ಪಿ ಕಣ್ತಪ್ಪಿನಿಂದ ಮೀಸಲಾತಿ ಮಿಸ್ ಆಗಿದ್ದರೆ ತಕ್ಷಣ ಅದನ್ನು ಸರಿಪಡಿಸಿ ನ್ಯಾಯ ಕೊಡಬೇಕು. ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಅದು ಮುಂದಿನ ದಿನಗಳಲ್ಲಿ ಸರಿಯಾಗಬಹುದು ಎನ್ನುವ ನಿರೀಕ್ಷೆ ಇದೆ!!
Leave A Reply