ಅಡ್ಯಾರ್ ನಲ್ಲಿ ನಡೆದದ್ದು ಸಿಎಎ ವಿರುದ್ಧ ಪ್ರತಿಭಟನೆಯಾ, ಹರ್ಷ ವಿರುದ್ಧನಾ?
Posted On January 16, 2020
ಸದ್ಯ ಏನೂ ಗಲಾಟೆ ಆಗದೇ ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ಪ್ರತಿಭಟನೆ ಮುಗಿಸಿದ್ದಾರೆ. ಸಿಎಎ, ಎನ್ ಆರ್ ಸಿ ಬಗ್ಗೆ ಜಾಗೃತಿ ಮೂಡಿಸುವುದಕ್ಕಿಂತ ಮಂಗಳೂರು ಪೊಲೀಸ್ ಕಮೀಷನರ್ ಡಾ.ಹರ್ಷ ಅವರನ್ನು ಬೈಯಲು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ದೋಷಿಸಲು, ಶೋಭಾ ಕರಂದ್ಲಾಜೆಯವರನ್ನು ಹೀಯಾಳಿಸಲು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹಂಗಿಸಲು, ಮೋದಿಯವರನ್ನು ಟೀಕಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತರಹೇವಾರಿ ಬೋರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ನಡೆದ ನಂತರ ಅಲ್ಲಿ ಬಿದ್ದಿರುವ ರಾಶಿ ತ್ಯಾಜ್ಯಗಳನ್ನು ಹಾಗೆ ಬಿಟ್ಟು ಕೋಪ ಪ್ರದರ್ಶಿಸಿಬಿಟ್ಟರು. ಈಗ ಇರುವ ಮುಖ್ಯ ಪ್ರಶ್ನೆ ಎಂದರೆ ಸಭೆ ನಡೆದ ಉದ್ದೇಶ ಏನು? ಡಿಸೆಂಬರ್ 19 ರಂದು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ದಾಂಧಲೆ ನಡೆಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಎಲ್ಲಾ ಅಸ್ತ್ರ ಪ್ರಯೋಗಿಸಿ ಕೊನೆಗೆ ಗೋಲಿಬಾರ್ ಮಾಡಿದ ಪೊಲೀಸರ ಕ್ರಮವನ್ನು ವಿರೋಧಿಸಲು ಈ ಪ್ರತಿಭಟನೆ ಮಾಡಲಾಯಿತಾ ಎನ್ನುವುದು ಈಗ ಮೇಲ್ನೋಟಕ್ಕೆ ಕಂಡು ಬರುತ್ತಿರುವ ಪ್ರಶ್ನೆ. ಪೊಲೀಸ್ ಕಮೀಷನರ್ ಅವರನ್ನು ಅಮಾನತು ಮಾಡಿ ಎನ್ನುವ ಒತ್ತಾಯ ಸಭೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರದ್ದು. ಅಮಾನತು ಮಾಡಲು ಸದ್ಯ ಬಿಜೆಪಿ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಅದಕ್ಕೆ ಕಾರಣ ಡಿಸೆಂಬರ್ 19 ರಂದು ಪ್ರತಿಭಟನಾಕಾರರನ್ನು ನಿಯಂತ್ರಿಸಬೇಕಾದರೆ ಅಂತಹ ಒಂದು ಹೆಜ್ಜೆ ಇಡಲೇಬೇಕಿತ್ತು ಎನ್ನುವುದು ಪೊಲೀಸರ ವಾದ. ಅದಕ್ಕೆ ಸಾಕ್ಷಿಯಾಗಿ ಅವರ ಬಳಿ ಬೇಕಾದಷ್ಟು ವಿಡಿಯೋಗಳಿವೆ. ಆದರೆ ಪೊಲೀಸರ ನೈತಿಕತೆ ಹಿಮ್ಮೆಟ್ಟಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡುಗಡೆಗೊಳಿಸಿದ ವಿಡಿಯೋಗಳಲ್ಲಿ ಪೊಲೀಸರಿಗೆ ಅನುಕೂಲಕರವಾದ ವಿಷಯವೇ ಇರುವುದರಿಂದ ಕುಮಾರಸ್ವಾಮಿ ಪೊಲೀಸರ ಪರ ಇರುವ ವಿಡಿಯೋ ಬಿಡುಗಡೆ ಮಾಡಿ ಪ್ರತಿಭಟನಾಕಾರರನ್ನು ಇಕ್ಕಟ್ಟಿಗೆ ಸಿಲುಕಿಸಿದರು ಎಂದೇ ಹೇಳಲಾಗುತ್ತಿದೆ. ಇನ್ನು ಯಡಿಯೂರಪ್ಪನವರು ಹತ್ತು ಲಕ್ಷ ಘೋಷಣೆ ಮಾಡಿ ನಂತರ ತನಿಖೆಯಲ್ಲಿ ಅಮಾಯಕರು ಎಂದು ಸಾಬೀತು ಆದರೆ ಕೊಡುತ್ತೇವೆ ಎಂದಿರುವುದನ್ನು ಅಣಕ ಮಾಡಿರುವ ಪ್ರತಿಭಟನಾಕಾರರು ಅಡ್ಯಾರ್ ನ ವೇದಿಕೆಗೆ ಮೃತರ ಹೆಸರು ಇಟ್ಟು ಅವರನ್ನು ವೀರ ಶೂರರು ಎಂದೇ ಬ್ರಾಂಡ್ ಮಾಡಿದ್ದಾರೆ. ವೀರರು, ಶೂರರು ಪ್ರತಿಭಟನೆ ಮಾಡಲು ಹೋಗಿ ತಪ್ಪು ಮಾಡಿ ಮೃತರಾಗಿದ್ದಾರೆ ಎಂದೇ ಪ್ರತಿಭಟನಾಕಾರರು ಇದನ್ನು ಸಾಬೀತುಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ ಈ ಪ್ರತಿಭಟನೆಯಲ್ಲಿ ನೇರವಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಹಜವಾಗಿ ಡಿಸೆಂಬರ್ 19ರ ಪ್ರತಿಭಟನಾಕಾರರ ಕ್ರಮಕ್ಕೆ ತನ್ನ ಸಹಮತಿ ವ್ಯಕ್ತಪಡಿಸಿದೆ. ಅಲ್ಲಿ ಭಾಗವಹಿಸುವವರಿಗೆ ಸಿಎಎ, ಎನ್ ಆರ್ ಸಿ ಬಗ್ಗೆ ಎಷ್ಟು ಗೊತ್ತಾಯಿತೋ ಬಿಟ್ಟಿತೋ ಆದರೆ ಪೊಲೀಸರೇ ನೀವು ಮತ್ತೆ ಗುಂಡುಗಳನ್ನು ತುಂಬಿಸಿಡಿ ನಾವು ಮತ್ತೆ ಬರುತ್ತೇವೆ ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ಇಂತಹ ಗಲಾಟೆಗಳು ಇನ್ನಷ್ಟು ಆಗಲಿವೆ ಎನ್ನುವ ಸಂದೇಶವನ್ನು ಪ್ರತಿಭಟನಾಕಾರರು ಹೊರಹೊಮ್ಮಿಸಿದ್ದಾರೆ. ಹಾಗಾದರೆ ಗಲಾಟೆ ಗ್ಯಾರಂಟಿ ಎನ್ನುವುದೇ ಆದರೆ ಮಂಗಳೂರಿಗೆ ಖಡಕ್ ಪೊಲೀಸ್ ಅಧಿಕಾರಿ ಬೇಕೆ ಬೇಕು. ಸದ್ಯ ಡಾ.ಹರ್ಷ ಟ್ರಾಕ್ ನೋಡಿದರೆ ಅವರೇ ಮಂಗಳೂರಿಗೆ ಬೇಕು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರು ಡಿಸೆಂಬರ್ 19 ರಂದು ತೆಗೆದುಕೊಂಡಿರುವ ಕ್ರಮದಿಂದ ಒಂದು ವರ್ಗಕ್ಕೆ ಖುಷಿ, ಇನ್ನೊಂದು ವರ್ಗಕ್ಕೆ ಕೋಪ ತಂದಿರಬಹುದು. ಆದರೆ ಆ ಮನುಷ್ಯ ಬಲ ಅಥವಾ ಎಡ ಯಾವುದೂ ಅಲ್ಲ ಎನ್ನುವುದು ಸ್ಪಷ್ಟ. ಅವರು ಕೇವಲ ಕಾನೂನು ಪರಿಧಿ ಮಾತ್ರ ನೋಡುವವರು. ತಪ್ಪು ಯಾರೇ ಮಾಡಿದರೂ ಅವು ತೆಗೆದುಕೊಳ್ಳುವುದು ಒಂದೇ ಶೈಲಿಯ ಕ್ರಮ. ಉದಾಹರಣೆಗೆ ಯಾವುದೇ ಒಂದು ಸಂಘಟನೆ ಬೈಕ್ ರ್ಯಾಲಿಗೆ ಅನುಮತಿ ಕೇಳಿದಾಗ ಹರ್ಷ ಕೊಟ್ಟಿಲ್ಲ ಎಂದರೆ ಸಂಘಟನೆಯವರು ಎಷ್ಟೇ ಮೇಲಿನಿಂದ ಒತ್ತಡ ತಂದರೂ ಕೊಡಲ್ಲ. ಸಂಯೋಜಕರು ಬಲಪಂಥಿಯರೇ ಆದರೂ ಅವರು ಕೇರ್ ಮಾಡಲ್ಲ. ಅವರಿಗೆ ಕಾನೂನು ಸುವ್ಯವಸ್ಥೆಯೇ ಮುಖ್ಯ. ಬಹುಶ: ಡಿಸೆಂಬರ್ 19 ರ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು ಬಲಪಂಥಿಯರೇ ಆಗಿದ್ದೂ ಅವರು ಕೂಡ ನಿಯಂತ್ರಣಕ್ಕೆ ಬರುವುದು ಕಷ್ಟವಾಗುವಂತಹ ಪರಿಸ್ಥಿತಿ ಇದ್ದಿದ್ದರೆ ಆಗಲೂ ಹರ್ಷ ಆವತ್ತು ತೆಗೆದುಕೊಂಡ ಕ್ರಮವನ್ನೇ ತೆಗೆದುಕೊಳ್ಳುತ್ತಿದ್ದರು. ಆದರೆ ಆಗ ಬಿಜೆಪಿ ಪ್ರತಿಭಟನೆ ಮಾಡಬೇಕಾಗುತ್ತಿತ್ತು ಅಷ್ಟೇ!
- Advertisement -
Trending Now
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
ರಸ್ತೆ ಸುರಕ್ಷತೆ ಮತ್ತು ಸೈಬರ್ ಅಪರಾಧದ ಕುರಿತು ಜಾಗೃತಿ -ಅನುಪಮ್ ಅಗರ್ವಾಲ್
September 27, 2024
Leave A Reply