ಸಂದೀಪ್ ಲೋಬೋ ನನ್ನು ಬಾಂಬರ್ ಮಾಡಲು ನಡೆದ ವಿಫಲ ಷಡ್ಯಂತ್ರದ ಹಿಂದೆ….!
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕಿದೆ ಎನ್ನುವ ವಿಚಾರ ವೈರಲ್ ಆದಾಗ ಅದಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಗೆ ಲಿಂಕ್ ಕಲ್ಪಿಸಲಾಯಿತು. ಭಯೋತ್ಪಾದಕರು ಯಾರೋ ಮಂಗಳೂರಿನ ಒಳಗೆ ಬಂದು ವಿಧ್ವಂಸಕ ಕೃತ್ಯ ನಡೆಸಲು ಸಂಚು ಹೂಡಿದ್ದಾರೆ ಎಂದು ಎಲ್ಲರೂ ಅಂದುಕೊಂಡರು. ಸಾಮಾನ್ಯವಾಗಿ ಭಯೋತ್ಪಾದಕರು ಎಂದಾಗ ಯಾವ ಧರ್ಮದ ಜನರ ಮುಖ ಮನಸ್ಸಿಗೆ ಬರುತ್ತದೋ ಅದೇ ಮುಖಗಳು ಬಂತು. ಆದರೆ ಮರುದಿನ ಬಾಂಬ್ ಇಟ್ಟವ ಆದಿತ್ಯ ರಾವ್ ಎನ್ನುವ ವಿಷಯ ಬಯಲಿಗೆ ಬಂದಾಗ ಮೊದಲು ಫೀಲ್ಡಿಗೆ ಇಳಿದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರೋಧಿಗಳು. ಅವರು ಬಾಂಬ್ ಆರೋಪಿ ಹಿಂದೂ ಆಗಿದ್ದಾನೆ ಎಂದು ಗೊತ್ತಾದ ಕೂಡಲೇ ಇಂತಹ ಅಪರೂಪದಲ್ಲಿ ಅಪರೂಪದ ಅವಕಾಶ ಬಿಡಲೇಬಾರದು ಎಂದು ನಿರ್ಧರಿಸಿಬಿಟ್ಟರು.
ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಆರ್ ಎಸ್ ಎಸ್ ಸಮವಸ್ತ್ರ ಧರಿಸಿ ನಿಂತ ಯಾವುದೇ ಮುಖಂಡರ ಫೋಟೋ ಇದೆಯಾ ಎಂದು ಪರಿಶೀಲನೆ ನಡೆಸಿದರು. ಅವರ ಅದೃಷ್ಟ ಎಂಬಂತೆ ಸಂಘದ ಪ್ರಮುಖರಾಗಿರುವ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರು ಗಣವೇಶ ಧರಿಸಿದ್ದ ಫೋಟೋ ಸಿಕ್ಕಿತು. ಆದರೆ ಅವರು ಬಾಂಬ್ ಇಟ್ಟಿದ್ದಾರೆ ಎಂದು ಹೇಳಿದ್ದರೆ ಯಾರಾದರೂ ನಂಬಲು ಸಾಧ್ಯವೇ ಇಲ್ಲ ಎಂದು ಗೊತ್ತಿರುವುದರಿಂದ ಮತ್ತೊಮ್ಮೆ ಹುಡುಕಿದಾಗ ಅವರೊಡನೆ ಇನ್ನೊಬ್ಬ ಯುವಕ ನಿಂತ ಫೋಟೋ ಸಿಕ್ಕಿತು. ಆತ ಕೂಡ ಗಣವೇಷದಲ್ಲಿದ್ದ. ಕೂಡಲೇ ನೋಡಿ ಆದಿತ್ಯ ರಾವ್ ಗೆ ಸಂಘದ ಲಿಂಕ್ ಇದೆ. ಇವನೇ ಆದಿತ್ಯ ರಾವ್, ಇವನಿಗೆ ಬಾಂಬ್ ಇಡಲು ಪ್ರೇರಣೆಯೇ ಸಂಘ ಎಂದು ಸುದ್ದಿ ಪ್ರಚಾರ ಮಾಡಲಾಯಿತು.
ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂನಲ್ಲಿ ಕೂಡ ಒಕ್ಕಣೆ ಬರೆದು ಪೋಸ್ಟರ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಯಿತು. ಅಲ್ಲಿಗೆ ಒಂದಷ್ಟರ ಮಟ್ಟಿಗೆ ವಿಷ್ನ ಸಂತೋಷಿಗಳ ಶ್ರಮ ಯಶಸ್ವಿಯಾಯಿತು. ಇದೆಲ್ಲಾ ಆಗುವಾಗ ಮಧ್ಯಾಹ್ಮ ಆಗಿತ್ತು. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪಕ್ಕದಲ್ಲಿ ಊಟಕ್ಕೆ ಕುಳಿತು ಇನ್ನೆನೂ ಹೊಳಿಗೆ ಬಾಯಲ್ಲಿ ಇಡಬೇಕು ಎಂದು ಹೊರಟವನ ಫೇಸ್ ಬುಕ್ ನಲ್ಲಿ ಎರಡು ನೋಟಿಫಿಕೇಶನ್ ಕಾಣಿಸಿಕೊಳ್ಳುತ್ತವೆ. ನೋಡಿದರೆ ತನ್ನದೇ ಮುಖ. ಇವನೇ ಬಾಂಬರ್ ಆದಿತ್ಯ ರಾವ್ ಎಂದು ಬರೆಯಲಾಗಿದೆ. ಹೊಳಿಗೆ ಗಂಟಲಲ್ಲಿ ಸಿಕ್ಕಿಕೊಳ್ಳುವುದು ಮಾತ್ರ ಬಾಕಿ.
ಹಾಗೆ ಆದಿತ್ಯ ರಾವ್ ಇವನೇ ನೋಡಿ ಎಂದು ಸಮಾಜಘಾತುಕರು ಫೋಟೋ ಹಾಕಿದ್ದು ಸಂದೀಪ್ ಲೋಬೋ ಎನ್ನುವ ಯುವಕನದ್ದು. ಆ ಯುವಕ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಜಾಲತಾಣದ ಸದಸ್ಯನಾಗಿದ್ದಾರೆ. ಅವರು ಇತ್ತೀಚೆಗೆ ಪುತ್ತೂರಿನಲ್ಲಿ ಡಾ.ಪ್ರಭಾಕರ ಭಟ್ ಅವರು ಬಂದಿದ್ದಾಗ ಗಣವೇಷದಲ್ಲಿ ನಿಂತು ಫೋಟೋ ತೆಗೆಸಿದ್ದರು. ಅದನ್ನೇ ಈ ಷಡ್ಯಂತ್ರಕ್ಕೆ ಬಳಸಿಕೊಳ್ಳಲಾಗಿದೆ. ಇಲ್ಲಿ ಹಾಗೆ ಮಾಡಿದವರು ಒಂದೇ ಕಲ್ಲಿಗೆ ಮೂರು ಮತ್ತೊಂದು ಹಕ್ಕಿಯನ್ನು ಹೊಡೆದಿದ್ದಾರೆ. ಮೊದಲನೇಯದಾಗಿ ಸಂಘದ ವರ್ಚಸ್ಸಿಗೆ ಹಾನಿ ಮಾಡುವುದು. ಎರಡನೇಯದಾಗಿ ಸಂದೀಪ್ ‘ಲೋಬೋ’ ಅವರನ್ನು ಹಿಮ್ಮೆಟಿಸಿ ಯಾವುದೇ ಅಲ್ಪಸಂಖ್ಯಾತ ವ್ಯಕ್ತಿಗಳು ಸಿಎಎ ಪರ ಧ್ವನಿ ಎತ್ತದಂತೆ ಮಾಡುವುದು. ಈ ಪ್ರಯತ್ನ ಬಿಜೆಪಿಯ ಇನ್ನೊಬ್ಬ ಕಾರ್ಯಕರ್ತ ಮೊಹಮ್ಮದ್ ಅಸ್ಗರ್ ವಿಷಯದಲ್ಲಿಯೂ ಇತ್ತೀಚೆಗೆ ನಡೆದಿದೆ. ಮೂರನೇಯದಾಗಿ ಹಿಂದೂಗಳು ಬಾಂಬ್ ಇಡುತ್ತಾರೆ, ಆದರೆ ನಮ್ಮ ಮೇಲೆ ಸುಳ್ಳು ಆರೋಪ ಹಾಕುತ್ತಾರೆ ಎಂದು ಭ್ರಮೆ ಉಂಟು ಮಾಡುವ ಕೆಲಸ ನಡೆದಿದೆ.
ಆದರೆ ಬಿಜೆಪಿಯ ಸಾಮಾಜಿಕ ಜಾಲತಾಣ ವಿರೋಧಿಗಳ ನೆಟ್ ವರ್ಕ್ ಗಿಂತ ಎಷ್ಟು ಫಾಸ್ಟ್ ಇದೆ ಎಂದರೆ ಸಂದೀಪ್ ಲೋಬೋ ಮುಖ ಎಲ್ಲೆಲ್ಲಿ ದುರುಪಯೋಗ ಮಾಡಲಾಗಿದೆಯೋ ಅಲ್ಲೆಲ್ಲ ವಾಸ್ತವ ಸಂಗತಿಯನ್ನು ಅದಕ್ಕಿಂತ ಮೊದಲೇ ಪ್ರಚಾರಪಡಿಸಲಾಯಿತು. ಆದಿತ್ಯ ರಾವ್ ನ ಮುಖವನ್ನು ಹಾಕಿ ಇತ ಬಾಂಬರ್ ಎಂದು ನೈಜ ಸುದ್ದಿ ವೈರಲ್ ಮಾಡಲಾಯಿತು. ಇಡೀ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ಸೆಲ್ ಸಂದೀಪ್ ಲೋಬೋ ಬೆಂಬಲಕ್ಕೆ ನಿಂತಿತು. ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗಿದ್ದು ಪೊಲೀಸರು ಸೈಬರ್ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲಿಗೆ ಸೋಶಿಯಲ್ ಮೀಡಿಯಾವನ್ನು ಹೇಗೆ ದುರುಪಯೋಗ ಮಾಡಬಹುದು ಎಂದು ಬಲಪಂಥಿಯ ಸಂಘಟನೆಗಳ ವಿರೋಧಿ ಮನಸ್ಥಿತಿಯವರು ತೋರಿಸಿಕೊಟ್ಟಿದ್ದಾರೆ. ಪದೇಪದೇ ಹೀಗೆ ಆದಾಗ ಸಾಮಾಜಿಕ ಜಾಲತಾಣಗಳನ್ನು ಉತ್ತಮ ಉದ್ದೇಶಕ್ಕೆ ಬಳಸುವವರಿಗೂ ತೊಂದರೆಯಾಗುತ್ತದೆ. ಸಂದೀಪ್ ಲೋಬೋ ಸದ್ಯ ನಿರಾಳರಾಗಿದ್ದಾರೆ. ವಿರೋಧಿಗಳು ಇನ್ನೊಂದು ಘಟನೆಗೆ ಕಾಯುತ್ತಿದ್ದಾರೆ!!
Leave A Reply