ಸಂಸದ ಅನಂತಕುಮಾರ್ ಹೆಗ್ಡೆಯವರು ಮಾತನಾಡಿದರೆ ಅದು ವಿವಾದ ಆಗಲೇಬೇಕು ಎಂದು ಅವರ ಹಣೆಯಲ್ಲಿ ಬರೆದಿರಬೇಕು ಅಥವಾ ಅವರು ವಿವಾದ ಆಗಲಿರುವ ವಿಷಯವನ್ನೇ ಮಾತನಾಡುತ್ತಾರೆ. ನಾವು ಚಿಕ್ಕವರಿದ್ದಾಗಿನಿಂದ “ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು?” ಎನ್ನುವ ಪ್ರಶ್ನೆ ಬಂದಾಗ ಮಹಾತ್ಮಾ ಗಾಂಧಿ ಎಂದು ಬರೆದರೆ ಅದಕ್ಕೆ ಪೂರ್ಣ ಅಂಕ ಸಿಗುತ್ತಿತ್ತು. ಬಾಲ ಗಂಗಾಧರ ತಿಲಕ್, ಲಾಲ್ ಬಹದ್ದೂರ್ ಶಾಸ್ತ್ರೀ ಅಥವಾ ಸುಭಾಶ್ ಚಂದ್ರ ಬೋಸ್ ಅಥವಾ ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ರಾಜಗುರು ಯಾರ ಹೆಸರನ್ನು ಬರೆದರೂ ಮಾರ್ಕ್ ಸಿಗುವುದು ಡೌಟು ಇದ್ದ ಕಾರಣ ಎಲ್ಲರೂ ಮಹಾತ್ಮಾ ಗಾಂಧಿ ಎಂದೇ ಬರೆಯುತ್ತಿದ್ದರು. ಸಾವರ್ಕರ್ ಅಥವಾ ಸರ್ದಾರ್ ವಲ್ಲಭಬಾಯ್ ಪಟೇಲ್ ಎಂದು ಬರೆಯಲು ಕೂಡ ಯಾರೂ ಹೋಗುತ್ತಿರಲಿಲ್ಲ. ಯಾಕೆಂದರೆ ನಮಗೆ ಅಂಕ ಕೊಡುತ್ತಿದ್ದ ಟೀಚರ್ ಗಳಿಗೆ ಕೂಡ ಅವರ ಗುರುಗಳು ಸ್ವಾತಂತ್ರ್ಯ ತಂದು ಕೊಟ್ಟಿದ್ದು ಮಹಾತ್ಮಾ ಗಾಂಧಿ ಎಂದೇ ಬರೆಸಿ ಅಂಕ ಕೊಟ್ಟು ಪಾಸ್ ಮಾಡಿದ್ದರು.
ಹಾಗಾದರೆ ಸ್ವಾತಂತ್ರ್ಯ ಯಾವುದಾದರೂ ಅಂಗಡಿಯಲ್ಲಿ ಸಿಗುತ್ತಿದ್ದ ವಸ್ತುವಾ? ಯಾರಾದರೂ ಒಬ್ಬರು ಬೇಕರಿಗೆ ಹೋಗಿ ಅರ್ಧ ಕಿಲೋ ಸ್ವಾತಂತ್ರ್ಯ ಕೊಡಿ ಎಂದು ಕೇಳಿ ಮನೆಗೆ ತಂದು ಹಂಚಲು ಅದೇನೂ ಸಿಹಿತಿಂಡಿ ಅಥವಾ ಚಾಕೋಲೇಟ್ ಅಲ್ಲ. ರಾತ್ರಿ ನೆನೆಸಿ ಹಾಕಿದ್ದೇನೆ, ಬೆಳಿಗ್ಗೆ ಸ್ವಾತಂತ್ರ್ಯ ಮಾಡಿಕೊಡುತ್ತೇನೆ ಎನ್ನಲು ಅದು ತಿಂಡಿಯೂ ಅಲ್ಲ. ಇಲ್ಲಿಂದ ಹತ್ತು ಕಿಲೋ ಮೀಟರ್ ಹೋದರೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಹೇಳಲು ಅದು ಊರಿನ ಹೆಸರು ಕೂಡ ಅಲ್ಲ. ನನಗೆ ಸ್ವಾತಂತ್ರ್ಯದಲ್ಲಿ ಕೆಲಸ ಸಿಕ್ಕಿತು ಎನ್ನಲು ಅದು ಕಂಪೆನಿಯೊಂದರ ಹೆಸರು ಕೂಡ ಅಲ್ಲ. ಸ್ವಾತಂತ್ರ್ಯ ಒಬ್ಬರು ತಂದುಕೊಡುವ ವಿಷಯವೇ ಅಲ್ಲ. ಆದರೂ ಮಹಾತ್ಮಾ ಗಾಂಧಿಯವರಿಂದ ಸ್ವಾತಂತ್ರ್ಯ ಸಿಕ್ಕಿತು ಎನ್ನುವುದನ್ನು ನಮಗೆ ಎಪ್ಪತ್ತು ವರ್ಷಗಳಿಂದ ಕಲಿಸಲಾಗುತ್ತಿದೆ. ಹಾಗಾದರೆ ನಾವು ಸುಳ್ಳನ್ನೇ ಕಲಿತು ಬರುತ್ತಿದ್ದೇವಾ. ಖಂಡಿತ ಅಲ್ಲ. ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಮೋಹನದಾಸ ಕರಮಚಂದ್ರ ಗಾಂಧಿಯವರು ಕೂಡ ಒಬ್ಬರು ಎಂದು ಹೇಳಿದರೆ ಮಾತ್ರ ಅಂಕ ಸಿಗುತ್ತದೆ ಎಂದು ನಮಗೆ ಯಾವತ್ತೂ ಕಲಿಸಿಕೊಡಲೇ ಇಲ್ಲ. ಆದ್ದರಿಂದ ಒಂದು ಪೂರ್ಣ ಸತ್ಯವಲ್ಲದ ಮತ್ತು ಯಾರದ್ದೋ ಮನೆತನವನ್ನು ಹೈಲೈಟ್ ಮಾಡಲು ಯಾರೋ ಬಕೆಟ್ ಹಿಡಿದು ಬರೆದ ಪಠ್ಯಪುಸ್ತಕವನ್ನು ನಾವು ಓದಿದ್ದೆವು. ಹಾಗಾದರೆ ಮಹಾತ್ಮಾ ಗಾಂಧಿ ಒಬ್ಬರೇ ಸ್ವಾತಂತ್ರ್ಯ ತಂದುಕೊಟ್ಟದ್ದಲ್ಲ ಎಂದು ಹೇಳಿದರೆ ತಪ್ಪಾಗುತ್ತಾ ಎಂದು ಕೇಳಿದರೆ ಖಂಡಿತ ಅಲ್ಲ. ಎಲ್ಲರಂತೆ ಮಹಾತ್ಮಾ ಗಾಂಧಿ ಕೂಡ ಪ್ರಶ್ನಾತೀತರಲ್ಲ. ಬಹುಶ: ಅವರು ಇವತ್ತಿಗೂ ಬದುಕಿದಿದ್ದರೆ ಅದನ್ನು ನಿರೀಕ್ಷೆ ಕೂಡ ಮಾಡುತ್ತಿರಲಿಲ್ಲ. ಸ್ವತ: ಮಹಾತ್ಮಾ ಗಾಂಧಿಯವರಿಗೂ ತಾವೋಬ್ಬರೇ ಸ್ವಾತಂತ್ರ್ಯ ತಂದದ್ದು ಎನ್ನುವ ಭ್ರಮೆ ಕೂಡ ಇರಲಿಲ್ಲ. ಹಾಗೆ ತಮ್ಮ ಉಪವಾಸದಿಂದಲೇ ಬ್ರಿಟಿಷರು ಹೆದರಿ ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು ಎಂದು ಕೂಡ ಗಾಂಧಿಜಿ ಅಂದುಕೊಂಡಿರಲಿಲ್ಲ. ಯಾಕೆಂದರೆ ಮಹಾತ್ಮಾ ಗಾಂಧಿ ವಿದ್ಯಾವಂತರು. ಅವರು ಉನ್ನತ ವಿದ್ಯಾಭ್ಯಾಸ ಮಾಡಿಕೊಂಡವರು. ತಮ್ಮ ಅಹಿಂಸಾ ಹೋರಾಟ ಕೂಡ ಸ್ವಾತಂತ್ರ್ಯ ಪಡೆಯುವ ಒಂದು ಭಾಗವಾಗಿದೆ ಎಂದು ಧೃಡವಾಗಿ ನಂಬಿದವರು. ಬೆತ್ತ, ಕೋಲಿನಿಂದ ಬ್ರಿಟಿಷರನ್ನು ಹೊಡೆದು ಓಡಿಸಲು ಆಗಲ್ಲ ಎಂದು ಅವರಿಗೆ ಗೊತ್ತಿತ್ತು. ಅವರು ತೆಗೆದುಕೊಂಡ ದಾರಿಯ ಬಗ್ಗೆ ಕ್ರಾಂತಿಕಾರಿಗಳಿಗೆ ಸಮಾಧಾನವಿರಲಿಕ್ಕಿಲ್ಲ. ಹಾಗಂತ ಗಾಂಧಿಜಿ ಏನೂ ಮಾಡಿಲ್ಲ ಎನ್ನುವುದು ಕೂಡ ತಪ್ಪು. ಹಾಗೆ ಗಾಂಧಿಜಿಯೇ ಎಲ್ಲ ಮಾಡಿದ್ರು ಎನ್ನುವುದು ಕೂಡ ತಪ್ಪು.
ಇನ್ನು ಸಂಸದ ಅನಂತ ಕುಮಾರ್ ಹೆಗ್ಡೆಯವರ ವಿಷಯಕ್ಕೆ ಬರೋಣ. ಅವರು ಕ್ರಾಂತಿಕಾರಿ ಶೈಲಿ ಹೋರಾಟದಿಂದಲೇ ಮೇಲೆ ಬಂದವರು. ಅದರಿಂದಲೇ ಸಂಸದರಾದರು, ಕೇಂದ್ರ ಸಚಿವರೂ ಆಗಿದ್ದರು. ಜನ ಅವರನ್ನು ಆರಿಸುವುದೂ ಕೂಡ ಅವರು ಮಾಡಿದ ಹೋರಾಟದ ಶೈಲಿಗೆ ಮತ್ತು ಡೋಂಟ್ ಕೇರ್ ಶೈಲಿಯ ರಾಜಕೀಯಕ್ಕೆ. ಅನಂತ ಕುಮಾರ್ ಹೆಗ್ಡೆ ಬಹುಸಂಖ್ಯಾತ ಹಿಂದೂಗಳ ರಕ್ಷಕರಾಗಿ ಇರುವುದರಿಂದ ನಾವು ಸೇಫ್ ಆಗಿ ಇದ್ದೇವೆ ಎಂದು ನಂಬಿಕೊಂಡು ಇರುವ ವರ್ಗ ಉತ್ತರ ಕನ್ನಡದಲ್ಲಿ ಪ್ರತಿ ಅವಧಿಗೆ ಹೆಚ್ಚಾಗುತ್ತಲೇ ಇದೆ. ಅವರು ಆರು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದಲ್ಲಿಯೇ ಅತ್ಯಧಿಕ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ ಬೆರಳೆಣಿಕೆಯ ಸಂಸದರಲ್ಲಿ ಅಗ್ರಪಂಕ್ತಿಯಲ್ಲಿದ್ದಾರೆ. ಅದು ಅವರ ಕ್ಯಾಪೆಸಿಟಿ ಮತ್ತು ಬಿಜೆಪಿಗೆ ಅವರು ಉತ್ತರ ಕನ್ನಡದಲ್ಲಿ ಕಳೆದ ಆರು ಅವಧಿಯಿಂದ ಗೆಲುವನ್ನು ತಂದುಕೊಡುತ್ತಿರುವುದರಿಂದ ಅವರು ಕಡೆಗಣಿಸುವಂತೆ ಕೂಡ ಇಲ್ಲ. ಹಾಗಂತ ಅವರನ್ನು ಈ ಬಾರಿ ಸಚಿವರನ್ನಾಗಿ ಮಾಡದೇ ಕೇಂದ್ರ ನಾಯಕರು ನಿರ್ಲಕ್ಷ್ಯ ಕೂಡ ಮಾಡಿದ್ದಾರೆ. ಆದ್ದರಿಂದ ಫೇಮ್ ಗೆ ಬರಲು ಹೆಗ್ಡೆ ಹೀಗೆ “ಸತ್ಯ”ವನ್ನು ಹೇಳಿ ತಮ್ಮ ಇರುವಿಕೆ ಸಾಬೀತುಪಡಿಸಲೇ ಇರುತ್ತಾರೆ!!
Leave A Reply