ತುಳುನಾಡಿನ ಕಂಬಳ ಓಟಗಾರನಿಗೆ ಫಿದಾ ಆದ ಕೇಂದ್ರ ಸಚಿವ!
ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡರು, ಕೇವಲ 13.62 ಸೆಕೆಂಡ್ ಗಳಲ್ಲಿ 142.50 ಮೀಟರ್ ಓಡಿ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಇದೀಗ ಶ್ರೀನಿವಾಸ ಗೌಡರು ದೇಶದ ಕಣ್ಮಣಿಯಾಗಿದ್ದಾರೆ. ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮೂಲದ ಯುವಕ ಶ್ರೀನಿವಾಸಗೌಡರನ್ನು ಟೋಕ್ಯೋ ಒಲಂಪಿಕ್ಸ್ ಕಳಿಸಿಕೊಡಿ ಎಂದು ರಾಜ್ಯ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿರುವುದು ಇಡೀ ತುಳುನಾಡಿಗೆ ಹೆಮ್ಮೆಯ ವಿಚಾರ.
ಶ್ರೀನಿವಾಸ ಗೌಡರ ಸಾಧನೆಗೆ ಫುಲ್ ಫಿದಾ ಆದ ಕ್ರೀಡಾ ಸಚಿವ…
ಹೌದು… ಕಂಬಳದ ಉಸೇನ್ ಬೋಲ್ಟ್ ಎಂದೆನಿಸಿರುವ ಶ್ರೀನಿವಾಸ ಗೌಡರನ್ನು ಸ್ವತಃ ಕೇಂದ್ರ ಕ್ರೀಡಾ ಸಚಿವ ಕಿರಣ್ ರಜಿಜು ಅವರೇ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಬಳಿಗೆ ಟ್ರಯಲ್ಸ್‍ಗೆ ಬರಲು ಆಹ್ವಾನಿಸಿದ್ದಾರೆ. ಈಗಾಗಲೇ ರೈಲ್ವೆ ಟಿಕೆಟ್ ಬುಕ್ ಮಾಡಿದ್ದು ಗೌಡರು ಸೋಮವಾರ ದಿಲ್ಲಿ ತಲುಪುವ ವ್ಯವಸ್ಥೆಯನ್ನೂ ಕೇಂದ್ರ ಸರಕಾರ ಮಾಡಿದೆ. ಅವರಿಗೆ ದೇಶದ ಪ್ರತಿಷ್ಠಿತ ತರಬೇತುದಾರರಿಂದ ತರಬೇತಿ ಒದಗಿಸಲು ನಾವು ಸಿದ್ಧ ಎಂದು ಘೋಷಿಸಿದ್ದಾರೆ.
ಅದಲ್ಲದೆ ಉದ್ಯಮಿ ಆನಂದ್ ಮಹೀಂದ್ರಾ ಶ್ರೀನಿವಾಸ ಗೌಡರ ಸಾಧನೆಯನ್ನು ಕೊಂಡಾಡಿದ್ದಾರೆ. ಒಮ್ಮೆ ಅವರ ಮೈಕಟ್ಟನ್ನು ನೋಡಿ, ಈ ಮನುಷ್ಯ ಅಸಾಧಾರಣ ಅಥ್ಲೆಟಿಕ್ ಸಾಹಸ ಮಾಡಲು ಸಮರ್ಥ. ಈ ವ್ಯಕ್ತಿಗೆ ಸರಿಯಾದ ತರಬೇತಿ ನೀಡಬೇಕು ಇಲ್ಲವೇ ಕಂಬಳವನ್ನು ಒಲಿಂಪಿಕ್ಸ್‍ಗೆ ಸೇರಿಸಬೇಕು. ಏನಾದರೂ ಮಾಡಿ ಶ್ರೀನಿವಾಸ್‍ರಿಂದ ನಮಗೆ ಚಿನ್ನದ ಪದಕ ಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಶ್ರೀನಿವಾಸ್ ಗೌಡ ಅವರ ಸಾಧನೆಯನ್ನು ರಾಜ್ಯ ಸರಕಾರವೂ ಗುರುತಿಸಿದೆ.
ಉಸೆನ್ ಬೋಲ್ಟ್ ವೇಗವನ್ನು ಮುರಿದ ಕಂಬಳ ಓಟಗಾರ
28 ವರ್ಷದ ಶ್ರೀನಿವಾಸ ಗೌಡರು ಕಟ್ಟಡ ಮೇಸ್ತ್ರಿಯಾಗಿದ್ದು ನವೆಂಬರ್‍ನಿಂದ ಮಾರ್ಚ್‍ನವರೆಗೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳದಲ್ಲಿ ಭಾಗವಹಿಸುತ್ತಾರೆ. ಇದೀಗ ಶರವೇಗದ ಕಂಬಳ ಓಟಗಾರ ದೇಶದೆಲ್ಲೆಡೆ ಸುದ್ದಿಯಲ್ಲಿದ್ದಾರೆ. ಶ್ರೀನಿವಾಸ್ ಗೌಡ ಅವರು ಕಂಬಳ ಅಕಾಡೆಮಿಯಲ್ಲಿ 2011ರಲ್ಲಿ ಓಟದ ತರಬೇತಿ ಪಡೆದಿದ್ದರು. ಆ ಬಳಿಕ ನೇಗಿಲು ಕಿರಿಯ – ಹಿರಿಯ, ಹಗ್ಗ ಹಿರಿಯ – ಕಿರಿಯ ವಿಭಾಗಗಳಲ್ಲಿ ಕೋಣಗಳನ್ನು ಓಡಿಸಿ ಸಾಧನೆ ಮಾಡಿದ್ದಾರೆ. 8 ವರ್ಷದಲ್ಲಿ 100ಕ್ಕೂ ಅಧಿಕ ಪದಕ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್ ಆಗಿದ್ದಾರೆ. ನಾನು ಓಡಿದ್ದು ಕೇವಲ ನಮ್ಮೂರಿನ ಕೆಸರು ಗದ್ದೆಯಲ್ಲಿ …ಇಷ್ಟರ ಮಟ್ಟಿಗೆ ಸುದ್ದಿಯಾಗಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.
Leave A Reply