ಜಾತಿ ಲೆಕ್ಕಾಚಾರ, ದಕ್ಷಿಣ-ಉತ್ತರ ಎಲ್ಲಾ ನೋಡಿ ಅಳೆದು ತೂಗಿ ಮೇಯರ್ ಹುದ್ದೆ ಸಿಗಲಿದೆ!!
ಫೆಬ್ರವರಿ 28 ಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಪ್ರಥಮ ಪ್ರಜೆಯ ಪಟ್ಟ ಮೊದಲ ಅವಧಿಯಲ್ಲಿ ಯಾರಿಗೆ ಸಿಗುತ್ತೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ. ದೊಡ್ಡದೊಂದು ಬದಲಾವಣೆ ಆಗದೇ ಇದ್ದರೆ ದಿವಾಕರ ಪಾಂಡೇಶ್ವರ ಅವರಿಗೆ ಮೇಯರ್ ಹುದ್ದೆ ಸಿಗಬಹುದು. ಯಾಕೆಂದರೆ ಹಿಂದುಳಿದ ವರ್ಗ {ಎ} ಯಲ್ಲಿ ಹಿರಿತನ ನೋಡಿದರೆ ಅವರಿಗೆ ಆ ಭಾಗ್ಯ ಸಿಗುವುದರಲ್ಲಿ ಸಂಶಯವಿಲ್ಲ.
ಉಳಿದಂತೆ ಒಂದು ಸಲ ಸೋತು ಎರಡು ಸಲ ಗೆದ್ದಿರುವ ಜಯಾನಂದ ಅಂಚನ್ ಹಾಗೂ ಶರತ್ ನಂತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಉಳಿದವರು ಪ್ರಥಮ ಬಾರಿ ಗೆದ್ದವರು. ಹಿಂದುಳಿದ ವರ್ಗ ಎಗೆ ಈ ಬಾರಿ ಮೇಯರ್ ಹುದ್ದೆ ಸಿಗುವುದು ಕಾಂಗ್ರೆಸ್ಸ್ ಅಧಿಕಾರದಿಂದ ನಿರ್ಗಮಿಸುವ ಮೊದಲು ಮಾಡಿಟ್ಟ ಸೆಟ್ಟಿಂಗ್. ಆದರೆ ಪ್ರೇಮಾನಂದ ಶೆಟ್ಟಿಯವರಿಗೆ ಮೇಯರ್ ಸ್ಥಾನದಲ್ಲಿ ಕುಳ್ಳಿರಿಸಿ ಆಡಳಿತ ಯಂತ್ರಕ್ಕೆ ಸೂಕ್ತ ದಾರಿ ತೋರಿಸಬೇಕು ಎನ್ನುವ ಕಾರಣಕ್ಕೆ ಬಿಜೆಪಿಯ ಥಿಂಕ್ ಟ್ಯಾಂಕ್ ಗಳು ಈ ಬಾರಿ ಸಾಮಾನ್ಯ ಮೀಸಲಾತಿ ಮಾಡಿಕೊಂಡು ಬಂದಿದ್ದರು. ಪ್ರೇಮಾನಂದ ಶೆಟ್ಟಿಯವರು ಮೇಯರ್ ಈ ವರ್ಷವೇ ಆಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ನಮ್ಮ ಪಾಲಿಕೆಯೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೇಯರ್, ಅಧ್ಯಕ್ಷ ಮೀಸಲಾತಿಯನ್ನು ನಗರಾಭಿವೃದ್ಧಿ ಇಲಾಖೆ ಕಳೆದ ತಿಂಗಳು ಘೋಷಿಸುವಾಗ 22 ನೇ ಮೇಯರ್ ಸಾಮಾನ್ಯ ವರ್ಗಕ್ಕೆ ನೀಡಿದ್ದರು. ಆದರೆ ನಂತರ ಗೊತ್ತಾದ ವಿಷಯವೇನೆಂದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ 21 ನೇ ಮೇಯರ್ ಅಧಿಕಾರ ಅವಧಿ ಆರಂಭವಾಗಿಯೇ ಇಲ್ಲ. ಅಲ್ಲಿಯವರೆಗೆ ಪ್ರೇಮಾನಂದ ಶೆಟ್ಟಿಯವರೇ ಫಿಕ್ಸ್ ಎಂದು ಅಂದುಕೊಂಡಿದ್ದವರಿಗೆ ಹೊಸ ಲೆಕ್ಕಾಚಾರ ಅರ್ಥವಾಗಲೇ ಇಲ್ಲ. 21 ನೇ ಮೇಯರ್ ಆಗದೇ, ಅವರ ಒಂದು ವರ್ಷದ ಅವಧಿ ಮುಗಿಯದೇ 22 ನೇ ಮೇಯರ್ ಆಯ್ಕೆ ಹೇಗೆ? ಆದ್ದರಿಂದ ಈ ಬಾರಿ ಹಿಂದುಳಿದ ವರ್ಗ ಎ ಯಿಂದಲೇ ಯಾರಾದರೂ ಮೇಯರ್ ಆಗಬೇಕಿದೆ. ಅದರ ಮೊದಲು ಪ್ರಾದೇಶಿಕ ಆಯುಕ್ತರು ಎಲ್ಲಾ 60 ಜನರಿಗೆ ನೋಟಿಸು ಕಳಿಸಿ ಅವರ ಹೆಸರನ್ನು ಗೆಜೆಟ್ ನೋಟಿಫಿಕೇಶನ್ ಮಾಡಬೇಕಿದೆ. ಉಪಮೇಯರ್ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಒಂದು ವೇಳೆ ಮಂಗಳೂರು ನಗರ ದಕ್ಷಿಣಕ್ಕೆ ಮೇಯರ್ ಹುದ್ದೆ ಹೋದರೆ ಉಪಮೇಯರ್ ಮಂಗಳೂರು ಉತ್ತರಕ್ಕೆ ಸಲ್ಲುತ್ತದೆ.
ಈ ನಡುವೆ ಕೆಲವು ಮೇಯರ್ ಆಕಾಂಕ್ಷಿಗಳು ಹಿಂದುಳಿದ ವರ್ಗ ಎ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಬಿಲ್ಲವ ಸಮುದಾಯ ಬರುವುದರಿಂದ ಬಿಲ್ಲವ ಕಾರ್ಪೋರೇಟರ್ ಅವರಿಗೆನೆ ಮೇಯರ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ದಿವಾಕರ ಅವರು ಕೋಟೆ ಎನ್ನುವ ಜಾತಿಯವರಾಗಿರುವುದರಿಂದ ಅವರಿಗಿಂತ ಬಿಲ್ಲವ ಸಮುದಾಯ ಹೆಚ್ಚಿರುವುದರಿಂದ ಬಿಲ್ಲವರಿಗೆ ಕೊಡಬೇಕು ಎನ್ನುವ ಕೂಗು ಎಬ್ಬಿಸುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಭಾರತೀಯ ಜನತಾ ಪಾರ್ಟಿಯಲ್ಲಿ ಜಾತಿ ಲೆಕ್ಕಾಚಾರ ಹಿಡಿದು ಹಟ ಮಾಡುವವರಿಗೆ ಮಣೆ ಹಾಕುವ ಕ್ರಮ ಇಲ್ಲ. ಹಾಗಂತ ಜಾತಿ ನೋಡುವುದೇ ಇಲ್ಲ ಎಂದಲ್ಲ. ಆದರೆ ಜಾತಿ ಎದುರಿಗೆ ಇಟ್ಟು ಆಟ ಆಡಿದರೆ ನಡೆಯುವುದಿಲ್ಲ. ಅದರೊಂದಿಗೆ ಹಿಂದೆ ಬಿಜೆಪಿ ಅವಧಿಯಲ್ಲಿ ಮಂಗಳೂರು ಉತ್ತರಕ್ಕೆ ಮೂರು ಮೇಯರ್ ಸಿಕ್ಕಿದೆ. ಈ ಅವಧಿಯಲ್ಲಿ ದಿವಾಕರ್, ಪ್ರೇಮಾನಂದ ಶೆಟ್ಟಿಯವರಿಗೆ ಮೊದಲ ಎರಡು ಅವಧಿಗೆ ಕೊಟ್ಟರೆ ನಂತರ ಕೊನೆಯ ಮೂರು ಅವಧಿ ಮಂಗಳೂರು ಉತ್ತರಕ್ಕೆ ಸಿಗುತ್ತದಾ ಎನ್ನುವುದು ಕೆಲವರ ಪ್ರಶ್ನೆ. ನಾನು ಹೇಳುವುದು ಇಷ್ಟೇ. ಜಾತಿ ಲೆಕ್ಕಾಚಾರ, ದಕ್ಷಿಣ-ಉತ್ತರ ಲೆಕ್ಕಾಚಾರ ಎಲ್ಲವನ್ನು ಶಾಸಕರಿಗೆ, ಸಂಸದರಿಗೆ, ಜಿಲ್ಲಾಧ್ಯಕ್ಷರಿಗೆ ಬಿಟ್ಟು ಪಕ್ಷದ ಕಾರ್ಪೋರೇಟರ್ ಗಳು, ಅವರ ಬೆಂಬಲಿಗರು, ಕಾರ್ಯಕರ್ತರು ಅಭಿವೃದ್ಧಿಯ ಕಡೆ ನೋಡುವುದು ಒಳ್ಳೆಯದು. ಹಾಗೆ ಮೇಯರ್ ಯಾರೇ ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಸೂರ್ಯ ಸಂಜೆ ಮುಳುಗುತ್ತಿದ್ದಂತೆ ತಾವು ಕೂಡ ವಿರಾಮಕ್ಕೆ ಜಾರಬಾರದು. ಯಾಕೆಂದರೆ ಬಿಜೆಪಿಯ ದಕ್ಷಿಣದ ಶಾಸಕರು ತಮ್ಮ ಕಾರ್ಪೋರೇಟರ್ಸ್ ದಿನದ 24 ಗಂಟೆಯೂ ಸಿಗುತ್ತಾರೆ ಎಂದು ವಿಸಿಟಿಂಗ್ ಕಾರ್ಡ್ ಕೊಡಿಸಿದ್ದಾರೆ.
Leave A Reply