ತಿಂಗಳಿಗೆ ಒಮ್ಮೆ ಉದ್ದದ ಗೌನ್ ಧರಿಸಿ ಪಾಲಿಕೆಯ ಸಭೆ ಭಾಗವಹಿಸಿ, ಕಾಫಿ ಕುಡಿದು ಎದ್ದು ಹೋದರೆ ಆಗುವುದಿಲ್ಲ. ಯಾರಾದರೂ ಗಣ್ಯಾತಿಗಣ್ಯರು ಮಂಗಳೂರಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಉದ್ದದ ಅದೇ ಗೌನ್ ಧರಿಸಿ ಕೈಕುಲುವುದಕ್ಕೆ ಸೀಮಿತವಾದರೆ ದಿವಾಕರ್ ಪಾಂಡೇಶ್ವರ್ ಹತ್ತರಲ್ಲಿ ಹನ್ನೊಂದನೇ ಮೇಯರ್ ಆಗಿ ತಮ್ಮ ಒಂದು ಒಂದು ವರ್ಷದ ಅಧಿಕಾರಾವಧಿ ಮುಗಿಸಿದರೆ ಅದರಿಂದ ಸಾಧನೆ ಆಗುವುದಿಲ್ಲ. ಹೆಚ್ಚು ಕಡಿಮೆ ಆರು ವರ್ಷಗಳ ಬಳಿಕ ಭಾರತೀಯ ಜನತಾ ಪಾರ್ಟಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿದೆ. ವಿಧಾನಸಭಾ ಚುನಾವಣೆಗೆ ಬಹುತೇಕ ಮೂರು ವರ್ಷಗಳು ಇರುವುದರಿಂದ ದಿವಾಕರ್ ಮೇಲೆ ಅಂತಹ ಒತ್ತಡ ಏನೂ ಇರುವುದಿಲ್ಲ. ಚುನಾವಣಾ ವರ್ಷ ಆಗಿದ್ದರೆ ಒಂದೊಂದು ದಿನವೂ ಅಮೂಲ್ಯವಾಗುತ್ತಿತ್ತು. ಆದರೆ ವಿಶೇಷವೆಂದರೆ ಈಗ ದಿವಾಕರ್ ಒಪನಿಂಗ್ ಬ್ಯಾಟ್ಸ್ ಮೆನ್ ಇದ್ದ ಹಾಗೆ. ಕ್ರಿಕೆಟ್ ಮೈದಾನದಲ್ಲಿ ಮೊದಲ ದಾಂಡಿಗ ಉತ್ತಮ ಅಡಿಪಾಯ ಹಾಕಿಕೊಟ್ಟರೆ ನಂತರದ ದಾಂಡಿಗರಿಗೆ ದೊಡ್ಡ ಮೊತ್ತ ಕಟ್ಟಲು ಅನುಕೂಲವಾಗುತ್ತದೆ. ಮೊದಲನೇಯವರೇ ನೀರಲ್ಲಿ ಬಿದ್ದರೆ ನಂತರ ಸುಧಾರಿಸುವುದು ಕಷ್ಟ. ಆ ನಿಟ್ಟಿನಲ್ಲಿ ದಿವಾಕರ್ ಅವರ ಮುಂದೆ ಸವಾಲುಗಳಿವೆ. ಪಾಲಿಕೆ ಐದು ವರ್ಷಕ್ಕೆ ಬಿಜೆಪಿಗೆ ಸಿಕ್ಕಿರುವುದರಿಂದ ಐದರಲ್ಲಿ ಒಂದು ವರ್ಷ ಗ್ಯಾರಂಟಿ ದಿವಾಕರ್ ಮೇಯರ್ ಆಗಲಿದ್ದರು. ಆದರೆ ಮೊದಲನೇ ವರ್ಷವೇ ಅವರಿಗೆ ಸಿಕ್ಕಿರುವುದು ಪ್ಲಸ್ ಅಂಡ್ ಮೈನಸ್ ಎರಡೂ ಇದೆ. ಪ್ಲಸ್ ಏನು? ಪಾಲಿಕೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಇದೆ. ಚುನಾವಣೆ ಸದ್ಯ ಇಲ್ಲದಿರುವುದರಿಂದ ಒತ್ತಡ ಇಲ್ಲ. ಸ್ಮಾರ್ಟ್ ಸಿಟಿ, ಅಮೃತ ಯೋಜನೆಯ ಫಂಡ್ ಅಭಿವೃದ್ಧಿಗೆ ಸಾಕಷ್ಟಿದೆ. ತಮ್ಮದೇ ಪಕ್ಷದ ಇಬ್ಬರು ಯುವ ಉತ್ಸಾಹಿ ಶಾಸಕರು ಇದೆ. ಸಿಕ್ಕಾಪಟ್ಟೆ ಕೆಲಸ ಮಾಡಬೇಕು ಎನ್ನುವ ತುಡಿತದಲ್ಲಿರುವ ಯುವ ಕಾರ್ಪೋರೇಟರ್ ಗಳಿದ್ದಾರೆ.
ಹಾಗಾದರೆ ಮೈನಸ್ ಏನು? ಮೊದಲನೇಯದಾಗಿ ಜನ ಒಂದು ವರ್ಷದಿಂದ ಪಾಲಿಕೆಯಲ್ಲಿ ಮೇಯರ್ ಕುರ್ಚಿ ಖಾಲಿ ಇರುವುದು ನೋಡಿ ಬೇಸತ್ತಿದ್ದಾರೆ. ಜನರು ಯಾವಾಗ ಮೇಯರ್ ಬಂದು ಕುಳಿತುಕೊಳ್ಳುತ್ತಾರೆ, ಯಾವಾಗ ಸಮಸ್ಯೆ ಹೇಳುವುದು ಎಂದು ಕಾದು ಕುಳಿತಿದ್ದಾರೆ. ಜನರ ನಿರೀಕ್ಷೆಗಳು ಬೆಟ್ಟದಷ್ಟಿವೆ. ದಿವಾಕರ್ ಯಾವುದಕ್ಕೆ ಕೈ ಹಾಕುತ್ತಾರೆ, ಯಾವುದನ್ನು ದಡ ಸೇರಿಸುತ್ತಾರೆ ಎಂದು ಜನ ನೋಡುತ್ತಾ ಇದ್ದಾರೆ. ನಮ್ಮ ಜನ ಪ್ರತಿಭಟನೆಗೆ ಇಳಿಯದಿದ್ದರೂ ಯಾವಾಗ ಯಾರಿಗೆ ಎಲ್ಲಿ ಇಡಬೇಕು ಎಂದು ಚೆನ್ನಾಗಿ ತಿಳಿದಿದ್ದಾರೆ. ಕೆಲವು ತೆರಿಗೆಗಳು, ಶುಲ್ಕಗಳು ಆಡಳಿತಾಧಿಕಾರಿ ಪಾಲಿಕೆಯ ಹೊಣೆ ಹೊತ್ತುಕೊಂಡಿದ್ದಾಗ ಜಾಸ್ತಿಯಾಗಿದೆ. ಅದನ್ನು ಬಿಜೆಪಿ ಕಡಿಮೆ ಮಾಡಬೇಕಾದರೆ ಒಂದಿಷ್ಟು ಬೆವರು ಸುರಿಸಬೇಕು. ದಿವಾಕರ್ ಅವರು ಅದನ್ನು ಒಬ್ಬರೇ ಮಾಡಲು ಆಗುವುದಿಲ್ಲ. ಹಾಗಂತ ರಾಜ್ಯ ಸರಕಾರ ಬಿಜೆಪಿಯದ್ದೇ ಇದ್ದರೂ ” ಬನ್ನಿ ದಿವಾಕರ್ ಪಾಂಡೇಶ್ವರ್ ಎಲ್ಲಿ ಸಹಿ ಹಾಕಿಕೊಡಬೇಕು” ಎಂದು ನಗರಾಭಿವೃದ್ಧಿ ಇಲಾಖೆಯ ಸಚಿವರು, ಅಧಿಕಾರಿಗಳು ಸುಲಭವಾಗಿ ಕೆಲಸ ಮಾಡಿಕೊಡುತ್ತಾರೆ ಎನ್ನುವ ಗ್ಯಾರಂಟಿಯೂ ಇಲ್ಲ. ಘಟ್ಟದ ಮೇಲಿನವರಿಗೆ ಮಂಗಳೂರು ಬಿದ್ದು ಹೋಗಿಯೇ ಇಲ್ಲ. ಇದರೊಂದಿಗೆ ಕಾಂಗ್ರೆಸ್ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರೂ ವಿಪಕ್ಷದಲ್ಲಿ ಒಂದಿಷ್ಟು ಹಳೆ ಹುಲಿಗಳು ಇದ್ದೇ ಇವೆ. ಅವರನ್ನು ಸಂಭಾಳಿಸಲು ಗಂಭೀರವಾದ ಆದರೆ ನಯನಾಜೂಕಿನ ಮತ್ತು ಖಡಕ್ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಗ್ಗದ ಮೇಲಿನ ನಡಿಗೆ ಮಾಡಲೇಬೇಕು.
ಆದರೆನಾನು ದಿವಾಕರ್ ಅವರಲ್ಲಿ ಕುತೂಹಲದಿಂದ ಕಾಯುತ್ತಿರುವ ಗುಣವೆಂದರೆ ಅವರು ನೀರಿನ ಬಿಲ್ ಲಕ್ಷಗಟ್ಟಲೆ ಬಾಕಿ ಇಟ್ಟಿರುವ, ಹೋರ್ಡಿಂಗ್ಸ್ ಶುಲ್ಕ ಪೇಡಿಂಗ್ ಇಟ್ಟಿರುವ, ಕಟ್ಟಡ ತೆರಿಗೆ ಕಟ್ಟದೆ ಸತಾಯಿಸುತ್ತಿರುವ ಶ್ರೀಮಂತ ಕುಳಗಳನ್ನು ಹೇಗೆ ದಾರಿಗೆ ತರುತ್ತಾರೆ ಎನ್ನುವುದು? 20 ಕೋಟಿ ಬಾಕಿ ಇರುವ ನೀರಿನ ಬಿಲ್, 16 ಕೋಟಿ ಕಟ್ಟಡ ತೆರಿಗೆ , 50 ಲಕ್ಷ ಹೋರ್ಡಿಂಗ್ ಹಣ ಬರಲು ಬಾಕಿ ಇದೆ. ದಿವಾಕರ್ ಅವರಲ್ಲಿ ಈ ಹಣ ಹಿಂದಕ್ಕೆ ತರಿಸುವ ಅವಕಾಶ, ಅಧಿಕಾರ ಎರಡೂ ದೇವರು ಕೊಟ್ಟಿದ್ದಾರೆ. ತರುವಲ್ಲಿ ಯಶಸ್ವಿಯಾಗುತ್ತಾರಾ ಎನ್ನುವುದು ಅವರ ಎದುರಿಗೆ ನಾನು ಇಡುವ ಮೊದಲ ಪ್ರಶ್ನೆ. ಅಂತಿಮವಾಗಿ ನಾನು ಇದ್ದೇ ಇದ್ದೇನೆ. “ಮೇಯರ್” ದಿವಾಕರ್ ಪಾಂಡೇಶ್ವರ್ ಮಾಡಬೇಕಾದ ಕೆಲಸಗಳನ್ನು ಮಾಡದಿದ್ದಾಗ ನಿಮ್ಮ ಪರವಾಗಿ ಅವರನ್ನು ಎಚ್ಚರಿಸಲು ತಯಾರಾಗಿದ್ದೇನೆ!
Leave A Reply