ವಿಪಕ್ಷಗಳ ಮಾತು ಕೇಳಿ ಅಮಿತ್ ಶಾ ರಾಜೀನಾಮೆ ಕೊಡಲು ಸಾಧ್ಯವೇ?
ಆಪ್ ಕಾರ್ಪೋರೇಟರ್ ತಾಹೀರ್ ಹುಸೇನ್ ಮನೆಯ ಮಹಡಿಯ ಮೇಲೆ ಆಸಿಡ್ ಬಾಲ್, ಪೆಟ್ರೋಲ್ ಬಾಂಬ್ ಗಳು ಇದ್ದ ಬಗ್ಗೆ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಆ ಮನುಷ್ಯನನ್ನು ಪಕ್ಷದಿಂದ ಹೊರಗೆ ಹಾಕಲು ಆಪ್ ಹೋಗಿಲ್ಲ, ಕಾಂಗ್ರೆಸ್ ಒತ್ತಡ ಕೂಡ ಹಾಕುತ್ತಿಲ್ಲ. ಓವೈಸಿಯಂತವರು ತಾಹೀರ್ ಹುಸೇನ್ ತಮ್ಮ ಚಿಕ್ಕಪ್ಪನ ಮಗನೋ ಎನ್ನುವಂತೆ ಮೌನವಾಗಿದ್ದಾರೆ. ಇವರೆಲ್ಲ ದೆಹಲಿಯ ಸಂಸತ್ ಭವನದ ಎದುರು ಮಹಾತ್ಮ ಗಾಂಧಿ ಪ್ರತಿಮೆಯ ಬಳಿ “ಅಮಿತ್ ಶಾ ಅವರು ರಾಜೀನಾಮೆ ಕೊಡಬೇಕು” ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೂ ಗೊತ್ತಿದೆ, ತಮ್ಮ ಪ್ರತಿಭಟನೆಯಿಂದ ಅಮಿತ್ ಶಾ ರಾಜೀನಾಮೆ ಕೊಡುವುದಿಲ್ಲ. ಆದರೆ ದೆಹಲಿಯ ಒಟ್ಟು ಗಲಭೆಯನ್ನು ಕೇಂದ್ರದ ಬಿಜೆಪಿ ಸರಕಾರದ ಮೇಲೆ ಹಾಕಿ ಜನರಿಗೆ ಬಿಜೆಪಿ ಮುಸ್ಲಿಮರ ಮೇಲೆ ಅನ್ಯಾಯ ಮಾಡುತ್ತಿದೆ ಎನ್ನುವ ಅಭಿಪ್ರಾಯ ಮೂಡಿಸಲು ವಿಪಕ್ಷಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಅದಕ್ಕೆ ಸರಿಯಾಗಿ ಅಮಿತ್ ಶಾ ಅವರು ವಿಪಕ್ಷಗಳ ಟೀಕೆಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. “ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಬಹಳ ದೊಡ್ಡ ತಪ್ಪು ಸಂದೇಶವನ್ನು ನೀಡುತ್ತಿವೆ.”
ಕಾಂಗ್ರೆಸ್ ಮುಖಂಡರ ಪ್ರಕಾರ ಮುಸ್ಲಿಮರನ್ನು ಭಾರತದಿಂದ ಹೊರಗೆ ಕಳುಹಿಸಿ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಸಂಚು ಎನ್ನುತ್ತಿದ್ದಾರೆ. ಭಾರತ ಖಂಡಿತವಾಗಿಯೂ ಪಾಕಿಸ್ತಾನದಂತೆ ಮಾತು ತಪ್ಪುವ ದೇಶವಲ್ಲ. ನಾವು 1950 ರ ಒಪ್ಪಂದದಲ್ಲಿ ನಮ್ಮ ರಾಷ್ಟ್ರದಲ್ಲಿರುವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಮಾತು ಕೊಟ್ಟಿದ್ದೇವೆ. ಹಾಗೆ ನಡೆದುಕೊಂಡಿದ್ದೇವೆ. ಆದರೆ ಪಾಕಿಸ್ತಾನ ಮಾತು ತಪ್ಪಿ ಅಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತ್, ಸಿಖ್, ಬೌದ್ಧ, ಪಾರ್ಶಿ, ಜೈನ್ ಧರ್ಮದವರನ್ನು ಹಿಂಸಿಸಿರುವುದರಿಂದ ಅವರೀಗ ಭಾರತಕ್ಕೆ ಬಂದಿದ್ದಾರೆ. ಪಾಕ್, ಬಾಂಗ್ಲಾ, ಅಪಘಾನಿಸ್ತಾನ ಇಸ್ಲಾಂ ರಾಷ್ಟ್ರಗಳೆಂದು ಕರೆಸಿಕೊಳ್ಳುತ್ತಿರುವುದರಿಂದ ಅಲ್ಲಿ ಮುಸಲ್ಮಾನರೇ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬರುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುವುದು ಹಾಸ್ಯಾಸ್ಪದ. ಹಾಗಂತ ಭಾರತದ ಕಾನೂನು ಒಪ್ಪಿಕೊಂಡು ಒಂದು ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದ ಯಾವನೇ ವ್ಯಕ್ತಿ ಭಾರತಕ್ಕೆ ಬಂದರೂ ಅವರು ಇಲ್ಲಿ ಪೌರತ್ವ ಪಡೆದುಕೊಳ್ಳಬಹುದು. ಅದಕ್ಕೆ ಅವರು ಪೌರತ್ವ ಪಡೆಯುವ ಇತರ ವಿಧಾನಗಳನ್ನು ಅನುಸರಿಸಬೇಕು. ಉದಾಹರಣೆಗೆ ಅದ್ನಾನ್ ಸಾಮಿ ಎನ್ನುವ ಖ್ಯಾತ ಗಾಯಕರು ಭಾರತಕ್ಕೆ ಬಂದು ಪೌರತ್ವ ಪಡೆದು ಕುಟುಂಬದ ಜೊತೆ ನೆಮ್ಮದಿಯಾಗಿ ವಾಸಿಸುತ್ತಿದ್ದಾರೆ. ಭಾರತ ಹೊರದೇಶದ ಮುಸಲ್ಮಾನರಿಗೆ ಪೌರತ್ವ ಕೊಡುವುದಿಲ್ಲ ಎಂದಲ್ಲ. ಆದರೆ ಮುಸ್ಲಿಮೇತರರಿಗೆ ಕೊಡುವ ಪೌರತ್ವವನ್ನು ಐದು ವರ್ಷಗಳಿಗೆ ಇಳಿಸುವ ಮೂಲಕ ಅದನ್ನು ಸುಲಭಗೊಳಿಸಲಾಗಿದೆ.
ಇನ್ನು ಕೊನೆಯದಾಗಿ ರಾಷ್ಟ್ರೀಯ ಪೌರತ್ವ ನೋಂದಾವಣೆ ಪ್ರಕ್ರಿಯೆಯ ಬಗ್ಗೆ ಹೇಳುವುದಾದರೆ ನಮ್ಮ ರಾಷ್ಟ್ರದ ಗೃಹ ಸಚಿವರಾಗಿರುವ ಶ್ರೀ ಅಮಿತ್ ಶಾ ಅವರು ಹೇಳುವ ಹಾಗೆ ” ಎನ್ ಆರ್ ಸಿಯ ನಂತರ ಯಾವುದೇ ಭಾರತೀಯನನ್ನು ಹೊರಗೆ ಕಳುಹಿಸಲಾಗುವುದಿಲ್ಲ. ಅಲ್ಪಸಂಖ್ಯಾತರಿಗೆ ಇತರರ ಹಾಗೆ ವಿಶೇಷ ಸೌಲಭ್ಯ ನೀಡಿ ಎನ್ ಆರ್ ಸಿ ಯಲ್ಲಿ ಸೇರಿಸಲಾಗುತ್ತದೆ. ಹಾಗಂತ ನಮ್ಮ ಗಡಿಗಳನ್ನು ನುಸುಳಿಕೋರರಿಗಾಗಿ ತೆರೆದಿಡುವ ಪ್ರಶ್ನೆಯೇ ಇಲ್ಲ. ಯಾವುದೇ ಧರ್ಮದ ಅಲ್ಪಸಂಖ್ಯಾತರು ಆತಂಕ ಪಡುವ ಅಗತ್ಯ ಇಲ್ಲ. ಇದು ಏನಿದ್ದರೂ ನುಸುಳುಕೋರರ ಮೇಲೆ ನಿಯಂತ್ರಣ ತರಲು ಮಾತ್ರ. ಎನ್ ಆರ್ ಸಿಯಲ್ಲಿ ಹೆಸರು ನೋಂದಾಯಿಸಲು ಅರ್ಹರಲ್ಲದವರು ಮಾತ್ರ ನಮ್ಮ ದೇಶದಲ್ಲಿ ವಾಸಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ”. ಎನ್ ಆರ್ ಸಿಯನ್ನು ಇಡೀ ದೇಶದಲ್ಲಿ ಅಳವಡಿಸುವ ಸೂಚನೆಯನ್ನು ಅಮಿತ್ ಶಾ ಅವರು ನೀಡಿದ್ದಾರೆ. ಒಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಾವಣೆಯಿಂದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೆದರುವ ಅಗತ್ಯ ಏನಿದೆ ಎನ್ನುವ ಪ್ರಶ್ನೆ ಕಟ್ಟಕಡೆಯದಾಗಿ ಉಳಿದುಕೊಂಡು ಬಿಡುತ್ತದೆ. ನಮ್ಮ ತೆರಿಗೆಯ ಹಣದಲ್ಲಿ ಒಬ್ಬ ನುಸುಳುಕೋರ ಈ ಮಣ್ಣಿನಲ್ಲಿ ವಾಸಿಸುವುದನ್ನು ನಾವು ಹೇಗೆ ತಾನೆ ಒಪ್ಪಿಕೊಳ್ಳುವುದು. ಅಂತವರನ್ನು ಗುರುತಿಸಿದರೆ ಏನು ತಪ್ಪಿದೆ. ಇಲ್ಲಿಯ ತನಕ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಂತವರ ಮತಬ್ಯಾಂಕಿನಿಂದ ಗೆದ್ದು ದೇಶದ ಆಂತರಿಕ ಭದ್ರತೆಯನ್ನು ಪಣಕ್ಕೆ ಇಟ್ಟಿದ್ದವು. ಈಗ ಈ ಕಾಯ್ದೆಗಳು ಬಂದರೆ ತಮ್ಮ ಬುಡ ಅಲ್ಲಾಡುತ್ತದೆ ಎನ್ನುವ ಆತಂಕ ಅವರದ್ದು. ಆದರೆ ಭಾರತೀಯ ಜನತಾ ಪಾರ್ಟಿ ಯಾವಾಗಲೂ ಮುಂದಿನ ಪೀಳಿಗೆಯನ್ನು ಗಮನದಲ್ಲಿಷ್ಟು ಕಾನೂನನ್ನು ಮಾಡುತ್ತದೆ. ಅದು ಎಷ್ಟೇ ಕಷ್ಟವಾಗಲಿ, ಎರಡನ್ನೂ ಜಾರಿ ಮಾಡದೇ ಶಾ ವಿರಮಿಸುವುದಿಲ್ಲ ಎನ್ನುವುದು ನಿಧಾನವಾಗಿಯಾದರೂ ಸ್ಪಷ್ಟವಾಗುತ್ತಿದೆ!!
Leave A Reply