ಒಂದು ದಿನ ಮನೆಯ ಒಳಗೆ ಇದ್ದರೆ ಏನಾಗುತ್ತೆ ಅಲ್ವಾ ಖಾದರ್!!
ಒಂದು ದಿನ ಮನೆಯಿಂದ ಹೊರಗೆ ಬರದೇ ಇದ್ರೆ ಏನು ಆಗುತ್ತೆ? ಕೋರೋನಾ ಹೊರಟು ಹೋಗುತ್ತಾ? ಈ ಮಾತನ್ನು ಯಾರು ಹೇಳಿದರು ಎನ್ನುವ ಪ್ರಶ್ನೆಯನ್ನು ಯಾರಾದರೂ ಬೇರೆ ರಾಜ್ಯದವರಿಗೆ ನಾವು ಕೇಳಿದರೆ ಅವರು ಅದ್ಯಾವುದೋ ಹಳ್ಳಿಯ ಅನಕ್ಷರಸ್ಥ ಯಾರಾದರೂ ಹೇಳಿರಬಹುದು ಎನ್ನುವ ಉತ್ತರ ಬರುತ್ತದೆ. ಇನ್ನು ಕೆಲವರು ಯಾವುದಾದರೂ ಮಕ್ಕಳು ತಮ್ಮ ಅಪ್ಪ, ಅಮ್ಮನಿಗೆ ಕೇಳಿರಬಹುದು ಎಂದು ಹೇಳಬಹುದು. ಇನ್ನು ಕೆಲವರು ಯಾವುದಾದರೂ ಎರಡನೇ ತರಗತಿಯ ಮಗು ತನ್ನ ಟೀಚರಿಗೆ ಕೇಳಿರಬಹುದು ಎಂದು ಹೇಳಬಹುದು. ಇನ್ನು ಕೆಲವರು ಮರಣಶಯ್ಯೆಯಲ್ಲಿರುವ ರೋಗಿ ತನ್ನ ವೈದ್ಯರಿಗೆ ಕೇಳಿರಬಹುದು ಎಂದು ಹೇಳಬಹುದು. ಇಲ್ಲ, ಈ ಎಲ್ಲಾ ಉತ್ತರಗಳು ತಪ್ಪು. ಈ ಪ್ರಶ್ನೆಯನ್ನು ಒಂದು ವಿಧಾನಸಭಾ ಕ್ಷೇತ್ರದ ಶಾಸಕ ವ್ಯಂಗ್ಯ ರೀತಿಯಲ್ಲಿ ಮಾಧ್ಯಮದವರ ಮುಂದೆ ಹೇಳಿದ್ದು ಎಂದು ಗೊತ್ತಾದರೆ ನಿಮ್ಮಲ್ಲಿ ಅರ್ಧದಷ್ಟು ಜನ ಛೀ ಎಂದು ತೆಗಳಬಹುದು. ಇನ್ನು ಕೆಲವರು ಶಾಸಕರಾದರೇನಂತೆ, ಇತ್ತೀಚೆಗೆ ಕೆಲವು ವಿದ್ಯಾವಂತರಲ್ಲದವರು ಕೂಡ ಶಾಸಕರಾಗುತ್ತಾರೆ. ಅಂತವರಲ್ಲಿ ಒಬ್ಬರು ಕೇಳಿರಬಹುದು ಎಂದು ಹೇಳಬಹುದು. ಆದರೆ ಅಂತವರಿಗೆ ಆಶ್ಚರ್ಯ ಉಂಟಾಗಲಿದೆ ಏನೆಂದರೆ ಈ ಪ್ರಶ್ನೆಯನ್ನು ಕೇಳಿದ ಶಾಸಕರದ್ದು ಕಾನೂನಿನಲ್ಲಿ ಪದವಿ ಬೇರೆ ಇದೆ. ಇನ್ನು ಕೊನೆಯ ಹತ್ತು ಶೇಕಡಾ ಜನರು “ಪಾಪ, ಎಲ್ ಎಲ್ ಬಿ ಆದರೆ ಕಾಯಿಲೆಗಳ ಬಗ್ಗೆ ಗೊತ್ತಿರಬೇಕಾ?” ಎಂದು ಕೂಡ ಕೇಳಬಹುದು. ಅಂತವರಿಗೂ ನನ್ನ ಬಳಿ ಉತ್ತರ ಇದೆ. ಅದೇನೆಂದರೆ ಹೀಗೆ ಪ್ರಶ್ನೆ ಕೇಳಿದ ಮನುಷ್ಯ ಒಂದು ಕಾಲದಲ್ಲಿ ರಾಜ್ಯದ ಆರೋಗ್ಯ ಸಚಿವರಾಗಿದ್ದವರು. ಮಾಜಿ ಆರೋಗ್ಯ ಸಚಿವ, ಕಾನೂನು ಪದವೀಧರ ಮತ್ತು ಕಳೆದ ಹನ್ನೆರಡು ವರ್ಷಗಳಿಂದ ಶಾಸಕರಾಗಿರುವ ಮಹಾನುಭಾವರೊಬ್ಬರು ಹೀಗೆ ಪ್ರಶ್ನೆ ಕೇಳಿ ಅವರ ಹಿಂದೆ ಮಾಧ್ಯಮಗಳಲ್ಲಿ ಮುಖ ಕಾಣಲು ನಿಲ್ಲುತ್ತಾರಲ್ಲ ಅವರ ಎದುರು “ಶಹಬ್ಬಾಸ್ ಖಾದರ್ ಭಾಯ್” ಎಂದು ಹೊಗಳಿಕೆ ಪಡೆದುಕೊಂಡಿರಬಹುದು. ಆದರೆ ರಾಜ್ಯದ ಜನರ ಎದುರು ನಗೆಪಾಟಲಿಗೆ ಈಡಾಗಿದ್ದಾರೆ. ಈಗಲಾದರೂ ಆ ಘನವೆತ್ತ ಶಾಸಕರು ಯಾರೆಂದು ಗೊತ್ತಾಯಿತಾ? ಅವರೇ ಸನ್ಮಾನ್ಯ ಯು.ಟಿ.ಖಾದರ್.
Leave A Reply