ನಮಗೆ ಬಿಸಿ ಮುಟ್ಟದಿದ್ದರೆ ಬುದ್ಧಿ ಬರಲ್ಲ ಎನ್ನುವ ಗಾದೆ ಮತ್ತೆ ನೆನಪಾಗುತ್ತಿದೆ. ಮಂಗಳವಾರದಿಂದ ಅನಾವಶ್ಯಕವಾಗಿ ರಸ್ತೆಗೆ ಇಳಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಎರಡು ವರ್ಷ ಒಳಗೆ ಹಾಕಬೇಕಾಗುತ್ತದೆ ಎನ್ನುವ ಅರ್ಥದ ಮಾತುಗಳನ್ನು ಪೊಲೀಸ್ ಕಮೀಷನರ್ ಡಾ.ಪಿ.ಹರ್ಷ ಅವರು ಹೇಳಿದ್ದಾರೆ.
ಜಿಲ್ಲಾಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಿಪ್ರಸಾದ್ ಅವರು ಕೂಡ ಇದು ಬೇಲ್ ಇಲ್ಲದ ಪ್ರಕರಣ ಎಂದು ಎಚ್ಚರಿಸಿದ್ದಾರೆ. ಇದು ಕೇವಲ ಎಚ್ಚರಿಕೆ ಆಗಿ ಮಾತ್ರ ಇರಬಾರದು. ಒಂದು ವೇಳೆ ಯಾವುದೇ ಕಾರಣವಿಲ್ಲದೇ ( ಹೆಚ್ಚಿನವರಿಗೆ ಏನೂ ಕಾರಣ ಇರುವುದಿಲ್ಲ) ಯಾರಾದರೂ ರಸ್ತೆಗೆ ಇಳಿದರೆ ಅವರನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಸಂಜೆಯ ಹೊತ್ತಿಗೆ ಒಂದಿಷ್ಟು ಇಂತಹ ಪ್ರಕರಣಗಳು ದಾಖಲಾದರೆ ಬುಧವಾರದಿಂದ ಮನೆಯಿಂದ ಕತ್ತು ಹಿಸುಕಿ ದೂಡಿದರೂ ಯಾರೂ ಗೇಟ್ ದಾಟಿ ಬರುವುದಿಲ್ಲ.
ಇದರ ಅರ್ಥ ತುಂಬಾ ಜನರಿಗೆ ಕೊರೋನಾ ಬಗ್ಗೆ ಗಂಭೀರತೆ ಬಂದಿಲ್ಲ ಎನ್ನುವುದು ನಿಜ. ಇದು ತುಂಬಾ ಚಿಂತೆ ಮಾಡುವಂತಹ ಸಂಗತಿ. ಯಾಕೆಂದರೆ ಭಾನುವಾರ ಜನತಾ ಕರ್ಪ್ಯೂವಿಗೆ ಬೆಂಬಲ ಘೋಷಿಸಿ ಮನೆಯಲ್ಲಿ ಉಳಿದಿದ್ದ ಜನ ರಾತ್ರಿಯಾಗುತ್ತಿದ್ದಂತೆ ಬೀದಿಗೆ ಇಳಿದಿದ್ದರು. ಸೋಮವಾರವಂತೂ ಅಬ್ಬಾ ಕೋರೋನಾ ಹೊರಟು ಹೋಯಿತು ಎನ್ನುವ ಭಾವನೆಯೇ ಎಲ್ಲರಲ್ಲಿ ವ್ಯಕ್ತವಾಗುತ್ತಿತ್ತು.
ಬಹುಶಃ ವಿಪರೀತ ಬುದ್ಧಿವಂತರಾಗಿರುವುದರಿಂದ ಹಾಗೆ ಅಂದುಕೊಂಡಿರಬೇಕು. ಯಾಕೆಂದರೆ ಕೊರೊನಾ ನಮ್ಮ ಕಾಲಬುಡದಲ್ಲಿಯೇ ಇದೆ ಎನ್ನುವ ವಿಷಯ ಇನ್ನು ತಲೆಯ ಒಳಗೆ ಹೋಗಿ ಕುಳಿತಿಲ್ಲ. ಯಾಕೆಂದರೆ ಕೃತಕ ನೆರೆ ಬಂದರೆ ಅದು ಕಾಣುತ್ತೆ. ಬರಗಾಲ ಬಂದರೆ ಅದು ಕೂಡ ಕಾಣುತ್ತೆ. ಆದರೆ ಬಂದಿರುವ ಕೊರೋನಾ ಯಾರಿಗೂ ಕಾಣಿಸುತ್ತಿಲ್ಲವಲ್ಲ. ಯಾರೋ ವಿದೇಶದಿಂದ ಬಂದವರು ವೆನಲಾಕಿನ ಬೆಡ್ ಮೇಲೆ ಮಲಗಿದರೆ ನಮಗೇನೂ, ನಾವೇನೂ ಆ ರೋಗಿಯನ್ನು ಮುಟ್ಟಿದೆವಾ, ಆತ ಸೀನಿದಾಗ ಹತ್ತಿರ ನಿಂತಿದೆವಾ ಎನ್ನುವ ಸಂಗತಿಯೇ ನಮ್ಮ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದರಿಂದ ನಾವು ಇನ್ನೂ ಕೂಡ ಕಾಯಿಲೆಯನ್ನು ಗಂಭೀರವಾಗಿ ತಲೆ ಒಳಗೆ ಬಿಟ್ಟುಕೊಟ್ಟಿಲ್ಲ. ಆದ್ದರಿಂದ ಎಷ್ಟೋ ರಿಕ್ಷಾಗಳು ಸೋಮವಾರ ಹೊರಗೆ ಓಡಾಡುತ್ತಿದ್ದವು. ಅದರಿಂದ ಏನಾಗುತ್ತದೆ ಎಂದರೆ ನಾವು ಮೈಮರೆಯುತ್ತೇವೆ. ಹೊರಗೆ ಬಂದು ಅಂಗಡಿಯಿಂದ ಸಾಮಾನು ತೆಗೆದುಕೊಂಡು ಲೋಕಾಭಿರಾಮವಾಗಿ ನೆರೆಕೆರೆಯವರೊಂದಿಗೆ ಮಾತನಾಡುತ್ತಾ ಸುತ್ತಾಡುತ್ತೇವೆ. ನಮಗೆ ಗೊತ್ತಿಲ್ಲ, ವೆನಲಾಕಿನಲ್ಲಿ ಮಲಗಿರುವ ಕೊರೋನಾ ಸೊಂಕಿತನಿಂದ ಮಾತ್ರ ನಮಗೆ ಆತಂಕ ಅಲ್ಲ. ಆತ ದುಬೈಯಿಂದ ಮಂಗಳೂರಿಗೆ ಬರುವಾಗ ಯಾರ ಜೊತೆಯಲ್ಲಿ ಬಂದನೋ ಅವರಿಗೆ ಈ ವೀರಾಣು ತಗಲಿರಬಹುದು. ಅದು ವಿಮಾನ ನಿಲ್ದಾಣದ ಪರೀಕ್ಷೆಯಲ್ಲಿ ಗೊತ್ತಾಗದೇ ಇರಬಹುದು. ಇನ್ನು ಕೆಲವರನ್ನು ಹೋಂ ಕೋರೊಂಟೈನ್ ಮಾಡಿರಬಹುದು. ಆದರೆ ಮನೆಗೆ ಹೋಗುವಷ್ಟರಲ್ಲಿ ಆತ ಇನ್ನೆಷ್ಟು ಕಡೆ ಕೈಯಿಂದ ಮುಟ್ಟಿದ್ದಾನೋ, ಕಾಲಿನಿಂದ ತುಳಿದಿದ್ದಾನೋ. ನಂತರ ಮನೆಯ ಒಳಗೆನೆ ಇದ್ದರೆ ಪರವಾಗಿಲ್ಲ. ಕೆಲವರು ತುಂಬಾ ವರುಷಗಳ ನಂತರ ಊರಿಗೆ ಬಂದಿರುವುದರಿಂದ “ವೈದ್ಯರಿಗೆ, ಪೊಲೀಸರಿಗೆ ಯಾರಿಗೂ ಗೊತ್ತಾಗಲ್ಲ” ಎಂದು ಊರಿನ ಹಾದಿಬೀದಿಯಲ್ಲಿ ಓಡಾಡಿದ್ದಾರೆ. ಗದ್ದೆಗೆ ಇಳಿದಿದ್ದಾರೆ. ಕಟ್ಟೆಗಳಲ್ಲಿ ಕುಳಿತಿದ್ದಾರೆ. ಗೆಳೆಯರೊಂದಿಗೆ ನೈಂಟಿ ಇಳಿಸಿದ್ದಾರೆ. ಊರಿನ ಮಸೀದಿಗೆ ಹೋಗಿ ಬಂದಿದ್ದಾರೆ. ಅಲ್ಲಿಗೆ ಎಷ್ಟು ಮಂದಿಗೆ ಈ ಕಾಯಿಲೆ ಹರಡಿರಲ್ಲ. ಅದು ಕೂಡಲೇ ಗೊತ್ತಾಗಲ್ಲ. ಯಾರ ದೇಹದೊಳಗೆ ವೈರಾಣು ಪ್ರವೇಶಿಸಿ ಹಾಯ್ ಎಂದಿರತ್ತೋ ಆತ ಇನ್ನೆಷ್ಟು ಜನರಿಗೆ ಹಾಯ್ ಎಂದಿರಲ್ಲ. ಇದೆಲ್ಲದರಿಂದ ಇನ್ನು ಹದಿನಾಲ್ಕು ದಿನಗಳ ಬಳಿಕ ನಿಜವಾದ ಕಥೆ ಶುರುವಾಗಲಿದೆ. ಈಗ ಕೇವಲ ಟ್ರೇಲರ್. ನಾವು ಗಂಭೀರವಾಗಿ ಯೋಚಿಸದಿದ್ದರೆ ಇಡೀ ಸಿನೆಮಾವನ್ನು ಈ ವೈರಾಣು ನಮಗೆ ತೋರಿಸಲಿದೆ. ಇಟಲಿಗೆ ಇಟಲಿಯೇ ಸ್ಮಶಾನವನ್ನು ಹೊದ್ದು ಮಲಗಿದೆ. ನನ್ನ ಕೈಯಲ್ಲಿ ಏನೂ ಆಗಲ್ಲ ಎಂದು ಅಲ್ಲಿನ ಪ್ರಧಾನಿ ಕೈ ಎತ್ತಿದ್ದಾರೆ. ಅಮೇರಿಕಾ ಆವತ್ತು ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಬಾಂಬ್ ಹಾಕಿ ರುದ್ರ ನರ್ತನ ಗೈದಿತ್ತು. ಇವತ್ತು ಕೊರೊನಾ ಎನ್ನುವ ಅಣು ಬಾಂಬ್ ನಮ್ಮ ಪಕ್ಕದಲ್ಲಿ ಸಿಡಿಯಲು ನಿಂತಿದೆ. ನಾವು ಎಚ್ಚರಿಕೆಯಿಂದ ಇರಬೇಕಷ್ಟೇ!
- Advertisement -
Leave A Reply