ಮೋದಿಯ ಅಂತಿಮ ಪ್ರಯೋಗ ಯಶಸ್ವಿಯಾಗಲಿ ಎಂದು ಬೇಡುವುದೊಂದೆ ದಾರಿ!!
ಕೆಲವರಿಗೆ ಮೂರು ವಾರ ದುಡಿಯದಿದ್ದರೆ ಏನು ಎನ್ನುವ ಚಿಂತೆ. ಇನ್ನು ಕೆಲವರಿಗೆ ಸಿಕ್ಕಿದ ಮೂರು ವಾರದಲ್ಲಿ ಎಷ್ಟು ಲೂಟುವುದು ಎನ್ನುವ ಯೋಚನೆ. ಹಿಂದೆ ಹತ್ತು ರೂಪಾಯಿಯ ಬಟಾಟೆಗೆ ಹನ್ನೆರಡು ರೂಪಾಯಿ ಹೇಳಿದರೆ ನೀವು ಎಂಟು ರೂಪಾಯಿಗೆ ಕೇಳುತ್ತಿದ್ದಿರಿ. ಈಗ ಅದೇ ಬಟಾಟೆಯನ್ನು ಮೂವತ್ತು ರೂಪಾಯಿ ಹೇಳಿದರೂ ನೀವು ಏನೂ ಮಾತನಾಡದೇ ಚೀಲ ಹಿಡಿಯುತ್ತಿರಿ. ವಿಷಯ ಅಷ್ಟೇ ಅಲ್ಲ. ಈಗ ಅದೇ ಬಟಾಟೆಯನ್ನು ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ. ಹಾಗಾದರೆ ಲಾಕ್ ಡೌನ್ ನ ಉದ್ದೇಶ ಎಲ್ಲಿ ಉಳಿಯಿತು.
ಇಡೀ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಮತ್ತು ಚೀನಾ ಒಂದೇ ತಕ್ಕಡಿಯಲ್ಲಿವೆ. ಅಲ್ಲಿ ಒಂದು ಕಿಲೋ ಮೀಟರ್ ಗೆ ಸರಾಸರಿ 150 ಜನರು ವಾಸ ಮಾಡುತ್ತಿದ್ದರೆ ನಮ್ಮಲ್ಲಿ 415 ಜನ ವಾಸ ಮಾಡುತ್ತಾರೆ. ಚೀನಾ ಕೊರೊನಾ ವೈರಸ್ ಗೆ ತುತ್ತಾಗಿ ಸರಕಾರಿ ಲೆಕ್ಕದ ಪ್ರಕಾರ ಐದು ಸಾವಿರ ಜನರನ್ನು ಕಳೆದುಕೊಂಡಿದೆ. ಅಂದಾಜು ಲಕ್ಷದಷ್ಟು ಜನರ ಮೊಬೈಲ್ ಗಳು ಸ್ವಿಚ್ ಆಫ್ ಆಗಿವೆ ಎನ್ನುವ ಮಾಹಿತಿ ಬರುತ್ತಿದೆ. ಹಾಗಾದರೆ ಚೀನಾದಲ್ಲಿ ಸತ್ತವರ ನಿಜವಾದ ಲೆಕ್ಕ ಎಷ್ಟು? ಗೊತ್ತಾಗಬೇಕಾದರೆ ಎದ್ದಿರುವ ಕೊರೊನಾ ಸುನಾಮಿ ಇಳಿಯಬೇಕು. ಒಂದು ವೇಳೆ ಚೀನಾದಷ್ಟೇ ವೇಗವಾಗಿ ಕೊರೊನಾ ಭಾರತದಲ್ಲಿ ಹರಡಿದರೆ ಇಲ್ಲಿ ಏನಾಗಬಹುದು? ಜನಸಾಮಾನ್ಯರಿಗೆ ಇದೆಲ್ಲಾ ಅರ್ಥ ಆಗಲ್ಲ. ಆದರೆ ಪ್ರಧಾನಿ ಮೋದಿಯವರಿಗೆ ಅದರ ಸುಳಿವು ಸಿಕ್ಕಿದೆ. ಅದನ್ನು ತಡೆಯಲು ಅವರು ರೈಲು ಬಂದ್ ಮಾಡಿದರು. ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್ ಮಾಡಿದರು. ಈಗ ದೇಶಿಯ ವಿಮಾನ ಹಾರಾಟ ಕೂಡ ಬಂದ್ ಮಾಡಿದರು. ಅಂತರ್ ರಾಜ್ಯ ವಾಹನ ಸಾಗಾಟ ಬಂದ್ ಮಾಡಿದರು. ಕೊನೆಗೆ ಒಂದು ದಿನ ದೇಶ ಬಂದ್ ಮಾಡಿದರು.
ಅಂತಿಮವಾಗಿ ಅವರು ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 21 ದಿನ. ಒಂದು ದಿನ ದೇಶದಲ್ಲಿ ಯಾವುದಾದರೂ ಪ್ರಬಲ ಪಕ್ಷ ಬಂದ್ ಗೆ ಕರೆ ನೀಡಿದರೆ ದೇಶಕ್ಕೆ ಎಷ್ಟು ನಷ್ಟವಾಗುತ್ತೆ, ದೇಶ ಎಷ್ಟು ಹಿಂದೆ ಹೋಗುತ್ತದೆ ಎನ್ನುವುದು ಇಕನಾಮಿಕ್ಸ್ ಗಳಿಗೆ ಗೊತ್ತು. ಹಾಗಿರುವಾಗ 21 ದಿನ ಬಂದ್ ಅಂದರೆ ಆ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅಂತಹ ಪ್ರಧಾನಿಗೆ ಒಂದು ಗುಂಡಿಗೆ ಸಾಕಾಗಲ್ಲ. ಆದರೂ ಭವಿಷ್ಯದಲ್ಲಿ ಇತಿಹಾಸಕಾರರು ಚರಿತ್ರೆ ಬರೆಯುವಾಗ ಹಿಂದೆ ಭಾರತ ಎನ್ನುವ ದೇಶ ಇತ್ತು. ಕರೋನಾ ಎನ್ನುವ ವೈರಾಣುವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಆ ದೇಶ ನಿರ್ನಾಮ ಆಯಿತು ಎಂದು ಬರೆಯಬಾರದಲ್ಲ. ಆ ಕಾರಣಕ್ಕೆ ಮೋದಿ ಇದ್ದಬದ್ದ ಎಲ್ಲಾ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಇದೆಲ್ಲದರ ಬಗ್ಗೆ ಗಂಭೀರವಾಗಿ ಯೋಚಿಸದ ಕೆಲವರು ಈಗಲೂ ರಸ್ತೆಯಲ್ಲಿ ಅಡ್ಡಾಡುತ್ತಾ ಭಾರತದ ಅವನತಿಗೆ ನಾಂದಿ ಹಾಡುತ್ತಿದ್ದಾರೆ. ಅಷ್ಟಕ್ಕೂ ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ದೇಶದ ಪ್ರಧಾನಿಯ ತನಕ ಇವತ್ತು ನಮಗೆ ಬಂದಿರುವ ಪರಿಸ್ಥಿತಿ ಅಪ್ಪಟ ಹೊಸದು. ಭಾರತದಲ್ಲಿ ಒಂದೊಮ್ಮೆ ಹೀಗಾದರೆ ಏನು ಮಾಡಬೇಕಾಗಬಹುದು ಎನ್ನುವುದನ್ನು ಯಾರೆಂದರೆ ಯಾರೂ ಯೋಚಿಸಿರಲಾರರು.
ನಮಗೆ ಕೋಮುಗಲಭೆ ಆದಾಗ ಬಂದ್ ಆದರೆ ಆಗ ಜನರನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಗೊತ್ತು. ಆಗಲೂ ಕರ್ಫ್ಯೂ ನಡೆದಿದೆ. ವಾರವೀಡಿ ಬಂದ್ ಆದದ್ದು ಇದೆ. ಆದರೆ ಆಗ ಅವಶ್ಯಕ ವಸ್ತುಗಳ ಖರೀದಿಗೆ ಜನರನ್ನು ದಿನದಲ್ಲಿ ಇಂತಿಷ್ಟೇ ಗಂಟೆ ಹೊರಗೆ ಬಿಟ್ಟರೆ ಆಗ ಸಮಸ್ಯೆ ಸುಧಾರಿಸಿತು ಎಂದೇ ಅರ್ಥ. ಇನ್ನು ರೌಡಿಗಳನ್ನು, ರೌಡಿಶೀಟರ್ ಗಳನ್ನು, ವಿವಿಧ ಸಂಘಟನೆಗಳ ಪ್ರಮುಖರನ್ನು ಕರೆದು ಎಚ್ಚರಿಕೆ ಕೊಟ್ಟರೆ ಗಲಾಟೆ ಹದ್ದುಬಸ್ತಿಗೆ ಬರುತ್ತದೆ. ಅದನ್ನು ಮೀರಿಯೂ ಗಲಾಟೆ ನಡೆದು ಒಂದೆರಡು ಹೆಣ ಬಿದ್ದರೆ ಅದು ಬೇರೆ ವಿಷಯ. ಆದರೆ ಈಗ ಹಾಗಲ್ಲ. ಮೊದಲನೇಯದಾಗಿ ಜನರನ್ನು ಇಂತಿಷ್ಟೇ ಗಂಟೆಗಳ ತನಕ ಹೊರಗೆ ಬಿಡುವುದು ಇನ್ನೂ ಅಪಾಯ. ಯಾಕೆಂದರೆ ಆ ಹೊತ್ತಿನಲ್ಲಿ ಎಲ್ಲರೂ ಹೊರಗೆ ಬಂದರೆ ಇಡೀ ದಿನದ ಲಾಕ್ ಡೌನ್ ಪೂರ್ಣ ವ್ಯರ್ಥ. ಇನ್ನು ವೈರಾಣುಗಳ ಸಭೆ ಕರೆದು ಯಾರಿಗೂ ಏನೂ ಮಾಡಬೇಡಿ ಎಂದು ಹೇಳಲು ಆಗಲ್ಲ. ಕೊನೆಯದಾಗಿ ಒಂದು ವೇಳೆ ಹೆಣ ಬೀಳಲು ಶುರುವಾದರೆ ನಂತರ ತಡೆಯಲು ಯಾರಿಗೂ ಸಾಧ್ಯವಿಲ್ಲ. ಇಷ್ಟಿರುವಾಗ ನಾವು ಏನು ಮಾಡಬೇಕು. ಬುದ್ಧಿವಂತರಾಗಿದ್ದರೆ ಸರಕಾರ ಹೇಳಿದ ಹಾಗೆ ಮನೆಯಲ್ಲಿಯೇ ಇದ್ದು ಬಿಡಬೇಕು. ಅವಶ್ಯಕ ವಸ್ತುಗಳ ಖರೀದಿಗೆ ನಿತ್ಯ ಹೋಗುವ ಅಗತ್ಯ ಯಾರಿಗೂ ಇರಲ್ಲ. ಅದನ್ನು ಮೀರಿಯೂ ಏನಾದರೂ ವಸ್ತುಗಳು ಬೇಕು ಎಂದರೆ ಮಾನ್ಯ ಸಂಸದರೂ ಮತ್ತು ಶಾಸಕರು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಅವರಿಂದ ತರಿಸಿಕೊಂಡರಾಯಿತು, ಬಿಡಿ!
Leave A Reply