ಅಂತಿಮವಾಗಿ ಏಳು ಜನರಿಗೆ ಸೊಂಕು ದೃಢವಾಗಿರುವ ಈ ಹೊತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಖಡಕ್ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಅದೇನೆಂದರೆ ಸಂಪೂರ್ಣ ಲಾಕ್ ಡೌನ್. ಶನಿವಾರ ಎಲ್ಲಾ ವಾಣಿಜ್ಯ ವ್ಯವಹಾರಗಳು ಕೂಡ ಸಂಪೂರ್ಣ ಬಂದ್. ಇಲ್ಲದಿದ್ದರೆ ಜೀವನಾಶ್ಯಕ ವಸ್ತುಗಳ ನೆಪವೊಡ್ಡಿ ಅನೇಕರು ಹೊರಗೆ ಬರುತ್ತಿದ್ದರು. ಸೆಂಟ್ರಲ್ ಮಾರುಕಟ್ಟೆಯಲ್ಲಿ ಜನವೋ ಜನ. ಇದರಿಂದ ಉದ್ದೇಶವೇ ವ್ಯರ್ಥವಾಗುತ್ತಿತ್ತು. ತುಂಬಾ ಜನರಿಗೆ ಇನ್ನೂ ಕೂಡ ಮನೆಯಲ್ಲಿಯೇ ಏಕೆ ಕುಳಿತುಕೊಳ್ಳಬೇಕು ಎಂದು ಗೊತ್ತಾಗುತ್ತಿಲ್ಲ. ಅನೇಕರಿಗೆ ತಮಗೆ ಏನೂ ಆಗುವುದಿಲ್ಲ ಎನ್ನುವ ಅಹಂ. ಉಳಿದವರಿಗೆ ಏನಾದರೂ ಬೇಕಲ್ಲ ಎಂದು ಅಂಗಡಿಗಳಿಗೆ ಹೋಗಿ ಖರೀದಿ ಮಾಡುವ ಆತುರ, ಕೆಲವರಿಗೆ ಖಾಲಿ ಮಂಗಳೂರು ರಸ್ತೆಯನ್ನು ಹೀಗೆ ಕಣ್ತುಂಬಿಕೊಳ್ಳುವ ಅವಸರ. ಹೀಗಾಗಿ ಬೆಳಿಗ್ಗೆ ಆಗುತ್ತಲೇ ಇದರಲ್ಲಿ ದೊಡ್ಡ ಸಂಖ್ಯೆಯ ಜನ ಆರಾಮವಾಗಿ ತಿರುಗುತ್ತಿರುತ್ತಾರೆ. ಅವರಿಗೆ ಗೊತ್ತಿಲ್ಲ. ಕೊರೊನಾ ವೈರಸ್ ಬೆಳಿಗ್ಗೆ 6 ರಿಂದ 12 ರ ತನಕ ಪೊದೆಗಳ ಒಳಗೆ ಮಲಗಿ ನಂತರ ಊಟ ಮಾಡಿ ರಸ್ತೆಗೆ ಇಳಿಯುವುದಲ್ಲ. ಅದು ದಿನವೀಡಿ ರಸ್ತೆಯಲ್ಲಿಯೇ ಇರುತ್ತದೆ. ನೀವು ನಡೆಯುವಾಗ ನಿಮ್ಮ ಸುತ್ತಲೂ ತಿರುಗುತ್ತಿರುತ್ತದೆ. ಯಾವುದೋ ಒಂದು ಕ್ಷಣ ನಿಮ್ಮ ದೇಹವನ್ನು ನಿಮ್ಮ ಕೈಯ ಮೂಲಕ ಮೂಗು, ಕಿವಿ, ಕಣ್ಣಿನಿಂದ ಒಳಗೆ ಲ್ಯಾಂಡ್ ಆಗುತ್ತದೆ. ಅಲ್ಲಿ ಒಳಗೆ 14 ದಿನ ಸುತ್ತಾಡುತ್ತಾ ಇರುತ್ತದೆ. ನಿಮ್ಮ ದೇಹದ ಒಳಗೆ ಬಂದಿರುವ ಅತಿಥಿ ಯಾರೆಂದು ಗೊತ್ತಾಗುವಷ್ಟರಲ್ಲಿ ನೀವು ನೂರಾರು ಮಂದಿಗೆ ಅದನ್ನು ಹಂಚಿರುತ್ತೀರಿ. ಅದರಿಂದ ಅದು ಯಾವುದೋ ದುರ್ಬಲ ದೇಹದೊಳಗೆ ಪ್ರವೇಶಿಸಿ “ಕೊರೊನಾ ಸೊಂಕಿಗೆ ಇನ್ನೊಂದು ಬಲಿ” ಎನ್ನುವ ಹೆಡ್ಡಿಂಗ್ ನೊಂದಿಗೆ ತನ್ನ ಕೆಲಸ ಮುಗಿಸಿ ಹೊರಟು ಹೋಗಿರುತ್ತದೆ. ಕಥೆ ಇಷ್ಟೇ. ಅದಕ್ಕೆ ನಿಮಗೆ ಮನೆಯ ಒಳಗೆ ಇರಿ ಎಂದಿರುವುದು.
ಇದರಿಂದಲೇ ನಿಮಗೆ ಸಾಲಗೀಲದ ಕಂತು, ಬಡ್ಡಿ ಕಟ್ಟಲು ಆಗಲ್ಲ ಎಂದು ಸರಕಾರ ಮೂರು ತಿಂಗಳಿಗೆ ವಿನಾಯಿತಿ ಕೊಟ್ಟಿರುವುದು. 1.78 ಸಾವಿರ ಕೋಟಿ ಪ್ಯಾಕೇಜು ಘೋಷಿಸಿರುವುದು. ಅದೆಲ್ಲಕ್ಕಾಗಿ ನಾನು ಸರಕಾರಕ್ಕೆ ಸಾರ್ವಜನಿಕರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ನಾನು ನಮ್ಮ ಬುದ್ಧಿವಂತ ಜನರಿಗೆ ಮಾತ್ರ ಈ ವೈರಾಣುವಿನ ಪ್ರಾಮುಖ್ಯತೆ ಬಗ್ಗೆ ತಲೆಗೆ ಹೋಗುತ್ತಿಲ್ಲ ಎಂದು ಅಂದುಕೊಂಡಿದ್ದೆ. ಇದು ನೋಡಿದರೆ ನಮ್ಮ ರಾಜ್ಯವನ್ನು ನಡೆಸುವಂತಹ ನಮ್ಮ ಮಾನ್ಯ ಮುಖ್ಯಮಂತ್ರಿಯವರಿಗೂ ತಲೆಗೆ ಹೋಗಿಲ್ಲ. ಅದಕ್ಕಾಗಿ ಇವತ್ತು ಒಂದು ಫೋಟೋ ಪೋಸ್ಟ್ ಮಾಡುತ್ತಿದ್ದೇನೆ. ಅದರಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹೇಗೆ ಸಚಿವ ಸಂಪುಟ ಸಭೆ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ನಾವು ಬೆಳಿಗ್ಗೆ ಎದ್ದು ರಾತ್ರಿ ಮಲಗುವ ತನಕ ನಮ್ಮ ಜನಪ್ರತಿನಿಧಿಗಳ, ವೈದ್ಯರ ಬಾಯಿಂದ ಕೇಳಿ ಬರುತ್ತಿರುವ ಒಂದು ಶಬ್ದ ಸಾಮಾಜಿಕ ಅಂತರ. ಆದರೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಹೇಗೆ ಸಭೆ ನಡೆಸುತ್ತಿದ್ದಾರೆ ಎಂದರೆ ನಮ್ಮ ಕರ್ನಾಟಕದಲ್ಲಿ ಇರುವ ವಿಧಾನಸೌಧದಲ್ಲಿ ತುಂಬಾ ಜಾಗದ ಕೊರತೆ ಇದೆ. ಆದ್ದರಿಂದ ದೂರ ದೂರ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಎಂದು ಒಟ್ಟೊಟ್ಟಿಗೆ ಕುಳಿತುಕೊಂಡಿದ್ದಾರೆ. ಅದೇ ಇನ್ನೊಂದು ಫೋಟೋದಲ್ಲಿ ತಾವು ನೋಡಬಹುದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಚಿವರನ್ನು ಹೇಗೆ ಕುಳ್ಳಿರಿಸಿ ಸಭೆ ನಡೆಸುತ್ತಿದ್ದಾರೆ. ಇನ್ನು ಮೊನ್ನೆ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಚಿವರನ್ನು ಸಾಕಷ್ಟು ಅಂತರದಲ್ಲಿ ಕುಳ್ಳಿರಿಸಿ ಸಭೆ ನಡೆಸಿದ್ದರು. ಕೇಂದ್ರದ ಮಾದರಿ ನಮ್ಮ ಎದುರುಗಡೆ ಇರುವಾಗಲೇ ನಮ್ಮ ಮುಖ್ಯಮಂತ್ರಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಸಭೆ ನಡೆಸಿ ಬಹಳ ಕೆಟ್ಟ ಉದಾಹರಣೆಯನ್ನು ಜನರ ಮುಂದೆ ಇಟ್ಟಿದ್ದಾರೆ. ಹೀಗೆ ಒಟ್ಟಿಗೆ ಕುಳಿತುಕೊಂಡ ಕೂಡಲೇ ಕೊರೊನಾ ಹರಡುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ ನಮ್ಮ ಜನಪ್ರತಿನಿಧಿಗಳು ನಿತ್ಯ ಹಲವಾರು ಕಡೆ ಹೋಗುತ್ತಾರೆ. ಏನೇನೋ ಕೈಯಲ್ಲಿ ಮುಟ್ಟಿರುತ್ತಾರೆ. ಅನೇಕರನ್ನು ಭೇಟಿಯಾಗಿರುತ್ತಾರೆ. ಯಾರಿಗೆ ಗೊತ್ತು. ಯಾರ ಒಳಗೆ ಕೊರೊನಾ ಬೆಚ್ಚಗೆ ಕುಳಿತು ಮುಂದಿನ ಬೇಟೆಗೆ ಅಣಿಯಾಗುತ್ತಿದೆಯೋ. ಕೊರೊನಾ ಸೊಂಕಿತರು ಕೂಡ ಹದಿನಾಲ್ಕು ದಿನ ಉಳಿದವರಂತೆನೆ ಇರುತ್ತಾರೆ. ಒಂದು ದಿನ ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಕೊರೊನಾ ಬಂದವರೆಲ್ಲಾ ಸಾಯುತ್ತಾರೆ ಎಂದು ಹೇಳುತ್ತಿಲ್ಲ. ಅದರ ಪ್ರಮಾಣ ನೂರಕ್ಕೆ ಮೂರುವರೆ, ಹೆಚ್ಚೆಂದರೆ ನಾಲ್ಕು. ಆದರೆ ಈಗಿನ ಆಹಾರ ಪದ್ಧತಿಯಲ್ಲಿ ನಮ್ಮ ದೇಹದೊಳಗೆ ಈ ವೈರಾಣು ಹೋಗುವ ಮೊದಲೇ ಹಲವು ಕಾಯಿಲೆಗಳು ಗೂಡು ಕಟ್ಟಿಕೊಳ್ಳಲು ತಯಾರಾಗಿರುತ್ತವೆ. ಅದರೊಂದಿಗೆ ಇದು ಸೇರಿದರೆ ಒಳಗೆ ಹಬ್ಬ, ರಣಕೇಕೆ, ಸಾವಿನದ್ದು!!
- Advertisement -
Leave A Reply