ಗಡಿಬಿಡಿಯಲ್ಲಿ ಗಡಿ ಬಿಡಲು ಆಗಲ್ಲ ಪಿಣರಾಯಿ!!
ಕರ್ನಾಟಕ ಮತ್ತು ಕೇರಳದ ಗಡಿಯಾಗಿರುವ ತಲಪಾಡಿ ಸಹಿತ ಹನ್ನೆರಡು ಇತರ ಒಳ-ಹೊರ ಹೋಗುವ ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಕೆಲವು ದಿನಗಳಾದವು. ಅಲ್ಲಿಯ ತನಕ “ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳಕ್ಕೆ 20 ಸಾವಿರ ಪ್ಯಾಕೇಜ್ ಘೋಷಿಸಿದ್ದಾರೆ. ಮೋದಿ ಇಡೀ ದೇಶಕ್ಕೆ ಕೊಡುವುದು ಕೇವಲ 15 ಸಾವಿರ ಕೋಟಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿರುಚುತ್ತಿದ್ದ ಎಡಪಕ್ಷದವರಿಗೆ ಗಡಿ ಬಂದ್ ಆಗುತ್ತಿದ್ದಂತೆ ಯಾರೋ ಚಿವುಟಿದ ಅನುಭವ ಆಗುತ್ತಿದೆ. ಯಾಕೆಂದರೆ ಕೇರಳ ಗಡಿಯನ್ನು ತೆರೆಯಲು ಆದೇಶಿಸಬೇಕು ಎಂದು ಪಿಣರಾಯಿ ಮಧ್ಯರಾತ್ರಿ ನಿದ್ರೆಯಿಂದ ಎದ್ದು ಕಂಪ್ಯೂಟರ್ ಆನ್ ಮಾಡಿ ಕೇಂದ್ರಕ್ಕೆ ಪತ್ರ ಟೈಪ್ ಮಾಡಿ ಪ್ರಧಾನ ಮಂತ್ರಿಯವರಿಗೆ ಕಳುಹಿಸಿದ್ದಾರೆ. ಹಾಗಾದರೆ 20 ಸಾವಿರ ಪ್ಯಾಕೇಜು ಘೋಷಿಸಿದವರಿಗೆ ಒಂದು ಗಡಿಗೆ ಬಾಗಿಲು ಹಾಕಿದ್ದು ನಿದ್ರೆಯನ್ನು ಹಾರಿಸಿಬಿಟ್ಟಿತಾ?
ಹೌದು, ವಿಷಯ ಇರುವುದು ಕಾಸರಗೋಡು ಜಿಲ್ಲೆಯಲ್ಲಿ. ಕಾಸರಗೋಡು ಕಳೆದ ಕೆಲವು ದಿನಗಳಿಂದ ಕೋವಿಡ್ 19 ಮಹಾಮಾರಿಯನ್ನು ತನ್ನ ಜಿಲ್ಲೆಯ ಉದ್ದಗಲಕ್ಕೂ ಓಡಾಡಲು ಬಿಟ್ಟಿದೆ. ದೇಶದಲ್ಲಿ ಕೋವಿಡ್ ಶಂಕಿತರದ್ದು ಒಂದು ತೂಕವಾದರೆ ಕಾಸರಗೋಡುವಿನದ್ದು ಒಂದು ತೂಕ. ಇಡೀ ಕೇರಳದಲ್ಲಿ 130 ಕೊರೊನಾ ಸೋಂಕಿತರು ಇದ್ದರೆ ಅದರಲ್ಲಿ 85 ಜನ ಕಾಸರಗೋಡು ಜಿಲ್ಲೆಯವರು ಎಂದರೆ ನೀವು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಅಷ್ಟೇ ಅಲ್ಲ ಮಂಗಳೂರಿನಲ್ಲಿ ಕೊರೊನಾ ಸೊಂಕಿತರಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಲ್ಲಿ ಸಿಂಹಪಾಲು ಕಾಸರಗೋಡು ಜಿಲ್ಲೆಯವರದ್ದೇ. ಇದರಿಂದ ಏನಾಯಿತು ಎಂದರೆ ಒಂದು ವೇಳೆ ಗಡಿಯನ್ನು ತೆರೆದಿಟ್ಟು ಕುಳಿತುಕೊಂಡರೆ ಕಾಸರಗೋಡು ಕೊರೊನಾ ಶಂಕಿತರು ಬಹುತೇಕ ಇಲ್ಲಿ ಶೀಫ್ಟ್ ಆಗುತ್ತಾರೆ. ಅದರೊಂದಿಗೆ ಇತರ ರೋಗಿಗಳು ಕೂಡ ಚಿಕಿತ್ಸೆಗಾಗಿ ಇಲ್ಲಿ ಬರುತ್ತಾರೆ. ಈಗ ಪರಿಸ್ಥಿತಿ ಹಿಂದಿನಂತೆ ಇಲ್ಲ. ನಮ್ಮ ಜಿಲ್ಲೆಯನ್ನು ಹೇಗೆ ಉಳಿಸುವುದು ಎನ್ನುವುದರ ಕುರಿತೇ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಕೈಕಾಲು ಹೊಡೆಯುತ್ತಿದ್ದಾರೆ. ಹಾಗಿರುವಾಗ ದಾರಿಯಲ್ಲಿ ಹೋಗುತ್ತಿರುವ ಹೆಮ್ಮಾರಿಯನ್ನು ಮನೆಗೆ ಕರೆ ತರುವ ಉಸಾಬರಿ ನಮಗೆ ಯಾಕೆ? ಅದಲ್ಲದೆ ನಮ್ಮ ಜಿಲ್ಲೆಯ ಸಜ್ಜನ ನಾಗರಿಕರು ಕೂಡ ಈ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದರು. ಅದನ್ನೆಲ್ಲಾ ಪರಿಗಣಿಸಿ ಕೇರಳಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಸದ್ಯ ಮುಚ್ಚಲಾಗಿದೆ. ಕರ್ನಾಟಕದ ಗಡಿಯಲ್ಲಿರುವ ಜನರು ಎಷ್ಟರಮಟ್ಟಿಗೆ ಕಾಸರಗೋಡು ಮೇಲೆ ಕೋಪಗೊಂಡಿದ್ದಾರೆ ಎಂದರೆ ಅವರಿಂದಲೇ ನಮಗೆ ಕೊರೊನಾ ಸೊಂಕು ತಗಲಬಹುದು ಎನ್ನುವ ಕೋಪದಿಂದ ಗಡಿಯಲ್ಲಿ ಮಣ್ಣು ಹಾಕಿ ರಸ್ತೆ ಮುಚ್ಚಿದ್ದಾರೆ. ಇದರಿಂದ ಏನು ಆಗಲಿದೆ? ಒಂದು ಕಾಸರಗೋಡು ಕೊರೊನಾ ಸೊಂಕಿತರು ಅಲ್ಲಿಂದ ಇಲ್ಲಿ ಬರದೇ ಇರುವುದರಿಂದ ನಮಗೆ ರಿಸ್ಕ್ ಕಡಿಮೆ. ಆದರೆ ಕೊರೊನಾ ಶಂಕಿತ ಅಥವಾ ಸೊಂಕಿತರನ್ನು ಬಿಟ್ಟು ಕೆಲವು ರೋಗಿಗಳು ನಮ್ಮ ಮಂಗಳೂರಿನ ಆಸ್ಪತ್ರೆ ಮತ್ತು ವೈದ್ಯರ ಮೇಲೆ ಅವಲಂಬಿತರಾಗಿದ್ದರೋ ಅವರು ಫಜೀತಿಗೆ ಒಳಗಾಗಿದ್ದಾರೆ. ಬಂದ್ ಎಂದರೆ ಸಂಪೂರ್ಣ ಬಂದ್ ಗಡಿಯಲ್ಲಿ ಆಗಿರುವುದರಿಂದ ಯಾವುದೇ ರೀತಿಯಲ್ಲಿಯೂ ಅಲ್ಲಿನ ರೋಗಿಗಳಿಗೆ ಮಂಗಳೂರಿಗೆ ಬರಲು ಆಗುತ್ತಿಲ್ಲ. ಇದರಿಂದ ನಮಗೂ ಒಂದಷ್ಟರ ಮಟ್ಟಿಗೆ ಅಯ್ಯೋ ಅನಿಸುತ್ತದೆ. ಆದರೆ ಅಂತವರನ್ನು ಮಾತ್ರ ಬಿಡಲು ಮುಂದಾದರೆ ಕೆಲವರು ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡರೆ ಏನಾಗಲಿದೆ ಕಥೆ. ಅದಕ್ಕಾಗಿ ಸದ್ಯ ಬಂದ್.
ಗಡಿಯನ್ನು ಬಂದ್ ಮಾಡಿರುವುದರ ಬಗ್ಗೆ ಕಾಂಗ್ರೆಸ್ ನಲ್ಲಿ ಭಿನ್ನಾಬಿಪ್ರಾಯ ಇದೆ. ಶಾಸಕ ಯು.ಟಿ.ಖಾದರ್ ಮಾಧ್ಯಮದಲ್ಲಿ ಗಡಿ ಬಂದ್ ಒಳ್ಳೆಯದು ಎಂದು ಹೇಳಿದರೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ವ್ಯಂಗ್ಯ ಮಾಡಿದೆ, ಈ ನಡುವೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡರನ್ನು ಕೇಂದ್ರ ಬಿಜೆಪಿ ಹೈಕಮಾಂಡ್ ಕೇರಳದ ಉಸ್ತುವಾರಿಯನ್ನಾಗಿ ನೇಮಿಸಿದೆ ಎನ್ನುವ ಸುದ್ದಿ ಇದೆ. ಅವರು ಬಂದು ಗಡಿಬಿಡಿಯಲ್ಲಿ ಗಡಿ ತೆಗಿ ಎಂದರೆ ಜನ ಈಗಲೇ ಆಕ್ರೋಶಗೊಂಡಿದ್ದಾರೆ. ಅದು ಇನ್ನೂ ಜಾಸ್ತಿಯಾಗಬಹುದು. ಇನ್ನು ಪಿಣರಾಯಿ ವಿಜಯನ್ ಮಡಿಕೇರಿಯಿಂದ ಕೇರಳಕ್ಕೆ ಪ್ರವೇಶಿಸುವ ಗಡಿಯನ್ನು ತೆರೆಯಲು ಕೂಡ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನು ಕೊಡಗಿನ ಶಾಸಕರು, ಮೈಸೂರು ಸಂಸದರು ವಿರೋಧಿಸಿದ್ದಾರೆ. ಒಟ್ಟಿನಲ್ಲಿ ಗಡಿ ತಂಟೆ ಸದ್ಯ ಕೊರೊನಾದ ಇನ್ನೊಂದು ಮಜಲನ್ನು ತೋರಿಸಿದೆ!
Leave A Reply