ಒಂದು ರಾಜ್ಯದ ಮುಖ್ಯಮಂತ್ರಿ ಎಲ್ಲವೂ ಸರಿ ಇದ್ದಾಗ ಅಹಂಕಾರದಿಂದ ವರ್ತಿಸಿ ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಉರಿ ತಡೆಯಲಾರದೇ ಕಿರುಚುತ್ತಿದ್ದರು. ಆ ರಾಜ್ಯ ಯಾವುದು ಮತ್ತು ಆ ಮುಖ್ಯಮಂತ್ರಿ ಯಾರಾಗಿದ್ದರು ಎಂದು ಇತಿಹಾಸವನ್ನು ಯಾರಾದರೂ ದಾಖಲಿಸಿದರೆ ಮುಂದಿನ ತಲೆಮಾರು ಪಿಣರಾಯಿ ವಿಜಯನ್ ಮಾಡಿದ ತಪ್ಪನ್ನು ಮಾಡುವುದಿಲ್ಲ. ಇವತ್ತು ಇಡೀ ಕರ್ನಾಟಕದಲ್ಲಿ ಕೊರೊನಾ ಸೊಂಕೀತರು 110 ಇದ್ದರೆ ಅದರ ಕಾಲ ಬುಡದಲ್ಲಿರುವ ಕಾಸರಗೋಡುವಿನಲ್ಲಿ 120 ಜನ ಸೊಂಕಿತರು ಇದ್ದಾರೆ. ಆದರೆ ಇವತ್ತು ಲೆಕ್ಕದ ಭರ್ತಿಗೆ ಕಾಸರಗೋಡು ಕೇರಳದ ತೆಕ್ಕೆಯಲ್ಲಿ ಇದೆ ಎನ್ನುವುದು ಬಿಟ್ಟರೆ ಅಲ್ಲಿನ ಜನರು ತಮ್ಮ ಜೀವದ ಗ್ಯಾರಂಟಿ ಕಾರ್ಡನ್ನು ಮಂಗಳೂರಿನ ಆಸ್ಪತ್ರೆಗಳಲ್ಲಿ ಇಟ್ಟಿದ್ದಾರೆ. ಇಲ್ಲಿ ವೆಂಟಿಲೇಟರ್ ಆಫ್ ಮಾಡಿದರೆ ಅಲ್ಲಿ ಜೀವ ಗೊಟಕ್ ಎನ್ನುವಂತಹ ಪರಿಸ್ಥಿತಿ ಇದೆ. ಸರಿಯಾದ ಒಂದು ಸರಕಾರಿ ಆಸ್ಪತ್ರೆ ಇಲ್ಲದಿದ್ದರೂ ಕಮ್ಯೂನಿಸ್ಟರ ದುರಹಂಕಾರಕ್ಕೆ ಏನೂ ಕಡಿಮೆ ಇಲ್ಲ. ಕಾಸರಗೋಡು ಸಂಸದ ಸುಪ್ರೀಂ ಕೋರ್ಟಿಗೆ ಹೋಗಿ ಕರ್ನಾಟಕ-ಕೇರಳ ಗಡಿಯನ್ನು ತೆರೆಯಲು ಕೇಂದ್ರಕ್ಕೆ ಸೂಚನೆ ಕೊಡಿ ಎಂದು ಒಂದೇ ಲುಂಗಿಯಲ್ಲಿ ನಿಂತು ಗೋಗರೆಯುತ್ತಿದ್ದಾರೆ ಎಂದರೆ ನೀವೆ ಅರ್ಥ ಮಾಡಿ ಅಲ್ಲಿನ ಜನರ ಪಾಡು.
ಮಾತನಾಡಿದರೆ ಪಿಣರಾಯಿ ವಿಜಯನ್ ರಾಜ್ಯಕ್ಕೆ 20 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ ಎಂದು ಪುಂಗಿ ಬಿಡುವ ಕಮ್ಮಿನಿಸ್ಟರಿಗೆ ಕಾಸರಗೋಡು ಜನರನ್ನು ಅವರ ಮುಖ್ಯಮಂತ್ರಿಗಳೇ ನೋಡಲಿ ಎಂದು ಹೇಳಿದರೆ ತಕ್ಷಣ ಮಾನವೀಯತೆ ಎನ್ನುವ ಶಬ್ದ ಬಾಯಲ್ಲಿ ಬರುತ್ತದೆ. ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆಯುತ್ತಿದೆ ಎನ್ನುವ ಆತಂಕದಿಂದ ಆರ್ ಎಸ್ ಎಸ್ ಬೆಂಬಲಿಗರನ್ನು ಮನೆಯ ಒಳಗೆ, ಶಾಲೆಯ ಒಳಗೆ, ಫ್ಯಾಕ್ಟರಿಯ ಒಳಗೆ ನುಗ್ಗಿ ತುಂಡರಿಸಿದ ಕೆಂಪು ಬಾವುಟದವರಿಗೆ ಆಗ ಮಾನವೀಯತೆ ನೆನಪಿಗೆ ಬರಲಿಲ್ಲವೇ? ಇವತ್ತು ಕಾಸರಗೋಡು ಅನಾಥವಾಗಲು ಕಾರಣ ಏನು? ಅಲ್ಲಿನ ಜನ. ಅವರು ಇವತ್ತಿಗೂ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ಸಿನ ಪಂಚೆಯ ಮೇಲೆ ಮೊಹರು ಒತ್ತುತ್ತಿರುವುದರಿಂದ ಅಲ್ಲಿನ ರಾಜಕಾರಣಿಗಳಿಗೆ ಗೊತ್ತಿದೆ, ನಾವು ಆಸ್ಪತ್ರೆ ಅಲ್ಲ, ಒಂದು ಗೂಡಂಗಡಿ ಕೊಡದಿದ್ದರೂ ಇಲ್ಲಿನ ಜನ ನಮಗೆ ವೋಟ್ ಹಾಕುವುದು. ಮೂರು ವರ್ಷಗಳ ಹಿಂದೆ ಒಮ್ಮೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಸದಾಗಿ ಸಿಎಂ ಆಗಿ ಯಾವುದೋ ಕಾರ್ಯಕ್ರಮಕ್ಕೆ ಕೇರಳಕ್ಕೆ ಬಂದಾಗ ಇದೇ ಪಿಣರಾಯಿ ವಿಜಯನ್ ” ನಾವು ಆಸ್ಪತ್ರೆಗಳನ್ನು ಹೇಗೆ ನಡೆಸುತ್ತಿದ್ದೇವೆ ಎನ್ನುವುದನ್ನು ನಮ್ಮಿಂದ ನೋಡಿ ಯೋಗಿ ಆದಿತ್ಯನಾಥ್ ಕಲಿಯಲಿ” ಎನ್ನುವ ಅರ್ಥದ ಮಾತುಗಳನ್ನು ಅಹಂಕಾರದಿಂದ ಆಡಿದ್ದರು. ಇವತ್ತು ಒಂದು ಡೆಲಿವರಿಗಾಗಿ ಅಲ್ಲಿನ ಗರ್ಭಿಣಿಯರು ಮಂಗಳೂರು ಕಡೆ ನೋಡುತ್ತಿದ್ದಾರೆ.
ನಾನು ಇಲ್ಲಿ ರಾಜಕೀಯ ಮಾತನಾಡಲು ಹೋಗುವುದೇ ಇಲ್ಲ. ಮಾನವೀಯತೆ ಕಮ್ಯೂನಿಸ್ಟರಿಗಿಂತ ಚೆನ್ನಾಗಿ ಬಲ್ಲ ನಾಡು ನಮ್ಮದು. ಆದರೆ ಇಲ್ಲಿ ಈಗ ಗಡಿಯ ವಿಷಯ ಚರ್ಚೆಯಲ್ಲಿ ಇರುವುದೇ ಅಲ್ಲ. ಗಡಿ ನೆಪ ಮಾತ್ರ. ನಾವು ಕಾಳಜಿ ವಹಿಸುತ್ತಿರುವುದು ನಮ್ಮ ಜನರ ವಿಷಯದಲ್ಲಿ. ಒಂದು ವೇಳೆ ತಲಪಾಡಿಯಲ್ಲಿ ಗಡಿ ತೆರೆದರೆ ನಾಳೆ ನಮಗೆ ವೆನಲಾಕ್ ಆಸ್ಪತ್ರೆ ಸಾಕಾಗುವುದಿಲ್ಲ. ನಾವು ಎಲ್ಲಾ ಪ್ರಯತ್ನಗಳನ್ನು ಶತಾಯಗತಾಯ ಮಾಡಿ ಸದ್ಯ 9 ಜನ ಸೋಂಕಿತರು ಮಾತ್ರ ನಮ್ಮಲ್ಲಿ ಇರುವ ಹಾಗೆ ಮಾಡಿದ್ದೇವೆ. ಅದರಲ್ಲಿಯೂ ನಾಲ್ಕು ಜನ ಕಾಸರಗೋಡು ಜಿಲ್ಲೆಯವರು. ಒಬ್ಬರು ಅಲ್ಲಿ ಹೋಗಿ ಅಂಟಿಸಿಕೊಂಡು ಬಂದವರು. ಹೀಗಿರುವಾಗ ನಾಳೆ ಗಡಿ ತೆರೆದರೆ ಅಗಸ್ಟ್ ನಲ್ಲಿ ಜೋಗದಲ್ಲಿ ಜಲಪಾತ ಹೇಗೆ ಕಾಣಿಸುತ್ತದೆ ಹಾಗೆ ವೆನಲಾಕ್ ಕಾಣಿಸಲಿದೆ. ಕಾಸರಗೋಡು ಜಿಲ್ಲೆಯವರಿಗೆ ವೆನಲಾಕ್ 52 ಕಿ.ಮೀ. ಇನ್ನು ಕಣ್ಣೂರು ಹೆಚ್ಚೆಂದರೆ 90 ಕಿ.ಮೀ. ಕೇರಳದ ಸಿಎಂ ಕಣ್ಣೂರಿನಲ್ಲಿ ತಮ್ಮವರಿಗೆ ವ್ಯವಸ್ಥೆ ಮಾಡಲಿ. ನಂತರ ಮುಂದಿನ ದಿನಗಳಲ್ಲಿ ಕಾಸರಗೋಡುವಿನಲ್ಲಿ ವೆನಲಾಕಿನ ಎರಡು ಪಟ್ಟು ದೊಡ್ಡ ಸುಸಜ್ಜಿತ ಸರಕಾರಿ ಆಸ್ಪತ್ರೆ ಕಟ್ಟಿಸಲಿ. ನಮಗೇನೂ ಬೇಸರವಿಲ್ಲ. ಸರಿಯಾಗಿ ನೋಡಿದರೆ ಕಾಸರಗೋಡು ನಮ್ಮದೇ. ಆದರೆ ಈಗ ಅಲ್ಲಿನವರು ಈ ಗಡಿಯ ಕಿರಿಕಿರಿಯಿಂದ ತಮ್ಮ ಜಿಲ್ಲೆಯನ್ನು ಕೇಂದ್ರಾಡಳಿತ ಮಾಡಿ ಎಂದು ಅಭಿಯಾನ ಆರಂಭಿಸಿದ್ದಾರೆ. ಈ ನಡುವೆ ಸುಪ್ರೀಂ ಕೋರ್ಟ್ ತೀರ್ಪು. ಕೇರಳ ಹೈಕೋರ್ಟ್ ತೀರ್ಪು. ಕೇಂದ್ರದ ನಡೆ, ನಮ್ಮ ರಾಜ್ಯ ಸರಕಾರದ ನಡೆ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ!
Leave A Reply