ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಮೊದಲೇ ಹೇಳಿದ್ದೆ!!
ಬಿ.ಎಸ್.ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅನುಭವಿಸಿ. 75 ವಯಸ್ಸಿನ ಬಳಿಕ ನಾವು ಯಾರನ್ನು ಮುಖ್ಯಮಂತ್ರಿ ಮಾಡಲ್ಲ ಎಂದು ಎದೆತಟ್ಟಿ ಹೇಳುತ್ತಿದ್ದ ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಗೆ ಈಗ ಈ 78 ವಯಸ್ಸಿನ ಮುಖ್ಯಮಂತ್ರಿ ಏನು ಎಡವಟ್ಟು ಮಾಡುತ್ತಾರೆ ಎಂದು ನೋಡುವುದೇ ಕೆಲಸವಾಗಿದೆ. ಕೋವಿಡ್ 19 ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ಜನಸಾಮಾನ್ಯ ಕೂಡ ಹೇಳಬಲ್ಲ. ರಾಜ್ಯದ ಒಟ್ಟು ಜಿಲ್ಲೆಗಳಲ್ಲಿ ಕೆಲವು ಜಿಲ್ಲೆಗಳು ಕೊರೊನಾ ಸೋಂಕಿತರನ್ನು ಒಳಗೆ ಬಿಟ್ಟುಕೊಟ್ಟಿಲ್ಲ ಎನ್ನುವುದು ನಿಜವಾದರೂ ಬೆಂಗಳೂರಿನಂತಹ ಜಿಲ್ಲೆಗಳಲ್ಲಿ ಪರಿಸ್ಥಿತಿ ಯಡಿಯೂರಪ್ಪ ಊಹಿಸಿದಷ್ಟು ಸುಲಭವಿಲ್ಲ. ಇದನ್ನು ಶಿವಾಜಿನಗರ, ಕಲಾಸಿಪಾಳ್ಯದ ಸ್ಲಂಗಳಲ್ಲಿ ಕುಳಿತ ಮೂರನೇ ಕ್ಲಾಸು ಕಲಿಯದವ ಕೂಡ ಹೇಳಬಲ್ಲ. ಆದರೆ ಯಡಿಯೂರಪ್ಪನವರಿಗೆ ಇದು ಗೊತ್ತಾಗುತ್ತಿಲ್ಲ. ಅದಕ್ಕೆ ಅವರು ಬೆಂಗಳೂರಿನಲ್ಲಿ ಲಾಕ್ ಡೌನ್ ಸಡಿಲ ಮಾಡಲು ಹೊರಟು ಬಿಟ್ಟಿದ್ದರು. ದ್ವಿಚಕ್ರ ವಾಹನಗಳು ಪಾಸ್ ಇಲ್ಲದೆ ಸಂಚರಿಸಬಹುದು ಎಂದು ಹೇಳಿದ್ದರು. ನಿಮಗೆ ಗೊತ್ತಿರಬಹುದು. ಬೆಂಗಳೂರಿನಲ್ಲಿ ಅಂದಾಜು 50 ಲಕ್ಷ ದ್ವಿಚಕ್ರ ವಾಹನಗಳಿವೆ. ಅವು ಸೋಮವಾರದಿಂದ ರಸ್ತೆಗೆ ಇಳಿಯಲು ತಯಾರಾಗಿ ಬಿಟ್ಟಿದ್ದವು. ಇನ್ನು ಐಟಿ, ಬಿಟಿಯವರು ಕೆಲಸ ಮಾಡಲು ಸೋಮವಾರದಿಂದ ಗ್ರೀನ್ ಸಿಗ್ನಲ್ ಕೊಡಲಾಗಿತ್ತು. ನೆನಪಿರಲಿ, ಕೇವಲ ಐಟಿಬಿಟಿಗಳಿಗಾಗಿಯೇ ಬೆಂಗಳೂರಿನಲ್ಲಿ ಇಲೆಕ್ಟ್ರಾನಿಕ್ ಸಿಟಿಯಂತಹ ನಗರಗಳಿವೆ. ಎಸ್ ಎಂ ಕೃಷ್ಣ ಬೆಂಗಳೂರನ್ನು ಅಂತರಾಷ್ಟ್ರೀಯ ಭೂಪಟದಲ್ಲಿ ಮೂಡಿಸಿದ್ದೇ ಬೆಂಗಳೂರಿನಲ್ಲಿ ಐಟಿಬಿಟಿಗಳಿಗೆ ಕೆಂಪು ಹಾಸು ಹಾಸುವ ಮೂಲಕ.
ನಮ್ಮ ರಾಜ್ಯ ಸರಕಾರಕ್ಕೆ ಈ ಐಟಿಬಿಟಿಗಳ ಮೇಲೆ ಅದೇನು ವ್ಯಾಮೋಹವೋ. ಇನ್ ಫೋಸಿಸ್ ಮತ್ತು ಒಂದೆರಡು ಸಂಸ್ಥೆಗಳು ಬಿಟ್ಟರೆ ಸರಕಾರಕ್ಕೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೈ ಎತ್ತಿ ದೇಣಿಗೆ ಕೊಟ್ಟ ಕಂಪೆನಿಗಳು ಕಾಣಿಸುತ್ತಿಲ್ಲ. ಇವುಗಳ ಮೇಲಿನ ತೋರಿಸುವ ಪ್ರೀತಿಯನ್ನು ರಾಜ್ಯ ಸರಕಾರ ರೈತರ ಮೇಲೆ ತೋರಿಸಿದ್ದರೆ ಅವರು ತಮ್ಮ ಬೆಳೆಗಳನ್ನು ಚರಂಡಿಗೆ ಎಸೆಯುವ ಪ್ರಮೇಯ ಬರುತ್ತಿರಲಿಲ್ಲ. ಅಲ್ಲಿ ರೈತರಿಗೆ ಫಸಲು ಬಂದರೆ ತೆಗೆಯಲು ಜನ ಇಲ್ಲ. ತೆಗೆದರೆ ಸಾರಿಗೆ ವ್ಯವಸ್ಥೆ ಇಲ್ಲ. ಸಾರಿಗೆ ವ್ಯವಸ್ಥೆ ಆದರೆ ಖರೀದಿಸಲು ರಖಂ ವರ್ತಕರು ಇಲ್ಲ. ಹೀಗೆ ಸಮಸ್ಯೆ ಉದ್ದ ಇದೆ. ಹೀಗಿರುವಾಗ ಈ ಐಟಿಬಿಟಿಗಳಿಗೆ ವಿನಾಯಿತಿ ಕೊಟ್ಟು ರಾಜ್ಯ ಸರಕಾರ ಹೇಳಲು ಹೊರಟಿರುವುದು ಏನು? ಇವತ್ತಿನ ಪರಿಸ್ಥಿತಿಯಲ್ಲಿ ಜಗತ್ತಿನ 251 ರಾಷ್ಟ್ರಗಳಲ್ಲಿ ಕೊರೊನಾ ಹೆಚ್ಚುಕಡಿಮೆ ಕಂಬಳಿ ಹೊದ್ದು ಮಲಗಿದೆ. ಬರುವ ದಿನಗಳಲ್ಲಿ ಇಲ್ಲಿ ಮತ್ತೆ ಝೇಂಕರಿಸಿದರೆ ಹೊಟ್ಟೆಗೆ ನಾವು ಐಟಿಬಿಟಿ ತಿನ್ನಲು ಆಗಲ್ಲ. ಆಗ ನಮಗೆ ರೈತನೇ ಬೇಕು.
ಹೀಗಿರುವಾಗ ತೆಪ್ಪಗೆ ಮೇ 3 ರ ತನಕ ಯಡಿಯೂರಪ್ಪನವರು ಕುಳಿತುಕೊಳ್ಳುವುದು ಒಳ್ಳೆಯದು. ಈಗ ಒಂದು ವಾರ ಮೊದಲೇ ಅವಸರಕ್ಕೆ ಬಸಿರು ಮಾಡಿಕೊಂಡರೆ ನಂತರ 2 ತಿಂಗಳು ಹೆರಿಗೆ ನೋವು ಅನುಭವಿಸಬೇಕಾದಿತು. ನಾವು ಏನು ಮಾಡಿದರೂ ಪ್ರಯೋಗ ಮಾಡುವುದು ಎಂದು ಹೇಳಿ ತಪ್ಪನ್ನು ಸಾರಿಸುವ ಬದಲು ಒಂದಿಷ್ಟು ತಲೆ ಉಪಯೋಗಿಸುವುದು ಒಳ್ಳೆಯದು. ಯಾಕೋ ಮುಂದಿನ ಭರ್ತಿ ಮೂರು ವರ್ಷ ಒಂದೋ ಅರಳು ಇಲ್ಲ ಮರಳು ಆಗಲಿದೆ!!
Leave A Reply