ಸತ್ಯವನ್ನು ಮರೆ ಮಾಚಿದ್ದಕ್ಕೆ ಮಳೆರಾಯ ಕೋಪಗೊಂಡನಾ!
ಬಹುಶ: ದೇವರಿಗೂ ಲೈಟ್ ಹೌಸ್ ಹಿಲ್ ರಸ್ತೆಯ ಹೆಸರನ್ನು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದೇ ಬದಲಾಯಿಸಬೇಕು ಎಂದು ಇದ್ದಿರಬಹುದು. ಅದಕ್ಕಾಗಿ ವರುಣನನ್ನು ಕಳುಹಿಸಿ ಲೈಟ್ ಹೌಸ್ ಹಿಲ್ ರಸ್ತೆಯೆಂದು ಬರೆದಿದ್ದ ಬೋರ್ಡ್ ನ ಮೇಲೆ ಸಂತ ಎಲೋಶಿಯಸ್ ಕಾಲೇಜು ರಸ್ತೆ ಎಂದು ಕಾಲೇಜಿನವರು ಅಂಟಿಸಿದ್ದ ಸ್ಟಿಕರ್ ಅನ್ನು ತೊಳೆದು ಜಾರಿಸಿ ಬಿಟ್ಟಿದ್ದಾನೆ. ಬೆಳಿಗ್ಗೆ ವರುಣ ಅಂದರೆ ಮಳೆರಾಯನ ಸಣ್ಣ ಅಬ್ಬರಕ್ಕೆ ಮತ್ತೆ ವಾಸ್ತವ ಹೊರಗೆ ಬಿದ್ದಿದೆ. ಇನ್ನೆಷ್ಟು ದಿನ ಅಂತ ಸತ್ಯವನ್ನು ಮುಚ್ಚಿಡುವುದು ಎಂದು ಕೇಳಿದ್ದು ಪರಲೋಕದಲ್ಲಿರುವ ಪರಮಾತ್ಮ.
1976 ರಿಂದಲೇ ಲೈಟ್ ಹೌಸ್ ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ರಸ್ತೆ ಎಂದು ದಾಖಲೆಗಳಲ್ಲಿ ಉಲ್ಲೇಖವಿದೆ ಎಂದು ಮೊನ್ನೆ ಸಭೆಯಲ್ಲಿ ಕಾಲೇಜಿನ ಪ್ರತಿನಿಧಿ ನರಹರಿಯವರು ವಾದಿಸಿದ್ದರು. ಅದು ಅವರ ಸ್ವಾತಂತ್ರ್ಯ ಮತ್ತು ಹಕ್ಕು. ಅದೇ ಸಮಯದಲ್ಲಿ ಕಾಲೇಜಿನ ಹೊರಗಿನ ಫಲಕದಲ್ಲಿ ಕಾಲೇಜಿನವರೇ ಲೈಟ್ ಹೌಸ್ ಹಿಲ್ ರಸ್ತೆ ಬರೆದಿರುವ ಫೋಟೋ ತೆಗೆದು ಕೆಲವರು ಸಾಮಾಜಿಕ ತಾಣಗಳಲ್ಲಿ ಹಾಕಿದ್ದರು. ಅದರ ನಂತರ ಎಚ್ಚೆತ್ತುಕೊಂಡ ಕಾಲೇಜಿನ ಆಡಳಿತ ಮಂಡಳಿ ತಕ್ಷಣ ಲೈಟ್ ಹೌಸ್ ಹಿಲ್ ರಸ್ತೆ ಎಂದು ಇದ್ದ ಕಡೆ ಎಲೋಶಿಯಸ್ ಕಾಲೇಜು ರಸ್ತೆ ಎಂದು ಬರೆದು ಒಂದು ಸ್ಟಿಕರ್ ತರಹದ್ದು ಅಂಟಿಸಿದ್ದರು. ಏಕೆಂದರೆ ಮುಂದಿನ ಬಾರಿ ಯಾರಾದರೂ ಫೋಟೋ ತೆಗೆದಾಗ ಎಲೋಶಿಯಸ್ ಕಾಲೇಜು ರಸ್ತೆ ಎಂದು ಬೋರ್ಡ್ ನಲ್ಲಿದೆ, ಯಾರೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದು ಅಂದುಕೊಳ್ಳಲಿ ಎನ್ನುವ ಕಾರಣಕ್ಕೆ ಹಾಗೆ ಬೋರ್ಡ್ ನ ಮೇಲೆ ಹೊಸ ಸ್ಟಿಕರ್ ಅಂಟಿಸಿ ಮಾಡಿರಬಹುದು. ಆದರೆ ಅವರು ಅಂಟಿಸಿದ ಸ್ಟಿಕರ್ ಎಷ್ಟು ಕಳಪೆ ಗುಣಮಟ್ಟದ್ದು ಎಂದರೆ ಒಂದೇ ಮಳೆಗೆ ಅದು ಕಿತ್ತು ಇವತ್ತು ಕೆಳಗೆ ನೇತಾಡುತ್ತಿತ್ತು. ಒಂದು ವೇಳೆ ಯಾರಾದರೂ ಬೇರೆ ವ್ಯಕ್ತಿಗಳು ಹಾಗೆ ಮಾಡಿದ್ದರೆ ಮಾಡಿದವನ ಜಾತಿ, ಧರ್ಮ ಹಿಡಿದು ಮತ್ತೊಂದು ಹೋರಾಟ ಶುರುವಾಗುತ್ತಿತ್ತೊ ಏನೋ. ಆದರೆ ತೆಗೆದದ್ದು ಮಳೆರಾಯ ಆದ ಕಾರಣ ಕಾಲೇಜಿನವರು ಕೂಡ ಏನೂ ಮಾಡುವಂತಿಲ್ಲ.
ತುಂಡು ಮಾಡಿಟ್ಟ ಹಲಸಿನ ಹಣ್ಣು ಮತ್ತು ಹೆಣ್ಣಿನ ಗರ್ಭವನ್ನು ತುಂಬಾ ದಿನ ಮುಚ್ಚಿಡಲು ಆಗುವುದಿಲ್ಲ ಎನ್ನುವ ಮಾತಿದೆ. ಹಾಗೆ ನೈಜ ಹೆಸರಿನ ಮೇಲೆ ಸ್ಟೀಕರ್ ಅಂಟಿಸಿ ಬೇರೆ ಹೆಸರನ್ನು ರಾತ್ರೋರಾತ್ರಿ ಪ್ರಚಾರ ಪಡಿಸಿದರೆ ಅದು ಕೂಡ ತುಂಬಾ ದಿನ ಉಳಿಯಲ್ಲ ಎನ್ನುವುದು ಹೊಸ ಗಾದೆ. ಬಹುಶ: ಇದಕ್ಕೆ ಕಾಲೇಜಿನ ಆಡಳಿತ ಮಂಡಳಿ ಏನು ಹೇಳುತ್ತದೆಯೋ. ಏನು ಮಾಡಿದರೂ ಅವರು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ರಸ್ತೆಗೆ ಇಡುವುದನ್ನು ತಪ್ಪಿಸಲು ಆಗುತ್ತಿಲ್ಲ. ಇನ್ನೊಂದೆರಡು ತಿಂಗಳು ತಡವಾದರೆ ಜನರಿಗೂ ಅದರ ಬಗ್ಗೆ ಆಸಕ್ತಿ ಹೊರಟು ಹೋಗುತ್ತದೆ. ಆದ್ದರಿಂದ ಅದನ್ನು ಆದಷ್ಟು ಮುಂದೂಡುವ ಪ್ರಯತ್ನ ನಡೆಯುತ್ತಾ ಇರಬಹುದು. ಇಷ್ಟೆಲ್ಲಾ ಕಿರಿಕಿರಿ ಇದೆ ಎಂದು ಗೊತ್ತಿದ್ದರೆ ಮೂಲ್ಕಿ ಸುಂದರರಾಮ ಶೆಟ್ಟಿಯವರೇ ತಮ್ಮ ಹೆಸರನ್ನು ಯಾವುದೇ ರಸ್ತೆಗೆ ನೀವು ಇಡಲಿ ಎಂದು ತಾನು ಒಳ್ಳೆಯ ಕೆಲಸಗಳನ್ನು ಮಾಡಿದ್ದಲ್ಲ ಎಂದು ಹೇಳುವ ಸಂದರ್ಭ ಬರುತ್ತದೆಯೋ ಏನೋ. ಇಷ್ಟು ಕಿರಿಕಿರಿ ಇದೆ ಎಂದು ಮೊದಲೇ ಗೊತ್ತಿದ್ರೆ ನನ್ನ ಹೆಸರೇ ಇಡುವುದು ಬೇಡಾ ಎಂದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಆತ್ಮ ಎಲ್ಲೋ ದು:ಖದಿಂದ ಮರುಗುತ್ತಿರಬಹುದು. ಸ್ಟಿಕರ್ ಕಿತ್ತು ಹೋಗಿರುವುದು ಮಾತ್ರ ಕಾಕತಾಳೀಯ
Leave A Reply