ಮೇ 4ರಂದು ಕೊರೊನಾಗೆ ಮದ್ಯಪ್ರಿಯರಿಂದ ಹಬ್ಬ!!
ಮೇ 4 ರಿಂದ ಮದ್ಯ ಸಿಗಲಿದೆ. ಈ ಒಂದು ವಾಕ್ಯದಿಂದ ಮದ್ಯಪ್ರಿಯರು ಎಷ್ಟು ಖುಷಿಯಾಗಿದ್ದಾರೆ ಎಂದರೆ ನಾಳೆಯಿಂದ ಪೈಪಿನಲ್ಲಿ ಕುಡಿಯುವ ನೀರು ಬರುತ್ತದೆ ಎಂದು ಒಂದೂವರೆ ತಿಂಗಳ ನಂತರ ಯಾರಾದರೂ ಹೇಳಿದರೆ ಎಷ್ಟು ಖುಷಿಯಾಗುತ್ತೋ ಅಷ್ಟೇ ಖುಷಿಯಾಗಿದ್ದಾರೆ. ಅಂತಹ ಒಂದು ಖುಷಿಯನ್ನು ಕರುಣಿಸಿದ್ದು ನಮ್ಮ ರಾಜ್ಯ ಸರಕಾರ. ಒಂದು ವೇಳೆ ರಾಜ್ಯ ಕರುಣಿಸಿಯೂ ಜಿಲ್ಲಾಡಳಿತ ಬೇಡಾ ಎಂದಿದ್ದರೆ ಅಷ್ಟೂ ಕುಡುಕರು ಜಿಲ್ಲಾಡಳಿತಕ್ಕೆ ವಿರೋಧವಾಗುತ್ತಿದ್ದರು. ಆದ್ದರಿಂದ ಏನೇ ಇರಲಿ ಕುಡಿದು ಹಾಳಾಗಲಿ ಎಂದು ಕೂಡ ಅನುಮತಿ ಕೊಟ್ಟಿರಬಹುದು. ಆದರೆ ನನ್ನ ವಿನಂತಿ ಏನೆಂದರೆ ಕಳೆದ 40 ದಿನಗಳಿಂದ ನೀವು ನಿಜವಾಗಿಯೂ ಕುಡಿಯದೇ ಸಂಪೂರ್ಣ ನಿಯಂತ್ರಣದಲ್ಲಿದ್ದಿರಿ ಎಂದಾದರೆ ಕುಡಿಯಬೇಕು ಎನ್ನುವ ಕಾರಣಕ್ಕೆ ಕುಡಿಯಬೇಡಿ. ನಾನು ಶ್ರೀಮಂತರಿಗೆ ಈ ಮಾತು ಹೇಳುವುದಿಲ್ಲ. ಅವರದ್ದು ಹೇಗೂ ನಡೆಯುತ್ತೆ. ಆದರೆ ಮಧ್ಯಮ, ಕೆಳಮಧ್ಯಮ ವರ್ಗದಲ್ಲಿ ದಿನಕ್ಕೆ ನಾಲ್ಕು ನೂರು ದುಡಿದರೆ ಇನ್ನೂರು ಕುಡಿಯಲು ಹಾಕುವವರು ಇದ್ದಾರೆ. ಕೆಲವು ಗಂಡಸರು ತಿಂಗಳಿಗೆ ಹದಿನೈದು ಸಾವಿರ ದುಡಿದರೂ ಮನೆಗೆ ಐದೇ ಸಾವಿರ ಕೊಡುವವರಿದ್ದಾರೆ. ಕೇಳಿದರೆ ಎಂಜಾಯ್ ಮೆಂಟ್ ಬೇಡ್ವಾ ಎನ್ನುವವರಿದ್ದರು. ನೀವು ಕುಡಿಯುವ ನೂರು ರೂಪಾಯಿ ಹಣದಲ್ಲಿ ನಿಮಗೆ ಒಂದೆರಡು ಗಂಟೆ ಖುಷಿ ಆಗಬಹುದು. ಆದರೆ ಅದೇ ಹಣದಲ್ಲಿ ಮನೆಗೆ ಒಂದು ಲೀಟರ್ ತೆಂಗಿನೆಣ್ಣೆ ತೆಗೆದುಕೊಂಡು ಹೋದರೆ ಅದು ಇಡೀ ಮನೆಗೆ ಒಂದು ತಿಂಗಳಿಗೆ ಉಪಯೋಗಕ್ಕೆ ಬೀಳುತ್ತದೆ. ಇನ್ನೂರು ರೂಪಾಯಿ ಕುಡಿಯುವ ಬದಲಿಗೆ ಅದೇ ಹಣದಲ್ಲಿ ಎರಡು ಕಿಲೋ ಒಳ್ಳೆಯ ಮಾವಿನ ಹಣ್ಣು ತೆಗೆದುಕೊಂಡು ಹೋದರೆ ಇಡೀ ಮನೆಮಂದಿ ಎರಡು ದಿನ ಖುಷಿಯಿಂದ ತಿನ್ನಬಹುದು. ಇದೆಲ್ಲ ಯೋಚಿಸಿ, ಒಂದಿಷ್ಟು ದಿನ ಮನಸ್ಸನ್ನು ನಿಗ್ರಹಿಸಿದರೆ ಮುಂದಿದೆ ಉತ್ತಮ ಜೀವನ ಮತ್ತು ಮರ್ಯಾದೆ.
ಇನ್ನು ಸರಕಾರದ ವಿಷಯಕ್ಕೆ ಬರೋಣ. ಮೇ 4 ರಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವೈನ್ ಶಾಪ್, ಬಾರ್ ತೆರೆದಿರುತ್ತದೆ ಎಂದು ಘೋಷಿಸಲಾಗಿದೆ. ನಾಳೆ ಪ್ರತಿ ಬಾರ್ ನಲ್ಲಿ ಹೇಗೆ ಕ್ಯೂ ಇರುತ್ತದೆ ಎಂದರೆ ಇವತ್ತು ಕುಡಿಯದಿದ್ದರೆ ಸತ್ತೆ ಹೋಗುತ್ತೆವೆ ಎನ್ನುವ ಮಟ್ಟಿಗೆ ಹಾಹಾಕಾರ ಇರುತ್ತದೆ. ಬೆಳಿಗ್ಗೆ 7 ಗಂಟೆಯಿಂದಲೇ ತೆರೆಯಲು ಅನುಮತಿ ಸಿಕ್ಕಿದ ಕಾರಣ ನನ್ನ ಪ್ರಕಾರ 10 ಗಂಟೆಯ ಒಳಗೆ ಸ್ಟಾಕ್ ಮುಗಿದುಹೋಗಲಿದೆ. ಸಾಮಾಜಿಕ ಅಂತರ ಎನ್ನುವುದನ್ನು ನಮ್ಮ ಮದ್ಯಪ್ರಿಯರು ನಾಳೆ ಗಾಳಿಗೆ ತೂರಲಿದ್ದಾರೆ. ನಾಳೆ ಕೋವಿಡ್ 19 ವೈರಾಣುವಿಗೆ ಹಬ್ಬ. ಇಷ್ಟು ದಿನ ಅದಕ್ಕೂ ಬೋರಾಗುತ್ತಿತ್ತು. ನಾಳೆಯಿಂದ ಅದು ಒಂದಿಷ್ಟು ಹೊತ್ತು ಒವರ್ ಡ್ಯೂಟಿ ಮಾಡಿದರೆ ನಿರಾಯಾಸವಾಗಿ ಕೋವಿಡ್ ಪಾಸಿಟಿವ್ ಪೀಡಿತರ ಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಡಬ್ಬಲ್ ಡಿಜಿಟ್ ಗೆ ಹೋಗಲಿದೆ. ಇನ್ನು ಎಷ್ಟೋ ಬಾರ್ ಗಳಲ್ಲಿ ಈಗಾಗಲೇ ಮಾಲ್ ಖಾಲಿಯಾಗಿ ಹೋಗಿದೆ. ಜಿಲ್ಲಾಡಳಿತ ಮತ್ತು ಅಬಕಾರಿ ಇಲಾಖೆ ಎಷ್ಟೇ ಲೆಕ್ಕ ಇಟ್ಟುಕೊಂಡರೂ ಮಾರಾಟಗಾರರ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಅದೆಲ್ಲ ದಾಖಲೆಗಳನ್ನು ಪರೀಕ್ಷಿಸಲು ಯಾರು ಹೋಗುತ್ತಾರೆ. ಇನ್ನು ಅಲ್ಲಿಯೇ ಕುಡಿಯಬಾರದು. ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಹೇಳಲಾಗಿದೆ. ಇದರಿಂದ ತಂದೆ ಕುಡಿಯುವುದನ್ನು ಮಕ್ಕಳು ನೋಡಲಿದ್ದಾರೆ. ಇವರೇ ಅಭ್ಯಾಸ ಮಾಡಿ ಕೊಟ್ಟ ಹಾಗೆ ಆಗುತ್ತದೆ. ಒಂದು ವೇಳೆ ಕದ್ದು ಮುಚ್ಚಿ ಕುಡಿದರೂ ಪಾಪಪ್ರಜ್ಞೆ ಕಾಡದೇ ಇರುತ್ತದೆಯಾ?
ಇನ್ನು ಮೂರನೇಯದಾಗಿ ನಾನು ಜಿಲ್ಲಾಡಳಿತಕ್ಕೆ ಕೇಳುವುದು ತಾವು ಮದ್ಯ ಖರೀದಿಸುವಾಗ ಐದು ಮಂದಿ ಮಾತ್ರ ಒಳಗೆ ಹೋಗಬೇಕು ಎಂದಿದ್ದಿರಿ. ಅದೇ ನಮ್ಮ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಕೂಡ ಐದೈದು ಮಂದಿ ಹೋಗಿ ಪ್ರಾರ್ಥನೆ ಸಲ್ಲಿಸಿ ಬರಬಹುದು. ಅದಕ್ಕೆ ಯಾಕೆ ಅವಕಾಶ ಕೊಡುವುದಿಲ್ಲ. ಮಸೀದಿ, ಚರ್ಚ್ ನಲ್ಲಿ ಸಾಮಾನ್ಯವಾಗಿ ನಮಾಜ್ ಮತ್ತು ಮಾಸ್ ಒಂದೇ ಸಮಯದಲ್ಲಿ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಬೆಳಿಗ್ಗೆ 6 ರಿಂದ 12.30 ಮತ್ತು ಸಂಜೆ 6 ರಿಂದ 8.30 ತನಕ ಇರುತ್ತದೆ. ಐದೈದು ಮಂದಿ ಹೋಗಿ ಪ್ರಾರ್ಥನೆ ಸಲ್ಲಿಸಿ ಬನ್ನಿ ಎಂದು ಹೇಳಬಹುದಲ್ಲ. ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಬಿಟ್ಟು ಬೇರೆ ಕಡೆ ಹೀಗೆ ಮಾಡಬಹುದಲ್ಲ. ಯಾಕೋ ದೇವರ ಹೆಸರಿನಲ್ಲಿ ಅಧಿಕಾರಕ್ಕೆ ಬರುವವರು ದೇವರಿಗಿಂತ ಮದ್ಯಕ್ಕೆ ಹೆಚ್ಚು ಪ್ರಾಶಸ್ತ ಕೊಟ್ಟಂಗೆ ಕಾಣುತ್ತಿದೆ. ಇದನ್ನೇ ಬೇರೆಯವರು ಮಾಡಿದ್ದರೆ ಏನಾಗುತ್ತಿತ್ತೊ!
Leave A Reply