ಕಿಟ್ ಆಯಿತು, ಇನ್ನು ಪ್ಯಾಕೇಜ್, ಕೊಡದಿದ್ದರೆ ಮುಂದೆ ಸಿಗ್ತೀರಲ್ಲ!!
ಇಷ್ಟು ದಿನ ಕಿಟ್ ಕೊಡುವ ಕಾರ್ಯಕ್ರಮ ಇತ್ತು. ನಿಜವಾಗಿಯೂ ತುರ್ತು ಅಗತ್ಯ ಇದ್ದವರಿಗೆ ಸಿಕ್ಕಿದೆಯಾ ಎನ್ನುವುದು ಆ ದೇವರಿಗೆ ಮಾತ್ರ ಗೊತ್ತು. ನೈಜವಾಗಿ ಸಂಕಷ್ಟದಲ್ಲಿದ್ದವರಿಗೆ ಸಿಕ್ಕಿದಕ್ಕಿಂತ ಹೆಚ್ಚಾಗಿ ಮತ ಕೊಟ್ಟಿಲ್ವಾ, ಕಿಟ್ ಕೊಡಿ ಎನ್ನುವ ಕಾರಣಕ್ಕೆ ತೆಗೆದುಕೊಂಡವರೇ ಬಹಳ ಮಂದಿ. ಈಗ ಅದರ ಮುಂದಿನ ಅಧ್ಯಾಯ ಎಂದರೆ ಪ್ಯಾಕೇಜ್ ಘೋಷಣೆ. ಒಂದು ಕಡೆ ಕೇಂದ್ರ ಸರಕಾರ ಮತ್ತೊಂದು ಕಡೆ ರಾಜ್ಯ ಸರಕಾರ ಪ್ಯಾಕೇಜುಗಳ ಘೋಷಣೆಯಲ್ಲಿ ಮುಳುಗಿವೆ. ರಾಜ್ಯ ಸರಕಾರ ಇತ್ತೀಚೆಗೆ ಘೋಷಿಸಿರುವ ಪ್ಯಾಕೇಜ್ ಮೊತ್ತವೇ 1160 ಸಾವಿರ ಕೋಟಿ. ಅತ್ತ ಕೇಂದ್ರ ಬಿಪಿಎಲ್ ಕಾರ್ಡ್ ಇದ್ದವರಿಗೆ 25 ಕೆಜಿ ಅಕ್ಕಿ ಸಹಿತ ರೇಶನ್ ಅಂಗಡಿಯಿಂದ ಕೆಲವು ನಿರ್ದಿಷ್ಟ ವಸ್ತುಗಳನ್ನು ವಿತರಿಸಿದೆ. ಇನ್ನು ಅಡುಗೆ ಅನಿಲವನ್ನು ತಿಂಗಳಿಗೆ ಒಂದರಂತೆ ಉಚಿತವಾಗಿ ಹಂಚಿದೆ. ಜನಧನ್ ಯೋಜನೆಯಲ್ಲಿ ಹಣ ಹಾಕಿದೆ. ಅಷ್ಟೆಲ್ಲಾ ಆದ ಮೇಲೆ ರಾಜ್ಯ ಸರಕಾರದ ಸರದಿ. ಆಟೋ ರಿಕ್ಷಾದವರಿಗೆ ಪ್ರತಿಯೊಬ್ಬರಿಗೆ 5000 ಸಾವಿರ ರೂಪಾಯಿಯನ್ನು ಖಾತೆಗೆ ಹಾಕುವ ಕಾರ್ಯಕ್ರಮ. ಅದರೊಂದಿಗೆ ಇನ್ನು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಚೈತನ್ಯ ಕೊಡುವ ಘೋಷಣೆಯನ್ನು ಮಾಡಲಾಗುತ್ತಿದೆ. ನೀವು ಈಗಾಗಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಪ್ರಚಾರ ಆಗುತ್ತಿರುವುದನ್ನು ಗಮನಿಸಿರಬಹುದು. ಅದರೊಂದಿಗೆ ನಿನ್ನೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಿಜೆಪಿ ಜಿಲ್ಲಾಧ್ಯಕ್ಷರುಗಳ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ತರದ್ದು ಮಾಡಿ ಅವರ ಮನವಿಗಳನ್ನು ಕೇಳಿದ್ದಾರೆ. ಅಲ್ಲಿ ಮತ್ತೆ ವಿವಿಧ ಕ್ಷೇತ್ರಗಳ ಜನರಿಗೆ ಸಹಾಯ ಒದಗಿಸುವಂತೆ ಜಿಲ್ಲಾಧ್ಯಕ್ಷರುಗಳು ಮನವಿ ಮಾಡಿದ್ದಾರೆ.
ನಮ್ಮ ರಾಜ್ಯದಲ್ಲಿ ಇರುವ ವ್ಯವಹಾರ, ಉದ್ದಿಮೆ, ಉದ್ಯೋಗಗಳು ಒಂದೆರಡಲ್ಲ. ಸರಿಯಾಗಿ ನೋಡಿದರೆ ಸಾವಿರಷ್ಟು ಇರಬಹುದು. ಈಗಾಗಲೇ ಪ್ರಧಾನಿ ಮೋದಿಯವರು ಮನವಿ ಮಾಡಿದಂತೆ ಹೆಚ್ಚಿನ ಉದ್ಯೋಗದಾತರು ತಮ್ಮಲ್ಲಿ ಕೆಲಸ ಮಾಡುವ ಕೆಲಸದವರಿಗೆ ಸಂಬಳವನ್ನು ಕೊಡುತ್ತಿದ್ದಾರೆ. ಅನೇಕ ಕಡೆ ವರ್ಕ್ ಫ್ರಂ ಹೋಂ ನಡೆದಿದ್ದರೆ, ಹೆಚ್ಚಿನ ಕಡೆ ಕೆಲಸದವರಿಗೆ ಮನೆಯಲ್ಲಿಯೇ ಇರಲು ಹೇಳಿ ಸಂಬಳವನ್ನು ಅಕೌಂಟಿಗೆ ಹಾಕಿದ್ದಾರೆ. ಅಂತವರು ಕೆಲಸ ಇಲ್ಲ ಎಂದು ಹೇಳಿ ಕಿಟ್ ತೆಗೆದುಕೊಂಡಿದ್ದಾರೆ. ಕೆಲಸ ಇಲ್ಲ ಹೌದು, ಆದರೆ ಸಂಬಳ ಬರುತ್ತಿದೆಯಲ್ಲ ಎಂದು ಯಾರೂ ಕೇಳಿಲ್ಲ. ಅಂತವರಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಕೇಂದ್ರದ ಸೌಲಭ್ಯ ಬೇರೆ. ಈಗ ರಿಕ್ಷಾ ಚಾಲಕರಲ್ಲಿ ಹೆಚ್ಚಿನವರು ಬಾಡಿಗೆ ಓಡಿಸುತ್ತಿದ್ದರೆ ಅವರು ಬಿಪಿಎಲ್ ಕಾರ್ಡ್ ನಲ್ಲಿ ಬರುತ್ತಿದ್ದರೆ ಅವರಿಗೆ ಕೇಂದ್ರದ ಸೌಲಭ್ಯ ಸಿಕ್ಕಿರುತ್ತದೆ.
ಇನ್ನು ವಿವಿಧ ರಂಗ, ಕ್ಷೇತ್ರದವರು ಬಂದು ನಮಗೆ ಪ್ಯಾಕೇಜು ಕೊಡಿಸಿ ಎಂದು ಆಳುವ ಪಕ್ಷದ ಶಾಸಕರನ್ನು ದಂಬಾಲು ಬೀಳುವುದು ನಡೆಯುತ್ತಿದೆ. ಕೊಡಿಸಲು ಆಗಲ್ಲ, ಸರಕಾರದ ಬಳಿಯೂ ಹಣವಿಲ್ಲ ಎಂದರೆ ಬಂದ ಸಮುದಾಯದ ಮುಖಂಡ “ಸರಿ, ಹಾಗಾದರೆ ಮೂರು ವರ್ಷದ ನಂತರ ಇದೇ ಸಮಯಕ್ಕೆ ಸಿಗುತ್ತಿರಲ್ಲ, ಆಗ ನೋಡಿಕೊಳ್ಳುತ್ತೇವೆ” ಎನ್ನುವ ಬ್ಲಾಕ್ ಮೇಲ್ ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಯಾರು ಬಂದರೂ ಕಿಟ್ ಕೊಡಬೇಕು, ಯಾರು ಬಂದರೂ ಪ್ಯಾಕೇಜ್ ಕೊಡಿಸಬೇಕು. ಇಲ್ಲದಿದ್ದರೆ ಮೂರು ವರ್ಷದ ನಂತರ ಚುನಾವಣೆ ಇದೆಯಲ್ಲ, ಬುದ್ಧಿ ಕಲಿಸ್ತಾರಾ ಎನ್ನುವ ಹೆದರಿಕೆ. ಹಾಗಾದರೆ ನೀವು ಕೊಡುವ ಪ್ಯಾಕೇಜ್ ಹಣ ಯಾರದ್ದು? ನಮ್ಮ ಜನಸಾಮಾನ್ಯರ ತೆರಿಗೆ ಹಣ ಅಲ್ವೇ? ಕೆಲವರಂತೂ ಕೇಂದ್ರ, ರಾಜ್ಯ ಕೊಟ್ಟ ಹಣವನ್ನು ಮೊನ್ನೆ ಮತ್ತೆ ಸರಕಾರಕ್ಕೆ ಮರಳಿಸಲು ಮದ್ಯದ ಅಂಗಡಿಗಳ ಹೊರಗೆ ಕ್ಯೂನಲ್ಲಿ ನಿಂತಿದ್ದರು. ಹಲವರು ತಮಗೆ ಸಿಕ್ಕಿದ ಕಿಟ್ ಮಾರಿ ಆ ಹಣದಲ್ಲಿ ಕುಡಿದಿದ್ದಾರೆ.
ಈಗಾಗಲೇ ಹೊರರಾಜ್ಯದ ಕಾರ್ಮಿಕರನ್ನು ರೈಲಿನಲ್ಲಿ, ಹೊರಜಿಲ್ಲೆಯ ಕಾರ್ಮಿಕರನ್ನು ಬಸ್ಸಿನಲ್ಲಿ ಕಳುಹಿಸಿಕೊಡಲು ರಾಜ್ಯ ಸರಕಾರಕ್ಕೆ ನೂರಾರು ಕೋಟಿ ಖರ್ಚಾಗುತ್ತಿದೆ. ಅದೇ ಹತ್ತಿರ ಐನೂರು ಕೋಟಿ ಈಗಾಗಲೇ ದಾಟಿದೆ. ಇನ್ನೂ ಸಾಕಷ್ಟು ಜನರನ್ನು ಕಳುಹಿಸಿಕೊಡಲು ಇರುವುದರಿಂದ ಅದರ ಅಂತಿಮ ಲೆಕ್ಕ ಸಿಗುವಾಗ ಅದು ಎಷ್ಟು ಡಿಜಿಟ್ ಆಗುತ್ತಾ ಗೊತ್ತಾಗಲ್ಲ.ಶ್ರೀಮಂತರು ಆರಾಮವಾಗಿದ್ದಾರೆ. ಬಡವರಿಗೆ ಕಿಟ್, ಪ್ಯಾಕೇಜು ಸಿಗುತ್ತಿದೆ. ಆದರೆ ಯಾವುದೇ ಕಡೆ ಸೇರದ ನಮ್ಮಂತಹ ಮಧ್ಯಮ ವರ್ಗದವರಿಗೆ ಕೇಳುವವರು ಇಲ್ಲ. ಇನ್ನು ಕೆಲವು ದಿನಗಳಲ್ಲಿ ರೈಲುಗಳು ಯಥಾವತ್ತಾಗಿ ಸಂಚರಿಸಲಿವೆ. ಹೋಟೇಲುಗಳು ಆರಂಭವಾಗಲಿವೆ. ಇವತ್ತು ಸಿಎಂಗಳ ಜೊತೆ ಪ್ರಧಾನಿಯವರು ವಿಡಿಯೋ ಸಂವಾದ ಮಾಡಿದ್ದಾರೆ. ಅದರಲ್ಲಿ ಮತ್ತೆ ಸಿಎಂ ಬಿಎಸ್ ವೈ ಹೆಚ್ಚಿನ ಪ್ಯಾಕೇಜುಗಳ ಘೋಷಣೆ ಮಾಡಲಿದ್ದೇನೆ, ಅನುದಾನ ಕೊಡಿ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ. ಇದೆಲ್ಲಾ ನೋಡ್ತಾ ಇದ್ದರೆ ಇನ್ನು ಮೂರು ವರ್ಷ ಅಭಿವೃದ್ಧಿ ಕಾಮಗಾರಿಗಳು ಝೀರೋ. ಮುಂದಿನ ಚುನಾವಣೆಗೆ ಹೋಗುವಾಗ ಹೇಳಿಕೊಳ್ಳಲು ಈಗಿನ ಶಾಸಕರಿಗೆ ಏನು ಇರುತ್ತೆ? ನಾವು ಮಾತ್ರ ಕೈ ಚೆನ್ನಾಗಿ ತೊಳೆದು, ಸಾಮಾಜಿಕ ಅಂತರ ಇಟ್ಟು, ಮಾಸ್ಕ್ ಹಾಕಿ ತರಕಾರಿ ತರುವ ಕೆಲಸ ಮಾಡುತ್ತಾ ಇರಬೇಕಾಗಿದೆ!!
Leave A Reply