ಬಿಜೆಪಿ ಸರಕಾರದ ಮುಜುರಾಯಿ ಸಚಿವರೇ, ದೇವರ ದರ್ಶನ ಮಾಡಿಸಿ ಪುಣ್ಯಕಟ್ಟಿಕೊಳ್ಳಿ!!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲವೂ ತೆರೆದಾಗಿದೆ. ಗೂಡಂಗಡಿಯಿಂದ ಮದ್ಯದಂಗಡಿಯ ತನಕ ಎಲ್ಲವೂ ಒಪನ್. ಇನ್ನು ತೆರೆಯಲು ಬಾಕಿ ಇರುವುದು ಒಂದು ಮಾತ್ರ. ಅದು ಧಾರ್ಮಿಕ ಕೇಂದ್ರಗಳು. ಮೊದಲನೇಯದಾಗಿ ನಾನು ದೇವಸ್ಥಾನವನ್ನೇ ತೆಗೆದುಕೊಳ್ಳುತ್ತೇನೆ. ನಾನು ನಿತ್ಯ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ನಂತರ ಉಳಿದ ಕೆಲಸಕಾರ್ಯಗಳನ್ನು ಮಾಡುವುದು. ಆದರೆ ಈ ಕೊರೊನಾ ಬಂದು ಸರಕಾರಗಳು ಎಲ್ಲವನ್ನು ಮುಚ್ಚಲು ಆದೇಶ ಮಾಡಿದ ನಂತರ ದೇವಸ್ಥಾನಗಳನ್ನು ಕೂಡ ಮುಚ್ಚಲಾಗಿದೆ. ಹಾಗಂತ ದೇವಳದಲ್ಲಿ ನಿತ್ಯದ ಧಾರ್ಮಿಕ ಕ್ರಿಯೆಗಳನ್ನು ಬಿಡೋಕೆ ಆಗುತ್ತಾ? ಪುರೋಹಿತರು ಅದನ್ನು ಆವತ್ತಿನಿಂದ ಇಲ್ಲಿಯ ತನಕ ಮುಚ್ಚಿದ ಬಾಗಿಲುಗಳ ಹಿಂದೆ ನಡೆಸಿಕೊಂಡು ಹೋಗುತ್ತಿದ್ದಾರೆ.
ತ್ರಿಕಾಲ ಪೂಜೆಗಳು ಯಥಾವತ್ತಾಗಿ ನಡೆಯುತ್ತಿವೆ. ಆದರೆ ನಾವು ಭಕ್ತರು ಮಾತ್ರ ಇದ್ಯಾವುದನ್ನು ನೋಡದ ಹಾಗೆ ಸರಕಾರ ಮಾಡಿದೆ. ಎಲ್ಲವನ್ನು ಬಂದ್ ಮಾಡಿರುವಾಗ ನನಗೆ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ಎಲ್ಲವೂ ತೆರೆದಿರುವಾಗ ಇದೊಂದೇ ಬಂದ್ ಬೇಕಾ?
ಆದರೆ ಸರಕಾರಗಳು ಎಷ್ಟು ಹುಶಾರಿವೆ ಎಂದರೆ ಆನ್ ಲೈನ್ ನಲ್ಲಿ ಭಕ್ತರು ತಮ್ಮ ಸೇವೆಗಳನ್ನು ಸಲ್ಲಿಸಬಹುದು. ಅಲ್ಲಿಯೇ ಪೇಮೆಂಟ್ ಮಾಡಿದರೆ ನಿಮ್ಮ ಹೆಸರಿನಲ್ಲಿ ದೇವಸ್ಥಾನಗಳಲ್ಲಿ ಸೇವೆ ನಡೆಯುತ್ತದೆ ಎನ್ನುವ ಸುತ್ತೊಲೆ ಬಿಡುಗಡೆಗೊಳಿಸಿದೆ. ಇದರಿಂದ ಒಂದಷ್ಟು ಹಣ ಬರಲಿ ಎನ್ನುವ ಬಯಕೆ ಸರಕಾರದ್ದು. ದೇವಸ್ಥಾನಗಳ ನಿತ್ಯದ ಆಗುಹೋಗುಗಳಿಗೆ ಹಣ ಬೇಕು. ಅದು ಬೇರೆ ವಿಷಯ. ಆದರೆ ನಮ್ಮ ಸನಾತನ ಪರಂಪರೆಯಲ್ಲಿ ಹೇಳಿದಂತೆ ನೀವು ಸೇವೆಯ ಸಂಕಲ್ಪವನ್ನು ಎಲ್ಲಿ ಬೇಕಾದರೂ ಮಾಡಬಹುದು. ಆದರೆ ನಿಮ್ಮ ಸೇವೆ ದೇವರಿಗೆ ತಲುಪಲು ನೀವು ಕೃಷ್ಣಾರ್ಪಣಾವನ್ನು ದೇವರ ಸನ್ನಿಧಾನದಲ್ಲಿಯೇ ಮಾಡಬೇಕು. ಇದಕ್ಕೆ ನೀವು ಏನು ಅಂದುಕೊಳ್ಳುತ್ತಿರೋ ಗೊತ್ತಿಲ್ಲ. ಆದರೆ ನಾನು ಕೇಳುವುದು, ಸೇವೆ, ಕೃಷ್ಣಾರ್ಪಣ ಎಲ್ಲವೂ ಆಮೇಲೆ. ಮೊದಲು ನಮಗೆ ನಮ್ಮ ದೇವರ ದರ್ಶನ ಮಾಡಲು ಬಿಡಿ. ಹಾಗಂತ ನಾವೇನು ದೇವರ ಗರ್ಭಗುಡಿಯ ಬಾಗಿಲಿನ ತನಕ ನಮ್ಮನ್ನು ಹೋಗಲು ಬಿಡಿ ಎಂದು ಕೇಳುತ್ತಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಗರ್ಭಗುಡಿಯ ಬಾಗಿಲು ಮತ್ತು ಮುಖ್ಯಬಾಗಿಲು ಬೇರೆ ಬೇರೆ ಇರುತ್ತದೆ. ಗರ್ಭಗುಡಿಯ ಬಾಗಿಲಿನಿಂದ ಮುಖ್ಯಬಾಗಿಲು ಕೆಲವು ಗಜಗಳಷ್ಟು ದೂರ ಇರುತ್ತದೆ. ನೀವು ನಮಗೆ ದೂರದಿಂದಲೇ ದೇವರನ್ನು ನೋಡುವ, ಪೂಜೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಟ್ಟರೂ ಸಾಕು. ನಾವು ಧನ್ಯರಾಗುತ್ತೇವೆ. ದೇವರ ದರ್ಶನ ಮಾಡಲು ಅಷ್ಟು ಅವಸರ ಯಾಕೆ ಎಂದು ನೀವು ಕೇಳಬಹುದು. ಜನರಿಗೆ ಕುಡಿಸಲು ಅವಸರ ಇರುವ ಸರಕಾರ ನಮ್ಮ ಮುಂದೆ ಇರುವಾಗ ದೇವರ ದರ್ಶನಕ್ಕೆ ಒಂದು ವ್ಯವಸ್ಥೆ ಮಾಡುವಷ್ಟು ಸೂಕ್ಷ್ಮತೆಯನ್ನು ನಮ್ಮನ್ನು ಆಳುವವರು ಮರೆತುಬಿಟ್ಟರಾ ಎನ್ನುವುದು ನನ್ನ ಪ್ರಶ್ನೆ.
ನಮಗೆ ದೇವರನ್ನು ನೋಡುವುದು ಎಂದರೆ ಅದೊಂದು ಆತ್ಮಸಂತೋಷದ ಭಾಗ. ಏನಾದರೂ ಕೆಲಸ ಮಾಡಲು ಹೋಗುವಾಗ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ ಎನ್ನುವ ಭಾವನೆಯೇ ಕೆಲಸದಲ್ಲಿ ಅನೇಕ ಬಾರಿ ಜಯ ತಂದುಕೊಡುತ್ತದೆ. ಒಂದು ದಿನ ದೇವಸ್ಥಾನಕ್ಕೆ ಹೋಗಿಲ್ಲದೆ ಆವತ್ತು ಯಾವುದಾದರೂ ಏನಿಸಿದ ಕಾರ್ಯ ಆಗಲಿಲ್ಲ ಎಂದಾಗ ಅದೊಂದು ಹಿಂಜರಿಕೆ. ನಾವು ಬೆಳಿಗ್ಗೆ ಏಳುವಾಗಿನಿಂದ ಹಿಡಿದು ರಾತ್ರಿ ಮಲಗುವಾಗ ತನಕ ಒಂದಲ್ಲ ಒಂದು ನಿಮಿಷ ದೇವರ ಬಗ್ಗೆ ಧ್ಯಾನಿಸುವುದು ಇದ್ದೇ ಇದೆ. ಮನೆಯಲ್ಲಿ ನಿತ್ಯ ಪೂಜೆ ಇದ್ದೇ ಇದೆ. ಆದರೆ ದೇವಸ್ಥಾನಕ್ಕೆ ಹೋಗಿ ಬರದೇ ಇದ್ದರೆ ಆವತ್ತೂ ಏನೋ ಕಳೆದುಕೊಂಡ ಭಾವನೆ. ಅಷ್ಟಕ್ಕೂ ದೇವಸ್ಥಾನದಲ್ಲಿ ನಮಗೆ ತೀರ್ಥ, ಪ್ರಸಾದ ಕೊಡಿ ಎಂದು ಕೂಡ ನಾವು ಕೇಳುವುದಿಲ್ಲ. ಬೇಕಾದರೆ ದೇವಸ್ಥಾನದ ಧ್ವಜಸ್ತಂಭದಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಿದರೂ ಸಾಕು. ಅದರ ಮುಂದೆ ಅನಿವಾರ್ಯವಾದರೆ ಬ್ಯಾರಿಕೇಡ್ ತರಹದ್ದು ಹಾಕಿ. ಇನ್ನು ಕಟ್ಟುನಿಟ್ಟಾಗಿ ದೇವಳದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಲು ಸೂಚನೆ ಕೊಟ್ಟರೂ ಅಭ್ಯಂತರವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಇದ್ದೇ ಇದೆ. ಹೋಟೇಲ್ ಗಳಲ್ಲಿ ಪಾರ್ಸೆಲ್ ಕೊಡುವಾಗ ಆಗದ ತೊಂದರೆ, ರಿಕ್ಷಾ, ಬಸ್ಸುಗಳಲ್ಲಿ ಹೋಗುವಾಗ ಆಗದ ತೊಂದರೆ, ಕುಡಿಯುವಾಗ ಆಗದ ತೊಂದರೆ ದೇವಸ್ಥಾನಗಳಲ್ಲಿ ಹೋಗುವಾಗ ಆಗುತ್ತಾ? ಯಾಕೋ, ಬಿಜೆಪಿ ಸರಕಾರ ಈ ಬಗ್ಗೆ ತೋರಿಸಿರುವ ನಿರ್ಲಕ್ಷ್ಯವನ್ನು ನೋಡುವಾಗ ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೆದ್ದ ಮೇಲೆ ದೇವರನ್ನು ಮರೆತುಬಿಟ್ಟರಾ? ಆನ್ ಲೈನ್ ನಲ್ಲಿ ಸೇವೆ ಮಾಡಿಸಿ ಎಂದು ಹೇಳುವ ಜೊತೆಗೆ ದೂರದಿಂದ ಸಾಮಾಜಿಕ ಅಂತರ ಪಾಲಿಸಿ ದೇವರ ದರ್ಶನ ಮಾಡಿಸಿದರೆ “ಶ್ರೀನಿವಾಸ” ನೀವು ಕಳೆದುಕೊಳ್ಳುವಂತದ್ದೂ ಏನೂ ಇಲ್ಲ. ಬೇಕಾದರೆ “ಪೂಜಾರಿ”ಯವರನ್ನು ಕೇಳಿ ಮುಂದುವರೆಸಿ!
Leave A Reply