ಎಲ್ಲಿದ್ದಿರೋ ಅಲ್ಲಿಯೇ ಇರಿ, ಸದ್ಯ ಮಂಗಳೂರು ಬೇಡಾ!!
ಈ ಜಾಗೃತ ಅಂಕಣದ ಪ್ರಾರಂಭದಲ್ಲಿಯೇ ಹೇಳಿ ಬಿಡ್ತೇನೆ. ನಾನು ವಿದೇಶದಿಂದ ಮಂಗಳೂರಿಗೆ ಬರಲು ಪ್ರಯತ್ನಿಸುತ್ತಿರುವ ತಾಯ್ನಾಡಿನ ನಾಗರಿಕರಿಗೆ ವಿರೋಧಿಯಲ್ಲ. ಆದರೆ ವಿಷಯ ಏನೆಂದರೆ ನೀವು ಇಲ್ಲಿ ಬಂದು ಸಮಸ್ಯೆ ಅನುಭವಿಸುವುದಕ್ಕಿಂತ ಹೇಗೂ ಮೂರು ತಿಂಗಳುಗಳಿಂದ ಎಲ್ಲಿದ್ದಿರೋ ಅಲ್ಲಿಯೇ ಇದ್ದು ಬಿಡಿ. ಸುರಕ್ಷಿತವಾಗಿರಿ. ಇಲ್ಲಿ ಒಂದಿಷ್ಟು ಸರಿಯಾದ ವ್ಯವಸ್ಥೆ ಆದ ಮೇಲೆ ಬಂದುಬಿಡಿ. ಯಾಕೆಂದರೆ ಕುವೈಟ್ ನಲ್ಲಿರುವ ನಮ್ಮ ಆತ್ಮೀಯರೊಬ್ಬರು ಕರೆ ಮಾಡಿ ಅಲ್ಲಿರುವ ಅನೇಕ ಅನಿವಾಸಿ ಭಾರತೀಯರು ತುಳುನಾಡಿಗೆ ಮರಳಲು ತಯಾರಾಗಿ ನಿಂತಿದ್ದಾರೆ, ವ್ಯವಸ್ಥೆ ಮಾಡಿಕೊಡಿ ಎನ್ನುವ ವಿನಂತಿ ಮಾಡುತ್ತಿದ್ದಾರೆ. ಅಲ್ಲಿಂದ ಇಲ್ಲಿ ಬಂದ ಕೂಡಲೇ ಇಲ್ಲಿ ಯಾವುದಾದರೂ ಹೋಟೇಲಿನಲ್ಲಿ ಅವರು ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ ಆಗಬೇಕಾಗುತ್ತದೆ. ಒಕೆ, ಹಣ ಖರ್ಚು ಮಾಡಿ ಕ್ವಾರಂಟೈನ್ ಆಗುತ್ತಾರೆ ಎಂದೇ ಇಟ್ಟುಕೊಳ್ಳೋಣ. ಏಳು ದಿನಗಳ ಬಳಿಕ ಅವರನ್ನು ಮನೆಗೆ ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಹೋಟೇಲಿನಲ್ಲಿದ್ದಾಗ ಗಂಟಲದ್ರವ ಪರೀಕ್ಷೆ ಮಾಡಿದ್ದರಲ್ಲಿ ಪಾಸಿಟಿವ್ ಆದರೆ ಅಂತವರನ್ನು ಎಲ್ಲಿ ಇಟ್ಟುಕೊಳ್ಳುವುದು.
ನಮ್ಮ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಉದಾಹರಣೆಗೆ ಕೋವಿಡ್ 19 ಸೊಂಕೀತರಿಗೆ 100 ಬೆಡ್ ಇದೆ ಎಂದು ಇಟ್ಟುಕೊಳ್ಳೋಣ. 101 ನೇ ವ್ಯಕ್ತಿ ಬಂದಾಗ ಅಲ್ಲಿ ಫುಲ್ ಆದರೆ ಆ ವ್ಯಕ್ತಿಯನ್ನು ಎಲ್ಲಿ ಇಟ್ಟುಕೊಳ್ಳುವುದು. ಖಾಸಗಿ ಆಸ್ಪತ್ರೆಯವರು ತಮ್ಮ ಆಸ್ಪತ್ರೆಗೆ ನೇರವಾಗಿ ಬಂದು ದಾಖಲಾಗುವ ಕೊವಿಡ್ 19 ಪಾಸಿಟಿವ್ ಸೊಂಕೀತರನ್ನು ದಾಖಲಿಸಿಕೊಳ್ಳುತ್ತವೆ. ಯಾಕೆಂದರೆ ಅಂತವರು ಡಿಸ್ ಚಾರ್ಜ್ ಆಗುವಾಗ ಎರಡೂ ಕೈ ಬಾಚಿ ಹಣ ವಸೂಲಿ ಮಾಡಬಹುದು. ಅದೇ ಸರಕಾರದವರು ಕಳುಹಿಸಿಕೊಟ್ಟರೆ ಖಾಸಗಿ ಆಸ್ಪತ್ರೆಗಳ ರಗಳೆನೆ ಬೇರೆ ಇದೆ. ಈಗ ಮೂಲ ವಿಷಯಕ್ಕೆ ಬರೋಣ. ಈಗ ಕುವೈಟ್ ನಿಂದ ಮಂಗಳೂರಿಗೆ ವಿಮಾನ ಬಂತು ಎಂದೇ ಇಟ್ಟುಕೊಳ್ಳೋಣ. ಅದರಲ್ಲಿ 170 ಜನ ಪ್ರಯಾಣಿಕರು ಇದ್ದಾರೆ ಎಂದೇ ಅಂದಾಜಿಸೋಣ. ಅದರಲ್ಲಿ 40 ಜನರಿಗೆ ಕೊರೊನಾ ಸೋಂಕು ಒಂದು ವೇಳೆ ನಮ್ಮ ಗ್ರಹಚಾರಕ್ಕೆ ಇತ್ತು ಎಂದಾದರೆ ಅವರನ್ನು ಎಲ್ಲಿ ದಾಖಲಿಸುವುದು. ಅವರು ಯಾವ ಜನಪ್ರತಿನಿಧಿಯ ಕೈಕಾಲು ಹಿಡಿದರೂ ಸರಕಾರಿ ಆಸ್ಪತ್ರೆಯಲ್ಲಿರುವ ಲೆಕ್ಕದ ಬೆಡ್ ಫುಲ್ ಆದರೆ ನಂತರ ಬಂದವರ ಗತಿ. ನಂತರ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮತ್ತೊಂದು ಮಾತು ಕೇಳಬೇಕಾಗುತ್ತದೆ. “ಇವರಿಗೆ ನಮ್ಮನ್ನು ಕರೆತರುವಾಗ ಇದೆಲ್ಲಾ ವ್ಯವಸ್ಥೆ ಮಾಡಬೇಕೆಂಬ ಕನಿಷ್ಟ ಜ್ಞಾನ ಇಲ್ಲವಾ?” ಅದಕ್ಕೆ ನಾನು ಹೇಳುವುದು, ಅವರಿಗೆ ಜ್ಞಾನ ಇದೆಯೋ, ಇಲ್ಲವೋ. ಆದರೆ ನಿತ್ಯ ಹೆಚ್ಚುತ್ತಿರುವ ಕೊರೊನಾ ಸೊಂಕಿತರನ್ನು ಮಲಗಿಸಲು ನಮ್ಮಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ. ಇರುವುದರಲ್ಲಿ ಎಷ್ಟು ಜನರನ್ನು ಎಂದು ನೋಡಲು ಆಗುತ್ತದೆ. ಈಗಾಗಲೇ ಕೊರೊನಾ ಸಮುದಾಯಕ್ಕೆ ಹರಡುತ್ತಿದೆಯೋ ಇಲ್ಲವೋ ಎನ್ನುವುದನ್ನು ಮುಂದಿನ ವಾರದ ಅಂತ್ಯದೊಳಗೆ ಸಿಎಂ ಹೇಳಲಿದ್ದಾರೆ. ರಾಜ್ಯದಲ್ಲಿರುವ ಎರಡೇ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿರುವ ಮಂಗಳೂರಿನಲ್ಲಿ ವಿದೇಶದಿಂದ ಮತ್ತಷ್ಟು ನಮ್ಮವರು ಬಂದರೆ ಇಲ್ಲಿ ಚಿಕಿತ್ಸೆ ಕಷ್ಟಸಾಧ್ಯ. ಕೇರಳದಲ್ಲಿ ನಾಲ್ಕು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಅಲ್ಲಿ ವಿದೇಶದಿಂದ ಬಂದ ಜನ ಹಂಚಿಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆದ್ದರಿಂದ ಮಂಗಳೂರಿನ ಸದ್ಯದ ಪರಿಸ್ಥಿತಿ ನೋಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಹೊರಗಿನಿಂದ ಬರುವವರಿಗೆ ಅನುಮತಿ ನೀಡುತ್ತಿಲ್ಲ. ಡಿಸಿ ಬೇಡಾ ಎಂದರೆ ಬರಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳಿಗೆ ಹೇಳಿಸಿ ಎಂದು ಅಲ್ಲಿನ ನಮ್ಮವರು ಇಲ್ಲಿನ ಸ್ಥಳೀಯ ಶಾಸಕರಿಗೆ ಎಷ್ಟೇ ಹೇಳಿದರೂ ಪ್ರಯೋಜನವಿಲ್ಲ. ಯಾಕೆಂದರೆ ಇಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಾಗದೇ ಹೋದರೆ ಬಂದವರು ಕಷ್ಟದಲ್ಲಿ ಬೀಳುತ್ತಾರೆ. ಇನ್ನು ಇಲ್ಲಿ ಈ ಪರಿ ಕರೋನಾ ಹೆಚ್ಚಾಗಲು ನಾವು ಕೂಡ ಕಾರಣ. ನಮ್ಮಲ್ಲಿ 40% ಜನ ಮುಖಕ್ಕೆ ಮಾಸ್ಕ್ ಹಾಕದೇ ಓಡಾಡುತ್ತಿದ್ದಾರೆ. ಅಂತವರಿಗೆ ಸದ್ಯ ದಂಡ ಹಾಕಿಯೇ ಬುದ್ಧಿ ಕಲಿಸಬೇಕಾಗುತ್ತದೆ. ಇನ್ನು ಹೋಟೇಲ್ ಕ್ವಾರಂಟೈನ್ ನಲ್ಲಿದ್ದವರು ಹೋಟೇಲ್ ಕೋಣೆ ಬಿಟ್ಟು ಹೊರಗೆ ಬರುವಂತಿಲ್ಲ. ಬಂದರೆ ಜಿಲ್ಲಾಧಿಕಾರಿ ಕಚೇರಿಗೆ ಗೊತ್ತಾಗುವಂತಹ ವ್ಯವಸ್ಥೆ ಇದೆ. ಅಂತವರಿಗೆ ಕಠಿಣ ಶಿಕ್ಷೆ ಇದೆ. ಆದರೆ ಏನು ಮಾಡಿದರೂ ಕೊರೊನಾ ಹತೋಟಿಗೆ ಬರುತ್ತಿಲ್ಲ. ಆದ್ದರಿಂದ ನನ್ನ ಕಳಕಳಿಯ ವಿನಂತಿ ಏನೆಂದರೆ ನೀವು ಭೂಮಿಯ ಯಾವುದೇ ಭಾಗದಲ್ಲಿ ಇರಿ, ಅಲ್ಲಿಯೇ ಇರಿ, ಸದ್ಯ ಬರುವ ಸಾಹಸ ಬೇಡಾ. ಇಲ್ಲಿ ನಮ್ಮನ್ನು ಕಾಯುವ ಪೊಲೀಸ್ ಸಹೋದರರಿಗೆ ಕೋವಿಡ್ 19 ಪಾಸಿಟಿವ್ ಆದರೂ ನಮಗೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಲು ಸಮಯ ಹಿಡಿಯುತ್ತಿದೆ. ಅಲ್ಲಿಯ ತನಕ ಅವರು ತಮ್ಮ ಠಾಣೆಯ ಅಂಗಳದಲ್ಲಿಯೇ ಕೂರಬೇಕಾಗುತ್ತಿದೆ. ಹಾಗಿರುವಾಗ ನೀವು ಕೂಡ ಬಂದು ಹೆಚ್ಚು ಕಡಿಮೆ ಆದರೆ, ನಾವು ನಮ್ಮವರನ್ನು ಸಂಕಷ್ಟಕ್ಕೆ ದೂಡಲಾರೆವು. ಅರ್ಥ ಮಾಡಿಕೊಳ್ಳಿ!
Leave A Reply