ಎಸ್ ಎಂಎಸ್ ನೆನಪಿದೆಯಲ್ಲ, ನಿರ್ಲಕ್ಷಿಸಿದರೆ ದೇವರೇ ಕಾಪಾಡಬೇಕು!!
ಎಸ್ ಎಂದರೆ ಸೋಶಿಯಲ್ ಡಿಸ್ಟೆನ್ಸ್, ಎಂ ಎಂದರೆ ಮಾಸ್ಕ್ ಮತ್ತೊಂದು ಎಸ್ ಎಂದರೆ ಸೆನಿಟೈಜೇಶನ್. ಈ ಎಸ್ ಎಂಎಸ್ ಅನ್ನು ನೀವು ಮರೆತರೆ ನಂತರ ನಿಮ್ಮನ್ನು ವೈದ್ಯರು ಕೂಡ ರಕ್ಷಿಸಲಾರರು. ಆಗ ದೇವರೊಬ್ಬರೇ ಗತಿ. ಆದರೆ ಮಂಗಳೂರಿನಲ್ಲಿ ಏನಾಗುತ್ತಿದೆ ಎಂದೇ ಗೊತ್ತಾಗುತ್ತಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಸಂಜೆ 4 ಗಂಟೆಗೆ ಭಾಷಣ ಮಾಡುವಾಗ ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ. ಅದೇನೆಂದರೆ ಮಾಸ್ಕ್ ಹಾಕದೇ ಇದ್ದದ್ದಕ್ಕೆ ವಿದೇಶದ ಪ್ರಧಾನಿಯೊಬ್ಬರಿಗೆ ಅಲ್ಲಿ 13 ಸಾವಿರ ದಂಡ ಹಾಕಲಾಗಿತಂತೆ. ಆದರೆ ನಮ್ಮಲ್ಲಿ ದಂಡದ ಹೆದರಿಕೆನೆ ಇಲ್ಲದೇ ಜನ ಸುತ್ತಾಡುತ್ತಿದ್ದಾರೆ. ಇಲ್ಲಿಯ ತನಕ ಪಾಲಿಕೆಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನಿಂತು 300 ರೂಪಾಯಿ ದಂಡವನ್ನು ಹಾಕಿರುವುದು ಎರಡೇ ಬಾರಿ. ಹೇಗೆ ಅನೇಕರು ಪೊಲೀಸರಿಗೆ ಹೆದರಿ ಹೆಲ್ಮೆಟ್ ಹಾಕುತ್ತಾರೋ, ಅದೇ ರೀತಿಯಲ್ಲಿ ದಂಡಕ್ಕೆ ಹೆದರಿ ಮಾಸ್ಕ್ ಧರಿಸುತ್ತಿದ್ದಾರೆ. ಕೆಲವು ದಿನ ದಂಡ ಇಲ್ಲದಿದ್ದರೆ ಮಾಸ್ಕ್ ಮರೆತು ಹೋಗುತ್ತದೆ. ಇನ್ನು ಸಾಮಾಜಿಕ ಅಂತರ. ಅದನ್ನು ನಾವು ನೋಡಲು ಸಾಧ್ಯವೇ ಇಲ್ಲ. ಜನಪ್ರತಿನಿಧಿಗಳಿಂದ ಹಿಡಿದು ಬಸ್ಸಿನ ಕಂಡಕ್ಟರ್ ತನಕ ಇದಕ್ಕೆ ಮಹತ್ವ ಇಲ್ಲ. ಶಿಲಾನ್ಯಾಸಗಳಿಂದ ಹಿಡಿದು ಪ್ರತಿಭಟನೆಯ ತನಕ ರಾಜಕಾರಣಿಗಳು ಎಲ್ಲಿ ಇದ್ದಾರೋ ಅಲ್ಲಿ ಗುಂಪು ಗ್ಯಾರಂಟಿ. ರಿಕ್ಷಾದಲ್ಲಿ ಮೂರು ಜನ.
ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಇಬ್ಬರು. ಹೋಟೇಲುಗಳಲ್ಲಿ, ರಸ್ತೆ ಬದಿಯ ಅಂಗಡಿಗಳಲ್ಲಿ ಒಟ್ಟಿಗೆ ತಿಂಡಿ ಸೇವನೆ. ಎಲ್ಲಿಯೂ ಸಾಮಾಜಿಕ ಅಂತರ ಇಲ್ಲ. ಇನ್ನು ಸೆನಿಟೈಜೇಶನ್ ಅದನ್ನು ನಾವು ನೆನಪಿಗೆ ಬಂದಾಗ ಮಾಡುತ್ತಿದ್ದೇವೆ ವಿನ: ಅಗತ್ಯ ಇದ್ದಾಗ ಅಲ್ಲ. ಟ್ರಾಫಿಕ್ ಪೊಲೀಸರು ಅವರದ್ದೇ ಟೆನ್ಷನ್ ನಲ್ಲಿ ಇರುವುದರಿಂದ ಹೆಲ್ಮೆಟ್ ಇಲ್ಲದೆ ದ್ವಿಚಕ್ರಗಳು ಹೋಗುತ್ತಿರುವುದು ಸಾಮಾನ್ಯವಾಗಿದೆ. ತರಕಾರಿ, ಹಣ್ಣುಹಂಪಲು ಅಂಗಡಿಗಳಿಂದ ಹಿಡಿದು ಸೂಪರ್ ಮಾರ್ಕೆಟ್ ತನಕ ಜನರ ಗುಂಪುಗೂಡುವುದು ಕಾಮನ್. ಇಷ್ಟೆಲ್ಲ ಇರುವಾಗ ಕೋವಿಡ್ ಸೊಂಕೀತರ ಸಂಖ್ಯೆ ಸುರತ್ಕಲ್- ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಂಬರ್ ತರಹ ಕಾಣುತ್ತಿರುವುದು ಅಸಹಜವೇನಲ್ಲ.
ಬೆಳಗ್ಗೆ ಎದ್ದರೆ ನಮ್ಮದೇ ನೆಂಟರಲ್ಲಿ, ಸಂಬಂಧಿಕರಲ್ಲಿ, ಗೆಳೆಯರಲ್ಲಿ, ಪರಿಚಯಸ್ಥರಲ್ಲಿ ಯಾರಿಗೆ ಕೊರೊನಾ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ನಿನ್ನೆ ಮಾತನಾಡಿಸಿದವರಲ್ಲಿಯೇ ಹಲವರಿಗೆ ಇವತ್ತು ಕೊರೊನಾ ಪಾಸಿಟಿವ್ ಅಂತೆ ಎಂದು ಯಾರಿಂದಲೋ ಕೇಳಿ ತಿಳಿದುಕೊಂಡ ನಂತರವೂ ನಮಗೆ ಈ ಸಾಂಕ್ರಾಮಿಕ ರೋಗದ ಪ್ರಾಮುಖ್ಯತೆ ತಿಳಿಯಲ್ವಾ? ಕೊರೊನಾ ಬಂದವರೆಲ್ಲರೂ ಸಾಯುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಇವತ್ತಿನ ದಿನಗಳಲ್ಲಿ ಎಷ್ಟು ಜನರಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅದ್ಭುತವಾಗಿರುತ್ತದೆ, ಹೇಳಿ. ಸೂಕ್ತ ಚಿಕಿತ್ಸೆ ಸಿಗದೇ ಸತ್ತವರೇ ಅನೇಕರಿದ್ದಾರೆ. ಕಿಡ್ನಿ, ಹೃದಯದ ಸಮಸ್ಯೆಯಿಂದ ಹಿಡಿದು ಡಯಾಬೀಟಿಸ್ ತನಕ ಯಾವುದೇ ಸೈಡ್ ಕಾಯಿಲೆಯೊಂದಿಗೆ ಕೋವಿಡ್ 19 ಆಟಕ್ಕೆ ಕುಳಿತರೆ ನಂತರ ಯಾವ ವೈದ್ಯನೂ ನಿಮ್ಮನ್ನು ರಕ್ಷಿಸಲಾರ. ಈಗಾಗಲೇ ದಕ್ಷಿಣ ಕನ್ನಡದಲ್ಲಿಯೇ ಅನೇಕ ಪ್ರಖ್ಯಾತ ವೈದ್ಯರಿಗೆ ಕೋವಿಡ್ 19 ಪಾಸಿಟಿವ್ ಆಗಿ ಚಿಕಿತ್ಸೆಯಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ನಾವು ಎಸ್ ಎಂಎಸ್ ನಿರ್ಲಕ್ಷಿಸುತ್ತಾ ಸುತ್ತಾಡುತ್ತಿದ್ದೇವೆ ಎಂದರೆ ಕೋರೋನಾಕ್ಕೂ ಚಾಲೆಂಜ್ ಹಾಕುತ್ತಿದ್ದೆವೆ ಎಂದೇ ಅರ್ಥ ಅಲ್ಲವೇ. ಇನ್ನು ಪಾಲಿಕೆ ಬಂದ್ ಒಂದು ವಾರ ಆಗಿದೆ, ಲೇಡಿಗೋಶನ್ ಒಂದು ವಾರ ಬಂದ್ ಆಗಿದೆ ಮತ್ತು ಇದರ ನಡುವೆ ಮಲೇರಿಯಾ ಹಾಗೂ ಡೆಂಗ್ಯೂ ಎನ್ನುವ ಅಣ್ಣತಮ್ಮಂದಿರು ಮಾವನ ಮನೆಗೆ ಟೂರ್ ಗೆ ಬಂದಂತೆ ಜುಲೈಯಲ್ಲಿ ಹೊಸ ಆಟಕ್ಕೆ ಇಳಿಯಲಿದ್ದಾರೆ. ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಯಾರು ಎಷ್ಟೇ ಹೇಳಿದರೂ ನಮಗೆ ನಾವು ನಿಲ್ಲಿಸಿದ ನೀರಿನಲ್ಲಿ ಮಲೇರಿಯಾ, ಡೆಂಗ್ಯೂ ಮರಿಗಳು ಮೊಟ್ಟೆ ಹಾಕಲ್ಲ ಎನ್ನುವ ಅಚಲ ನಂಬಿಕೆ. ಅತ್ತ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ತಮಗೆ ಒಪ್ಪಿಸಿದ ಕೆಲಸವನ್ನು ಮಾಡುವುದನ್ನು ಬಿಟ್ಟು ಹಲವು ವರ್ಷಗಳೇ ಕಳೆದಿವೆ. ಮಳೆಗಾಲದಲ್ಲಿ ಪ್ರತಿ ವಾರ್ಡಿಗೆ ಒಂದೊಂದು ಗ್ಯಾಂಗ್ ನೇಮಕವಾಗಿದೆ. ಆದರೆ ಈ ಬಾರಿ ಅಂತಹ ಜೋರು ಮಳೆ ಇಲ್ಲದ ಕಾರಣ ಗ್ಯಾಂಗ್ ನವರು ಎಲ್ಲಿಮಲಗಿದಾರೋ ಕಾಣಿಸುತ್ತಿಲ್ಲ. ಬಿಲ್ ಅಂತೂ ಆಗಲಿದೆ. ಒಟ್ಟಿನಲ್ಲಿ ನಾನು ಹೇಳುವುದೇನೆಂದರೆ ನೀವು ಎಲ್ಲಿಯಾದರೂ ಸೋಶಿಯಲ್ ಡಿಸ್ಟೆನ್ಸ್ ಇಲ್ಲದೇ ಕಾರ್ಯಕ್ರಮ ನಡೆಯುತ್ತಿದ್ದರೆ, ಅದು ಯಾವುದೇ ಪಕ್ಷದವರದ್ದು ಇರಲಿ, ಧೈರ್ಯವಾಗಿ ನಿಮ್ಮ ಫೇಸ್ ಬುಕ್ಕಿನಲ್ಲಿ ಹಾಕಿ. ನಿಮ್ಮ ಮನೆಯ ಆಸುಪಾಸಿನ ತೋಡುಗಳನ್ನು ಪಾಲಿಕೆ ಸ್ವಚ್ಚ ಮಾಡಿಲ್ಲವೋ ಅದರ ಫೋಟೋ ಕೂಡ ಹಾಕಿ. ಇವರು ಕೆಲಸ ಮಾಡದಿದ್ದರೆ ನಾವು ಮಾಡಿಸೋಣ. ಯಾಕೆಂದರೆ ಕೊರೊನಾ, ಡೆಂಗ್ಯೂ, ಮಲೇರಿಯಾ ಬಂದರೆ ಮಲಗುವುದು ನಾವು. ನಾವೇ ನಿರ್ಲಕ್ಷಿಸಿದರೆ!!
Leave A Reply