ಎಸಿಪಿಯೊಬ್ಬರ ನಿರ್ಲಕ್ಷಕ್ಕೆ ಆತಂಕದಲ್ಲಿ ಜಿಲ್ಲಾಡಳಿತ!!
ಇವತ್ತು ಮೂರು ವಿನಂತಿಗಳನ್ನು ಮಾಡಲೇಬೇಕಿದೆ. ಒಂದು ವೇಳೆ ನಿಮ್ಮಲ್ಲಿ ಯಾವುದೇ ರೀತಿಯ ಕೋವಿಡ್ 19 ಸೊಂಕಿನ ಲಕ್ಷಣಗಳು ಕಾಣಿಸುತ್ತಿವೆ ಎಂದಾದರೆ ದಯವಿಟ್ಟು ನಿರ್ಲಕ್ಷ್ಯ ಮಾಡಲೇಬೇಡಿ. ಇದು ಮೊದಲ ವಿನಂತಿ. ಎರಡನೇ ವಿನಂತಿ ಏನೆಂದರೆ ನೀವು ಆಸ್ಪತ್ರೆಗೆ ಹೋಗಿ ಗಂಟಲದ್ರವ ಪರೀಕ್ಷೆ ಮಾಡಿಸಿಕೊಂಡ ಬಳಿಕ ಯಾವುದೇ ಕಾರಣಕ್ಕೂ ಅದರ ವರದಿ ಬರುವ ತನಕ ಮನೆ ಬಿಟ್ಟು ಹೊರಗೆ ಹೋಗಲೇಬೇಡಿ. ಮೂರನೇಯ ಮತ್ತು ಕೊನೆಯ ವಿನಂತಿ ಏನೆಂದರೆ ವರದಿ ಬಂದು ಕೋವಿಡ್ 19 ಪಾಸಿಟಿವ್ ಎಂದಾದರೆ ಸ್ಟಿಕ್ಟ್ ಆಗಿ ಸರಕಾರ ಹೇಳುವಷ್ಟು ದಿನ ಕ್ವಾರಂಟೈನ್ ಗೆ ಒಳಗಾಗಿ. ವಾಸಸ್ಥಳ ಬಿಟ್ಟು ಹೋಗಲೇಬೇಡಿ. ಮನೆಯಲ್ಲಿ ಹಿರಿಯರು ಮತ್ತು ಮಕ್ಕಳೊಂದಿಗೆ ಸೇರಲೇಬೇಡಿ. ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು.
ಅದರಲ್ಲಿಯೂ ನೀವು ಜನಪ್ರತಿನಿಧಿಯಾಗಿದ್ದರೆ, ಸಚಿವರು, ಸಂಸದರು, ಶಾಸಕರು, ಪೊಲೀಸ್ ಅಧಿಕಾರಿ, ಜಿಲ್ಲಾಡಳಿತದ ಅಧಿಕಾರಿ, ಪಾಲಿಕೆಯ ಅಧಿಕಾರಿ ಆಗಿದ್ದಲ್ಲಿ ನೂರಕ್ಕೆ ನೂರು ನಿಮ್ಮ ಜವಾಬ್ದಾರಿ ಹೆಚ್ಚಾಗಿರುತ್ತದೆ. ಯಾಕೆಂದರೆ ಕೋವಿಡ್ 19 ನಿಮಗೆ ಅಂಟಿಕೊಂಡಿದೆ ಎನ್ನುವ ಅನುಮಾನ ನಿಮ್ಮಲ್ಲಿ ಬಂದ ಬಳಿಕವೂ ಸಾರ್ವಜನಿಕ ವಾಗಿ ತಿರುಗಾಡಿದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನೀವು ನಿಮ್ಮನ್ನು ಮಾತ್ರ ರಿಸ್ಕಿನಲ್ಲಿ ಅಲ್ಲ, ಇತರ ಜೀವಗಳನ್ನು ಕೂಡ ರಿಸ್ಕಿಗೆ ಹಾಕಿ ಬಿಡುತ್ತೀರಿ. ಯಾಕೆಂದರೆ ನಿಮ್ಮನ್ನು ನಿತ್ಯ ಹಲವಾರು ಜನ ಬಂದು ಭೇಟಿಯಾಗುತ್ತಾರೆ. ಅವರಿಗೆ ನೀವು ಉಚಿತವಾಗಿ ಈ ಕೋವಿಡ್ 19 ಹಂಚಿ ಸಂಕಷ್ಟಕ್ಕೆ ಬೀಳಿಸುತ್ತೀರಿ. ಇಲ್ಲಿಯ ತನಕ ಪ್ರತಿಯೊಬ್ಬ ಸರಕಾರಿ ಅಧಿಕಾರಿ ಅದು ಪೊಲೀಸ್ ಇರಲಿ, ಸರಕಾರಿ ಆಸ್ಪತ್ರೆಯ ವೈದ್ಯರಾಗಿರಲಿ ಅಥವಾ ಪಾಲಿಕೆಯ ಅಧಿಕಾರಿ, ಸಿಬ್ಬಂದಿಯಾಗಿರಲಿ ಉತ್ತಮವಾದ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೀರಿ. ಅದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು. ವಿಮಾನ ನಿಲ್ದಾಣ ಇರಲಿ, ರೈಲ್ವೆ ನಿಲ್ದಾಣ ಇರಲಿ, ಜನ ಗುಂಪು ಸೇರಿದ ಕಡೆ ಇರಲಿ, ಶವದಹನದಲ್ಲಿ ಮೊನ್ನೆ ಆದ ವಿವಾದ ಇರಲಿ, ಎಲ್ಲಾ ಕಡೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಸೇವೆ ಮಾಡಿದ್ದೀರಿ. ಆದರೆ ಈಗ ಈ ಸಾಂಕ್ರಾಮಿಕ ಕಾಯಿಲೆ ಸಮುದಾಯಕ್ಕೆ ಹಬ್ಬುವ ತಯಾರಿ ಮಾಡಿಕೊಂಡಿದೆ. ಈಗ ನಿಮಗೆ ಟ್ರಾವೆಲ್ ಹಿಸ್ಟರಿ ಇರಲಿ, ಇಲ್ಲದಿರಲಿ ಅದು ನಿಮ್ಮ ದೇಹ ತಬ್ಬಿಕೊಂಡು ಒಳಗೆ ಪ್ರವೇಶಿಸಿ ಕಚಗುಳಿ ಇಡುತ್ತಿದ್ದರೆ ಅದರ ಅನುಭವ ನಿಮಗೆ ನಿಧಾನವಾಗಿ ಆಗುತ್ತದೆ. ಅದು ಕೆಮ್ಮು, ಸೀನು, ಜ್ವರ ಯಾವುದೇ ರೂಪದ ಲಕ್ಷಣ ಇರಬಹುದು. ಈ ಸಮುದಾಯ ಹಬ್ಬುವಿಕೆ ಒಂದಿಷ್ಟು ಹೆಚ್ಚು ಡೇಂಜರ್. ಹಾಗಂತ ನಾನು ಹೆದರಿಸುತ್ತಿಲ್ಲ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದರಿಂದ ಅವರನ್ನು ಭೇಟಿಯಾಗಲು ಬರುವ ಜನಸಾಮಾನ್ಯರು, ಸರಕಾರಿ ಸಿಬ್ಬಂದಿಗಳು ತಾವು ಜಾಗೃತೆ ವಹಿಸಿದವರೂ ಇದು ತೊಂದರೆ ನೀಡುತ್ತದೆ.
ಈಗ ಮಂಗಳೂರಿನ ಎಸಿಪಿಯೊಬ್ಬರಿಗೆ ಕೋವಿಡ್ 19 ಸೊಂಕು ಧೃಡವಾಗಿರುವುದು ಪತ್ತೆಯಾಗಿದೆ. ಅವರು ಕಳೆದ ಭಾನುವಾರ ಗಂಟಲದ್ರವ ಕೊಟ್ಟು ಬಂದಿದ್ದರು. ಆದರೆ ಕೊಟ್ಟು ಬಂದು ಇತ್ತ ಕರ್ತವ್ಯಕ್ಕೆ ಮರಳಿದ್ದಾರೆ. ಪೊಲೀಸ್ ಅಧಿಕಾರಿಯವರೇ, ಮೇಲ್ನೋಟಕ್ಕೆ ನಿಮ್ಮ ಕರ್ತವ್ಯಪರತೆಯನ್ನು ನಾವು ಹೊಗಳಬಹುದು. ಆದರೆ ನೀವು ಸೋಮವಾರದಿಂದ ಬುಧವಾರದ ತನಕ ಅದೆಷ್ಟೋ ಮಂದಿಯನ್ನು ಭೇಟಿಯಾಗಿದ್ದೀರಿ. ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದೀರಿ. ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿರಲೂಬಹುದು. ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿರಬಹುದು ಅಥವಾ ಸಭೆಯಲ್ಲಿ ಭಾಗವಹಿಸಿರಬಹುದು. ಇದರಿಂದ ಎಷ್ಟು ಜನರಿಗೆ ಈ ಸಾಂಕ್ರಾಮಿಕ ಕಾಯಿಲೆ ಹರಡಿರಬಹುದಲ್ಲ? ಇನ್ನು ಪಾಲಿಕೆಯ ಆರೋಗ್ಯ ವಿಭಾಗದ ನಿರೀಕ್ಷಕರೊಬ್ಬರ ವಿದೇಶದಿಂದ ಬಂದ ಮಗಳಿಗೆ ಕೊವಿಡ್ ಪಾಸಿಟಿವ್ ಆಗಿದ್ದರೂ ಇವರು ಪಾಲಿಕೆಗೆ ಬಂದು ಓಡಾಡಿದ್ದಾರೆ. ಇದರಿಂದ ಪಾಲಿಕೆ ಒಂದು ವಾರ ಬಂದ್. ಇದರಿಂದ ಜನಸಾಮಾನ್ಯರ ನಿತ್ಯದ ಅಗತ್ಯಗಳಿಗೆ ಎಷ್ಟು ಕಷ್ಟವಾಗುತ್ತಿದೆ ಎನ್ನುವುದು ಆ ಹೆಲ್ತ್ ಇನ್ಸಪೆಕ್ಟರ್ ಅವರಿಗೆ ಗೊತ್ತಿದೆಯಾ? ಇನ್ನು ಮೂರು ದಿನ ಜಿಲ್ಲಾಧಿಕಾರಿ ಕಚೇರಿ ಕೂಡ ಬಂದ್. ಹೆಚ್ಚುತ್ತಿರುವ ಕೊರೊನಾ ಸೊಂಕಿತರ ಸಂಖ್ಯೆಯ ಕಾರಣದಿಂದ ಮೂರು ದಿನ ಬಂದ್ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ ನಿಜವಾದ ಕಾರಣ ಇದೆನಾ? ಯಾಕೆಂದರೆ ಈಗೀಗ ಸೀಲ್ ಡೌನ್ ಎನ್ನುವ ಶಬ್ದಕ್ಕೆ ಅರ್ಥವೇ ಮಾಯವಾಗುತ್ತಿದೆ. ಹಿಂದೆ ಸೀಲ್ ಡೌನ್ ಎಂದರೆ ಒಂದು ರಸ್ತೆಗೆ ರಸ್ತೆಯನ್ನೇ ಸೀಲ್ ಡೌನ್ ಮಾಡಲಾಗುತ್ತಿತ್ತು. ಈಗ ರಸ್ತೆಯಿಂದ ಮನೆಗೆ ಅದು ಬಂದು ಮುಟ್ಟಿದೆ. ಆದ್ದರಿಂದ ಸೀಲ್ ಡೌನ್ ಶಬ್ದಕ್ಕೆ ಗಂಭೀರತೆ ಇಲ್ಲ. ಇನ್ನು ನೀವು ಪ್ರಭಾವಿಗಳಾದರೆ ಸೀಲ್ ಡೌನ್ ನಿಮಗೆ ಬೇಕಾದ ರೀತಿಯಲ್ಲಿ ಕೂಡ ಮಾಡಬಹುದು. ಎಲ್ಲವೂ ಜಿಲ್ಲಾಡಳಿತದ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದಾದರೆ ಮುಂದಿನ ದಿನಗಳು ಇನ್ನಷ್ಟು ಗಂಭೀರವಾಗಲಿವೆ. ನಮ್ಮ ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಮರೆತ ಹಾಗೇ ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಹಾಗೇ ವರ್ತಿಸಿದರೆ ಹೇಗೆ!
Leave A Reply