ಅತ್ತಾವರ ಆಸ್ಪತ್ರೆಯಿಂದ ಮಠದಕಣಿಗೆ ಅಂಬುಲೆನ್ಸ್ ಬಾಡಿಗೆ 3500 ಸಾವಿರ!!

ಒಂದು ಹೆಣ್ಣುಮಗಳಿಗೆ ಜ್ವರ ಬಂದ ಕಾರಣ ಮಂಗಳೂರಿನ ಕೋವಿಡ್ 19 ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತದೆ. ನಾಲ್ಕು ದಿನಗಳ ಬಳಿಕ ರಿಪೋರ್ಟ್ ಬಂದಾಗ ಕೋವಿಡ್ ನೆಗೆಟಿವ್ ಎಂದು ಬರುತ್ತದೆ. ಆದರೆ ಐದನೇ ದಿನವಾದರೂ ಆಕೆಯ ಜ್ವರ ಕಡಿಮೆಯಾಗಿರಲಿಲ್ಲ. ಐದನೇ ದಿನ ಆಕೆಯ ಮನೆಯವರು ಕದ್ರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಗ ಆಸ್ಪತ್ರೆಯವರು ಕೋವಿಡ್ ಟೆಸ್ಟ್ ಮಾಡಿದ ರಿಪೋರ್ಟ್ ಕೇಳಿದ್ದಾರೆ. ನೆಗೆಟಿವ್ ಇದ್ದರೆ ಮಾತ್ರ ದಾಖಲು ಮಾಡುತ್ತೇವೆ ಎಂದಿದ್ದಾರೆ. ಹೆಂಗಸಿನ ಕುಟುಂಬದವರು ವೆನಲಾಕ್ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ರಿಪೋರ್ಟ್ ಕೊಡಲು ಅರ್ಧ ಗಂಟೆ ಕಾಯಿಸಿದ ಬಳಿಕ ವೆನಲಾಕ್ ಆಸ್ಪತ್ರೆಯಿಂದ ಆ ಹೆಣ್ಣುಮಗಳ ರಿಪೋರ್ಟ್ ಪಾಸಿಟಿವ್ ಎಂದು ಹೇಳಿದ್ದಾರೆ. ಕದ್ರಿಯ ಖಾಸಗಿ ಆಸ್ಪತ್ರೆಯವರು ದಾಖಲಿಸಲು ಒಪ್ಪದೇ ಇದ್ದಾಗ ಕೊನೆಗೆ ಅಂಬುಲೆನ್ಸ್ ನಲ್ಲಿ ವೆನಲಾಕ್ ಆಸ್ಪತ್ರೆಗೆ ಹೋಗುವುದೆಂದು ನಿರ್ಧಾರವಾಯಿತು. ಆ ಮನೆಯವರು ವೆನಲಾಕ್ ಗೆ ಕರೆ ಮಾಡಿ ಅಂಬುಲೆನ್ಸ್ ಗೆ ಕಾದರು. ಆದರೆ ಯಾವುದೇ ಅಂಬುಲೆನ್ಸ್ ವೆನಲಾಕ್ ನಿಂದ ಬರಲೇ ಇಲ್ಲ. ಕೊನೆಗೆ ಮೂರು ಗಂಟೆ ಕಾದು ಬಳಲಿ ಬೆಂಡಾದ ನಂತರ ಅವರು ನನಗೆ ಕರೆ ಮಾಡಿದರು. ನಾನು 108 ಸಂಖ್ಯೆಗೆ ಫೋನ್ ಮಾಡಿದೆ. ನಿಮಗೆ ಗೊತ್ತಿರುವಂತೆ ನಾವು 108 ಕ್ಕೆ ಕರೆ ಮಾಡಿದ ಕೂಡಲೇ ಅದು ಹೋಗುವುದು ಬೆಂಗಳೂರಿನಲ್ಲಿರುವ ಅವರ ಕೇಂದ್ರ ಕಚೇರಿಗೆ. ಯಾವ ಊರು ಎಂದು ಕೇಳಿದ್ದಕ್ಕೆ ಮಂಗಳೂರು ಎಂದು ಹೇಳಿದೆ. ಎರಡು ನಿಮಿಷಗಳ ಒಳಗೆ ಮತ್ತೆ ಫೋನ್ ಮಾಡುತ್ತೇವೆ ಎಂದವರು ಹೇಳಿದವರು ನಂತರ ಕಾಲ್ ಮಾಡಿ ಫೋನ್ ಕಟ್ ಮಾಡಬೇಡಿ, ನಾವು ಮಂಗಳೂರಿಗೆ ಕನೆಕ್ಟ್ ಮಾಡುತ್ತೇವೆ ಎಂದಿದ್ದಾರೆ. ನಂತರ ಅವರು ಮಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಏನು ಮಾತನಾಡಿದರೆನ್ನುವುದು ಅವರಿಗೆ ಗೊತ್ತು. ನನಗೆ ಬೆಂಗಳೂರಿನವರ ವಾಯ್ಸ್ ಕೇಳಿಸಿತು- ಮಂಗಳೂರಿನಲ್ಲಿ ಅಂಬುಲೆನ್ಸ್ ಇಲ್ಲ. ನಾನು ಕೇಳಿದೆ-ಮಂಗಳೂರಿನಲ್ಲಿ ಅಂಬುಲೆನ್ಸ್ ಇಲ್ಲ ಎಂದರೆ ಏನು ಕಥೆ ಎಂದೆ. ಅದಕ್ಕೆ ಅವರು ಮಂಗಳೂರಿನಲ್ಲಿ ಇರುವ ನಾಲ್ಕು ಸರಕಾರಿ ಅಂಬುಲೆನ್ಸ್ ನಲ್ಲಿ ಎರಡರ ಚಾಲಕರಿಗೆ ಪಾಸಿಟಿವ್ ಬಂದು ಅದು ಬಂದಾಗಿದೆ. ಇನ್ನು ಇರುವ ಎರಡು ಅಂಬುಲೆನ್ಸ್ ನಲ್ಲಿ ಆರು ಜನ ಕಾಯುತ್ತಿದ್ದಾರೆ. ಆದ್ದರಿಂದ ನೀವು ನಿಮ್ಮ ವ್ಯವಸ್ಥೆ ಮಾಡಿಕೊಳ್ಳಿ ಎಂದು ನನಗೆ ಹೇಳಿದ್ರು. ಆ ಬಳಿಕ ನಾನು ಆ ಹೆಂಗಸಿನ ಮನೆಯವರಿಗೆ ಅದೇ ವಿಷಯ ತಿಳಿಸಿದೆ. ಅವರು ಬಳಿಕ ಒಂದು ಖಾಸಗಿ ಅಂಬುಲೆನ್ಸ್ ಮಾಡಿಕೊಂಡು ಕದ್ರಿಯಿಂದ ವೆನಲಾಕ್ ಗೆ ಬಂದರು.
ಇದು ಒಂದು ಕಥೆಯಾದರೆ ಖಾಸಗಿ ಅಂಬುಲೆನ್ಸ್ ನವರು ಯಾವ ರೀತಿ ಬಡಪಾಯಿ ಜನರಿಂದ ಹಣವನ್ನು ಪೀಕಿಸುತ್ತಿದ್ದಾರೆ ಎನ್ನುವುದು ಮತ್ತೊಂದು ಕಥೆ. ಒಬ್ಬ ವ್ಯಕ್ತಿ ಕೋವಿಡ್ 19 ಚಿಕಿತ್ಸೆಗಾಗಿ ಅತ್ತಾವರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಬಳಿಕ ಗುಣಮುಖರಾದರು. ಇನ್ನೇನೂ ಆಸ್ಪತ್ರೆಯಿಂದ ಬಿಡುಗಡೆಯಾಗುವ ದಿನ ಬಂದಾಗ ಬೆಳಿಗ್ಗೆ ಆಸ್ಪತ್ರೆಯವರು ನಿಮ್ಮ ಮನೆಗೆ ಬಿಡಲು ನಮ್ಮ ಬಳಿ ಅಂಬುಲೆನ್ಸ್ ಇಲ್ಲ. ನಿಮ್ಮ ಸ್ವಂತ ವಾಹನದಲ್ಲಿಯೇ ನೀವು ಹೋಗಬೇಕು. ಮನೆಗೆ ಫೋನ್ ಮಾಡಿ ತರಿಸಿ ಎಂದು ಹೇಳಿದರು. ಆದರೆ ಆ ವ್ಯಕ್ತಿಯ ಬಳಿ ಸ್ವಂತ ವಾಹನಗಳಿರಲಿಲ್ಲ. ಅವರ ಮನೆ ಇದ್ದದ್ದು ಮಠದಕಣಿ. ಕೊನೆಗೆ ಅತ್ತಾವರದಿಂದ ಮಠದಕಣಿಗೆ ಹೋಗಲು ಒಂದು ಖಾಸಗಿ ಅಂಬುಲೆನ್ಸ್ ವ್ಯವಸ್ಥೆ ಆಯಿತು. ಆದರೆ ಅದರ ಬಾಡಿಗೆ ಕೇಳಿ ಆ ವ್ಯಕ್ತಿಗೆ ಶಾಕ್ ಆಯಿತು. ಎಷ್ಟು ಬಾಡಿಗೆ ಕೇಳಿದ್ದಾರೆ, ಗೊತ್ತಾ? 3500 ಸಾವಿರ. ಅತ್ತಾವರದಿಂದ ಮಠದಕಣಿಗೆ 3500 ರೂಪಾಯಿ. ಕೊನೆಗೆ ಅವರು ನನಗೆ ಫೋನ್ ಮಾಡಿದ್ದಾರೆ. ನಾನು ಆ ವ್ಯಕ್ತಿಗೆ ಹೇಳಿದೆ- “ಸೀದಾ ಎದ್ದು ಆಸ್ಪತ್ರೆಯಿಂದ ಹೊರಗೆ ಬಂದುಬಿಡಿ” ಅದಕ್ಕೆ ಅವರು ಹೇಳಿದರು- ” ಇಲ್ಲಿ ಹೊರಗೆ ಹೋಗಲು ಬಿಡುವುದಿಲ್ಲ”. ನಂತರ ನಾನು 1077 ಸಂಖ್ಯೆಗೆ ಕರೆ ಮಾಡಿದೆ. ಎಷ್ಟೋ ಸಲ ಮಾಡಿದ ಬಳಿಕ ಯಾರೋ ಎತ್ತಿದರು. ಅವರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ನಂತರ ನಾನು ಅತ್ತಾವರದ ಆ ಖಾಸಗಿ ಆಸ್ಪತ್ರೆಯಲ್ಲಿ ಇದ್ದ ಆ ವ್ಯಕ್ತಿಗೆ ಫೋನ್ ಮಾಡಿ ಹೇಳಿದೆ. “ನಿಮಗೆ ಹಿಂದೂ ಯುವಸೇನೆಯ ಚೌಟ ಎಂಬುವರ ನಂಬರ್ ಕೊಡುತ್ತೇನೆ. ಅವರಿಗೆ ಫೋನ್ ಮಾಡಿದರೆ ಅವರು ಉಚಿತವಾಗಿ ವ್ಯವಸ್ಥೆ ಮಾಡಲಿದ್ದಾರೆ” ಎಂದೆ. ಆಯಿತು ಕೊಡಿ ಎಂದರು. ನಂತರ ಏನಾಯಿತು ಎಂದು ಫೋನ್ ಮಾಡಿ ಕೇಳಿದಾಗ ಆ ವ್ಯಕ್ತಿ ಹೊರಗೆ ಬಂದು ರಿಕ್ಷಾದಲ್ಲಿ ಕುಳಿತು ಮನೆಯ ಹಾದಿ ಹಿಡಿದಿದ್ದರು. ಈ ಅಂಬುಲೆನ್ಸ್ ಅವರು ಬಾಯಿಗೆ ಬಂದ ಬಾಡಿಗೆ ಹೇಳುವುದರಿಂದ ಏನಾಗಿದೆ ಎಂದರೆ ಒಬ್ಬ ವ್ಯಕ್ತಿ ಕೋವಿಡ್ 19 ರಿಂದ ಸತ್ತರೆ ಆ ಡೆಡ್ ಬಾಡಿಯನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ತಲುಪಿಸಲು ಇವರು ಕೇಳುವ ಬಾಡಿಗೆ ನೋಡಿದರೆ ತಲೆ ತಿರುಗಿತು. ಈ ಬಗ್ಗೆ ಜಿಲ್ಲಾಡಳಿತ ಏನು ಮಾಡುತ್ತಿದೆ ಎನ್ನುವುದು ನನ್ನ ಪ್ರಶ್ನೆ. ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಿತ್ಯ ಕನಿಷ್ಟ ಎಂಟರಿಂದ ಹತ್ತು ಅಂಬುಲೆನ್ಸ್ ಗಳು ನಿಂತಿರುತ್ತವೆ. ಒಂದು ವೇಳೆ ನೀವು ಸಹಾಯಕ್ಕೆ 1077 ಕ್ಕೆ ಕರೆ ಮಾಡಿದರೂ ಅವರು ಸಲಹೆ ಮಾಡುವುದು ಖಾಸಗಿ ಅಂಬುಲೆನ್ಸ್ ಗೆ. ಒಂದು ವೇಳೆ ಜಿಲ್ಲಾಡಳಿತದ ಬಳಿ ಅಂಬುಲೆನ್ಸ್ ಇಲ್ಲದಿದ್ದರೆ ಅವರು ಈ ಖಾಸಗಿಯವರ ಬಳಿ ಬಾಡಿಗೆಗೆ ಕೇಳಬಹುದಲ್ಲ. ಅದ್ಯಾವುದೂ ಇಲ್ಲದೆ ಪಾಪದವರ ಜೇಬು ಕತ್ತರಿಸುವ ಈ ಖಾಸಗಿ ಅಂಬುಲೆನ್ಸ್ ಹಾಗೂ ಜಿಲ್ಲಾಡಳಿತದ ಆಮೆಗತಿಯ ಧೋರಣೆಯಿಂದ ಮಧ್ಯಮ ವರ್ಗದವರಿಗೆ ಕೊರೊನಾ ಬಂದರೆ ಶ್ರೀನಿವಾಸನೇ ಕಾಪಾಡಬೇಕು!
Leave A Reply