ಕೇಂದ್ರದ ಮಾಜಿ ಸಚಿವರಾದ ಜನಾರ್ಧನ ಪೂಜಾರಿಯವರು ಗುಣಮುಖರಾದದ್ದು ಸುದ್ದಿಯಾಯಿತು. ಶಾಸಕ ಡಾ.ವೈ ಭರತ್ ಶೆಟ್ಟಿಯವರು ಗುಣಮುಖರಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಒಂದಿಬ್ಬರು ಉದ್ಯಮಿಗಳು, ವೈದ್ಯರು ಕೋವಿಡ್ 19 ನಿಂದ ಗುಣಮುಖರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಧೈರ್ಯ ತುಂಬಿದರು. ಒಂದೆರಡು ಕಡೆ ಕ್ವಾರಂಟೈನ್ ಸೆಂಟರ್ ನಲ್ಲಿ ಡಾನ್ಸ್ ಆಗಿದೆ. ಅದು ಬಿಟ್ಟರೆ ನಿತ್ಯ ರಾತ್ರಿ ವಾಟ್ಸಪ್ ತೆರೆದರೆ ತ್ರಿಬಲ್ ಡಿಜಿಟ್ ಸೋಂಕಿತರ ಸಂಖ್ಯೆಯೇ ಕಾಣುತ್ತದೆ. ಇವತ್ತು ಇನ್ನೂರು, ಮೊನ್ನೆ ಮುನ್ನೂರು ಹೀಗೆ ನಂಬರ್ ತೋರಿಸಿ ಕೊನೆಗೆ ಜಿಲ್ಲೆಯಲ್ಲಿ ಅಷ್ಟು ಸಾವಿರವಾಯಿತು, ಇಷ್ಟು ಸಾವಿರ ಆಯಿತು ಎಂದು ಹೇಳುವುದೇ ಒಂದು ಭಯೋತ್ಪಾದನೆ. ಅದರ ಬದಲು ಒಂದು ಸಾವಿರ ಸೊಂಕಿತರು ಒಂದು ಜಿಲ್ಲೆಯಲ್ಲಿ ಇದ್ದರೆ ಅದರಲ್ಲಿ ಖಂಡಿತವಾಗಿ ಎಂಟು ನೂರು ಜನರು ಗುಣಮುಖರಾಗಿ ಹೋಗಿರುತ್ತಾರೆ. 180 ಜನ ಮಾತ್ರ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ. 20 ಜನ ಮೃತಪಟ್ಟಿರಬಹುದು. ಆದ್ದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 200 ಎಂದು ಮಾತ್ರ ಹೇಳಬೇಕೇ ವಿನ: ಒಂದು ಸಾವಿರ ಎಂದು ಹೇಳಿದ ಕೂಡಲೇ ಜನ ಭಯಕ್ಕೆ ಬೀಳುತ್ತಾರೆ. ವೆನಲಾಕ್ ಗೆ ಹೋದವರು ಬದುಕಿ ಬರಲ್ಲ ಎಂದು ಹೇಳುವುದು ಅಪ್ಪಟ ಸುಳ್ಳು. ಅಲ್ಲಿನ ವೈದ್ಯರ ಮತ್ತು ಸಿಬ್ಬಂದಿಗಳ ಶ್ರಮದಿಂದ ಅನೇಕ ಸೋಂಕಿತರು ಗುಣಮುಖರಾಗಿದ್ದಾರೆ. ಅದರ ಲೆಕ್ಕ ಯಾಕೆ ಹೇಳಲ್ಲ. ಇವತ್ತು ಅದೇ ವೆನಲಾಕ್ ಆಸ್ಪತ್ರೆಯ ಹೊರಗೆ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದರು. ಪ್ರತಿಭಟನೆ ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಆದರೆ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲ್ಲ, ಕೊಟ್ಟರೂ ಬಿಲ್ ಸಿಕ್ಕಾಪಟ್ಟೆ ಬರುತ್ತಿದೆ ಎನ್ನುವುದರ ಬಗ್ಗೆ ಪ್ರತಿಭಟನೆ. ಇಲ್ಲಿ ಜಿಲ್ಲಾ ಜನಪ್ರತಿನಿಧಿಗಳಾದ ಸಚಿವರು, ಸಂಸದರು, ಶಾಸಕರು ಆಗಾಗ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಆಡಳಿತ ಮಂಡಳಿಯವರೊಂದಿಗೆ ಕುಳಿತು ಮಾತನಾಡುವ ವಿಡಿಯೋ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಜನಪ್ರತಿನಿಧಿಗಳು ಕಾರಿನಿಂದ ಇಳಿಯುವುದು, ಒಳಗೆ ಹೋಗುವುದು, ಆಸ್ಪತ್ರೆಯವರು ಸ್ವಾಗತಿಸುವುದು, ಒಳಗೆ ಕಾನ್ಫರೆನ್ಸ್ ಹಾಲ್ ನಲ್ಲಿ ಕುಳಿತು ಮಾತನಾಡುವುದು ಎಲ್ಲವೂ ವಿಡಿಯೋದಲ್ಲಿ ಇದೆ. ಆದರೆ ಏನು ಮಾತನಾಡಿದರು? ಹೋಗಿ ಬಂದದ್ದು ಪ್ರಯೋಜನವಾಗಿದೆಯಾ? ಅಥವಾ ಫ್ರೀ ಇದ್ದೇವೆ ಎಂದು ಹೋಗಿ ಬಂದದ್ದಾ? ಜನರಿಗೆ ನಾವು ಏನಾದರೂ ಮಾಡುತ್ತಿದ್ದೇವೆ ಎಂದು ತೋರಿಸಲು ಹೋದದ್ದಾ? ಖಂಡಿತ ಗೊತ್ತಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ತಪ್ಪಿದೆ ನಿಜ. ಅವರು ಯಾರನ್ನೂ ಕ್ಯಾರ್ ಮಾಡದ ಬಂಡವಾಳಶಾಯಿಗಳು. ಆದರೆ ಅವರನ್ನು ಹದ್ದುಬಸ್ತಿನಲ್ಲಿಡಲು ನಿಮಗೆ ಸಂಪೂರ್ಣ ಅಧಿಕಾರ ಜನ ಕೊಟ್ಟಿದ್ದಾರೆ. ಅಲ್ಲಿ ಹೋಗಿ ಗಂಭೀರವಾಗಿ ಮಾತನಾಡಿ. ಬಾಲ ಬಿಚ್ಚಿದರೆ ಹುಶಾರ್ ಎಂದು ಎಚ್ಚರಿಕೆ ಕೊಡಿ. ಏನು ಮಾತನಾಡಿ ಏನು ಆಯಿತು ಎಂದು ಜನರಲ್ಲಿ ಭರವಸೆ ಮೂಡಿಸಿ.
ಇನ್ನು ಜಿಲ್ಲಾಡಳಿತದ 1077 ಕ್ಕೆ ಕರೆ ಮಾಡಿ ಅಂಬುಲೆನ್ಸ್ ಕೇಳಿದರೆ 108 ಕರೆ ಮಾಡಲು ಹೇಳುತ್ತಾರೆ. ಮುಖ್ಯವಾಗಿ ಜಿಲ್ಲಾಡಳಿತದಲ್ಲಿ ಸಮನ್ವಯದ ಅಗತ್ಯ ಇದೆ. ಅಂಬುಲೆನ್ಸ್ ಖರೀದಿಸಿ ಪೇಪರ್ ನಲ್ಲಿ ಹೇಳಿಕೆ ಕೊಟ್ಟರೆ ಸಾಕಾಗುವುದಿಲ್ಲ. ಜನರಿಗೆ ಅಗತ್ಯ ಬಿದ್ದಾಗ ಆ ಅಂಬುಲೆನ್ಸ್ ಎಲ್ಲಿದೆ ಎಂದು ಹೇಳುವಂತವರು ಬೇಕು. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಅದೇನೆಂದರೆ ನಿಮ್ಮ ವಾರ್ಡ್ ಮಟ್ಟದಲ್ಲಿ ಕಾರ್ಪೋರೇಟರ್ ನೇತೃತ್ವದಲ್ಲಿ ಒಂದು ವಾರ್ಡ್ ಸಮಿತಿ ಮಾಡಿ ಅದರ ಮೂಲಕ ಆ ವಾರ್ಡಿನ ಜನರೊಂದಿಗೆ ಈ ಕೊರೊನಾ ಅವಧಿಯಲ್ಲಿ ಹೇಗೆ ನೆರವಾಗಬಹುದು ಎಂದು ಹೇಳಿದ್ದಾರೆ. ಆದರೆ ಈ ವಾರ್ಡ್ ಸಮಿತಿಯ ಬಗ್ಗೆ ಪಾಲಿಕೆ ಸರಿಯಾದ ರೀತಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ಮಾಧ್ಯಮಗಳು ಬಿಬಿಎಂಪಿಯಿಂದ ಅಧಿಕಾರಿಗಳು ಮಾತನಾಡಿದ ವಿಡಿಯೋ ಅಲ್ಲಲ್ಲಿ ತೋರಿಸಿದ್ದನ್ನು ವರದಿ ಮಾಡಿವೆ ಬಿಟ್ಟರೆ ಈ ವಾರ್ಡ್ ಸಮಿತಿಯಿಂದ ಏನು ಪ್ರಯೋಜನ ಎಂದು ಜನರಿಗೆ ತಿಳಿಸಿಲ್ಲ. ಇದು ಸಾಮಾನ್ಯ ಪರಿಸ್ಥಿತಿಯಲ್ಲಿ ಮಾಡುವ ವಾರ್ಡ್ ಕಮಿಟಿ ಅಲ್ಲ. ಇದು ಕೊರೊನಾ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಸಮಿತಿಯ ರೂಪದಲ್ಲಿ ಸೇವೆ ಸಲ್ಲಿಸುತ್ತದೆ. ವಾರ್ಡಿನ ಕಾರ್ಪೋರೇಟರ್ ಅಧ್ಯಕ್ಷರು. ಅವರ ಕೆಳಗೆ ಹತ್ತು ಜನ ಕಾರ್ಯಕರ್ತರು ಇರುತ್ತಾರೆ. ಅವರು ವಾರ್ಡಿನ ಮನೆಮನೆಗಳಿಗೆ ಹೋಗಬೇಕು. ಅಲ್ಲಿ ಮನೆಯಲ್ಲಿ ಎಷ್ಟು ಜನರಿದ್ದಾರೆ? ಹತ್ತು ವರ್ಷಕ್ಕಿಂತ ಕೆಳಗಿನವರು ಎಷ್ಟು ಜನ? ಸೀನಿಯರ್ ಎಷ್ಟು ಜನ? ಯಾರಿಗಾದರೂ ಜ್ವರ ಇದೆಯಾ? ಜ್ವರ ಬಂದರೆ ಎಲ್ಲಿಗೆ ಹೋಗಬೇಕು? ಯಾರನ್ನು ಸಂಪರ್ಕಿಸಬೇಕು? ಎಲ್ಲವನ್ನು ಹೇಳುವ ಕೆಲಸ ಮಾಡಬೇಕಾಗುತ್ತದೆ. ಇದೆಲ್ಲವೂ ಮಾಡದೇ ಇದ್ದರೆ ಕಾಂಗ್ರೆಸ್ಸಿಗರಿಗೆ ಪ್ರತಿಭಟನೆ ಮಾಡಲು ಅವಕಾಶ ಕೊಟ್ಟ ಹಾಗೆ ಆಗುತ್ತದೆ. ಕೆಲಸ ಮಾಡುವುದು ಮಾತ್ರವಲ್ಲ, ಅದು ಎಷ್ಟು ಪ್ರಯೋಜನ ಆಗಿದೆ ಎಂದು ತೋರಿಸಿಕೊಡಬೇಕು, ಏಕೆಂದರೆ ಬಿಜೆಪಿ ಆಡಳಿತ ಮಾಡುತ್ತಿದೆ. ಕಾಂಗ್ರೆಸ್ ವಿಪಕ್ಷದಲ್ಲಿದೆ. ಕಾಂಗ್ರೆಸ್ ಟೀಕಿಸುವ ಸ್ಥಾನದಲ್ಲಿದ್ದಾರೆ. ಕೆಲಸ ಮಾಡಿದ್ದು ಸಾಬೀತುಪಡಿಸುವ ಜವಾಬ್ದಾರಿ ಬಿಜೆಪಿ ಮೇಲಿದೆ. ಅದು ಗೊತ್ತಿಲ್ಲದಿದ್ದರೆ ಇನ್ನು ಶುರುವಾಗಲಿದೆ ಪ್ರತಿಭಟನೆಯ ನಾಟಕ!
Leave A Reply